ಉಡುಪಿ: ಶ್ರೀಫಲಿಮಾರು ಮಠದ ನೂತನ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದ ಶ್ರೀಶೈಲೇಶ್ ಉಪಾಧ್ಯಾಯ ಅವರಿಗೆ ಇಂದು ವಿಧಿವತ್ತಾಗಿ ಸನ್ಯಾಸ ದೀಕ್ಷೆ ನೀಡಲಾಗಿದ್ದು, ಉಡುಪಿಯಲ್ಲಿ ಸಂಭ್ರಮ ಮನೆ ಮಾಡಿತ್ತು.
ಪರ್ಯಾಯ ಪೀಠಾಧೀಶರಾದ ಶ್ರೀಶ್ರೀಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ತಮ್ಮ ಉತ್ತರಾಧಿಕಾರಿಗಳಿಗೆ ಇಂದು ಆಶ್ರಮದೀಕ್ಷೆ ನೀಡಿದ್ದು, ಈ ಮೂಲಕ ಶ್ರೀಮಠಕ್ಕೆ ನೂತನ ಯತಿಗಳು ವಿರಾಜಮಾನರಾಗಿದ್ದಾರೆ.
ಆಶ್ರಮ ದೀಕ್ಷೆಯ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಡೀ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ನಿನ್ನೆ ರಾತ್ರಿ ವಿಷ್ಣು ಜಾಗರಣ, ಭಾಗವತ ಆಲಿಸಿ, ವಿರಾಜ ಹೋಮ ನಡೆಸಿದರು.
ಮಧ್ವಸಂಪ್ರದಾಯದಂತೆ ಸನ್ಯಾಸ ದೀಕ್ಷೆಯ ವಿಧಿವಿಧಾನಗಳು ನಡೆದಿದ್ದು, ಪಂಡಿತರ ವೇದಘೋಷಗಳೊಂದಿಗೆ ಎಲ್ಲವೂ ನಡೆದವು. ಶ್ರೀಪೇಜಾವರ ಮಠದ ಕಿರಿಯ ಶ್ರೀಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಎಲ್ಲ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.
ಇಂದು ಮುಂಜಾನೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಧ್ವಾಚಾರ್ಯರು ಅಣತಿ ನೀಡಿದಂತೆ ದೀಕ್ಷೆ ನೀಡುವ ವೇಳೆ ಮಹಾಮಂತ್ರ ಘೋಷಣೆ ನಡೆಯಿತು.
ನಾಳೆ ನೂತನ ಯತಿಗಳಿಗೆ ಪಟ್ಟಾಭಿಶೇಕ ನಡೆಯಲಿದ್ದು, ಆಶ್ರಮ ನಾಮವನ್ನು ಹಿರಿಯ ಯತಿಗಳು ಅನುಗ್ರಹಿಸಲಿದ್ದಾರೆ.
ಆಶ್ರಮದೀಕ್ಷೆಯ ಫೋಟೋಗಳನ್ನು ನೋಡಿ:
Discussion about this post