ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-19 |
ಕ್ರಿಯೆಯು ಪದಗಳಿಗಿಂತ ಜೋರಾಗಿ ಮಾತನಾಡುತ್ತವೆ ಎಂಬ ಮಾತು ಆಂಗ್ಲ ಭಾಷೆಯಲ್ಲಿ ಬಹಳ ಪ್ರಸಿದ್ಧವಾಗಿದೆ. ಆದರೆ ಈ ಮಾತಿನ ಅರ್ಥವೇನು? ಈ ಮಾತನ್ನು ಹೇಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು? ಎಂಬ ಪ್ರಶ್ನೆಗಳು ನನ್ನಲ್ಲಿ ಹುಟ್ಟಿತು. ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾದರೆ ನಾನು ಜೀವನಕ್ಕೆ ಸ್ಪೂರ್ತಿದಾಯಕವಾದ ಪಾಠಗಳನ್ನು ಕಲಿತೆ. ಮಾತು ಕೇವಲ ಆಡಲು ಅಲ್ಲ, ಕ್ರಿಯೆಯ ರೂಪಕವಾಗಿ ತೋರಿಸಿ ಕೊಡುವುದು ಎಂಬುದು ನನಗೆ ಮನವರಿಕೆಯಾಯಿತು.
ಚಿತ್ರಗಳನ್ನು ಬಿಡಿಸುವ ಅಭ್ಯಾಸವು ನನ್ನದು. ನಾನು ಚಿಕ್ಕವಳಿದ್ದಾಗ ಯಾವುದೇ ಚಿತ್ರಕ್ಕೂ ಬಣ್ಣ ತುಂಬದೆ ಬಿಡುತ್ತಿರಲಿಲ್ಲ. ಆಗಿನಿಂದಲೂ ನನ್ನ ಅಭಿಪ್ರಾಯವೇನೆಂದರೆ ಚಿತ್ರಗಳಿಗೆ ಬಣ್ಣವನ್ನು ತುಂಬದೇ ಹಾಗೆ ಬಿಟ್ಟರೆ ಏನೋ ವಿಚಿತ್ರವೆನಿಸುತ್ತದೆ. ಆದರೆ ಅದೇ ಬಣ್ಣ ಹಾಕಿದಾಗ ಆ ಚಿತ್ರಕ್ಕೆ ಜೀವ ಬಂದಂತೆ ಕಾಣುತ್ತದೆ. ಹೀಗೆ ಮಾತುಗಳು ಚಿತ್ರವಾದರೆ ಅದಕ್ಕೆ ಜೀವ ತುಂಬುವಂತಹ ಬಣ್ಣವೇ ಕ್ರಿಯೆ.
ಮಾತುಗಳು ಸಂಭಾಷಣೆ ಒಂದು ಮಾರ್ಗವಷ್ಟೇ. ಆದರೆ ಆ ಮಾತುಗಳಲ್ಲಿ ನಂಬಿಕೆ ತರಿಸುವಂತಹ ಮಾರ್ಗವೆಂದರೆ ಅದುವೇ ಕ್ರಿಯೆ. ಹನುಮಂತ ಇದಕ್ಕೆ ಒಂದು ಉದಾಹರಣೆ. ರಾಮನಿಗೆ ಮಾತಲ್ಲಿ ನಂಬಿಕೆ ಮಾತ್ರ ಇರಿಸದೆ ಸೀತೆಗೆ ಚುಡಾವಣೆಯನ್ನು ಕೊಡುವ ಕ್ರಿಯೆಯನ್ನು ಕೂಡ ಮಾಡಿ ನಂಬಿಕೆಯನ್ನು ಗಳಿಸಿದ್ದಾನೆ. ಇದರಿಂದಾಗಿ ಜನರಲ್ಲೂ ಕೂಡ ಹನುಮಂತನ ಮಾತುಗಳಿಗಿಂತ ಕ್ರಿಯೆಯು ಅಚ್ಚಳಿಯದೇ ನೆನಪಿನಲ್ಲಿ ಉಳಿದಿದೆ.
ಕ್ರಿಯೆಗೆ ನಾವು ನೋಡುವಂತಹ ನೋಟಗಳ ಕೇಳುವಂತಹ ವಿಷಯಗಳ ಹಾಗೂ ತಿಳಿದಿರುವಂತಹ ವಿಷಯಗಳ ಮೇಲಿನ ಅಭಿಪ್ರಾಯವನ್ನು ಬದಲಿಸುವಂತಹ ಶಕ್ತಿಯು ಇದೆ. ಕನ್ನಡದಲ್ಲಿ ಒಂದು ಗಾದೆ ಇದೆ “ನಡೆದಂತೆ ನುಡಿ ನುಡಿದಂತೆ ನಡೆಯೆಂದು” ನುಡಿದಿದ್ದನ್ನು ಕ್ರಿಯಾ ರೂಪಕ್ಕೆ ತಂದಾಗಷ್ಟೇ ಆ ಮಾತಿಗಳಿಗೆ ಬೆಲೆ ಎನ್ನುವುದು ಈಗಾದೆಯ ಅರ್ಥವಾಗಿದೆ. ಹಾಗೆಯೇ ನುಡಿದಂತೆ ನಡೆಯದಿದ್ದಾಗ ಜನರಲ್ಲಿ ನಮ್ಮ ಅಭಿಪ್ರಾಯವೂ ಕೆಡುತ್ತದೆ. ಕೇವಲ ಮಾತಿನಲ್ಲೇ ಮನೆ ಕಟ್ಟುವವರ ಪಂಗಡವೊಂದಿದೆ. ಎಂದರೆ ಕೆಲಸವಾಗುವವರೆಗೆ ಬಣ್ಣ ಬಣ್ಣವಾಗಿ ಮಾತನಾಡಿ, ನಂಬಿಸಿ, ಕೆಲಸವಾದ ನಂತರ ಅವರೇ ಕೊಟ್ಟ ಮಾತುಗಳನ್ನು ಬಹು ಸುಲಭವಾಗಿ ಮರೆತೇ ಬಿಡುತ್ತಾರೆ. ಕೆಲವರು ಮಾತ್ರ ತಮ್ಮ ಮಾತುಗಳನ್ನು ನೆನಪಿಟ್ಟು ಪಾಲಿಸುತ್ತಾರೆ. ಆದರೆ ಕೊನೆಯಲ್ಲಿ ನಮಗೆ ನೆನಪಿರುವುದು ಅವರ ಮಾತುಗಳಲ್ಲ ಬದಲಾಗಿ ಅವರ ಕ್ರಿಯೆಗಳು ಮಾತ್ರ. ಯಾರು ಕೊಟ್ಟ ಮಾತನ್ನು ಉಳಿಸಿಕೊಳ್ಳುವರೋ ಅವರ ಮೇಲೆ ಒಳ್ಳೆಯ ಅಭಿಪ್ರಾಯ ಬರುವುದು. ಯಾರು ಮಾತನ್ನು ಉಳಿಸಿಕೊಳ್ಳುವುದಿಲ್ಲವೋ ಅವರ ಮೇಲೆ ಕೆಟ್ಟ ಅಭಿಪ್ರಾಯವೂ ಬರುತ್ತದೆ. ನಮಗೆ ಇನ್ನೊಬ್ಬರ ಮೇಲಿರುವ ಭಾವನೆಯು ಕೂಡ ಇದರಿಂದಲೇ ಪ್ರೇರಣೆಗೊಂಡಿರುವುದು. ನಮ್ಮ ತಂದೆ ತಾಯಿ ಎಂದಿಗೂ ನಮ್ಮೆದುರು ಬಂದು, ತಾವು ಮಾಡಿರುವ ಕೆಲಸಗಳನ್ನು ಹೇಳಿಕೊಂಡು ಹೊಗಳಿಸಿಕೊಂಡಿಲ್ಲ. ಬದಲಾಗಿ ತಾವು ಮಾಡಿರುವ ಕೆಲಸಗಳಲ್ಲಿರುವ ನಿಸ್ವಾರ್ಥತೆಯಿಂದ ನಮ್ಮಲ್ಲಿ ಅವರ ಮೇಲೊಂದು ಭಾವನೆಯನ್ನು ಮೂಡಿಸಿದ್ದಾರೆ. ಮಾತುಗಳನ್ನು ನಾವು ಎಲ್ಲೆಡೆ ಬಳಸುತ್ತಲೇ ಇರುತ್ತೇವೆ. ಆದರೆ ನಮ್ಮ ವ್ಯಕ್ತಿತ್ವವನ್ನು ಕ್ರಿಯೆಗಳೇ ನಿರ್ಮಾಣ ಮಾಡುತ್ತವೆ. ಮಾತುಗಳಿಗೆ ಸಾಕ್ಷಿಯಾಗಿ ಕ್ರಿಯೆಗಳು ಬೇಕು ಆಗ ಮಾತ್ರವೇ ನಮ್ಮ ಮಾತು ಹಾಗೂ ಕ್ರಿಯೆಗಳು ನೋಡಿದವರ ಮನಸ್ಸಲ್ಲಿ ದೃಢವಾದ ಸ್ಥಾನವನ್ನು ಪಡೆಯುತ್ತವೆ.
ಈ ಹೇಳಿಕೆಯನ್ನು ಕ್ರಿಯಾ ರೂಪಕ್ಕೆ ತರಲು ಮೊದಲು ನಾವು ಮತಿಗನುಗುಣವಾಗಿ ಕಾರ್ಯಪ್ರವೃತ್ತರಾಗಬೇಕು. ಹೇಳಿದ ಮಾತುಗಳನ್ನು ಕ್ರಿಯೆಯ ಮೂಲಕ ಸಾಬೀತು ಮಾಡಬೇಕು. ಕ್ರಿಯೆಯು ನಾವು ಸಂಪರ್ಕ ಬೆಳೆಸುವ ಜನರಲ್ಲಿ ನಮ್ಮಲ್ಲಿ ಒಂದು ನಂಬಿಕೆ ಹಾಗೂ ವಿಶ್ವಾಸ ಹಾಗೂ ಬಾಂಧವ್ಯವನ್ನು ಗಟ್ಟಿ ಮಾಡುತ್ತದೆ. ಈ ಮಾತಿನಿಂದ ನಮಗೆ ಸಿಗುವ ನೀತಿ ಏನೆಂದರೆ ಕ್ರಿಯೆ ಸಾಮರ್ಥ್ಯ ಹಾಗೂ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ವರ್ತಿಸಬೇಕು. ಏಕೆಂದರೆ ಜನರು ನಮ್ಮ ಮಾತುಗಳಿಗಿಂತ ಹೆಚ್ಚು ಕ್ರಿಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ.
ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂದು ನುಡಿದ ಪುಣ್ಯಕೋಟಿಯ ಪರಂಪರೆಯವರು ನಾವು. ಹೀಗಿರುವಾಗ ನಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನುಡಿದಂತೆ ನಡೆಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post