ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜಗತ್ತಿನಾದ್ಯಂತ ಮಕ್ಕಳಿಂದ ಹಿಡಿದು ವೃದ್ಧೆಯವರೆಗೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಅತ್ಯಾಚಾರದಿಂದಾಗುವ ದೈಹಿಕ ಮತ್ತು ಮಾನಸಿಕ ನೋವು, ಹಿಂಸೆ ಒಂದೆಡೆಯಾದರೆ, ಅತ್ಯಾಚಾರದ ನಂತರ ಪೊಲೀಸರನ್ನು, ವೈದ್ಯರನ್ನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಎದುರಿಸಬೇಕಾದಾಗ ಪದೇ ಪದೇ ಅವರು ಕೇಳುವ ಪ್ರಶ್ನೆಗಳಿಂದ ಮಾನಸಿಕ ಅತ್ಯಾಚಾರ ನಿರಂತರವಾಗಿ ನಡೆಯುತ್ತದೆ.
ನಮ್ಮ ಸಮಾಜ ಹೇಗಿದೆಯೆಂದರೆ ದೌರ್ಜನ್ಯಕೊಳಗಾದವಳು ಮಹಿಳೆ, ಅತ್ಯಾಚಾರಕ್ಕೊಳಗಾಗಿ ಅವಮಾನಿತವಾಗುವವಳೂ ಮಹಿಳೆ.
ಬುದ್ಧಿ ಹೇಳಬೇಕಾದವರು ದೌರ್ಜನ್ಯವೆಸಗಿದವರಿಗಲ್ಲವೇ? ಅದನ್ನು ಬಿಟ್ಟು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತ ಮಹಿಳೆಯರಿಗೇ ವಿವೇಕದ ಪಾಠ ಹೇಳುತ್ತಿರುವುದು ವಿಪರ್ಯಾಸ.
ನಮ್ಮ ಸಂವಿಧಾನದ 44ನೆಯ ಕಾಲಂ ಮಹಿಳೆ ಮತ್ತು ಪುರುಷ ಸಮಾನರು. ಆದ್ದರಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಅವಶ್ಯಕತೆ ಇದೆ. ಕೆಟ್ಟ ಮನಸ್ಸುಗಳಿಗೆ ತಗುಲಿರುವ ಮನೋವ್ಯಾಧಿ ದೂರಮಾಡಬೇಕಾದ ಅನಿವಾರ್ಯತೆ ಇಂದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ) ಪ್ರಕಾರ ಭಾರತದಲ್ಲಿ ಶೇಕಡಾ 35ರಷ್ಟು ಮಹಿಳೆಯರು ತಮ್ಮ ಹತ್ತಿರ ಸಂಬಂಧಿಗಳಿಂದ ದೌರ್ಜನ್ಯ ಅನುಭವಿಸುತ್ತಾರೆ. ಮನೆಯೊಳಗೆ ನಡೆಯುತ್ತಿರುವ ಇಂತಹ ದೌರ್ಜನ್ಯಗಳು ನಿಲ್ಲಲು ಮನಃಸ್ಥಿತಿಯ ಬದಲಾವಣೆಯ ಅಗತ್ಯವಿದೆ.
ಯಾವ ಘಟನೆಗಳು ಪುರುಷನಲ್ಲಿ ಕೆಟ್ಟ ಅನುಭವಗಳನ್ನು ಉಂಟುಮಾಡುತ್ತಿರುವೆ ಎಂಬುದರ ಬಗ್ಗೆ ಅಧ್ಯಯನ ಅವಶ್ಯಕ.
1) ಪುರುಷ ಪ್ರಧಾನ ಮೌಲ್ಯ
2) ಹೆಣ್ಣು ಭ್ರೂಹತ್ಯೆ ಹೆಚ್ಚಾಗಿರುವುದು
3) ಹೆಣ್ಣನ್ನು ಸರಕು ಭಾಗವಾಗಿ ಸಮಾಜ ನೋಡುತ್ತಿರುವುದು
4) ಸಮಾಜದಲ್ಲಿನ ಮುಕ್ತ ಲೈಂಗಿಕ ಚಟುವಟಿಕೆಗಳು
5) ಮಹಿಳೆಯರ ಅಕ್ರಮ ಕಳ್ಳಸಾಗಣಿಕೆ
6) ಲಿಂಗಾನುಪಾತ ಇಳಿಕೆಯಾಗಿರುವುದು
7) ಮಾನಸಿಕ ಕಾರಣಗಳು
ನಮ್ಮ ಸಮಾಜದಲ್ಲಿ ಇರುವ ಕೆಲವು ಅನಿಷ್ಟ ಪದ್ಧತಿಗಳಿಂದಾಗಿ ಹೆಣ್ಣು ಅಧಿಕ ಹೊರೆ ಎಂಬ ಭಾವನೆ ಹೆಚ್ಚಾಗಿದೆ. ಬಾಲ್ಯವಿವಾಹ, ವೈಧವ್ಯ, ಬಂಜೆತನ, ಬಹುಪತ್ನಿತ್ವ, ಗಂಡು ಸಂತಾನವಿಲ್ಲದಿರುವಿಕೆ, ದೇವದಾಸಿ ಪದ್ಧತಿ, ವರದಕ್ಷಿಣೆ ಪದ್ಧತಿ ಮುಂತಾದವುಗಳು ಹಣ್ಣಿನ ಬದುಕನ್ನು ನರಕಸದೃಶ್ಯವಾಗಿವೆ. ಈ ಎಲ್ಲ ಕಾರಣಗಳಿಂದಾಗಿ ಹೆಣ್ಣು ಬೇಡವೆಂದು ಭ್ರೂಣಹತ್ಯೆಗೆ ಮುಂದಾಗುತ್ತಾರೆ. ಅದರ ಪರಿಣಾಮವಾಗಿ ಜನಗಣತಿಯಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದಲ್ಲದೇ ದೌರ್ಜನ್ಯಗಳು ಅತ್ಯಾಚಾರಗಳು ಹೆಚ್ಚಾಗುತ್ತಿವೆ.
ಶತಮಾನಗಳಿಂದಲೂ ಲಿಂಗಭೇದ ನೀತಿಯನ್ನು ಅನುಕರಿಸಿಕೊಂಡು ಬರುತ್ತಿರುವ ಸಮಾಜ ನಮ್ಮದು. ಇದಕ್ಕೆ ಯಾವುದೇ ವ್ಯಕ್ತಿ, ಸಮುದಾಯ, ಜನಾಂಗಗಳು ಕಾರಣವಲ್ಲವಾದರೂ ಇಡೀ ಸಾಮಾಜಿಕ ವ್ಯವಸ್ಥೆಯೇ ಕಾರಣವಾಗಿದೆ.
ಇಂತಹ ವಿಷಯದಲ್ಲಿ ಸಾಮಾಜಿಕ ಪದ್ಧತಿಯಲ್ಲಿ ಕಾಣಿಸಿಕೊಳ್ಳುವ ಯಾವುದೇ ಬಗೆಯ ವೈಜ್ಞಾನಿಕ ಬದಲಾವಣೆಗಳಾದರೂ ವರವಾಗುವ ಬದಲು ಶಾಪವಾಗಿಯೇ ಪರಿಣಮಿಸುತ್ತವೆ. ಇದಕ್ಕೆ ಸಾಕ್ಷಿ ಎಂದರೆ ಅಲ್ಟ್ರಾಸೋನೋಗ್ರಫಿ ಅಥವಾ ಸ್ಕ್ಯಾನಿಂಗ್ ಯಂತ್ರ.
ಇದೊಂದು ಅನಿಷ್ಟ, ಅನಾಗರಿಕ ಬೆಳವಣಿಗೆಗೆ ಮಹಿಳೆಯರ ಆರೋಗ್ಯ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುರಕ್ಷಿತ ಗರ್ಭಪಾತ (MTP – Medical Termination of Pregnancy) ಕ್ಕೆ ಕಾನೂನಿನಲ್ಲಿ ಅವಕಾಶವಿದೆ.
ಹಾಗೆಂದು ಹೆಣ್ಣು ಭ್ರೂಣಹತ್ಯೆಗೆ ಮುಂದಾಗುವುದು ವೈದ್ಯಕೀಯ ವೃತ್ತಿಗೆ ಮಾಡುವ ಅಪಚಾರಗಳು. ಮಹಿಳೆಯನ್ನು ಹಂಚಿಕೊಳ್ಳಬಹುದಾದ ವಸ್ತು, ಸರಕು ಅದರಲ್ಲೂ ಸಾಮೂಹಿಕ ಸರಕು ಎಂದು ಭಾವಿಸಿರುವುದೇ ಅತ್ಯಂತ ಅಪಾಯಕಾರಿ.
ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಮತ್ತು ಮಹಿಳೆಯರು ಧರಿಸುವ ಉಡುಪು ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎನ್ನುವುದಾದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಎಲ್ಲಿಯೂ ಸಾಮೂಹಿಕ ಅತ್ಯಾಚಾರಗಳು ನಡೆದಿರುವುದು ವರದಿಯಾಗಿಲ್ಲ.
ಸಾಮೂಹಿಕ ಅತ್ಯಾಚಾರಗಳ ಪ್ರಕರಣಗಳು ನಮ್ಮ ದೇಶದ ಸಾಂಸ್ಕೃತಿಕ, ಸಾಮಾಜಿಕ, ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿವೆ. ಸಮಾಜ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಹೆಣ್ಣುಮಕ್ಕಳು ಕೂಡ ನಾನು ಅಬಲೆಯಲ್ಲ, ಸಬಲೆ ಅನ್ನುವುದನ್ನು ಮನಸ್ಸಲ್ಲಿ ಇಟ್ಟುಕೊಂಡು ಯಾವುದೇ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬೇಕಾಗಿರುವುದು ಅವಶ್ಯಕ.
ಅತ್ಯಾಚಾರಗಳು ಏಕೆ ಹೆಚ್ಚುತ್ತಿವೆ? ಸಮಾಜದ ಆರೋಗ್ಯ ಕೆಡುತ್ತಿರುವುದರ ಕಾರಣಗಳೇನು ಎಂಬುದರ ಬಗ್ಗೆ ಅವಲೋಕನ, ವಿಶ್ಲೇಷಣೆ ಅವಶ್ಯಕ.
Get in Touch With Us info@kalpa.news Whatsapp: 9481252093
Discussion about this post