ಪ್ರಾಕೃತಿಕವಾದ ವಿಸ್ಮಯಗಳು ನಮ್ಮ ಮುಂದೆಯೇ ಕಂಗೊಳಿಸಿ ಹಾದು ಹೋಗುತ್ತಿದ್ದರು ಅದರ ಸ್ವಾದವನ್ನು ಸ್ವಾದಿಸದೆ ಮತ್ತೆಲ್ಲೂ ದೂರದ ಅಚ್ಚರಿಗಳನ್ನು ಅನ್ಯತಾ ಚರ್ಚಿಸುತ್ತೇವೆ, ಇಂತಹದೊಂದು ಸಂಗತಿಗಳು ಜೀವ ಜಗುಲಿಗಳಲ್ಲಿ ಜರುಗುತ್ತಲೇ ಇರುತ್ತವೆ, ಇದಕ್ಕೆ ಹರಟೆ ಎಂದು ಉವಾಚಿಸಿಕೊಳ್ಳುತ್ತೇವೆ.
ಯಾಕೇ ಇಂತಹದೊಂದು ಟಿಪ್ಪಣಿ ಇಲ್ಲಿ ದಾಖಲಿಸುತ್ತಿದ್ದೇನೆ ಎನ್ನುವುದಕ್ಕೆ ಅಸಲಿ ಕಾರಣಗಳಿವೆ, ನಮ್ಮನ್ನು ಕುರಿತಾಗಿ ನಾವುಗಳೇ ಅಧ್ಯಯನಿಸಿಕೊಳ್ಳಬೇಕಾಗಿದೆ, ಅಲ್ಲದೆ ಅವಲೋಕಿಸಿಕೊಳ್ಳಬೇಕಾಗಿರುವ ಅಗತ್ಯತೆಯೂ ಇದೆ. ಮಲೆನಾಡಿನ ಹೆಬ್ಬಾಗಿಲು ಸಿಹಿಮೊಗೆಯ ಒಡಲೊಳಗೆ ಒಮ್ಮೆಲೆ ಚಿತ್ತವರಿಸಿದರೆ ಇಲ್ಲಿನ ಪ್ರಾಕೃತಿಕ ವಿಸ್ಮಯಗಳು ಗೋಚರಿಸುತ್ತವೆ, ಅಲ್ಲಿ ವಿಹರಿಸಿದಾಗಲೇ ಅದರ ಅನುಭವ ಪ್ರಾಪ್ತವಾಗುತ್ತದೆ. ಇಂತಹ ಅನೇಕ ಸತ್ಯಗಳ ಅನ್ವೇಷಣೆ, ವೀಕ್ಷಣೆಯ ಆಸಕ್ತಿಗಳು ನಮಗಿರಬೇಕಷ್ಟೆ. ಹೌದು ದೂರದ ಅಚ್ಚರಿಗಳ ದರ್ಶಿಸುವ ಈ ಮೊದಲು ಮಲೆನಾಡಿನ ಒಡಲನ್ನು ದರ್ಶಿಸೋಣ.
ಪ್ರಾಕೃತಿಕ ಸೊಬಗಿನ ಅನೇಕತೆಗಳ ನಡುವೆ ದಕ್ಷಿಣದ ಚಿರಾಪುಂಜಿ ಎಂದೇ ಬಿಂಬಿತವಾಗಿರುವ ” ಆಗುಂಬೆ” ಯು ಮಲೆನಾಡಿನ ಒಡಲಿನೊಳಗಿರುವ ಆಚ್ಚರಿಯೇ ಆಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಪ್ರವಾಸಿಗರ ತಾಣವಾಗಿದೆ, ಸೂರ್ಯಾಸ್ತಮಾನದ ದೃಶ್ಯವೇ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ, ಇದರ ಹೊರತಾಗಿ ಹಸಿರೇ ತನ್ನ ಜೀವಸೆಲೆಯಾಗಿಸಿಕೊಂಡ ಘಾಟಿಗಳ ತಿರುವುಗಳು ಮನಮೋಹಕತೆಯ ಮುದ ನೀಡುತ್ತದೆ, ಅಲ್ಲದೆ ಆಗುಂಬೆಯ ಸುತ್ತಲಿನ ದಟ್ಟಡವಿಯ ಪ್ರದೇಶ ” ಕಾಳಿಂಗ ಸರ್ಪ”ಗಳ ತವರು ಎಂದು ವಿಶ್ವವೇ ಗುರುತಿಸಿಕೊಂಡಿದೆ.
ಹೀಗೆ ಆಗುಂಬೆಯು ಅನೇಕ ಅಚ್ಚರಿಗಳನ್ನು ಹೊರಸೂಸುವ ವಿಸ್ಮಯಗಳ ಹಸಿರ ಗಣಿಯಾಗಿದೆ ಇದರಲ್ಲಿ ಅನೇಕತೆಗಳಲ್ಲೊಂದು ವಿಶೇಷ ಅನುಭವವನ್ನು ತಂದುಕೊಟ್ಟಿದ್ದು ” ಮಳೆ ನಡಿಗೆ” ಕಾಲೆಜ್ಜೆಗಳ ಪ್ರವಾಸ.
ಈ ನಡಿಗೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದು “ಕಣಾದ ಯೋಗ ಸಂಸ್ಥೆ” ಹಾಗೂ “ಪರೋಪಕಾರಮ್” ಬಳಗದವರು.ಇಂತಿವ ಸಂಸ್ಥೆಗಳ ಸೇವೆಯ ಕುರಿತಾಗಿ ವಿವರಿಸಿ ” ಮಳೆ ನಡಿಗೆಯ ಒಂದಿಷ್ಟು ಅನುಭವ ಹಾಗೂ ಅರಿವುಗಳನ್ನು ವಿವರಿಸುತ್ತೇನೆ.
“ಕಣಾದ ಯೋಗ ಸಂಸ್ಥೆ”ಯ ಯೋಗ ಗುರುಗಳಾದ ಅನಿಲ್ ಕುಮಾರ್ ಹೆಚ್ ಶೆಟ್ಟರ್ ರವರು ಕಳೆದ ಮೂರು ವರ್ಷಗಳಿಂದ ಆಗುಂಬೆಯ “ಮಳೆ ನಡಿಗೆ” ಗೆ ಆಹ್ವಾನಿಸಿದ್ದರು ನಾನು ಖಂಡಿತ ಬರುವೆ ಗುರುಗಳೇ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ, ಮತ್ತೇ ಯೋಗ ತರಗತಿಯಲ್ಲಿ ಕೇಳುತ್ತಿದ್ದರು. ಅದಕ್ಕೊಂದು ಸುಳ್ಳು ಹೆಣೆದು “ಮಳೆ ನಡಿಗೆ”ಯ ಅನುಭವದ ಮೊದಲೇ ಜಾರಿಕೊಳ್ಳುತ್ತಿದ್ದೆ, ಆ ನಡಿಗೆಯ ಸ್ವರ್ಗದಪಿ ಅನುಭವದಿಂದ ವಂಚಿತಗೊಳ್ಳುತ್ತಿದ್ದೆ ಎನ್ನುವುದು 2019ರ ಮಳೆಗಾಲದ ಕಾಲಮಾನದಲ್ಲಿನ “ಮಳೆ ನಡಿಗೆ” ಅಂತಹದೊಂದು ವಿಶೇಷ ಅನುಭವದ ಸಗಟುಗಳನ್ನು ಎನ್ನೊಳಗೆ ದಾಸ್ತಾನುಗೊಳಿಸಿದೆ ಈ ಪ್ರವಾಸದ ವಿಸ್ತೃತವೇ ಈ ಸಾಲುಗಳಾಗಿವೆ.
ಅನಿಲ್ ಕುಮಾರ್ ಹೆಚ್ ಶೆಟ್ಟರ್ ರವರು “ಕರ್ನಾಟಕ ಯೋಗ ರತ್ನ” ಎಂಬುದ ಪ್ರಶಸ್ತಿಗೆ ಬಾಜನರಾಗಿರುವ ಸದಾ ಉತ್ಸಾಹಿಗಳು, ಹಾಗೂ ಆತ್ಮಬಲ ತುಂಬುವ ಯೋಗ ಗುರುಗಳು ಆಗಿದ್ದಾರೆ.
ಇನ್ನೂ ಈ ವರ್ಷದ “ಮಳೆ ನಡಿಗೆ”ಯ ಉಸ್ತುವಾರಿ ಹೊತ್ತ ಮತ್ತೊಂದು ಸಂಸ್ಥೆ ” “ಪರೋಪಕಾರಮ್” ಈ ಸಂಸ್ಥೆಯ ಸಂಸ್ಥಾಪಕರು ಶ್ರೀಧರ್ ರವರು, ಯಾರನ್ನು ಕೂಡ ತಮ್ಮದೇ ಮಾತುಗಳ ಶೈಲಿಯಲ್ಲಿ ಅರಿವು-ಜಾಗೃತಿಯ ಕಿಚ್ಚೆಬ್ಬಿಸಿ ಸಾಮಾಜಿಕ ಸೇವೆಗೆ ತಲ್ಲೀನಗೊಳಿಸುವ ಆಕರ್ಪಿತ ಸಜ್ಜನಿಕಯ ವ್ಯೆಕ್ತಿತ್ವ ಅವರದ್ದು,
“ಪರೋಪಕಾರಮ್” ಸಂಸ್ಥೆಯ ಮಲೆನಾಡಿನ ಹೆಬ್ಬಾಗಿಲಿನಲ್ಲಿ ಸಾಕಷ್ಟು ವರುಷಗಳಿಂದಲೂ ನಿರಂತರವಾದ ಸೇವೆ ಸಲ್ಲಿಸುತ್ತಿದ್ದರು, ಎಂದಿಗೂ ಈ ಬಳಗದ ಸದಸ್ಯರಾದಿಯಾಗಿ ಪ್ರಚಾರಕ್ಕೆ ಮುಂದಾದವರಲ್ಲ, ಅದರ ಅಗತ್ಯತೆಗಳು ತಮಗಿಲ್ಲ ಎನ್ನುವ ವಾದವನ್ನು ಮಂಡಿಸುತ್ತಲೇ ಊರು-ಕೇರಿಗಳಲ್ಲಿ ಸ್ವಚ್ಚತಾ ಶ್ರಮದಾನ ಮುಂದುವರೆಸಿ ಪ್ರಚಾರದಿಂದ ದೂರ ಉಳಿದಿದ್ದಾರೆ, ಇಂತಹ ನಿಷ್ಕಲ್ಮಶ ಸೇವಾ ಮನೋಭೂಮಿಕೆಯ ಬಳಗದವರ ಜೊತೆಗೂಡಿ “ಮಳೆ ನಡಿಗೆ” ಯಲ್ಲಿ ಹೆಜ್ಜೆಗಳಾಕಿದ್ದು ಮತ್ತೊಂದು ಸಂತಸಕ್ಕೂ ಕಾರಣವಾಗಿತ್ತು.
ಹೌದು ಈ ಸಂತಸಗಳ ನಡುವೆ ಆಗುಂಬೆಯ ಪ್ರವಾಸಕ್ಕೆ ಹೋಗಲೇಬೇಕೆಂದು ನಿರ್ಧರಿಸಿ ಮುಂಜಾನೆ 4ಗಂಟೆಗೆ ಎಚ್ಚರಗೊಂಡೆ ಸರಿಯಾಗಿ 5.30ಕ್ಕೆ ಕುವೆಂಪು ರಸ್ತೆಯಲ್ಲಿ ಯೋಗ ಗುರುಗಳು ಹೇಳಿದ್ದ ಸಮಯಕ್ಕೆ ಬಸ್ ರೆಡಿಯಾಗಿ ನಿಂತಿತ್ತು, ಪ್ರತಿ ವರ್ಷದಂತೆ ಈ ಬಾರಿಯೂ ತಪ್ಪಿಸಿಕೊಳ್ಳುತ್ತೇನೆ ಎಂದುಕೊಂಡಿದ್ದ ಗುರುಗಳೊಮ್ಮೆ ನಕ್ಕರು, ಅಲ್ಲಿಂದ ಬಸ್ ನಲ್ಲಿ ಮಲ್ಲೇಶ್ವರ ನಗರದಲ್ಲಿರುವ ಮಾಸ್ತ್ಯಾಂಬಿಕ ದೇವಾಲಯದ ಮುಂದು ಮತ್ತೊಂದು ಬಸ್ ಕೂಡ ರೆಡಿಯಾಗಿತ್ತು, ಪರೋಪಕಾರಮ್ ಶ್ರೀಧರ್ ರವರು ತಾಯಿಗೆ ಪೂಜೆ ಸಲ್ಲಿಸಿ ಬಸ್ ಗಳಿಗೆ ಆರಂಭಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಅಲ್ಲಿಂದ ಎರಡು ಬಸ್ ಗಳು ಕಣ್ಮರೆಯಾಗುತ್ತಿರುವ ಪಕ್ಷಿಧಾಮ ಮಂಡಗದ್ದೆಯತ್ತ ಹೊರಟವು, ಮಂಡಗದ್ದೆಗೆ ತಲುಪಿ ಅಲ್ಲಿ ಹದಿನೈದು ನಿಮಿಷಗಳ ಕಾಲ ವಲಸೆ ಬಂದು ಬೀಡು ಬಿಟ್ಟಿದ್ದ ಪಕ್ಷಿಗಳನ್ನು ನೋಡಿ ಒಂದು ಗ್ರೂಪ್ ಪೋಟೋ ಕ್ಲಿಕ್ಕಿಸಿ, ಸಮಯ ಪಾಲನೆಯ ಅಣತಿಯಂತೆ ಪ್ರಯಾಣ ಮುಂದುವರೆಯಿತು ಅಲ್ಲಿಂದ ನೇರವಾಗಿ “ಆಗುಂಬೆ” ಮಲ್ಯ ಹೋಟೆಲ್ ಬಳಿ ಬಂದಿಳಿದಾಗ ಬೆಳಿಗ್ಗೆ -9 ಗಂಟೆಯಾಗಿತ್ತು. ನಮ್ಮ ಜೊತೆಯಲ್ಲಿದ್ದ ಮಕ್ಕಳು-ಮಹಿಳೆಯರು-ಪುರುಷರು ಸೇರಿದಂತೆ ಒಟ್ಟು 80 ಜನರಿಗೆ ಉಪಹಾರ ರೆಡಿಯಾಗಿತ್ತು, ಕಳೆದ 7 ವರ್ಷಗಳಿಂದ ಇಂತಹದೊಂದು ನಡಿಗೆಗೆ ಬರುತ್ತಿರುವ ಬಳಗದ ಮೇಲೆ ಮಲ್ಯ ಹೋಟೆಲ್ ಮಾಲೀಕರಿಗೆ ಇನ್ನಿಲ್ಲದ ಪ್ರೀತಿ, ಅಭಿಮಾನ ತೋರುತ್ತಿದ್ದರು.
ಹೋಟೆಲ್ ನಲ್ಲಿ ಉಪಹಾರ ಬೇಡ ಮನೆಯ ಮಹಡಿಯ ಮೇಲೆ ನಿಮಗೆಲ್ಲಾ ಉಪಹಾರ ಸಿದ್ದಗೊಳಿಸಲಾಗಿದೆ ಅಲ್ಲಿಗೆ ಬನ್ನಿ ಎಂದು ಉದಾರ ಮನಸಿನಿಂದಲೇ ಕರೆದೋಯ್ದರು, ಉಂಡಿ ಕಡಬು, ಹಾಗೂ ವೆಜಿಟಬಲ್ ಉಪ್ಪಿಟ್ಟು, ಕಾಫಿ-ಹಾಲು ಎಲ್ಲವನ್ನು ಸಂಭ್ರಮದಿಂದಲೇ ಸವಿದೆವು.
ಅಲ್ಲಿಂದ ಬೀಳ್ಕೊಟ್ಟು ಆಗುಂಬೆಯ “ಸೂರ್ಯಾಸ್ತಮಾನ”ದ ವೀಕ್ಷಣೆಯ ಸ್ಥಳಕ್ಕೆ ಬಂದಿಳಿದಾಗ ಸಮಯ ಬೆಳಿಗ್ಗೆ-10.30,, ಜಟಿ-ಮಳೆ ಶುರುವಾಗಿತ್ತು, ಎಲ್ಲಡೆ ಮಂಜು ಕವಿದ ವಾತಾವರಣ, ನಮ್ಮಗಳ ಕಾಯಗಳ ಸೋಕಿದಾಗ ಒಬ್ಬೊಬ್ಬರಿಗೆ, ಒಂದೊಂದು ರೀತಿಯ ಖುಷಿ-ಸಂತಸಗಳನ್ನು ನೋಡಿ, ನನ್ನಲ್ಲಿದ್ದ ಒಂದಿಷ್ಟು ಆತಂಕ ಸರಿದೋಗಿತ್ತು, ಮಲ್ಯ ಹೋಟೆಲ್ ಮಾಲೀಕರ ಮನೆ-ಮಹಡಿಯಲ್ಲಿ ತಿಂದು ಮುಗಿಸಿದ ತಿಂಡಿಯ ಭಾರವು ಈ ವಾತವರಣದಡಿಯ ಕಾವಣದಲ್ಲಿ ಮರೆತು ಹೋಗಿತ್ತು, ಈ ಮಧ್ಯೆ ಒಂದಿಷ್ಟು ಜನರ ಪರಿಚಯವಿದ್ದರು.
ಇನ್ನೊಂದಿಷ್ಟು ಅಪರಿಚಿತ ಬಂಧುಗಳಿದ್ದರು, ಇದರ ಅಂತರವನ್ನು ಈ ಮೊದಲೇ ಮಲ್ಯ ಹೋಟೆಲ್ ಮಾಲೀಕರ ಮನೆಯ ಅಂಗಳದಲ್ಲಿ ಪರಿಚಯ ಕಾರ್ಯಕ್ರಮದಡಿ ಮಾತಾನಾಡಿದ “ಪರೋಪಕಾರಮ್” ಶ್ರೀಧರ್ ರವರು ಸಣ್ಣದಾರ ಹಾಗೂ ಹಗ್ಗಗಳ ಉದಾಹರಣೆ ನೀಡಿ ಹೋಗಲಾಡಿಸಿ ಏಕತೆಯ ಹುಟ್ಟು ಹಾಕಿದ್ದರು.
ಹೀಗಾಗಿ ಎಲ್ಲರಲ್ಲಿದ್ದ ಆ ಅಪರಿಚಿತರು ಎನ್ನುವ ಭಾವ ಆಗುಂಬೆಯ “ಮಳೆ ನಡಿಗೆ”ಯಲ್ಲಿ ನಡೆದು ಪೂರ್ಣಗೊಳ್ಳುವ ಹೊತ್ತಿಗೆ ಮಾಯವಾಗಿತ್ತು. ಇವೆಲ್ಲವುದರ ನಡುವೆ ಯಾವ ಭಯ-ಬೀತಿಗಳಿಲ್ಲದೆ ಮಕ್ಕಳು ಕೂಡ ಸನ್ನದ್ದರಾದರು, ಯೋಗ ಗುರುಗಳಾದ ಅನಿಲ್ ಕುಮಾರ್ ಹೆಚ್ ಶೆಟ್ಟರ್ ರವರು ಕಳೆದ ಏಳು ವರ್ಷಗಳಿಂದ “ಮಳೆ ಚಾರಣ” ನಡೆಸಿದ ಅನುಭವ ಅವರಿಗಿತ್ತು, ಹೀಗಾಗಿ 80 ಜನರ ಪ್ರವಾಸಿ ತಂಡಕ್ಕೆ ಈರ್ವರನ್ನು ನೇಮಿಸಿ ಒಬ್ಬರು ಮುಂದಿರಬೇಕೆಂದು ಈ ಜವಾಬ್ದಾರಿಯನ್ನು ಅನಿಲ್ ಕುಮಾರ್ ಹೆಗಡೆಯವರಿಗೆ.
ಇನ್ನೊಬ್ಬರು ಹಿಂದೆ ಇರಬೇಕು ಎಂದು ಈ ಜವಾಬ್ದಾರಿಯನ್ನು ದಂತವ್ಯದ್ಯರಾದ ಸಾತ್ವಿಕ್ ರವರಿಗೆ ವಹಿಸಿದ್ದರು ಇವರು ಕೂಡ ಈ ಜವಾಬ್ದಾರಿಯನ್ನು ನಿರ್ವಹಿಸಲು ಮುಂದಾದರು, ಇನ್ನೂ ವಲ್ ಕಮ್ ಕಿಟ್ ವಾಯುಸುತ ರಾಘವೇಂದ್ರ, ಆ್ಯಂಬುಲೆನ್ಸ್ ಜವಾಬ್ದಾರಿಯನ್ನು ಯತೀಶ್ ಹಾಗೂ ಮಂಜುರವರಿಗೆ ವಹಿಸಲಾಗಿತ್ತು, ವೀಶೇಷವಾಗಿ ಯೋಗ ವಿದ್ಯಾರ್ಥಿ ಪೃಥ್ವಿಯವರ ಮಗಳು ಗೌರಿ, ಹಾಗೂ ಯತೀಶ್ ರವರ ಮಗಳು ಮೋಹನ್ ಕಲ್ಪತರು ಹಾಗೂ ಸ್ಮೀತಾ ದಂಪತಿಗಳ ಮಗ ಧ್ಯಾನ್ ಮೂರು ವರ್ಷದೊಳಗಿನ ಮಕ್ಕಳಾಗಿದ್ದರು ಮಳೆಯಲ್ಲಿ ಮಿಂದು ಚಾರಣದ ಉದ್ದಕ್ಕೂ ನಕ್ಷತ್ರದಂತೆ ನಗೆಯ ಬಿತ್ತಿದ್ದರು.
ಅದು ಕೇವಲ ಮಳೆಯಲ್ಲಿ ಮಿಂದು ನಡೆಯುವ ನಡಿಗೆ ಮಾತ್ರ ಆಗಿರಲಿಲ್ಲ, ಅದೊಂದು ಅರಿವು ಮೂಡಿಸುವ ಕಾರ್ಯಕ್ರಮವೂ ಆಗಿತ್ತು, ಪರೋಪಕಾರಮ್ ಬಳಗದ ನಿರ್ದೇಶನದಂತೆ ಮೊದಲೇ ತಂದಿದ್ದ ಖಾಲಿ ಚೀಲಗಳನ್ನು ಅವರವರು ಹಿಡಿದುಕೊಂಡು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು, ಇಕ್ಕೆಲಗಳಲ್ಲಿ ಪ್ರವಾಸಿಗರು, ಸಂಚಾರಿಗಳು ಕುಡಿದು ಬೀಸಾಡಿದ್ದ ನೂರಾರು ಮದ್ಯದ ಬಾಟಲಿಗಳನ್ನು ಹಾಗೂ ವಾಟರ್ ಬಾಟಲಿಗಳು, ಪ್ಲಾಸ್ಟಿಕ್ ಗಳನ್ನು ಆಯ್ದು ತಂದಿದ್ದ ಚೀಲದಲ್ಲಿ ತುಂಬಿಸುತ್ತಲೇ ಸಾಗಿದ್ದೆವು.
ಪ್ರತಿ ಭಾರಿ ಬಿದ್ದಿದ್ದ ಬಾಟಲಿಗಳನ್ನು, ಪ್ಲಾಸ್ಟಿಕ್ ಗಳನ್ನು ಆಯ್ದು ಖಾಲಿ ಚೀಲದೊಳಗೆ ತುಂಬುವಾಗ, ಎಲ್ಲರಲ್ಲೂ ಜಾಗೃತಿಯ ಅರಿವಾಗುತಿತ್ತು, ಈ ಸಂಬಂದಿಸಿದ ಅಭಿಪ್ರಾಯವನ್ನು ತಿಳಿಸುವಾಗ ಎಲ್ಲರಲ್ಲೂ ಇದೇ ಭಾವ ವ್ಯಕ್ತವಾಗಿದ್ದು ವಿಶೇಷವಾಗಿತ್ತು.
ಈ ಮಧ್ಯೆ ಸಾಲು- ಸಾಲಾಗಿ ಮಳೆಯಲ್ಲಿ ಮಿಂದು ಇಕ್ಕೆಲದ ಪ್ಲಾಸ್ಟಿಕ್- ಆಯ್ದು ಸಾಗುವಾಗ ಸಂಚಾರಿ ವಾಹನಗಳಲ್ಲಿದ್ದವರು ಪೋಟೋ ಕ್ಲಿಕ್ಕಿಸಿಕೊಂಡರು, ಹೆಬ್ಬೆಟ್ಟು ತೋರಿಸುತ್ತಿದ್ದರು, ಚಪ್ಪಾಳೆ ತಟ್ಟುತ್ತಿದ್ದರು, ಘೋಷಣೆಗಳ ಕೂಗಿ ಸ್ವಚ್ಚ ಭಾರತ್ ಎನ್ನುತ್ತಿದ್ದರು, ಇವೆಲ್ಲಾ ನೋಡುತ್ತಲೇ ಸಾಗುವಾಗ ನಮ್ಮೊಳಗೆ ಅದೇನು ಪೂರ್ವಪ್ರಜ್ಞೆ ಕಾಡುವುದಕ್ಕೆ ಶುರುವಾಯ್ತು, ನಾನೆಷ್ಟು ಭಾರಿ ಇಂತಹ ಬೇಜಾವಾಬ್ದಾರಿತನದಿ ವರ್ತಿಸಿ ಕಸವನ್ನು ಎಲ್ಲೆಂದರಲ್ಲಿ ಬೀಸಾಡುತಿದ್ದೆ ಛೇ..! ಇನ್ನಾದ್ರೂ ಈ ಕೆಲಸ ಮಾಡಬಾರದು, ನಾನೀಗ ಜ್ಞಾನೋದಯಗೊಂಡ ಮನಸಿನೊಳಗಿದ್ದೆ ಎನ್ನುವ ಅಧ್ಯಯನ ಶುರುವಾಗಿತ್ತು, ಹೀಗೆ ಆಗುಂಬೆಯ ಘಾಟಿಗಳ ತಿರುವುಗಳ ನಡುವೆ ಹೆಜ್ಜೆಗಳಾಕಿದ್ವಿ.
ಒಂದಿಷ್ಟು ಹಾಡು-ಪಾಡು-ಕುಣಿತಗಳ ಸಂಭ್ರಮಗಳು ಮನೆ ಮಾಡಿದ್ದವು, ಅರಿವಿನ ಪ್ರಜ್ಞೆಗಳು ಬೆಟ್ಟದಷ್ಟು ಸುಳಿದಾಡುತಿತ್ತು, ಘಾಟಿಗಳ ತಿರುವುಗಳ ಮಧ್ಯಭಾಗದ ಕಡೆ ಬರುತ್ತಿದ್ದ ಹಾಗೇ, ನಾವುಗಳೆಲ್ಲರೂ ಪರಿಚಿತರಾದೆವು, ಭಾವನಾತ್ಮಕವಾಗಿ ಮಾತಾಡಿಕೊಂಡು ಸದ್ದು ಮಾಡುತ್ತಲೇ ಹೆಜ್ಜೆಗಳಿಟ್ಟಿದ್ವಿ, ಅಷ್ಟರೊಳಗೆ ಸಿದ್ದಾರ್ಥ ಜೋರಾಗಿ ಕೂಗಿದ ಸಣ್ಣ ಗಾತ್ರದ ಉದ್ದವಾಗಿದ್ದ ಹಾವಿನ ಬಾಲವನ್ನು ಹಿಡಿದು ಆಟವಾಡಿಸುತ್ತಲೇ ಚೀಲದೊಳಗೆ ಹಾಕುವ ಯುತ್ನದಲ್ಲಿದ್ದ, ನಾವೆಲ್ಲಾ ಆತುರಾತುರದಿಂದ ಧಾವಿಸಿ ಬಂದು ನೋಡಿದಾಗ ಅದು ಹಾವಾಗಿರಲಿಲ್ಲ, ಬದಲಿಗೆ ಟೈರಿನ ಎಳೆಯಾಗಿತ್ತು.
ಒಮ್ಮೆಲೆ ಜೋರಾಗಿ ಎಲ್ರೂ ನಕ್ಕು ಮುಂದೆ ಸಾಗಿದ್ವಿ ಸಿದ್ದಾರ್ಥನ ಹಾವಿನಾಟ ಹೀಗೆಯೇ ಮುಂದುವರೆದಿತ್ತು, ಅಲ್ಲಲ್ಲಿ ಪೋಟೋ ಕ್ಲಿಕ್ಕಿಸಿ, ಎಲ್ಲರ ಆಟಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ಮಂಜು ಯಾವುದೇ ಬೇದವಿಲ್ಲದೆ ಎಲ್ಲರ ಪೋಟೋಗಳನ್ನು ಕ್ಲಿಕ್ಕಿಸಿದ್ದ.
ದಂತ ವ್ಯಧ್ಯರಾದ ಸಾತ್ವಿಕ್, ಶ್ರೀ ಧರ್ಮಸ್ಥಳದ, ಮಂಜುನಾಥ್, ಶಿಕಾರಿಪುರದ ಲಕ್ಷ್ಮಣ್, ಬನವಾಸಿ ದೇಶದೊಳ್ ಮುಧುಕೇಶ್ವರ್, ಮೋಹನ್ ಕಲ್ಪತರು, ಮಂಜು, ಕಾಟನ್ ಜಗದೀಶ್, ರಾಘವೇಂದ್ರ, ಶೈಲಾ ರಾಘವೇಂದ್ರ, ಪಾರ್ಶ್ವನಾಥ್, ಯತೀಶ್, ರಾಜೇಶ್, ಚೇತನ್,ಪ್ರಿಯಾಂಕ, ಯೋಗಿತಾ, ದೀಪಾ ಶ್ರೀಧರ್, ಸ್ತುತಿ, ಸ್ಮೀತಾ ಮೋಹನ್, ಹರೀಶ್ ಡಿಜಿಟಲ್, ಕಿರಿಯ ಪೋರ ಉತ್ವವ್, ಇನ್ನುಳಿದಂತೆ ಎಲ್ಲಾ ಬಂಧುಗಳು ಅವರದೇ ಲೋಕದಲ್ಲಿ ಹಾಡು-ಪಾಡಿನ ಜೊತೆ-ಜೊತೆಗೆ ನಗುವ ಹೊನಲುಗಳ ಹರಸುತ್ತಲೇ ಸಾಗಿದ್ದರು.
ಇದ್ರಲ್ಲಿ ಒಂದು ಹಾಡು ಕೊನೆ ಸಾಲಿನಿಂದ ಬರುತ್ತಿದ್ದು ಗುಂಪು ಧ್ವನಿಗೂಡಿಸುತ್ತಲೇ ನಕ್ಕು ನಲಿದರು, “ಧಿನಕ್ಕೂ ಧಿನಕ್ಕೂ ಧಿಂಥಾರ,ಧಿಂಥಾರ” ಧನಿಗೆ ಎಲ್ರೂ ಹೆಜ್ಜೆಗಳಾಗಿ ಸಂಭ್ರಮಿಸಿದ್ದು ಅಚ್ಚಳಿಯದೇ ಉಳಿದ ನೆನಪಾಗಿದೆ,
ಹೀಗೆ ಆಗುಂಬೆಯ ಪ್ರಾಕೃತಿಕವಾದ ರಸದೌತಣದೊಂದಿಗೆ ಘಾಟಿಗಳಲ್ಲಿ ಸಾಗುವಾಗ ಮತ್ತೊಂದು ಆಚ್ಚರಿಯಾಗಿದ್ದು ಹಸಿರ ಬೆಟ್ಟಗಳ ನಡುವೆ ಧುಮ್ಮಿಕ್ಕುತ್ತಿದ್ದ ಮಳೆಗಾಲದ “ಝರಿ ಜಲಪಾತಗಳು’ ಅದು ಮಳೆಯಲ್ಲೆ ಹುಟ್ಟಿ ಮಾಯವಾಗುವ ನೀರ ಝರಿಗಳಾಗಿದ್ದವು, ನಾವುಗಳೆಲ್ಲಾ ಒಮ್ಮೆಲೆ ಆ ನೀರ ಝರಿಗಳತ್ತ ಸಾಗಿ ಮಳೆಯ ನಡುವೆ ಮತ್ತಷ್ಟು ಮಿಂದು ಹಸಿರ ನಡುವಿನ ಚಿತ್ರಣದ ಮಡಿಲಿನಲ್ಲಿ ನಾವುಗಳು ಮೈ ಮರೆತಿದ್ವಿ.
ಹೇಗೆ ತನ್ನ ತಾಯಿ ಮಡಿಲನೊಳಗೆ ಮಗು ಮೈ ಮರೆಯುತ್ತದೆಯೋ ಹಾಗೇ ನಾವು ಕೂಡ ಆ ಪ್ರಕೃತಿ ತಾಯಿ ಮಡಿಲಿನಲ್ಲಿ ಲೋಕ ಮರೆತಿದ್ವಿ, ಇಂತಹದೊಂದು ಆಗಾಧವಾದ ಅನುಭವಗಳನ್ನು ನಾವು ಮಳೆಗಾಲದಲ್ಲಿ ಮಾತ್ರದಿ ಅನುಭವಿಸಲು ಸಾಧ್ಯ, ಅಲ್ಲದೆ ಈ ಕಾಲಮಾನದಲ್ಲಿ ಸುರಿವ ಮಳೆ, ಮಂಜು ಕವಿದ ವಾತಾವರಣ, ಮಳೆ ನೀರಿನಲ್ಲಿ ಹುಟ್ಟಿ ಗಿಡ-ಮರ-ಬಳ್ಳಿಗಳ ಸವೆಸಿ ದುಮ್ಮಿಕ್ಕುವ ನೀರ ಝರಿಗಳಿಂದ ಔಷದ ರೂಪವಾಗಿ ನಮ್ಮಗಳ ಕಾಯವನ್ನು ತೊಳೆದಿದೆ ಎನ್ನುವುದು ನಮಗಾಗಲೇ ಮನದಟ್ಟಾಗಿತ್ತು.
ಹೀಗೆ ನಿಸರ್ಗದ ವಿಹಂಗಮತೆಯಲ್ಲಿ ಮುಳುಗಿ ಹೋಗಿದ್ದ ನಮಗೆ ಯಾವ ಕ್ಷಣವು ಕೂಡ ಲೌಕಿಕತೆಯ ಕಡೆಗೆ ಎಡೆಮಾಡಿಕೊಟ್ಟಿರಲಿಲ್ಲ, ನಮ್ಮೊಳಗಿನ ಆತಂಕಗಳು ಆ ಪ್ರಕೃತಿಧಾತೆ ಮರೆಸಿದ್ದಳು ನಾವು ನಮ್ಮ ನಡಿಗೆಯನ್ನು ಪೂರ್ಣಗೊಳಿಸುವವರೆಗೂ ಆ ತಾಯಿ ಎಲ್ಲವನ್ನು ಮರೆಸಿ ಪೋಷಿಸಿದ್ದಳು, ನಕ್ಕು ನಲಿಸಿದ್ದಳು, ಅದೆಷ್ಟೋ ಬಿಗಿ ಹಿಡಿತಗಳ ಮನಸುಗಳು ಹಾವಿಯಾಗಿ ಆ ಮಂಜಿನಲ್ಲಿ ಕರಗಿ ಹೋಗಿದ್ದವು, ಅಲ್ಲಲ್ಲಿ ಶ್ರೀಧರ್ ರವರು ಚೀಲ ಹಿಡಿದು ಹಿಂಬದಿಯ ತನಕ ಬಂದರು, ಎಲ್ಲರನ್ನು ಮಾತನಾಡಿಸುವ ತವಕದಲ್ಲಿ ಎಲ್ಲರ ಮೇಲೂ ನಿಗಾವಿಟ್ಟಿದ್ದರು, ಉಂಬ್ಳ ಹಿಡಿದ ಬಂಧುಗಳಿಗೆ ಆ್ಯಂಬುಲೇನ್ಸ್ ಟೀಮ್ ಸುಣ್ಣವಚ್ಚಿ,ಪ್ರಥಮ ಚಿಕಿತ್ಸೆ ಮಾಡುತ್ತಿದ್ದ ರೀತಿಯಂತೂ ಮೆಚ್ಚುಗೆಗೆ ಪಾತ್ರವಾಗಿತ್ತು.
ಯೋಗ ಗುರುಗಳು ಒಮ್ಮೆಲೆ ರಸ್ತೆಯ ಮಧ್ಯದಲ್ಲಿ ನಿಂತು ಆಸನಗಳ ಹಾಕಿದರು, ಅಲ್ಲೇ ಮರದ ಬುಡದಲ್ಲಿ ಶೀರ್ಷಾಸನ ಹಾಕಿದ್ದರು ನಾವು ನೋಡುವಾಗ ಇವರು ಹಠ ಸಾಧನೆಯ ತಪಸ್ವಿಗಳಂತೆ ಕಂಡು ಬಂದರು, ಕಡಿದಾದ ಬಂಡೆಯೊಳಗೆ ನಿಂತು ಬಂಡೆಯನ್ನು ಎತ್ತುವಂತೆ ಪೋಟೋಗಳನ್ನು ತೆಗೆಸಿಕೊಂಡರು ನಾವು ಕೂಡ ಅವರೊಂದಿಗೆ ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಮನೋಲ್ಲಾಸದಲ್ಲಿ ಮುಂದೆ ಸಾಗಿದ್ವಿ ಕೊನೆಯ ಮೂರು ತಿರುವುಗಳ ಮುನ್ನದಿ ಸಿಗುವ ಘಾಟಿಯಲ್ಲಿ ದೊಡ್ಡದೊಂದು ನೀರ ಝರಿ ಕಂಡಾಗ ನಮಗೆ ಇನ್ನಿಲ್ಲದ ಸಂತಸ ಎದುರಾಗಿತ್ತು, ಮೊದಲೇ ಮಳೆಯಲ್ಲಿ ಒದ್ದೆಯಾಗಿದ್ದ ನಾವುಗಳು ಯಾವ ಮರು ಮಾತಿಲ್ಲದೆ ಆ ನೀರ ಝರಿಯಲ್ಲಿ ಮುಳುಗಿ ಹೋದ್ವಿ, ಬೊಗಸೆಯಲ್ಲಿಡಿದು ಚಿಮ್ಮಿಸಿ ಆನಂದದ ಭಾವಪರವಶದಿ ತೇಲಿದ್ವಿ, ಅಂತೂ ನೀರ ಝರಿಗಳಲ್ಲಿ ಮತ್ತಷ್ಟು ಮುದ್ದೆಯಾಗಿದ್ದರು ನಮಗೆ ಅದರ ಪರಿವೆಗಳಿರಲಿಲ್ಲ,ಕೊನೆಯ ತಿರುವಿನ ಘಾಟಿ ಬಂದಾಗಲೇ ನಮಗೆ ಗೊತ್ತಾಗಿದ್ದು ನಮ್ಮ “ಮಳೆ ನಡಿಗೆ’ ಮುಗಿಯಿತೇ ಎನ್ನುವ ಭಾವ ಕಾಡಿತ್ತು, ಹೌದು ನಮ್ಮೊಳಗಿನ ಆತಂಕ ತೊಳೆದು ತನ್ನ ಮಡಿಲಿನಲ್ಲಿ ಪೋಷಿಸಿ-ಹಾಲುಣಿಸಿ ಮತ್ತೇ ಧರೆಗೆ ಬಿಟ್ಟಂತೆ ಭಾಸವಾಗಿತ್ತು.
ಇಲ್ಲಿಂದ ನೇರವಾಗಿ ಬಂದಿದ್ದು ಸೋಮೇಶ್ವರಕ್ಕೆ ಅಲ್ಲಾಗಲೇ ಬಸ್ ಗಳು ನಮಗಾಗಿ ಕಾದಿದ್ದವು ,ಇಲ್ಲಿಂದು ಮರು ಪ್ರಯಾಣ ಆಗುಂಬೆಯ ಕಡೆಗೆ ಪ್ರಯಾಣಿಸಿದ್ವಿ ಅಲ್ಲಿಂದ “ಮಡಿಕೆ ಪಾಲ್ಸ್” ಕಡೆಗೆ ತೆರಳುವ ಮುನ್ನ ಹೋಟೆಲ್ ಮಲ್ಯದ ಮಾಲೀಕರು ನಮಗಾಗಿ ಕಾದಿದ್ದರು ಮಲೆನಾಡಿನ ರಸಭೋಜನವನ್ನು ಉಣಬಡಿಸಿದ್ರು, ನಂತರ ತೆರಳಿದ್ದು “ಮಡಿಕೆ ಪಾಲ್ಸ್” ಅಲ್ಲಿಗೂ ನಮ್ಮಗಳ:ಜೊತೆ ಹೋಟೆಲ್ ಮಲ್ಯ ಮಾಲೀಕರು ಬಂದಿದ್ರು, ಅಷ್ಟರೊಳಗೆ ಮಳೆ ಜೋರಾಗಿತ್ತು, ಅರ್ಧ ಕಿ.ಮೀ ಕ್ರಮಿಸಿದಾಗ ಅಲ್ಲಿ ಕಂಡಿದ್ದು ಬೋರ್ಗರೆವ ಮಡಿಕೆ ಪಾಲ್ಸ್, ಅಲ್ಲೊಂದಿಷ್ಟು ಸಮಯ ಕಳೆದು ವಾಪಾಸ್ಸುತೆಮ್ಮಮನೆ-ಹುರುಳಿಯಲ್ಲಿರುವ ಲಕ್ಷ್ಮೀನಾರಾಯಣ ದೇವಳದ ಸ್ಥಳಕ್ಕೆ ಬಂದಾಗ ಸಂಜೆಗತ್ತಲು ಶುರುವಾಗಿತ್ತು, ಅಲ್ಲಿ ಮಲ್ಯ ಹೋಟೆಲ್ ಮಾಲೀಕರಿಗೆ “ಕಣಾದ ಯೋಗ ಸಂಸ್ಥೆ ಹಾಗೂ ಪರೋಪಕಾರಮ್” ಬಳಗದ ಬಂಧುಗಳಿಂದ ಗೌರವಿಸಿ ಶಿವಮೊಗ್ಗದ ಕಡೆಗೆ ಬೀಳ್ಕೊಟ್ಟೆವು.
ಒಟ್ಟಾರೆ ಅವಿಸ್ಮರಣೀಯವಾದ, ರಮ್ಯ-ಮನೋಹರತೆಯೆ ನಡುವೆ ಪ್ರಾಕೃತಿಕವಾದ ನಿಸರ್ಗದ ಸೋಬಗನ್ನು ಉಣಬಡಿಸಿದವರಿಗೂ ಹಾಗೂ ಭಾಗವಹಿಸಿದ ಎಲ್ಲಾ ಬಂಧುಗಳಿಗೂ ಧನ್ಯವಾದಗಳನ್ನು ತಿಳಿಸಿದರೆ ಅದೊಂದು ಪ್ರಮಾದವೆಂದುಕೊಂಡು ಸಾಧ್ಯವಾದಷ್ಟು ಪ್ರಕೃತಿಯ ಉಳಿವಿನ ಕುರಿತಾಗಿ ಶ್ರಮಿಸುತ್ತೇನೆ ಇದೆ ನಿಜವಾದ ಧನ್ಯವಾದ ಎಂದು ಭಾವಿಸುತ್ತೇನೆ ನಮಸ್ತೆ.
-ಗಾರಾ.ಶ್ರೀನಿವಾಸ್
Discussion about this post