ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಅಧಿಕಮಾಸದ ಪ್ರಯುಕ್ತ ಭಾನುವಾರದ ಹುಣ್ಣಿಮೆಯ ಶುಭ ಸಂದರ್ಭದಲ್ಲಿ ಹೊಸಪೇಟೆಯ ಸರ್ಕಾರಿ ಆಸ್ಪತ್ರೆ ರಸ್ತೆಯ ಸಮೀಪವಿರುವ ಶ್ರೀ ಶಂಕರ ಜ್ಞಾನ ಮಂದಿರದಲ್ಲಿ ಶ್ರೀ ವೆಂಕಟೇಶ್ವರ ಕರಾವಲಂಬ ಸ್ತೋತ್ರದ 33 ಬಾರಿ ಸಾಮೂಹಿಕ ಪಾರಾಯಣ ಕಾರ್ಯಕ್ರಮವು ಅತ್ಯಂತ ಭಕ್ತಿಭಾವದಿಂದ ಹಾಗೂ ಯಶಸ್ವಿಯಾಗಿ ನೆರವೇರಿತು.
ಸ್ತೋತ್ರ ಶಂಕರದಿಂದ ಶೃಂಗೇರಿ ಜಗದ್ಗುರುಗಳಾದ ಶ್ರೀ ನೃಸಿಂಹಭಾರತೀ ತೀರ್ಥ ಮಹಾಸ್ವಾಮಿಗಳವರು ವಿರಚಿತ ಶ್ರೀ ವೆಂಕಟೇಶ್ವರ ಕರಾವಲಂಬ ಸ್ತೋತ್ರದ ಪಾರಾಯಣವು ಬೆಳಿಗ್ಗೆ 5.30 ಗಂಟೆಗೆ ಆರಂಭಗೊಂಡು ಭಕ್ತಿಮಯ ವಾತಾವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಆಸಕ್ತರು ಭಾಗವಹಿಸಿ ಭಕ್ತಿಪೂರ್ವಕವಾಗಿ ಪಾರಾಯಣದಲ್ಲಿ ತೊಡಗಿಸಿಕೊಂಡು ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು.
ಶ್ರೀ ವೆಂಕಟೇಶ್ವರ ಕರಾವಲಂಬ ಸ್ತೋತ್ರ ಪಠಣದ ಶುಭ ಫಲಗಳು ಭಗವಾನ್ ಶ್ರೀ ವೆಂಕಟೇಶ್ವರನ ಕೃಪೆ ಮತ್ತು ಆಶ್ರಯವನ್ನು ಬೇಡುವ ಅತ್ಯಂತ ಪವಿತ್ರ ಸ್ತೋತ್ರವಾಗಿದೆ. ಈ ಸ್ತೋತ್ರದ ಭಕ್ತಿಪೂರ್ವಕ ಪಠಣದಿಂದ ಕೆಳಗಿನ ಶುಭ ಫಲಗಳು ಲಭಿಸುತ್ತವೆ ಎಂದು ನಂಬಲಾಗಿದೆ,
- ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಆತ್ಮವಿಶ್ವಾಸ ದೊರೆಯುತ್ತದೆ.
- ಜೀವನದ ಕಷ್ಟಗಳು, ಸಂಕಟಗಳು ಹಾಗೂ ಅಡಚಣೆಗಳನ್ನು ಎದುರಿಸುವ ಶಕ್ತಿ ಹೆಚ್ಚುತ್ತದೆ.
- ಭಗವಂತನ ಕೃಪೆ ಮತ್ತು ರಕ್ಷಣೆ ಸದಾ ಲಭಿಸುತ್ತದೆ.
- ಕುಟುಂಬದಲ್ಲಿ ಸುಖ, ಶಾಂತಿ, ಐಕ್ಯತೆ ಮತ್ತು ಮಂಗಳಕರ ವಾತಾವರಣ ನಿರ್ಮಾಣವಾಗುತ್ತದೆ.
- ಆಧ್ಯಾತ್ಮಿಕ ಚಿಂತನೆ ಮತ್ತು ಭಕ್ತಿ ವೃದ್ಧಿಯಾಗುತ್ತದೆ.
- ದೈಹಿಕ ಹಾಗೂ ಮಾನಸಿಕ ಕ್ಷೇಮ ಪ್ರಾಪ್ತಿಯಾಗುತ್ತದೆ.
- ಇಷ್ಟಾರ್ಥಗಳ ಸಿದ್ಧಿ ಮತ್ತು ಸರ್ವಮಂಗಳಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ.
- ಸಾಮೂಹಿಕ ಪಾರಾಯಣದಿಂದ ಸತ್ಸಂಗದ ಫಲ ದೊರೆತು ಸಮಾಜದಲ್ಲಿ ಸೌಹಾರ್ದತೆ ಬೆಳೆಯುತ್ತದೆ.
“ಕರಾವಲಂಬ” ಎಂದರೆ “ಕೈಹಿಡಿದು ಕಾಪಾಡು” ಎಂಬ ಅರ್ಥ. ಆದ್ದರಿಂದ ಈ ಸ್ತೋತ್ರದ ಮೂಲಕ ಭಕ್ತನು ಶ್ರೀ ವೆಂಕಟೇಶ್ವರ ಸ್ವಾಮಿಯ ಶರಣಾಗಿ, ಜೀವನದ ಎಲ್ಲ ಸಂದರ್ಭಗಳಲ್ಲಿ ಅವರ ಅನುಗ್ರಹ ಮತ್ತು ಮಾರ್ಗದರ್ಶನವನ್ನು ಪ್ರಾರ್ಥಿಸುತ್ತಾರೆ.
ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿ ಸಹಕಾರ ನೀಡಿದ ಉದ್ದಿಮಿಗಳಾದ ಶ್ರೀ ಪಂತರ್ ಜಯಂತ್ ಅವರಿಗೆ ಸ್ತೋತ್ರ ಶಂಕರ ಮಂಡಳಿಯ ಮಹಿಳೆಯರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಶ್ರೀ ವೆಂಕಟೇಶ್ವರ ಕರಾವಲಂಬ ಸ್ತೋತ್ರ ಪರಾಯಣ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಭಕ್ತಾದಿಗಳು, ಸಂಘಟಕರು ಹಾಗೂ ಸೇವಾ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಭಗವಂತನ ನಾಮಸ್ಮರಣೆಯೊಂದಿಗೆ ಕಾರ್ಯಕ್ರಮವು ಮಂಗಳಕರವಾಗಿ ಮುಕ್ತಾಯಗೊಂಡಿತು.
ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















