ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಮುಂದಿನ ವಾರ ಅ.18ರಿಂದ ನಾಲ್ಕು ದಿನಗಳ ಕಾಲ ಸರಣಿ ಸರ್ಕಾರಿ ರಜೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ತುರ್ತು ಕೆಲಸಗಳಿದ್ದರೆ ಅ.17ರೊಳಗೆ ಮುಗಿಸಿಕೊಳ್ಳುವುದು ಉತ್ತಮ.
ಹೌದು… ಅಕ್ಟೋಬರ್ 18 ಹಾಗೂ 19ರಂದು ಆಯುಧ ಪೂಜೆ ಹಾಗೂ ವಿಜಯದಶಮಿ ಅಂಗವಾಗಿ ಈಗಾಗಲೇ ಸಾರ್ವತ್ರಿಕ ರಜೆಯಿದೆ. ಅ.21ರಂದು ಭಾನುವಾರ ರಜೆಯಿದೆ. ಈ ಹಿನ್ನೆಲೆಯಲ್ಲಿ ಸಾಂದರ್ಭಿಕ ರಜೆಯನ್ನು ಬಳಸಿಕೊಂಡು ಅ.20ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ.
ಈ ಕುರಿತಂತೆ ಕರಡು ಪ್ರತಿಯನ್ನು ಸಿದ್ದಪಡಿಸಿ, ಸಲ್ಲಿಸಲಾಗಿದ್ದು, ಇದು ಇನ್ನೂ ಅಧಿಕೃತ ಆದೇಶವಾಗಬೇಕಿದೆ.
ಅ.20ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿದರೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ, ಈಗಾಗಲೇ ಘೋಷಿತವಾಗಿರುವ ಅ.13ರ ಎರಡನೆಯ ಶನಿವಾರದ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಿ, ಆ ದಿನವನ್ನು ಕರ್ತವ್ಯದ ದಿನವನ್ನಾಗಿ ಘೋಷಣೆ ಮಾಡಿ, ಅದರ ಬದಲಾಗಿ ಅ.20ರಂದು ಸಾರ್ವತ್ರಿಕ ರಜೆಯನ್ನಾಗಿ ಘೋಷಣೆ ಮಾಡಲು ಕರಡು ಅಧಿಸೂಚನೆ ಸಿದ್ದಪಡಿಸಲಾಗಿದೆ.
ಒಂದು ವೇಳೆ ಕರಡು ಅಧಿಸೂಚನೆಗೆ ಅನುಮೋದನೆ ದೊರೆತರೆ, ಅ.13 ಎರಡನೆಯ ಶನಿವಾರ ಕರ್ತವ್ಯದ ದಿನವಾಗಲಿದೆ. ಅಲ್ಲದೇ, ಅ.18ರಿಂದ ಅ.21ರವರೆಗೂ ನಾಲ್ಕು ದಿನಗಳ ಕಾಲ ಸರ್ಕಾರಿ ರಜೆಯಾಗಿರುತ್ತದೆ.
ನಗೋಷಿಯೇಬಲ್ ಇನ್ಸಟ್ರುಮೆಂಟ್ ಆಕ್‌ಟ್ 1881ರಡಿಯೂ ಸಹ ಅನ್ವಯಿಸಬಹುದು ಎಂದು ಉಲ್ಲೇಖಿಸಲಾಗಿದೆ.
Discussion about this post