ಕಾಲಾಯ ತಸ್ಮೈ ನಮಃ ಎಂಬಂತೆ ಕಾಲ ಕಾಲಕ್ಕೆ ಪರಿವರ್ತನೆಗಳಾಗಬೇಕು. ಆಗಲಿಲ್ಲ ಎಂದರೆ ಗೆಲುವಿಗೆ ಹಿನ್ನಡೆಯಾಗುತ್ತದೆ. ಮುಂದಿನ ಮಾರ್ಚ್ ವೇಳೆಗೆ ನೈಸರ್ಗಿಕ ಕುಂಡಲಿಯ(ಮೇಷ ರಾಶಿ) ಭಾಗ್ಯಸ್ಥಾನವಾದ ಧನು ರಾಶಿಯಲ್ಲಿ ಗುರು ಕೇತು ಯೋಗ ಬರಲಿದೆ. ಕೇತುವು ಅಂತ್ಯಜ ಸೂಚಕ. ಅಂದರೆ ಯಾರನ್ನು ಸಮಾಜವು ಹಿಂದೆ ಇಟ್ಟಿದೆಯೋ ಆ ವರ್ಗದವನಿಗೆ ಸ್ಥಾನ ಮಾನ ಕೊಡಬೇಕು ಎಂದರ್ಥ. ಯೋಗಗಳಿಗೆ ಸರಿಯಾಗಿ ನಡೆದುಕೊಂಡರೆ ಕ್ಷೇಮ. ವಿರುದ್ಧವಾದರೆ ಸೋಲನ್ನು ಅನುಭವಿಸಬೇಕಾದೀತು.
ಗುರುವಿನಿಂದ ಮಾಡುವ ಚಿಂತನೆಗಳು- ಧರ್ಮ ಪ್ರಜ್ಞೆ, ಭಾರತೀಯ ಸಂಪ್ರದಾಯ, ದೇವ ದೇವತಾ ವಿಚಾರಗಳಲ್ಲಿ ಭಕ್ತಿ, ಸನಾತನ ಪರಂಪರೆ, ಅದರ ಉಳಿವು ರಕ್ಷಣೆಗಳನ್ನು ಯಾವ ಪಕ್ಷವು ತನ್ನ ಧ್ಯೇಯ ವಾಕ್ಯವನ್ನಾಗಿಸಿಕೊಂಡಿದೆಯೋ ಆ ಪಕ್ಷವೇ ಮುಂದೆ ಆಡಳಿತ ಮಾಡುವ ಯೋಗವಿದೆ. ಅಂತಹ ಪಕ್ಷವು ಗುರು ಕೇತು ಯೋಗಕ್ಕನುಗುಣವಾಗಿ ನಡೆದುಕೊಂಡಾಗ ಯೋಗದ ಪರಿರಕ್ಷಣೆ ಮಾಡಿಕೊಂಡಂತಾಗುತ್ತದೆ. ಅದನ್ನು ಮಾಡದೆ ತನ್ನದೇ ಸರಿ ಎಂದು ಹೋದಾಗ ಗೆಲುವು ಅಸಾಧ್ಯವಾಗುತ್ತದೆ.
ಯಡ್ಯೂರಪ್ಪ ಸಿಎಂ ಆಗಿದ್ದು ವಿಶ್ವಾಸಕ್ಕೆ ಬಂತೇ?
ಉದಾಹರಣೆಗೆ: ಈ ಸಲ 104 ಸ್ಥಾನಗಳನ್ನು ಹಿಡಿದುಕೊಂಡು ಮಾನ್ಯ ಯಡ್ಯೂರಪ್ಪನವರು ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಅದು ವಿಶ್ವಾಸಕ್ಕೆ ಬಂತೇ? ಅಂದರೆ ಯೋಗ ಇರಲಿಲ್ಲ ಎಂದರ್ಥ. ಈಗ ತುಲಾ ರಾಶಿಯಲ್ಲಿ ಈಗ ಇರುವುದು. ಇದು ತಕ್ಕಡಿಯಾಯ್ತು. ತಕ್ಕಡಿಯ ಗುಣ ಧರ್ಮ ಏನೋ ಅದೇ ಪ್ರಾಪ್ತಿ. ಎರಡೂ ಕಡೆಯೂ ಒಂದೇ ರೀತಿಯ ಭಾರವನ್ನು ಇಟ್ಟಾಗ ಸಮತೋಲನ. ವ್ಯತ್ಯಾಸವಾದಾಗ? ಅಸಮತೋಲನ. ಈಗ ಆಗಿದ್ದೂ ಹಾಗೆಯೆ. ಬಿಜೆಪಿ ಕಡಿಮೆಯಾದ ಸ್ಥಾನವನ್ನು ಎಳೆದುಕೊಂಡರಾಯ್ತು ಎಂಬ ಯೋಚನೆಯಲ್ಲಿ ಮುಂದಾಗಿತ್ತು. ತನ್ನತ್ತ ಎಳೆದುಕೊಂಡರೆ ಅಸಮತೋಲನ ಬರಲಾರದು. ಆದರೆ ಅಸಮತೋಲನವನ್ನೇ ಕಾಲವು ಸೂಚಿಸಿದರೆ ಸಮತೋಲನಕ್ಕೆ ಬಲವೇ ಇಲ್ಲದಂತಾಗುತ್ತದೆ. ಹಾಗಾಗಿ ಕೇವಲ ಪ್ರಮಾಣ ವಚನ ಮಾಡಿ ಕೆಲವು ಘಂಟೆ ಮುಖ್ಯಮಂತ್ರಿಯಾಗಿ ತೃಪ್ತರಾಗಬೇಕಾಯ್ತು. ಹಾಗಾಗಿ ಕಾಲಕ್ಕೆ ತಕ್ಕಂತೆ ನಡೆದುಕೊಳ್ಳುವುದೇ ಪರಮ ಧರ್ಮ. ಕಾಲಕ್ಕೆ ತಕ್ಕಂತೆ ಅಂದರೆ ಅನ್ಯಾಯ ಮಾರ್ಗ ಎಂದಲ್ಲ. ಜನ ಒಪ್ಪುವಂತಹ ಸಜ್ಜನಿಕೆಯ ಮಾರ್ಗ ಎಂದರ್ಥ.
150 ಸ್ಥಾನ ಗೆದ್ದೇ ಗೆಲ್ಲುತ್ತದೆ
ಧನುರಾಶಿಯಲ್ಲಿ ಗುರು ಸಂಚಾರ ಕಾಲದಲ್ಲಿ ಗುರುವು ಕೇತುವಿನ ಯುತಿಯಲ್ಲಿ ಇರುತ್ತಾನೆ. ಧರ್ಮ ಮಾರ್ಗದ ಒಬ್ಬ ಸಜ್ಜನ ನಿಮ್ನವರ್ಗ ಜನಿತ(ದಲಿತ ಅಥವಾ ಎಸ್‌ಟಿ) ಅಭ್ಯರ್ಥಿಗೆ ಮುಖ್ಯ ಮಂತ್ರಿಸ್ಥಾನ ಘೋಷಣೆ ಮಾಡಿದರೆ ಈ ಸಲ ಬಿಜೆಪಿ 150 ಸ್ಥಾನ ಗೆದ್ದೇ ಗೆಲ್ಲುತ್ತದೆ. ಸುಮಾರು ವೃಶ್ಚಿಕದಿಂದ ಮೇಷ ರಾಶಿ ಸಂಚಾರಕಾಲದವರೆಗೆ ಸುಸ್ಥಿರವಾದ ಸರಕಾರಕ್ಕೆ ಯೋಗ ಬಲವಿರುತ್ತದೆ. ಈ ಗುಣಕ್ಕೆ ತಕ್ಕಂತೆ ಹಾಗೇನಾದರೂ ಘೋಷಣೆ ಮಾಡಿದರೆ ಮೇಲ್ವರ್ಗದವರ ಮತಗಳು ಹೋದೀತು ಎಂದು ಕೆಲವು ಮೇಲ್ವರ್ಗದವರು ಪ್ರಶ್ನಿಸಬಹುದು. ಹೊರಗಡೆ ಎಲ್ಲಾ ಜಾತಿಯೂ ಸಮಾನ ಎನ್ನುವವರು ಒಳಗಡೆ ಹೀಗೇಕೆ? ಎಂದು ಪ್ರಜೆಗಳು ಪ್ರಶ್ನಿಸಬಾರದೇಕೆ?
ಸ್ವಾತಂತ್ರ್ಯಾನಂತರ ಮೀಸಲಾತಿಯಲ್ಲಿ ಅನೇಕ ಸಂಸದರು, ಶಾಸಕರು ಆರಿಸಿ ಬಂದರು. ಆದರೆ ಅದೇ ಸಂಸದ ಶಾಸಕರೇ ಮತ್ತೆ ಮತ್ತೆ ಆರಿಸಿಬಂದು ಸೋಲಿಲ್ಲದ ಸರದಾರರೇ ಆದದ್ದು ಬಿಟ್ಟರೆ, ಎಷ್ಟು ಹೊಸ ದಲಿತ ಮುಖಗಳು ಸಂಸದ, ಶಾಸಕರಾಗಿದ್ದಾರೆ? ಅಂದರೆ ನಿಮ್ನ ವರ್ಗ ಜನಿತರಾಗಿ ದುರ್ಲಾಭ ಪಡೆದರೇ ವಿನಾ ಇವರು ಮತ್ತೊಬ್ಬ ದಲಿತನನ್ನು ತಯಾರಿ ಮಾಡಲಿಲ್ಲ ಎಂದರ್ಥ. ಇದು ಎಲ್ಲಾ ಪಕ್ಷಗಳಲ್ಲೂ ಕಾಣುವಂತದ್ದೆ. ಅದೆಷ್ಟು ಬಾರಿ ಖರ್ಗೆಯವರಾಗಲೀ ಇನ್ನಿತರಾಗಲೀ ಮತ್ತೆ ಮತ್ತೆ ಆರಿಸಿಬರಲಿಲ್ಲ? ಯಾಕೆ ಆ ಕ್ಷೇತ್ರಗಳಲ್ಲಿ ಬೇರಾವ ದಲಿತ ಯುವಕರಿರಲಿಲ್ಲವೇ? ಇದು ದಲಿತರ ಉದ್ಧಾರವೇ?
ಸಹಪಂಕ್ತಿ ಹಾಕಿದರೆ ದಲಿತರ ಉದ್ದಾರ ಸಾಧ್ಯವೇ?
ದಲಿತರನ್ನು ಎಲ್ಲೆಲ್ಲಿ ಎತ್ತಿಕಟ್ಟಲಾಗುತ್ತೋ ಅಲ್ಲಲ್ಲಿ ಎತ್ತಿಕಟ್ಟಿ ಲಾಭವನ್ನೇ ಪಡೆದರು. ಉದಾಃ ಉಡುಪಿಯಲ್ಲಿ ಸಹಪಂಕ್ತಿ ಭೋಜನ ವಿಚಾರದಲ್ಲಿ ಕರ್ನಾಟಕದಾದ್ಯಂತ ದಲಿತರನ್ನು ಒಟ್ಟು ಹಾಕಿ ನಾವು ಸಮಾನತೆಯನ್ನು ಕಾಣವವರು, ಹಿಂದುಳಿದವರನ್ನು ಮೇಲ್ಪಂಕ್ತಿಗೆ ತರುವವರು ಎಂದು ಭಾಷಣ ಬಿಗಿದು ಪ್ರಚಾರ ಮಾಡಿದರು. ಇದಕ್ಕೆ ದಿನಗೂಲಿ ಪಡೆಯುವ ಕೆಲವು ಸಾಹಿತಿಗಳು, ನಟರೂ ಸಾಥ್ ನೀಡಿದರು! ಸ್ವಾಮೀ ಸಹಪಂಕ್ತಿ ಕೊಟ್ಟು ಉಣಬಡಿಸಿದರೆ ದಲಿತರ ಉದ್ಧಾರ ಆಗುತ್ತದೆಯೇ? ಇದೊಂದು ಪ್ರಚಾರ ಅಷ್ಟೆ.
ಹಾಗೇನಾದರೂ ದಲಿತರ ಉದ್ಧಾರ ಮಾಡುವ ಮನಸ್ಸಿದ್ದರೆ ಖರ್ಗೆಯವರನ್ನೋ, ಪರಮೇಶ್ವರ್ ಅವರನ್ನೋ ಯಾಕೆ ಮುಖ್ಯಮಂತ್ರಿ ಮಾಡಲಿಲ್ಲ? ಕುಮಾರಸ್ವಾಮಿಯವರು ಹಿಂದೊಮ್ಮೆ ಮುಖ್ಯಮಂತ್ರಿ ಆಗಿದ್ದರು. ಮತ್ತೆ ಮತ್ತೆ ಯಾಕೆ ಅವರೇ ಆಗಬೇಕಿತ್ತು? ಜೆಡಿಎಸ್ ನಲ್ಲಿ ದಲಿತ ಅಭ್ಯರ್ಥಿ ಇಲ್ಲವೇ? ಇದು ದಲಿತರ ದುರ್ಬಲತೆಯ ಲಾಭ ಪಡೆಯುವುದಾಗಿದೆಯೇ ವಿನಾ ಮಾನಸಿಕವಾಗಿ ಅವರ ಉದ್ಧಾರವಲ್ಲ. ಒಂದು ವೇಳೆ ಯಡ್ಯೂರಪ್ಪನವರೇ ಈ ಸಲ ದಲಿತರನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಮಾಡುತ್ತಿದ್ದರೆ ನಿಶ್ಚಿತವಾಗಿಯೂ ಬಿಜೆಪಿ ಆಡಳಿತ ಮಾಡಬಹುದಿತ್ತು. ಅದನ್ನೇ ಹೇಳಿದ್ದು ಕಾಲಾಯ ತಸ್ಮೈನಮಃ ಎಂದು. ಕಾಲಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಹೀಗೆಯೇ ಆಗುತ್ತದೆ.
ಜನ್ಮತಃ ಎಲ್ಲರೂ ಸಾಮಾನ್ಯ ಮನುಷ್ಯರೇ. ಅವರವರ ಸಂಸ್ಕಾರದ ಆಧಾರದಲ್ಲಿ ಜಾತಿ(ಕೆಟಗರಿ) ಉಂಟಾಗುತ್ತದೆ. ಹಿಂದಿನ ಅನೇಕ ಋಷಿಗಳು ಕೀಳು ಜಾತರಾಗಿ ಸಂಸ್ಕಾರಯುತರಾಗಿ ಬ್ರಾಹ್ಮಣ್ಯವನ್ನು ಪಡೆದರು. ಅನೇಕ ಲಿಂಗಾಯತ ರಾಜರು ಕ್ಷತ್ರಿಯತ್ವ ಪಡೆದು ರಾಜ್ಯಾಡಳಿತ ಮಾಡಿದ್ದಿದೆ.
ಹಾಗಾಗಿ ಮುಂಬರುವ ಗುರುಕೇತು ಯೋಗಕ್ಕನುಗುಣವಾಗಿ ಕರ್ನಾಟಕಕ್ಕೆ ಒಬ್ಬ ದಲಿತ ಜನಿತ ಮುಖ್ಯಮಂತ್ರಿ ಆದರೆ ಪ್ರಜಾ ಕ್ಷೇಮವಾದೀತು. ಆದರೆ ಯಾವುದೋ ತಿಳುವಳಿಕೆ ಇಲ್ಲದ ಶ್ರೀಮಂತ ದಲಿತನಿಗೆ ಕೊಡಬೇಕೆಂದಲ್ಲ. ದಲಿತರಲ್ಲೂ ಈಗಾಗಲೇ ಸಾಕಷ್ಟು ಮುತ್ಸದಿಯಾದಂತಹ ವ್ಯಕ್ತಿಗಳಿದ್ದಾರೆ. ಅವರನ್ನು ಹುಡುಕಿ ಅಧಿಕಾರ ನೀಡಬೇಕು. ಇದನ್ನು ಎಲ್ಲಾ ಪಕ್ಷದವರು, ಎಲ್ಲಾ ಮೇಲ್ವರ್ಗ ಜನಿತರು ಕರ್ನಾಟಕದ ಏಳಿಗೆಗಾಗಿ ಬೆಂಬಲಿಸಲೇಬೇಕು.
Discussion about this post