ಧರಣೀಮಂಡಲೇ ಖ್ಯಾತಂ ಧೈರ್ಯಾದಿ ಗುಣಬ್ರಂಹಿತಮ್/
ಧಿಕ್ಕ್ರತಾಶೇಷವಾದೀಭಂ ಧೀರಸಿಂಹ ಗುರುಂಭಜೇ//
ಇಂದು ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಪರಂಪರೆಯಲ್ಲಿ 40ನೆಯ ಪೀಠಾಧಿಕಾರಿಗಳಾಗಿ ಭಕ್ತಜನರನ್ನು ಅನುಗ್ರಹಿಸಿದ ಶ್ರೀ ಧೀರೇಂದ್ರ ತೀರ್ಥಗುರುಗಳ ಪೂರ್ವಾರಾಧನೆಯ ದಿನ.
ನಿನ್ನೆ ಮತ್ತು ಇಂದು ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದಲ್ಲಿ ನಡೆಯುತ್ತದೆ. ಹೊಸರಿತ್ತಿ ವರದಾ ನದಿಯ ದಂಡೆಯಮೇಲಿದೆ. ಇವರ ಪೂರ್ವಾಶ್ರಮದ ಹೆಸರು ಜಯರಾಮಾಚಾರ್ಯರೆಂದು. ಪೂರ್ವಾಶ್ರಮದ ತಂದೆಯವರು ಶ್ರೀವಾದೀಂದ್ರತೀರ್ಥರು.
ಶ್ರೀಧೀರೇಂದ್ರತೀರ್ಥರ ಜೀವನ ರೋಚಕಮಯವಾಗಿತ್ತು. ತಂದೆಯವರು ದೊಡ್ಡ ವಿದ್ವಾಂಸರು. ಶ್ರೀಉತ್ತರಾದಿಮಠದ ಶ್ರೀಸತ್ಯಬೋಧತೀರ್ಥರು ಮತ್ತು ಶ್ರೀಧೀರೇಂದ್ರತೀರ್ಥರು ಒಬ್ಬರಿಗೊಬ್ಬರು ಪ್ರತಿ ನಿತ್ಯ ಸೇರುತ್ತಿದ್ದರೆಂದು ತಿಳಿದುಬರುತ್ತದೆ. ಯತಿಗಳೀರ್ವರ ಸೌಹಾರ್ದತೆ, ಸ್ನೇಹ ಕುರಿತು ಉತ್ತರ ಕರ್ನಾಟಕದಲ್ಲಿ ಇಂದಿಗೂ ಪರಂಪರಾನುಗತವಾಗಿ ಹೇಳಿಕೊಂಡು ಬರಲಾಗುತ್ತಿದೆ. ಇಬ್ಬರೂ ಸಮಕಾಲೀನರು. ಶ್ರೀ ಧೀರೇಂದ್ರತೀರ್ಥರ ಪಾಂಡಿತ್ಯ, ಜ್ಞಾನ ವಿದ್ವತ್ತು ಎಲ್ಲವೂ ಬಹಳ ಶ್ರೇಷ್ಠಮಟ್ಟದ್ದಾಗಿತ್ತು.
ಶ್ರೀಜಗನ್ನಾಥದಾಸರು ಶ್ರೀವರದೇಂದ್ರ ತೀರ್ಥರ ಬಳಿ ಸಮಗ್ರ ದ್ವೈತ ವೇದಾಂತ ಅಧ್ಯಯನ ಮಾಡಿದ್ದರೂ ಹರಿಕಥಾಮೃತಸಾರದ ರಚನೆಗೆ ಸ್ಫೂರ್ತಿ ಪಡೆದುಕೊಂಡಿದ್ದು ಶ್ರೀ ಧೀರೇಂದ್ರತೀರ್ಥರ ಬಳಿಯೇ ಮುಂದೆ ಶ್ರೀದಾಸರು ಶ್ರೀವ್ಯಾಸರಾಜರ ಮತ್ತು ಶ್ರೀಪುರಂದರದಾಸರ ದಯೆಯಿಂದ ಕನಕಗಿರಿ ಶ್ರೀನೃಸಿಂಹ ಸನ್ನಿಧಾನದಲ್ಲಿ ಹರಿಕಥಾಮೃತಸಾರ ಗ್ರಂಥ ರಚನೆ ಮಾಡಿದರು.
ರಿತ್ತಿ ಎನ್ನುವ ಗ್ರಾಮವನ್ನು ಹೊಸರಿತ್ತಿಯನ್ನಾಗಿ ಮಾಡಿದ ಮಹಾನುಭಾವರು ಶ್ರೀ ಧೀರೇಂದ್ರತೀರ್ಥರು. ಶ್ರೀ ಧೀರೇಂದ್ರತೀರ್ಥರು ತಮ್ಮನ್ನು ಆಶ್ರಯಿಸಿ ಬರುವ ಪಂಡಿತರಿಗೆ, ವಿದ್ಯಾರ್ಥಿಗಳಿಗೆ, ಮಠಾವಲಂಭಿಗಳಿಗೆ, ಬಡವರಿಗೆ ತಮಗೆ ಬಂದ ಧನ, ಕನಕ, ಕಾಣಿಕೆಗಳೆಲ್ಲವನ್ನೂ ದಾನ ಮಾಡಿ ಪೋಷಿಸುತ್ತಿದ್ದ ಮಹಾನುಭಾವರು.
ಶ್ರೀಧೀರೇಂದ್ರತೀರ್ಥರು ವೈಷ್ಣವ ಸಂತರಲ್ಲಿ ವೇದಗಳಿಗೆ ನೇರವಾಗಿ ವ್ಯಾಖ್ಯಾನ ಮಾಡಿದವರು. ಮನ್ಯುಸೂಕ್ತ, ಅಂಭ್ರಣೀಸೂಕ್ತ, ಪುರುಷಸೂಕ್ತ ಮತ್ತು ಶ್ರೀಸೂಕ್ತಕ್ಕೆ ವ್ಯಾಖ್ಯಾನ, ಮಹಾನಾರಾಯಣೋಪನಿಷತ್ ವ್ಯಾಖ್ಯಾನ ಜೊತೆಯಲ್ಲಿ ಇನ್ನೂ ಅನೇಕ ಗ್ರಂಥಗಳ ವ್ಯಾಖ್ಯಾನ ಶ್ರೀಧೀರೇಂದ್ರತೀರ್ಥರಿಗೆ ವೇದ ವಾನ್ಗ್ಮಯ ಪ್ರಪಂಚದಲ್ಲಿ ಭದ್ರವಾದ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ಬೇರೇ ವ್ಯಾಖ್ಯಾನಕಾರರು ಹೇಳಿಲ್ಲದ ಹೊಸ ಹೊಸ ಸಂಗತಿಗಳು ಶ್ರೀಧೀರೇಂದ್ರತೀರ್ಥರ ಕೃತಿಗಳಲ್ಲಿ ಕಂಡುಬರುತ್ತದೆ.
ಶ್ರೀವರದೇಂದ್ರತೀರ್ಥ ಶ್ರೀಪಾದರಿಂದ ಸನ್ಯಾಸ ದೀಕ್ಷೆ ಪಡೆದು ಶ್ರೀಧೀರೇಂದ್ರ ತೀರ್ಥರೆಂದು ನಾಮಕರಣ ಹೊಂದಿ ಶ್ರೀಮಠದ ಪೀಠವನ್ನಲಂಕರಿಸಿದ ಯತಿವರೇಣ್ಯರು.
ಇವರ ಆರಾಧನೆಯು ಇವತ್ತಿನಿಂದ ಮೂರು ದಿವಸಗಳು ಹೊಸರಿತ್ತಿಯಲ್ಲಿ ನಡೆಯುವುದು. ಈ ಮಹಾನುಭಾವರ ಸ್ಮರಣೆಮಾಡಿ ಎಲ್ಲರೂ ಅವರ ಕ್ರುಪೆಗೆ ಪಾತ್ರರಾಗೋಣ.
ಲೇಖನ: ಜಯಭೀಮ್ ಜೋಯ್ಸ್, ಶಿವಮೊಗ್ಗ
Discussion about this post