ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮಾಧ್ವ ಪರಂಪರೆಯ ಯತಿಶ್ರೇಷ್ಠರಲ್ಲಿ ಒಬ್ಬರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾಂದಗಳವರ ಆರಾಧನಾ ಮಹೋತ್ಸವ ಬಸವನಗುಡಿಯ ಬೆಣ್ಣೆ ಗೋವಿಂದಪ್ಪ ರಸ್ತೆಯ ಸೋಸಲೆ ವ್ಯಾಸರಾಜ ಮಠದಲ್ಲಿ ನಡೆಯುತ್ತಿದೆ.
ಶ್ರೀ ಮಧ್ವಾಚಾರ್ಯರ ಶಿಷ್ಯ ಪರಂಪರೆಯ ಸೋಸಲೆ ಶ್ರೀ ವ್ಯಾಸರಾಜ ಮಠದ ಕೀರ್ತಿ ಕಲಶವಾಗಿದ್ದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಆರಾಧನೆಯ ಸುವರ್ಣ ಮಹೋತ್ಸವದ ವರ್ಷವಿದು. ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಧುನಿಕ ಭಾರತದ ಕಾಲಘಟ್ಟದಲ್ಲಿ ಸನಾತನ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಕಂಕಣ ಬದ್ಧರಾದ ಯತಿವರೇಣ್ಯರು.
ಅನೇಕ ಧಾರ್ಮಿಕ ಸಾಮಾಜಿಕ ಕೈಂಕರ್ಯಗಳನ್ನು ದೇಶದಾದ್ಯಂತ ನಡೆಸಿ ಭಕ್ತಶಿಷ್ಯರ ಮನಗಳಲ್ಲಿ ಪ್ರಾತಃಸ್ಮರಣೀಯರಾದ ಶ್ರೀಪಾದರು ಬೃಂದಾವನಾಸ್ಥರಾಗಿ 50 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ಅವರಿಂದ ಅನುಗ್ರಹಿತರಾದ ಶಿಷ್ಯ ವರ್ಗದವರು ವಿದ್ಯಾಪ್ರಸನ್ನ ತೀರ್ಥ ಸ್ಮಾರಕ ಸಮಿತಿ ಎಂಬ ಸಂಸ್ಥೆ ರಚಿಸಿ ತನ್ಮೂಲಕ ಆರಾಧನಾ ಮಹೋತ್ಸವವನ್ನು ನಡೆಸುತ್ತಾ ಬರಲಾಗಿದೆ.
ಆರಾಧನೆ ಈಗಾಗಲೇ ಆರಂಭವಾಗಿದ್ದು, ಇಂದು ಅಂದರೆ ಡಿ.11ಬುಧವಾರ ಸಂಜೆ ಸುವರ್ಣ ಆರಾಧನಾ ಮಹೋತ್ಸವದ ಗುರು-ಭಕ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಗಮಿಸಿ ದೇವರನಾಮ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಿದ್ದಾರೆ. ಅಲ್ಲದೇ ವ್ಯಾಸತೀರ್ಥ ಸಂಶೋಧನಾ ಮಂದಿರ ಪ್ರಕಟಿಸಿರುವ ವಿದ್ಯಾಪ್ರಸನ್ನ ತೀರ್ಥರ ದೇವರನಾಮಗಳು ಕೃತಿ ಬಿಡುಗಡೆ ಮಾಡುವರು. ನಂತರ ಕುಮಾರಿ ಲಕ್ಷ್ಮೀ ರಾಧಾಕೃಷ್ಣರವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
ಡಿ.12 ಬೆಳಗ್ಗೆ ಶ್ರೀವಿದ್ಯಾಶ್ರೀಶ ತೀರ್ಥ ಶ್ರೀಪಾದರಿಂದ ಸಂಸ್ಥಾನ ಪೂಜೆ, ಉಪನ್ಯಾಸ ಮತ್ತು ಅಲಂಕಾರ ಪಂಕ್ತಿ ಏರ್ಪಡಿಸಿದೆ ಎಂದು ಆಯೋಜಕರಾದ ವಿದ್ಯಾಪ್ರಸನ್ನ ತೀರ್ಥ ಸ್ಮಾರಕ ಸಮಿತಿ ಪದಾಧಿಕಾರಿಗಳು ತಿಳಿಸಿರುತ್ತಾರೆ.
ವಿವರಗಳಿಗೆ 81237 40706ಗೆ ಸಂಪರ್ಕಿಸಬಹುದು.
Get in Touch With Us info@kalpa.news Whatsapp: 9481252093
Discussion about this post