ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೋರ್ಟ್ ಮುಂದಿನ ರಸ್ತೆ ಅಗಲೀಕರಣದ ಕಾಮಗಾರಿ ನಿಗಧಿತ ವಿಸ್ತೀರ್ಣಕ್ಕೆ ತಕ್ಕಂತೆ ಮಾಡದೇ ಅಲ್ಲಲ್ಲಿ ಅದರ ವಿಸ್ತೀರ್ಣವನ್ನು ಕಿರಿದು, ಹಿರಿದುಗೊಳಿಸಿ ಕಾಮಗಾರಿ ನಡೆಯುತ್ತಿರುವುದನ್ನು ವಿರೋಧಿಸಿ ನಗರದ ನ್ಯಾಯವಾದಿಗಳ ಸಂಘ ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿದು ರಸ್ತೆಗಿಳಿದು ಬಾರಿ ಹೋರಾಟ ನಡೆಸಿತು.
ಈ ವಿಷಯ ಸಂಬಂಧಿಸಿದಂತೆ ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್ ನೇತೃತ್ವದಲ್ಲಿ ವಕೀಲರು ಸಭೆ ಸೇರಿ ಹೋರಾಟ ತಾರ್ಕಿಕವಾಗಿ ಅಂತ್ಯಗೊಳ್ಳುವವರೆಗೂ ಹೋರಾಟವನ್ನು ಬಿಡಬಾರದು ಎಂದು ನಿರ್ಧರಿಸಲಾಯಿತು.
ನೂರಾರು ವಕೀಲರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ನ್ಯಾಯಾಲಯದ ಮುಂದಿನಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ, ಕಳಪೆ ಕಾಮಗಾರಿಯನ್ನು ನಿಲ್ಲಿಸುವಂತೆ ಆಗ್ರಹಿಸಿ ತಡೆದರು.
ನಂತರ ನ್ಯಾಯಾಲಯದ ಎದುರಿಗೆ ಪ್ರತಿಭಟನೆ ಮುಂದುವರೆಸಿದ ಪ್ರತಿಭಟನಕಾರರ ಜೊತೆಗೆ ಆಮ್ ಆದ್ಮಿಪಕ್ಷದ ಕಾರ್ಯಕರ್ತರು, ನಾಯಕರು, ಸೇರಿದಂತೆ ವಿವಿಧ ಸಂಘಸಂಸ್ಥೆಯವರು ಹಾಗೂ ನೂರಾರು ಸಾರ್ವಜನಿಕರು ಸೇರಿಕೊಂಡು ಪ್ರತಿಭಟನೆಯಲ್ಲಿ ಭಾಗಿಯಾದರು.
ಈಸಂಧರ್ಭದಲ್ಲಿ ಮತನಾಡಿದ ವಕೀಲರಾದ ಕೆ.ಎನ್. ಶ್ರೀಹರ್ಷ, ಟಿ.ಚಂದ್ರೇಗೌಡ, ಎಂ.ಜಿ.ರುದ್ರೇಶ್, ಎಚ್. ವಿಶ್ವನಾಥ್ ಉಪಾಧ್ಯಕ್ಷ ವೈ. ಜಯರಾಂ ಸಯ್ಯದ್ ನಿಯಾಜ್ ಆಮ್ ಆದ್ಮಿ ಮುಖಂಡ ರವಿಕುಮಾರ್, ರಾಜಾರಾವ್ ಮುಂತಾದವರು ಮಾತನಾಡಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ಹಲವಾರು ಮರಗಳನ್ನು ಕಡಿದು ಹಾಕಿ ಈಗ ರಸ್ತೆ ಅಗಲೀಕರಣದ ವಿಸ್ತೀರ್ಣವನ್ನು ಸಂಕುಚತಗೊಳಿಸಿ ಮಾಡಲಾಗುತ್ತಿದೆ. ಮಾಡುತ್ತಿರುವ ಕಾಮಗಾರಿ ಕಳಪೆಯಿಂದ ಕೂಡಿದೆ. ನ್ಯಾಯಾಲಯದ ಎದುರಿಗೆ ರಸ್ತೆ ಅಗಲ ಹೆಚ್ಚಾಗಿರಬೇಕಾದ ಅವಶ್ಯಕತೆಯಿದ್ದು ರಾಜಕಾರಣಿಗಳ ಒತ್ತಡಕ್ಕೆ ಮಣಿದು ರಸ್ತೆ ವಿಸ್ತೀರ್ಣವನ್ನು ಈ ಭಾಗದಲ್ಲಿ ಕಿರದುಗೊಳಿಸುತ್ತಿರುವುದು ಸರಿಯಲ್ಲ. ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ಅಧಿಕಾರಿಗಳನ್ನು ಕರೆಸಿ ರಸ್ತೆ ಅಗಲೀಕರಣದಲ್ಲಿ ಆಗಿರುವ ಲೋಪದೋಷಸರಿಪಡಿಸಿ ವಿಸ್ತಾರವಾದ ರಸ್ತೆ ಮಾಡಲೇಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ನಗರಸಭಾ ಆಯುಕ್ತ ಮನೋಹರ್, ಲೋಕೋಪಯೋಗಿ ಇಲಖೆ ಇಂಜಿನಿಯರ್ ರಾಮಚಂದ್ರ, ತಹಶೀಲ್ದಾರ್ ಸೋಮಶೇಖರ್ ಹಾಗೂ ಇಂಜಿನಿಯರ್ ಮಂಜುನಾಥ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು.
ನಗರಸಭಾ ಆಯುಕ್ತ ಮನೋಹರ್ ಮಾತನಾಡಿ, ಈ ರಸ್ತೆ ಅಗಲೀಕರಣದ ಬಗ್ಗೆ ಅದರ ವಿಸ್ತೀರ್ಣದ ಕುರಿತು ನಮಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿಲ್ಲ. ಇರುವ ರಸ್ತೆಯನ್ನೇ ಅಗಲೀಕರಣ ಮಾಡಿದಂತೆ ಮಾಡುವುದಾಗಿ ಹೇಳಿದ್ದರು ಎಂದರು.
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಾಮಚಂದ್ರ ಮಾತನಾಡಿ, ರಸ್ತೆ ಅಗಲೀಕರಣ ಉಭಯ ಪಾರ್ಶ್ವಗಳಲ್ಲಿ 12 ಮೀಟರ್ ನಂತೆ ಮಾಡಲಾಗುತ್ತದೆ ಎಂದರು. ಆಗ ವಕೀಲರು ಅಷ್ಟು ಕಡಿಮೆ ವಿಸ್ತೀರ್ಣದ ರಸ್ತೆ ಮಾಡುವುದಾಗಿದ್ದರೆ ಮರವನ್ನು ಏಕೆ ಕಡಿದು ಹಾಕಿದಿರಿ ಎಂದು ಪ್ರಶ್ನಿಸಿ, ಸರ್ಕಾರದ ಆದೇಶದನ್ವಯ ಈ ರಸ್ತೆ ಅಗಲೀಕರಣ ಆಗಲೇ ಬೇಕು. ಕಡಿದು ಹಾಕಿರುವ ಮರಗಳ ಜಾಗದಲ್ಲಿ ಹೊಸ ಸಸಿಗಳನ್ನು ನೆಡಲು ಅವಕಾಶ ಕಲ್ಪಿಸಬೇಕು ಮತ್ತು ನ್ಯಾಯಾಲಯದ ಎದುರಿಗಿರುವ ರಸ್ತೆ ಅಗಲೀಕರಣವನ್ನು ಯಾವುದೇ ಮುಲಾಜಿಗೆ ಒಳಗಾಗದೆ ರಂಗಪ್ಪ ವೃತ್ತದವರೆಗೆ ರಸ್ತೆ ವಿಸ್ತೀರ್ಣಗೊಳಿಸಲೇಬೇಕು ಎಂದು ಆಗ್ರಹಿಸಿದರು.
ಅಂತಿಮವಾಗಿ ನಗರಸಭಾ ಆಯುಕ್ತರು ಮಾತನಾಡಿ, ಸರ್ಕಾರದ ಆದೇಶದನ್ವಯ ಈ ರಸ್ತೆ ಅಗಲೀಕರಣಗೊಳಿಸಲು ನಗರಸಭೆ ವತಿಯಿಂದ ಮಾಡಬೇಕಾದ ಕಾರ್ಯ ಮಾಡಲಾಗುವುದು. ನ್ಯಾಯಾಲಯದ ಎದುರಿಗಿರುವ ಕಟ್ಟಡಗಳು ರಸ್ತೆ ವಿಸ್ತೀರ್ಣದ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂದು ಅಳತೆ ಮಾಡಿ ಗುರುತು ಹಾಕಲಾಗುತ್ತದೆ. ಅಕ್ರಮ ಕಟ್ಟಡಗಳಾಗಿದ್ದರೆ ಅವುಗಳ ತೆರವಿಗೆ ಶೀಘ್ರಕ್ರಮ ಕೈಗೊಳ್ಳಲಾಗುವುದು. ಸಕ್ರಮ ಕಟ್ಟಡಗಳಾಗಿದ್ದರೆ ಅವುಗಳ ಮಾಲಿಕರಿಗೆ ಪೂರ್ವಭಾವಿ ತಿಳುವಳಿಕೆ ಪತ್ರನೀಡಿ ಕಾನೂನು ಪ್ರಕಾರ ನಿಗಧಿತ ಅವಧಿ ಪೂರೈಸಿದ ತರುವಾಯ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಹಮತ ವ್ಯಕ್ತಪಡಿಸಿದರು.
ನಾಗರೀಕರ ಬೆಂಬಲ-ಮಾಲೀಕರ ಅಪಸ್ವರ
ವಕೀಲರು ಸಾರ್ವಜನಿಕ ಹಿತಾಸಕ್ತಿಯಿಂದ ರಸ್ತೆ ಅಗಲೀಕರಣದಲ್ಲಿ ಆಗುತ್ತಿರುವ ತಾರತಮ್ಯ ನೀತಿ ವಿರೋಧಿಸಿ ಮತ್ತು ಅನಗತ್ಯವಾಗಿ ಮರಗಳನ್ನು ಕಡಿದು ಹಾಕಿರುವುದನ್ನು ವಿರೋಧಿಸಿ ರಸ್ತೆಗಿಳಿದು ಹೋರಾಟ ನಡೆಸುತ್ತಿರುವುದಕ್ಕೆ ನಾಗರೀಕರು ಮುಕ್ತಕಂಠದಿಂದ ಪ್ರಶಂಸಿಸಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಇದಕ್ಕೆ ವಿರುದ್ಧವಾಗಿ ನ್ಯಾಯಾಲಯದ ಎದುರಿಗಿರುವ ಕೆಲವು ಅಕ್ರಮ ಕಟ್ಟಡಗಳ ಮಾಲೀಕರು ಹಾಗೂ ರಾಜಕಾರಣಿಗಳ ಬೆಂಬಲಿಗರು ಸಭೆಯಲ್ಲಿ ಅಪಸ್ವರ ಎತ್ತಲು ಮುಂದಾದರು. ಆಗ ನಾಗರೀಕರು ಅವರ ವಿರುದ್ಧ ಹರಿಹಾಯ್ದ ಪರಿಣಾಮ ಅವರುಗಳು ಸುಮ್ಮನಾದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್, ಉಪಾಧ್ಯಕ್ಷ ಜಯರಾಂ, ಕಾರ್ಯದರ್ಶಿ ರಾಜು, ಸಹಕಾರ್ಯದರ್ಶಿ ಮೋಹನ್, ಖಜಾಂಚಿ ರಂಗಪ್ಪ ಸೇರಿದಂತೆ ನೂರಾರು ವಕೀಲರು ಸಾರ್ವಜನಿಕರು ಭಾಗವಹಿಸಿದ್ದರು.
(ವರದಿ: ಕೆ.ಎಸ್. ಸುಧೀಂದ್ರ)
Get in Touch With Us info@kalpa.news Whatsapp: 9481252093
Discussion about this post