ಭದ್ರಾವತಿ: ಧರ್ಮಮಾರ್ಗದಿಂದ ಅರ್ಥಸಂಪಾದನೆ ಮಾಡಿ ಅದರಿಂದ ಸಾತ್ವಿಕ ಕಾಮನೆಗಳನ್ನು ಪೂರೈಸಿಕೊಂಡಾಗ ಮೋಕ್ಷ ಸಾಧನೆ ಸಾಧ್ಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದರು.
ನ್ಯೂಟೌನ್ ಶಿವಸಾಯಿ ಕೃಪಾ ಧಾಮ ಟ್ರಸ್ಟ್, ಪ್ರಶಾಂತಿ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಲೋಕ ಕಲ್ಯಾಣಾರ್ಥ ಅತಿ ರುದ್ರ ಮಹಾ ಯಜ್ಞ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಗವದ್ಗೀತೆಯಂತಹ ಭಾರತೀಯ ಕೃತಿಗಳು ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ ಶ್ರೇಷ್ಠ ವಿಜ್ಞಾನಿ ಐನ್ ಸ್ಟೀನ್ ಭಗವದ್ಗೀತೆಯಲ್ಲಿರುವ ವೈಜ್ಞಾನಿಕ ವಿಚಾರಧಾರೆಯ ಮಹತ್ವವನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಆಧ್ಯಾತಿಕ ಜ್ಞಾನಸಂಪತ್ತಿನ ಅರಿವನ್ನು ಪಡೆದು ಜೀವನದ ಗುರಿಯನ್ನು ತಲುಪಬೇಕಾದರೆ ಗುರುವಿನ ಮಾರ್ಗದರ್ಶನ ಅಗತ್ಯ. ಭಾರತೀಯ ಆಧ್ಯಾತ್ಮಿಕ ಜ್ಞಾನ ಲೋಕದ ಗುರುಪರಂಪರೆಯಲ್ಲಿ ಬಂದ ಅನೇಕ ಮಹಾಪುರುಷರ ಪೈಕಿ ಸತ್ಯಸಾಯಿ ಬಾಬಾ ಸಹ ಒಬ್ಬರಾಗಿದ್ದಾರೆ.
ಸತ್ಯಸಾಯಿ ಬಾಬ ಅವರು ಭಕ್ತರಿಗೆ ನೀಡಿರುವ ಈ ಕೊಡುಗೆ ಅನನ್ಯವಾದುದು. ಅವರು ಜಗತ್ತಿಗೆ ನೀಡಿದ ಮುಖ್ಯ ಸಂದೇಶಗಳಲ್ಲಿ ನಿಷ್ಕಾಮ ಕರ್ಮ, ಸೇವೆ ಮತ್ತು ಜ್ಞಾನ. ಅಂತಃಕರಣದಲ್ಲಿರುವ ಭಗವಂತನನ್ನು ಕಾಣಬೇಕಾದರೆ ಯಾವುದೇ ಕಾಮನೆಯಿಲ್ಲದೆ ಕರ್ಮಗಳನ್ನು ಮಾಡಬೇಕು. ಆರೀತಿಯ ಕರ್ಮಗಳು ಸ್ವಾರ್ಥ ರಹಿತವಾದ ಸೇವಾ ಮನೋಭಾವದಿಂದ ಕೂಡಿರಬೇಕು ಜ್ಞಾನದಿಂದ ಮಾತ್ರ ಮೋಕ್ಷ ಸಾಧನೆಸಾಧ್ಯ. ಅವರು ಇಂದು ನಮ್ಮೊಂದಿಗೆ ದೈಹಿಕವಾಗಿಲ್ಲದಿದ್ದರು ಅವರ ಹೆಸರಿನಲ್ಲಿ ನಡೆಯುತ್ತಿರುವ ಯಾಗದ ಕಾರ್ಯಕ್ರಮಗಳು ಆದಿವ್ಯ ಚೇತನ ಸ್ವರೂಪದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ.
ಹಿರಿಯರಾದ ಮೇಲೆ ಆಧ್ಯಾತ್ಮಿಕ ಚಿಂತನೆ ಪಡೆಯಲು ಹಂಬಲಿಸಿದರೆ ಆ ವೇಳೆಗಾಗಲೆ ಆ ವಯಸ್ಸಿನ ಬಹುಪಾಲು ಕಳೆದು ಹೋಗಿರುವುದರಿಂದ ಜೀವನದ ಗುರಿ ತಲುಪಲು ಅಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಿಂದಲೇ ನಿಷ್ಕಾಮಕರ್ಮ, ಸೇವಾ ಜ್ಞಾನದ ಅರಿವನ್ನು ಪರಿಚಯಿಸುವ ಕಾರ್ಯವಾಗಬೇಕಿದೆ. ಇದರಿಂದ ಮುಂದೆ ಅವರು ಅವುಗಳ ಮಹತ್ವ ತಿಳಿದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆದು ಬಾಳುವುದರ ಜೊತೆಗೆ ಜೀವನದ ಪರಮಗುರಿ ಏನೆಂಬುದನ್ನು ಅರಿಯಲು ಸಾದ್ಯ ಎಂದರು.
ವೇದಿಕೆಯಲ್ಲಿ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಚಿತ್ರದುರ್ಗದ ಮಾದರ ಚೆನ್ನಯ್ಯ ಸ್ವಾಮೀಜಿ, ಸತ್ಯಸಾಯಿ ಸಂಸ್ಥೆಯ ರಾಜ್ಯ ಸಂಯೋಜಕ ಡಿ.ಪ್ರಭಾಕರ ಬೀರಯ್ಯ, ಜಗನ್ನಾಥ ನಾಡಿಗ್ ಮುಂತಾದವರಿದ್ದರು. ಕೇರಳ ಹಾಗು ದುಬೈನ ವೈಟ್ ಫ್ಹೆದರ್ ಇಂಟರ್ ನ್ಯಾಷನಲ್ ಗ್ರೂಪ್‍ನ ಬಿಜಿತ್ ಮತ್ತು ತಂಡದವರಿಂದ ವಾದ್ಯಗೋಷ್ಟಿ ಮತ್ತು ಭಕ್ತಿಗೀತೆಗಳ ಕಾರ್ಯಕ್ರಮ ನೆರವೇರಿತು. ಇದೇ ಸಂಧರ್ಭದಲ್ಲಿ ಹಿರಿಯ ಸಾಯಿ ಸದ್ಬಕ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post