ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಪ್ತಋಷಿ ಭುವನದಿಂದ ಧರೆಗಿಳಿದು ಬಂದ ಶ್ರೀ ಗುರುದೇವನ ಕಂದ…. ಗೀತೆ ವೇದಿಕೆಯಲ್ಲಿ ಬಂದ ತಕ್ಷಣ ಅಭಿನಯ ಮಾಡುತ್ತಿದ್ದ ತಾಯಿಗೆ ಅಚ್ಚರಿ ಮೂಡಿತ್ತು. ಕಾರಣ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ವೇದಿಕೆಗೆ ಅಡಿಯಿಟ್ಟದ್ದು, ತನ್ನ ಮುದ್ದಿನ ಒಂದೂವರೆ ವರ್ಷದ ಕಂದನೇ. ಆನಂದಾಶ್ರುಗಳಿಂದ ಅಂದು ನೀಡಿದ ತಾಯಿ ಮಗುವಿನ ಅಭಿನಯ ಅಮೋಘವಾಗಿ ಮೂಡಿಬಂದು ನೆರೆದ ಎಲ್ಲಾ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾದ ಅದೇ ಮಗುವೇ ಇಂದು ಬಾಲ ವಿವೇಕಾನಂದನಾಗಿ ಪ್ರಖ್ಯಾತಿ ಪಡೆದಿದ್ದಾನೆ.
9 ವರ್ಷಗಳ ಮಾಸ್ಟರ್ ದೈವಿಕ್ ತನ್ನ ಕಂಚಿನ ಕಂಠದಿಂದ ವಿವೇಕಾನಂದರ ಸಿಂಹವಾಣಿಗಳನ್ನು ನುಡಿಯುತ್ತಿದ್ದರೆ, ಅದು ಎಂತಹವರಲ್ಲೂ ವಿದ್ಯುತ್ ಸಂಚಲನವನ್ನು ಮೂಡಿಸುವುದರಲ್ಲಿ ಸಂಶಯವಿಲ್ಲ. ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125 ವರ್ಷದ ಆಚರಣೆಯ ಅಂಗವಾಗಿ ಸುಮಾರು ಶಾಲೆಗಳಲ್ಲಿ ಹೋಗಿ ವಿವೇಕಾನಂದರ ಚಿಕಾಗೋ ಉಪನ್ಯಾಸವನ್ನು ಮತ್ತು ವಿವೇಕಾನಂದ ನುಡಿಮುತ್ತುಗಳನ್ನು ತನ್ನ ಕಂಚಿನ ಕಂಠದಿಂದ ಬಿತ್ತರಿಸಿ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತಿದ್ದಾನೆ ಈ ಬಾಲಕ. ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಇವನಿಗಿರುವ ಪ್ರೌಢಿಮೆ ವಿಸ್ಮಯ ಮೂಡಿಸುತ್ತದೆ. ನುಡಿಗಳ ಸ್ಪಷ್ಟತೆ, ಸ್ಫುಟತೆ, ನಿರರ್ಗಳತೆ ಪ್ರಶಂಸನೀಯ.
ರಾಮಾಯಣ, ಮಹಾಭಾರತ, ಭಾಗವತ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶವನ್ನು ಕಾಯುವ ಸೈನ್ಯದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಈ ಬಾಲಕ ತಾನೂ ಮುಂದೆ ಶ್ರೇಷ್ಠ ಮಿಲಿಟರಿ ಅಧಿಕಾರಿಯಾಗುವ ಕನಸನ್ನು ಕಾಣುತ್ತಿದ್ದಾನೆ.
ಸುಮಾರು 20 ರಾಜ್ಯಗಳು ಹಾಗೂ 18 ರಾಷ್ಟ್ರಗಳ ಪ್ರವಾಸ ಮಾಡಿರುವ ಈತನದು ಅಪಾರ ಜ್ಞಾನ ಭಂಡಾರ. ಯಾವ ವಿಚಾರದ ಬಗ್ಗೆ ಕೇಳಿದರು ತಕ್ಷಣವೇ ಮಾಹಿತಿ ನೀಡುವ ಚಲಿಸುವ ವಿಶ್ವಕೋಶವೇ ಆಗಿದ್ದಾನೆ. ಶಿವಾಜಿ, ವಿವೇಕಾನಂದ, ರಾಮ, ಕೃಷ್ಣದೇವರಾಯ, ಪ್ರಹ್ಲಾದ ಮುಂತಾದ ಹತ್ತು ಹಲವಾರು ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿ ಕಲಾರಸಿಕರ ಮನ ಗೆದ್ದಿದ್ದಾನೆ. ಶ್ರೀಸಾಮಾನ್ಯನಿಂದ ಹಿಡಿದು, ಸಮುದಾಯದ ವಿವಿಧ ಕ್ಷೇತ್ರಗಳ ಅನೇಕ ಕಲಾವಿದರು, ಗಣ್ಯರು, ರಾಜ್ಯ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ರಾಷ್ಟ್ರಾಧ್ಯಕ್ಷರವರೆಗೂ ತನ್ನ ಪ್ರತಿಭಾ ಪ್ರದರ್ಶನವನ್ನು ನೀಡಿ ಪ್ರಶಂಸಿಸಲ್ಪಟ್ಟಿದ್ದಾನೆ.
ಇವನ ಪ್ರತಿಭೆಯನ್ನು ಗುರುತಿಸಿ ಪತ್ರಿಕೆಗಳು, ಮಾಧ್ಯಮಗಳು ಹಾಗೂ ಅನೇಕ ಸಂಘಸಂಸ್ಥೆಗಳು ಹಲವಾರು ಬಿರುದು ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿದ್ದಾರೆ. ಅರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಚೈಲ್ಡ್ ಪ್ರಾಡೆಜಿ ಎಂದೇ 5ನೆಯ ವರ್ಷಕ್ಕೆ ಈ ಪೋರನಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ. ವಿವೇಕಾನಂದರಂತೆ ಧೀಮಂತ ವ್ಯಕ್ತಿತ್ವ ಪಡೆದು ದೇಶ ಸೇವೆ ಆಶಯ ಹೊಂದಿದ್ದಾನೆ ಈ ಪುಟ್ಟ ಬಾಲಕ.
Get in Touch With Us info@kalpa.news Whatsapp: 9481252093