ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಇಲ್ಲಿನ ಹೆಸರಾಂತ ಕಾರ್ಖಾನೆಗಳಲ್ಲಿ ಪ್ರಮುಖವಾದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ರಾಷ್ಟ್ರೀಯ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಯಿತು.
ಕಾರ್ಖಾನೆ ಪ್ರಾರಂಭದಿಂದಲೂ ಕಾರ್ಖಾನೆಯ ಅಭಿವೃದ್ಧಿಯ ಜೊತೆ ಜೂತೆಗೆ ಉದ್ಯೋಗಿಗಳಿಗೆ ಮತ್ತು ಎಲ್ಲಾ ಕಾರ್ಮಿಕರ ಸುರಕ್ಷತೆ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡಲಾಗುತ್ತಿದೆ. ಪ್ರಾರಂಭದಿಂದಲೂ ಅಂದರೆ 1993 ರಿಂದಲೂ ಪ್ರತಿವರ್ಷವೂ ಮಾರ್ಚ್ 4 ರಂದು ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಯಿತು.
ಕಳೆದ 13 ವರ್ಷದಲ್ಲಿ ಗುಲ್ಬರ್ಗ ವಲಯ ಮತ್ತು ಬಳ್ಳಾರಿ ಕೊಪ್ಪಳ ವಲಯ ಸುರಕ್ಷತಾ ಸಮಿತಿಯ ಸಹಯೋಗದಿಂದ ವಲಯ ಮಟ್ಟದಲ್ಲಿ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗಿದೆ. 2006 07 ನೇ ಸಾಲಿನಲ್ಲಿ ಮೆ॥ ಜಿಂದಾಲ್ ಕಾರ್ಖಾನೆಯ ಸಹಾಯದಿಂದ ಒಂದು ಬಾರಿ ರಾಜ್ಯ ಮಟ್ಟದ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗಿದೆ. ಇದರ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ, ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಸುರಕ್ಷತೆ ಬಗ್ಗೆ ಅರಿವನ್ನು ಮೂಡಿಸುವುದರ ಮೂಲಕ ಜಾಗೃತಿ ಮೂಡಿಸುವ ಒಂದು ಪ್ರಯತ್ನ ಮತ್ತು ಕಾರ್ಖಾನೆಗಳಲ್ಲಿ ಅಪಘಾತವನ್ನು ತಗ್ಗಿಸಿ, ಶೂನ್ಯ ಅಪಘಾತಕ್ಕೆ ತರುವುದು ಮುಖ್ಯ ಉದ್ದೇಶ ಹೊಂದಿದೆ.
ಇನ್ನು, ಈ ಬಾರಿ ಆಯೋಜಿಸಲಾಗಿದ್ದ 49ನೆಯ ಸುರಕ್ಷತಾ ಸಪ್ತಾಹದ ಸಮಾರೋಪ ವಿಭಿನ್ನ ರೀತಿಯಲ್ಲಿ ನಿನ್ನೆ ನಡೆಯಿತು.
ಪ್ರತಿದಿನ ಸುರಕ್ಷತಾ ಪ್ರತಿಜ್ಞೆ, ಸುರಕ್ಷತಾ ಕಾರ್ಯಸ್ಥಾನದ ಬಗ್ಗೆ ಒಟ್ಟಾಗಿ ಸೇರಿ ಮಾತನಾಡುವುದು, ವಿಭಾಗಗಳಲ್ಲಿ ಅಸುರಕ್ಷಿತ ಕಾರ್ಯ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವುದು, ಹಿರಿಯ ಆಡಳಿತ ಅಧಿಕಾರಿಗಳ ಸಮೇತ ವಿಭಾಗಳ ವೀಕ್ಷಣೆ ಮಾಡಿ ಸುರಕ್ಷತೆ ಬಗ್ಗೆ ಸಲಹೆ ಪಡೆಯುವುದರ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಯಿತು.
ಕೊಪ್ಪಳ ವಲಯ ಕಾರ್ಖಾನೆಯ ಸಹಾಯಕ ನಿರ್ದೇಶಕರಾದ ಶ್ರೀ ವಿಜಯಕುಮಾರ್, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯ ಪ್ರೆಸಿಡೆಂಟ್ ಶ್ರೀ ಎನ್.ಬಿ.ಏಕತಾರೆ ಬೀಡುಕಬ್ಬಿಣ ವಿಭಾಗದ ಉಪಾಧ್ಯಕ್ಷರಾದ ಶ್ರೀ ಎಂ.ಜಿ. ನಾಗರಾಜ್, ಎರಕ ವಿಭಾಗದ ಉಪಾಧ್ಯಕ್ಷರಾದ ಶ್ರೀ ಸಿ. ರಮೇಶ್ ಮತ್ತು ಕಾರ್ಮಿಕ ಮುಖಂಡರಾದ ಶ್ರೀ ಶರಣಪ್ಪ ಇವರುಗಳನ್ನು ವಿಶೇಷವಾಗಿ ಆಹ್ವಾನಿಸಿ ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭ ನಡೆಸಲಾಯಿತು.
ಸಭೆಯಲ್ಲಿ ಎಲ್ಲಾ ವಿಭಾಗದ ಹಿರಿಯ ಅಧಿಕಾರಿಗಳು, ಕಾರ್ಮಿಕ ವರ್ಗ, ಆಡಳಿತ ಮಂಡಳಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.
ಸುರಕ್ಷತಾ ವಿಭಾಗದ ಹಿರಿಯ ಅಧಿಕಾರಿಗಳಾದ ಶ್ರೀ ಮುರಳಿಧರ್ ನಾಡಿಗೇರ್ ಅವರು ಕಳೆದ 2019-20 ನೆಯ ಸಾಲಿನ ಸುರಕ್ಷತಾ ವರದಿಯನ್ನು ಮಂಡಿಸಿದರು. ದೀರ್ಘವಾದ ಸುರಕ್ಷತಾ ವರದಿಯಲ್ಲಿ ಕಾರ್ಖಾನೆಯಲ್ಲಿ ಸುರಕ್ಷತೆಗಾಗಿ ಮಾಡಲಾದ ಬದಲಾವಣೆ, ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸುರಕ್ಷತೆಗೆ ಸಂಬಂಧಿಸಿದಂತಹ ಯೋಜನೆಗಳು ಮತ್ತು ಅಣುಕು ಪ್ರದರ್ಶನ ಹಾಗೂ ಅಪಘಾತಗಳ ಬಗ್ಗೆ ಕೂಲಂಕಷವಾಗಿ ತಿಳಿಸಿಕೊಟ್ಟರು.
ಬೀಡುಕಬ್ಬಿಣ ವಿಭಾಗದ ಉಪಾಧ್ಯಕ್ಷರಾದ ಎಂ.ಜಿ. ನಾಗರಾಜ್ ಅವರು ಮಾತನಾಡಿ, ತಮ್ಮ ವಿಭಾಗದ ವ್ಯಾಪ್ತಿಯಲ್ಲಿ ಹಾಗೂ ಹೊಸದಾಗಿ ರೂಪಿತವಾದಂತಹ ಪ್ರಾಜೆಕ್ಟ್’ಗಳಲ್ಲಿ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಿರುವುದರ ಬಗ್ಗೆ, ಅಭಿವೃದ್ಧಿ ಕಾರ್ಯಗಳು ಹಾಗೂ ಸುರಕ್ಷತಾ
ರೀತಿನೀತಿಗಳನ್ನು ಕೂಲಂಕಶವಾಗಿ ತಿಳಿಸಿಕೊಟ್ಟರು ಹಾಗೂ ಕೆಲವು ಅಪಘಾತಗಳನ್ನು ವಿವರಿಸಿ ತಿಳಿಸಿದರು.
ಎರಕ ವಿಭಾಗದ ಉಪಾಧ್ಯಕ್ಷರಾದ ಸಿ. ರಮೇಶ್ ಮಾತನಾಡಿ, ತಮ್ಮ ಫೌಂಡ್ರಿ ವಿಭಾಗದಲ್ಲಿ ಕಳೆದ ವರ್ಷ ಮಾಡಲಾದ ಬದಲಾವಣೆಗಳು ಸುರಕ್ಷತಾ ಯೋಜನೆಗಳು ಹಾಗೂ ಹೊಸ ಹೊಸ ಯೋಜನೆಗಳನ್ನು ವಿವರವಾಗಿ ತಿಳಿಸುವುದರ ಮೂಲಕ ಆ ಭಾಗದಲ್ಲಿ ಮಾಡಲಾದ ಯೋಜನೆಗಳನ್ನು ತಿಳಿಸಿಕೊಟ್ಟರು.
ಕೊಪ್ಪಳ ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸ್ವಾಸ್ಥ್ಯ ಯೋಜನೆಗಳ ಸಹಾಯಕ ನಿರ್ದೇಶಕ ಶ್ರೀ ವಿಜಯ್ ಕುಮಾರ್ ಮಾತನಾಡಿ, ಸರ್ಕಾರದ ಯೋಜನೆಗಳು ಮತ್ತು ಕಾರ್ಖಾನೆಗಳಲ್ಲಿ ಆಗುವಂತಹ ಅಪಘಾತಗಳ ಬಗ್ಗೆ ಮನವರಿಕೆ ಮಾಡಿಕೊಡುವುದರ ಮೂಲಕ ಭಾಗವಹಿಸಿದ ಎಲ್ಲರಿಗೂ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಕಾರ್ಖಾನೆಯ ಪ್ರೆಸಿಡೆಂಟ್ ಶ್ರೀ ಎನ್.ಬಿ. ಏಕತಾರೆ ಅವರು ಮಾತನಾಡಿ, ಕಾರ್ಖಾನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಸುರಕ್ಷತೆಗೆ ಮಹತ್ವವಾದ ಸ್ಥಾನವನ್ನು ನೀಡಲಾಗಿದೆ. ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ. ಆದರೂ ಅದನ್ನು ಶೂನ್ಯ ಅಪಘಾತಕ್ಕೆ ತರುವ ಜವಾಬ್ದಾರಿ ಎಲ್ಲರ ಮೇಲೆ ಇರುತ್ತದೆ. ಕಾರಣ ತಾವುಗಳು ಶ್ರಮಿಸಬೇಕು, ಸುರಕ್ಷಿತವಾಗಿ ಕಾರ್ಯನಿರ್ವಹಿಸಿ ಕಂಪನಿಯನ್ನು ಉತ್ತುಂಗಕ್ಕೇರಿಸಲು ಹೋರಾಡಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಮತ್ತು ಶಿಶಿಕ್ಷುಕರಿಗೆ ಉತ್ತಮ ಸುರಕ್ಷ ಪ್ರಶಸ್ತಿಗಳನ್ನು ನೀಡಲಾಯಿತು, ಪ್ರಾಜೆಕ್ಟ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರ ಸುರಕ್ಷತಾ ಅಧಿಕಾರಿಗಳಿಗೆ ಪ್ರಶಂಸಾ ಪತ್ರವನ್ನು ನೀಡಲಾಯಿತು.
49 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಉದ್ಯೋಗಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ನೀಡಲಾಯಿತು.
ಅಚ್ಚುಕಟ್ಟಾದ ಸಭೆಯನ್ನು ಸುರಕ್ಷತಾ ವಿಭಾಗದ ಅಧಿಕಾರಿಗಳು ಮತ್ತು ಮಾನವ ಸಂಪನ್ಮೂಲ ವಿಭಾಗದವರು ಆಯೋಜಿಸಿದ್ದರು.
(ವರದಿ: ಮುರಳೀಧರ್ ನಾಡಿಗೇರ್, ಕೊಪ್ಪಳ)
Get in Touch With Us info@kalpa.news Whatsapp: 9481252093
Discussion about this post