99 ವಿಶ್ವಜಿತ್ ಯಾಗ. ಬಲಿಚಕ್ರವರ್ತಿಯು ಸ್ವರ್ಗ ಸಿಂಹಾಸನ(ದೇವೇಂದ್ರ ಪದವಿ) ಪಡೆಯುವ ಉದ್ದೇಶದಿಂದ ಶುರುಮಾಡಿದ ಯಾಗವದು.
ರಾಜಗುರು ಶುಕ್ರಾಚಾರ್ಯರ ನೇತೃತ್ವದಲ್ಲಿ 98 ಯಾಗ ಪೂರ್ತಿಯಾಗಿ 99 ಯಾಗ ಪ್ರಾರಂಭವಾಗಿದೆ. ಇನ್ನೇನು ಇದು ಪೂರ್ಣವಾದರೆ ನೂರನೆಯ ಯಾಗ ಸಮಾಪ್ತಿಗೆ ದೇವೇಂದ್ರ ಪದವಿಯಲ್ಲಿ ಆರೂಢನಾಗಿರುವ ಪುರಂದರನು ಇಳಿಯಬೇಕಾಗುತ್ತದೆ.
ಆದರೆ ಬಲಿಚಕ್ರವರ್ತಿಗೆ ಮುಂದಿನ ಇಂದ್ರ ಪದವಿ ತನಗೇ ಸಿಗುತ್ತದೆ ಎಂಬ ವಿಚಾರ ಗೊತ್ತಿಲ್ಲದೆ ಅವಸರದಲ್ಲಿ ಯಾಗ ಮುಗಿಸುವ ತವಕ! ಆದರೆ ಯಾಗದಲ್ಲಿ ಕಿಂಚಿತ್ತೂ ಲೋಪವಿಲ್ಲ. ಭಕ್ತಿ ಶ್ರದ್ಧೆಯಲ್ಲೂ ಲೋಪವಿಲ್ಲ. ದಾನ ಧರ್ಮದಲ್ಲೂ ಲೋಪವಿಲ್ಲ. ಇದು ಹರಿಗೆ ಪ್ರಿಯವೇ ಆದರೂ ಬಲಿಯ ಇಂದ್ರಪದವಿಯ ಆಗ್ರಹ ಮಾತ್ರ ಇಷ್ಟವಾಗದೆ ಹೋಯಿತು. ಈ ‘ಅಹಂ’ ಅನ್ನು ಮುರಿಯಲೇ ಬೇಕೆಂದಿದ್ದ ದೇವಾದಿ ದೇವತೆಗಳು, ಋಷಿಮುನಿಗಳು ಹರಿಯನ್ನು ಸ್ತುತಿಮಾಡಿ ಪ್ರಸಕ್ತ ವಿದ್ಯಾಮಾನಗಳನ್ನು ಹರಿಗೆ ವಿವರಿಸುತ್ತಾರೆ. ಆಗ ಹರಿಯು, ಹೇ ಭಕ್ತಜನರೇ, ಹರಿಭಕ್ತ ಪ್ರಹ್ಲಾದ ರಾಜನ ಪ್ರಪೌತ್ರನಾದ ಬಲಿಚಕ್ರವರ್ತಿಯು ಅಸಮಾನ್ಯವಾದ ಹರಿ ಭಕ್ತ. ಭಕ್ತಿಗೆ ನಾನು ಮಣಿಯಲೇ ಬೇಕು. ಆದರೂ ಎಲ್ಲಾದರೂ ಇವನ ಕರ್ತವ್ಯ ನಿಷ್ಠೆ, ಭಕ್ತಿಯಲ್ಲಿ ಸ್ವಾರ್ಥ ಅಡಗಿದ್ದರೆ ಅದರ ಫಲ ಅನುಭವಿಸಲೇ ಬೇಕಾಗುತ್ತದೆ. ನೀವಿನ್ನು ಹೊರಡಿ. ಬಲಿಯ ಕರ್ತವ್ಯ ಪರೀಕ್ಷೆಯ ಕೆಲಸ ನನಗಿರಲಿ’ ಎಂದು ಭಕ್ತರನ್ನು ಕಳುಹಿಸಿದ ಶ್ರೀಹರಿ.
ಮಹಾಯಾಗದ ಯಜ್ಞಶಾಲೆಯ ಮುಂದೆ ದಾನ ಪಡೆಯುವುದಕ್ಕಾಗಿ ದೊಡ್ಡ ಸರತಿಯ ಸಾಲೇ ನಿಂತಿದೆ. ಬಂದವರೆಲ್ಲ ಬಲಿಯು ನೀಡಿದ ದಾನಗಳಿಂದ ತೃಪ್ತರಾಗಿ ಹೋಗುವ ದೃಶ್ಯವು ಎಂತವರಿಗೂ ನಯನಮೋಹಕ ದೃಶ್ಯವಾಗಿತ್ತು. ಈ ಸರತಿಯ ಸಾಲಿನ ಮಧ್ಯದಲ್ಲಿ ಒಂದು ಕುಬ್ಹ ಗಾತ್ರದ ವಟುವು ಛತ್ರ ಹಿಡಿದು ನಿಂತದ್ದು ಇನ್ನಷ್ಟು ಗಮನ ಹರಿಸುವಂತಿತ್ತು. ಸಾಲು ಎದುರುಗಡೆ ಕ್ಷೀಣವಾದರೆ, ಹಿಂಭಾಗದಲ್ಲಿ ವಾಸುಕಿಯಂತೆ ಬೆಳೆಯುತ್ತಲೇ ಇತ್ತು. ಶುಕ್ರಾಚಾರ್ಯ ಪರಿವಾರವು ‘ಸ್ವಾಹಾ’ ಯಾಗಾಹುತಿ ನೀಡುವುದರಲ್ಲೇ ತಲ್ಲೀನವಾಗಿತ್ತು.
ವಟುವಿನ ಸರದಿ ಬಂತು. ಊರ್ಧ್ವ ಪುಂಡ್ರನಾಗಿ, ಸಣ್ಣ ಕಚ್ಚೆ ಹಾಕಿಕೊಂಡು, ಕೈಯಲ್ಲಿ ಛತ್ರಿ ಹಿಡಿದುಕೊಂಡು ಮುಗುಳು ನಗುವಿನಲ್ಲಿ, ‘ರಾಜಾ ಭಿಕ್ಷಾಂ ದೇಹಿ’ ಎಂದು ಕೈ ಚಾಚಿತು. ರಾಜ ನಖಶಿಖಾಂತ ನೋಡಿ, ವಟುವಿಗೆ ನಮಸ್ಕರಿಸಿದ. ಶುಕ್ರಾಚಾರ್ಯರು ವಟುವಿನ ಚಾಚಿದ ಅಂಗೈಯನ್ನು ನೋಡಿದರು. ಶಂಖ ಚಕ್ರ ಹದಾದಿ ಮುದ್ರಾಂಕಿತ ಕೈಯದು. ‘ಓಹೋ ’ ಎಂದು ಮನದೊಳಗೆ ನಗುತ್ತಾ, ತನ್ನ ಕಾರ್ಯದಲ್ಲಿ ನಿರತರಾದರು.
‘ಯಾರಪ್ಪ ನೀನು’ ಬಲಿಯು ವಟುವಿನ ಪೂರ್ವಾಪರ ತಿಳಿಯಲಿಕ್ಕಾಗಿ ಪ್ರಶ್ನೆ ಮಾಡುತ್ತಾನೆ.
‘ಹೇ ರಾಜನ್, ನಾನೊಬ್ಬ ಅನಾಥ. ನನ್ನ ನಿತ್ಯಾನುಷ್ಠಾನದ ಅಗ್ನಿಕಾರ್ಯಕ್ಕೆ ನನ್ನದೇ ಆದಂತಹ ನನ್ನ ಪಾದದ ಮೂರು ಅಡಿ ಭೂಮಿಯನ್ನು ದಾನವಾಗಿ ಕೇಳಲು ಬಂದಿದ್ದೇನೆ’ ಎಂದಾಗ ರಾಜನು ಗಹಗಹಿಸಿನಕ್ಕು,’ ಹೇ ವಟುವೇ, ಇಷ್ಟೇ ಸಾಕೇ? ಬೇಕಿದ್ದರೆ ಕೇಳು. ಇನ್ನಷ್ಟು ಭೂಮಿಯನ್ನು ಕೊಡುತ್ತೇನೆ. ಸಂಕೋಚ ಬೇಡ’ ಎಂದನು ಬಲಿಮಹಾರಾಜ. ಆಗ ವಟುವು, ಹೇರಾಜನ್, ನನಗೆಷ್ಟು ಬೇಕೋ ಅಷ್ಟನ್ನೇ ಕೇಳಿದ್ದೇನೆ’ ಎಂದು ಕೈ ಚಾಚುತ್ತಾನೆ. ಆಗ ಶುಕ್ರಾಚಾರ್ಯರು ಬಲಿಗೆ,’ ಅಯ್ಯೋ ನೀನು ವಾಗ್ದಾನ ನೀಡಿ ಕೆಟ್ಟೆ. ಅದು ಯಾರೆಂದು ಬಲ್ಲೆಯಾ? ಚಾಚಿದ ಆ ಕೈಯನ್ನೊಮ್ಮೆ ನೋಡು. ಶಂಖ ಚಕ್ರ ಗಧಾಂಕಿತ ಮುದ್ರೆಯುಳ್ಳ ಆ ವಟುವು ಅನಾಥ! ಅಂದರೆ ನಾಥರಿಲ್ಲದವನೆಂದರ್ಥ. ನಾಥನಿಲ್ಲದವನು ಶ್ರೀಹರಿ ಮಾತ್ರ’ ಎಂದರು ಆಚಾರ್ಯರು.
ಧನ್ಯೋಸ್ಮಿ ಧನ್ಯೋಸ್ಮಿ ಗುರುದೇವಾ, ಆ ಗಿಂಡಿಯ ನೀರನ್ನಿಲ್ಲಿ ಕೊಡಿ. ತುಳಸಿ ದಳ ಇಟ್ಟು ಆದಷ್ಟು ಬೇಗ ದಾನ ಮಾಡಿ ಅವನನ್ನು ಸೇರಿಬಿಡುತ್ತೇನೆ. ಇನ್ನು ನನಗಾವ ಇಂದ್ರಪದವಿಯೂ ಬೇಡ. ಸಕಲಾನುಗ್ರಹ ನಿಗ್ರಹ ಮಾಡುವ ಭಗವಂತನೇ ಈ ಹುಲು ಮಾನವನಲ್ಲಿ ಕೈಚಾಚಿದ ಎಂದರೆ ಇದಕ್ಕಿಂತ ಪುಣ್ಯ ಇನ್ನೇನಿದೆ?’ ಎಂದು ಬಲಿಚಕ್ರವರ್ತಿ ವಟು ಕೇಳಿದ ಮೂರಡಿ ಜಾಗವನ್ನು ಧಾರೆಯೆರೆದು ಕೊಟ್ಟೇ ಬಿಡುತ್ತಾನೆ. ಮುಗುಳ್ನಗುತ್ತಾ ಆ ಕುಬ್ಜ ವಾಮನ ರೂಪವು ಕ್ಷಣಾರ್ಧದಲ್ಲಿ ಗಗನದಷ್ಟೆತ್ತರ ಬೆಳೆಯಿತು. ‘ತ್ರೀಣೀ ಪಾದ ವಿಚಕ್ರಮೇ’ ಎಂದು ಪೂರ್ವ ಪಶ್ಚಿಮ ಉದೀಚ್ಯಗಳಿಗೆ ಆ ತ್ರಿವಿಕ್ರಮನ ಪಾದ ಬೆಳೆಯಿತು.
ನಂತರ ಹೇ ಭಕ್ತ ಬಲಿಚಕ್ರವರ್ತಿಯೇ, ದಾನ ನೀಡಿದ ಮೇಲೆ ನೀನಿಲ್ಲಿ ಉಸಿರಾಡಿದರೂ ದತ್ತಾಪಹಾರ ಆಗುತ್ತದೆ. ನೀನು ಈಗಿಂದೀಗಲೇ ಪಾತಾಳಕ್ಕೆ ಹೊರಡು. ನಿನ್ನ ಭಕ್ತಿಗೆ ನಾನು ಮೆಚ್ಚಿದ್ದೇನೆ. ಮುಂದಿನ ದೇವೇಂದ್ರ ಪದವಿಗೆ ನೀನೇ ಬರಬೇಕು ಎಂಬುದು ಭೂಮಿ ಸೃಷ್ಠಿಯಾಗುವಾಗಲೇ ನಾನು ನಿರ್ಧರಿಸಿದ ನಿರ್ಣಯವದು. ಆದರೆ ನಿನಗೆ ಗೊತ್ತಾಗಲಿಲ್ಲ. ಅತಿಕ್ರಮಕ್ಕೆ ಮುಂದಾಗಿ ಒಂದು ತಪ್ಪು ಮಾಡಿದೆ. ನಿನಗೆ ಅದರ ಶಿಕ್ಷೆಯೂ ಆಯ್ತು. ಆದರೂ ವರ್ಷಕ್ಕೊಮ್ಮೆ ಕಾರ್ತಿಕ ಮಾಸದ ಶುಕ್ಲ ಪಾಡ್ಯವನ್ನು ಬಲಿಪಾಡ್ಯಮಿಯಾಗಿ ನಿನ್ನ ಪ್ರಜೆಗಳು ಆಚರಿಸುತ್ತಾರೆ. ಆ ಒಂದು ದಿನ ನೀನು ನಿನ್ನ ರಾಜ್ಯವನ್ನು ವೀಕ್ಷಿಸಬಹುದು’ ಎಂದು ವರಪ್ರಧಾನ ಮಾಡಿ ಬಲಿಯನ್ನು ಪಾತಾಳಕ್ಕೆ ತಳ್ಳಿ ಭಗವಂತನು ವೈಕುಂಠ ಸೇರುತ್ತಾನೆ.
ಅಂತಹ ಒಂದು ಪುಣ್ಯದಿನವನ್ನು ನಾವು ಕಾರ್ತಿಕ ಮಾಸದ ಶುಕ್ಲ ಪಾಡ್ಯದಂದು ಸಂಭ್ರಮದಿಂದ, ಅರ್ಘ್ಯ ಪಾದ್ಯ, ನೈವೇದ್ಯ ಸಮರ್ಪಿಸಿ ಸಂಭ್ರಮದಿಂದ ಆಚರಿಸುತ್ತೇವೆ.
ಈ ಶುಭಾವಸರದಲ್ಲಿ ಸಕಲ ಪ್ರಜೆಗಳಿಗೂ ಶಾಂತಿ ಸೌಹಾರ್ದ ನೆಲೆಸಿ, ಇಷ್ಟಾರ್ಥ ಸಿದ್ಧಿಯಾಗಲಿ ಎಂದು ಬಲಿಇಂದ್ರನಿಗೆ ಪೂಜನ ಮಾಡೋಣ.
-ಪ್ರಕಾಶ್ ಅಮ್ಮಣ್ಣಾಯ
ಜ್ಯೋರ್ತಿವಿಜ್ಞಾನಂ
Discussion about this post