ಒಂದು ಕುಟುಂಬದಲ್ಲಿ ಹೆಣ್ಣು ಗರ್ಭಿಣಿಯಾದರೆ ಅದರ ಸಂಭ್ರಮ ಅಷ್ಟಿಷ್ಟಲ್ಲ. ಅದರಲ್ಲೂ ಮಗುವಿನ ಆಗಮನವಾದ ನಂತರವಂತೂ ಇಡಿಯ ವಂಶವನ್ನೇ ಸಂಭ್ರಮದಲ್ಲಿ ಮುಳುಗಿಸುತ್ತದೆ. ಸಿಹಿ ಹಂಚುವುದೇ, ಹೋಮ-ಹವನ ಮಾಡಿಸು ವುದೇನು, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿ ಕುಟುಂಬವೂ ಸಹ ಅದರ ಸುಖ ಹಾಗೂ ಸಂತೋಷ ವನ್ನು ಅನುಭವಿಸುತ್ತದೆ. ಆದರೆ, ಈ ಎಲ್ಲಾ ಸಂಭ್ರಮಗಳ ನಡುವೆ ತಾಯಿಯ ಕುರಿತಾಗಿ ಕಾಳಜಿ ವಹಿಸುವುದು ಅತ್ಯಂತ ಪ್ರಮುಖವಾದುದು ಎಂಬುದನ್ನು ಯಾರೂ ಮರೆಯಬಾರದು.
ಸಿಸೇರಿಯನ್ ಆದ ನಂತರ ತಾಯಿಯ ಆರೋಗ್ಯದ ಕುರಿತಾಗಿ ತಿಳಿಯುವ ಮುನ್ನ ಸಿಸೇರಿಯನ್ ಕುರಿತಾಗಿ ಮೊದಲು ತಿಳಿದುಕೊಳ್ಳೋಣ.
ಸಿಸೇರಿಯನ್ ಎಂದರೆ ಏನು?
ತನ್ನ ಜೀವದೊಂದಿಗೆ ಇನ್ನೊಂದು ಜೀವವನ್ನು ಜೋಪಾನ ಮಾಡಿಟ್ಟುಕೊಂಡು ಜಗತ್ತಿಗೆ ಪರಿಚಯಿಸುವ ಶಕ್ತಿ ವರದಾನವಾಗಿದ್ದು ಹೆಣ್ಣಿಗೆ ಮಾತ್ರ. ಇಂತಹ ಶಕ್ತಿಯನ್ನು ದೇವರು ದಯಪಾಲಿಸಿದ್ದು, ಇದಕ್ಕಾಗಿಯೇ ಆಕೆಗೆ ಪೂಜ್ಯ ಸ್ಥಾನವನ್ನೂ ಸಹ ನೀಡಲಾಗಿದೆ.
ಒಂಬತ್ತು ತಿಂಗಳು ತಾಯಿಯ ಜೀವದಲ್ಲಿ ಬೆರೆತು ಸೂಕ್ತ ಸಮಯದ ನಂತರ ಹೊರಬರುವ ನೈಸರ್ಗಿಕ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿರುತ್ತದೆ. ಕೆಲವೊಮ್ಮೆ ಪ್ರಸವದ ಸಂದರ್ಭದಲ್ಲಿ ಉಂಟಾಗುವ ವ್ಯತ್ಯಾಸ ಅಥವಾ ಅವಘಡದಿಂದಾಗಿ ತಾಯಿ ಮತ್ತು ಮಗು ಇಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಅಲ್ಲದೇ ಸಾರ್ಥಕತೆಯ ಭಾವನೆ ಮೂಡಿಸುತ್ತದೆ. ಆದರೆ ಇತ್ತೀಚೆಗೆ ಪ್ರಸವ ನೋವು ಅನುಭವಿಸಲು ಮಹಿಳೆಯರು ಹಿಂಜರಿಯುತ್ತಿದ್ದು, ಪರಿಣಾಮ ಸಿಸೇರಿಯನ್ ಕಡೆ ಮುಖ ಮಾಡುತ್ತಾರೆ.
ಆದರೆ ಪ್ರಕೃತಿ ನಿಯಮದಂತೆ ಹೆಣ್ಣಿಗೆ ಸಹಜ ಹೆರಿಗೆ ಆಗುವಲ್ಲಿ ಏನಾದರೂ ತೊಂದರೆಯಾಗಿ, ತಾಯಿ ಅಥವಾ ಮಗುವಿನ ಜೀವಕ್ಕೆ ಆಪತ್ತು ಬರುತ್ತದೆ ಎಂದು ವೈದ್ಯರಿಗೆ ಅನಿಸಿದರೆ ಆಗ ಶಸ್ತ್ರಚಿಕಿತ್ಸೆ ಮಾಡಿ, ಮಗುವನ್ನು ಹೊರತೆಗೆಯಲಾಗುತ್ತದೆ. ಇದನ್ನೇ ಸಿಸೇರಿಯನ್ ಎನ್ನಲಾಗುತ್ತದೆ. ಹಲವು ವರ್ಷಗಳ ಹಿಂದೆ ಸೀಸರ್ ಎಂಬ ದೊರೆ ರೋಮ್ ರಾಜ್ಯ ಆಳುತ್ತಿದ್ದನು. ಗರ್ಭಿಣಿಯರು ಸತ್ತರೆ ಹಾಗೆಯೇ ಸಮಾಧಿ ಮಾಡುವುದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿತ್ತು. ಆಕೆಯ ಶವವನ್ನು ಹೂಳುವ ಮೊದಲು ಆಕೆಯ ಶವದ ಹೊಟ್ಟೆ ಸೀಳಿ ಗರ್ಭಸ್ಥ ಶಿಶುವನ್ನು ಹೊರತೆಗೆಯಬೇಕಿತ್ತು. ಇದು ಆ ರಾಜನ ಆಜ್ಞೆಯಾಗಿತ್ತು. ಆದ್ದರಿಂದ ಈ ಪ್ರಕ್ರಿಯೆಗೆ ಸಿಸೇರಿಯನ್ ಎಂಬ ಹೆಸರು ಬಂತು.
ಸಿಸೇರಿಯನ್‌ಗೆ ವೈದ್ಯಕೀಯ ಕಾರಣಗಳು ಹೀಗಿವೆ:
ಮಗು ದಪ್ಪ ಅಥವಾ ತೂಕ ಇದ್ದರೆ ಸಾಮಾನ್ಯ ಹೆರಿಗೆ ಕಷ್ಟ. ಇಂತಹ ಸಂದರ್ಭದಲ್ಲಿ ಸಿಸೇ ರಿಯನ್ ಅನಿವಾರ್ಯವಾಗಿದ್ದು, ಗರ್ಭದಲ್ಲಿ ಮಗು ತಲೆ ಕೆಳಗಾಗಿದ್ದರೆ ಅಥವಾ ಇನ್ನಿತರ ಸ್ಥಿತಿಗಳಲ್ಲಿದ್ದರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಗರ್ಭಿಣಿಯರಲ್ಲಿ ತೂಕ ಕಡಿಮೆ ಇದ್ದರೆ, ತಂತ್ರಜ್ಞಾನದ ಮೂಲಕ ಗರ್ಭಧಾರಣೆಯಾದರೆ ಶಸ್ತ್ರಚಿಕಿತ್ಸೆ ಆಯ್ದುಕೊಳ್ಳುವುದಿದೆ. 7-8 ತಿಂಗಳಲ್ಲಿ ಗರ್ಭದಲ್ಲಿ ಸಮಸ್ಯೆ ಯಾದಲ್ಲಿ ಸಿಸೇರಿಯನ್ ಮೂಲಕ ಮಗು ಹೊರ ತೆಗೆಯುವುದು ಅನಿವಾರ್ಯವಾಗುತ್ತದೆ.
ನಂಬಿಕೆಗಳೂ ಇಲ್ಲಿ ಕಾರಣ
ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಜನರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಆಗುವ ಪ್ರಮಾಣ ಹೆಚ್ಚಿದೆ ಎಂದು ವರದಿಗಳು ಹೇಳಿವೆ. ಇದಕ್ಕೆ ಕುಟುಂಬದವರ ಒತ್ತಾಯ ಕಾರಣವಾಗಿದ್ದು, ವೈದ್ಯರು ನಿಗದಿಪಡಿಸಿದ ದಿನ ಅಮಾವಾಸ್ಯೆ, ಶಕುನ ಸರಿಯಿಲ್ಲ ಎಂಬಿತ್ಯಾದಿ ಕಾರಣಗಳಿಂದ ಅವಧಿಗೂ ಮುನ್ನವೇ ಆಪರೇಷನ್ ಮಾಡಿ ಎಂದು ವೈದ್ಯರಿಗೆ ಮನವಿ ಮಾಡುವ ಪ್ರವೃತ್ತಿ ಹೆಚ್ಚಾಗಿವೆ.
ಸೆನ್ಸಿಟಿವ್ ಗರ್ಭಿಣಿಯರು!
ಪ್ರಸ್ತುತ ದಂಪತಿ ಒಂದು ಮಗು ಪಡೆದರೆ ಹೆಚ್ಚು. ಮದುವೆ ಬಳಿಕ ಆಕೆಯ ಆರೈಕೆಯಲ್ಲಿ ಬದಲಾವಣೆ ಇರುವುದಿಲ್ಲ. ಹೀಗಿರುವಾಗ ಗರ್ಭಿಣಿಯರಲ್ಲಿ ನೋವು ತಡೆದು ಕೊಳ್ಳುವ ಶಕ್ತಿ ಕೊಂಚ ಕಡಿಮೆ ಇರುತ್ತದೆ. ಹೀಗಾಗಿ ಕುಟುಂಬದವರೇ ಶಸ್ತ್ರಚಿಕಿತ್ಸೆ ಮಾಡುವಂತೆ ತಿಳಿಸುತ್ತಾರೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಸಿಸೇರಿಯನ್ ಆದಾಗ ಆಸ್ಪತ್ರೆ ಯಿಂದ ಹೊರಡುವ ಮುನ್ನ ನೆನಪಿಡಿ
- ಒಮ್ಮೆ ನೀವು ಸಿಸೇರಿಯನ್‌ಗೆ ಒಳಗಾದರೆ, ಶಸ್ತ್ರಚಿಕಿತ್ಸೆ ಯಾದ ಕೆಲವೇ ಗಂಟೆಗಳಲ್ಲಿ ತುಂಬಾ ನಿಧಾನವಾಗಿ ನಡೆಯುವಂತೆ ವೈದ್ಯರು ಸೂಚಿಸುತ್ತಾರೆ. ಇದನ್ನು ಪಾಲಿಸುವುದು ತೀರಾ ಅಗತ್ಯ.
- ಆರು ವಾರಗಳ ತನಕ ಕಡು ರಕ್ತ ಹೊರಹೋಗುವ ಕಾರಣ ಹೆಚ್ಚುವರಿಯಾಗಿ ಹೀರಿಕೊಳ್ಳುವ ಮುಟ್ಟಿನ ಪ್ಯಾಡ್‌ಗಳನ್ನು ಬಳಸಿ.
ಮನೆಗೆ ಹೋದ ಬಳಿಕ ಇವುಗಳನ್ನು ಪಾಲಿಸಿ
- ಈ ಸಮಯದಲ್ಲಿ ನಿಮ್ಮ ಚಟುವಟಿಕೆಗಳನ್ನು ಕಡಿಮೆ ಮಾಡಿ. ಆರು ವಾರಗಳ ತನಕ ಭಾರವಾಗಿರುವ ಯಾವುದೇ ವಸ್ತುಗಳನ್ನು ಎತ್ತಲು ಪ್ರಯತ್ನಿಸಬೇಡಿ.
- ಸಾಕಷ್ಟು ಕಾಯಿಸಿ ಆರಿಸಿದ ಬೆಚ್ಚಗಿನ ನೀರು ಕುಡಿಯಿರಿ. ಇದು ಮಲಬದ್ಧತೆ ತಡೆಯುತ್ತದೆ.
- ಮನೆಯ ಒಳಗೆ ಸ್ವಲ್ಪ ನಿಧಾನವಾಗಿ ಆಚೀಚೆ ನಡೆದಾಡಿ. ಇದರಿಂದ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯ ಗಾಯಬೇಗನೆ ಗುಣ ಮುಖವಾಗಲು ನೆರವಾಗುತ್ತದೆ.
- ಸಿಸೇರಿಯನ್ ಬಳಿಕ ಬರುವ ಜ್ವರ ಅಥವಾ ಇನ್ನಿತರ ಯಾವುದೇ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸಿ. ವೈದ್ಯರನ್ನು ಸಂಪರ್ಕಿಸದೆ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.
- ಸ್ನಾನದ ವೇಳೆ ಛೇದನದ ಬಗ್ಗೆ ಜಾಗ್ರತೆ ವಹಿಸಿ. ಸ್ನಾನದ ವೇಳೆ ಇದನ್ನು ಪ್ಲಾಸ್ಟಿಕ್‌ನಿಂದ ಮುಚ್ಚಿ. ಬಾತ್ ಟಬ್ ಅಥವಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ನಾನ ಮಾಡಬೇಡಿ.
- ಕನಿಷ್ಠ ಮೂರು ತಿಂಗಳವರೆಗೂ ಯಾವುದೇ ರೀತಿಯ ವಾಹನ ಚಾಲನೆ ಮಾಡಬೇಡಿ.
- ಕೆಲವು ವಾರ ತನಕ ಲೈಂಗಿಕ ಕ್ರಿಯೆಯೆಲ್ಲಿ ಪಾಲ್ಗೊಳ್ಳಬೇಡಿ.
ಯಾವ ಸಂದರ್ಭದಲ್ಲಿ ಸಿಸೇರಿಯನ್ ಅನಿವಾರ್ಯ?
- ಯಾವುದೇ ಕಾರಣದಿಂದಾಗಿ ತಾಯಿಗೂ ಮಗುವಿಗೂ ಅಪಾಯ ಎಂದೆನಿಸಿದರೆ ಮಾತ್ರ ಈ ವಿಧಾನ
- ತಾಯಿಯ ಕಿಳ್ಗುಳಿಯ ಅಳತೆ ಬಹಳ ಕಡಿಮೆ ಇದ್ದು ಅಥವಾ ಮಗುವಿನ ತಲೆ ದೊಡ್ಡದ್ದಾಗಿದ್ದಾಗ
- ಗರ್ಭಾಶಯದ ಅಥವಾ ಆಸುಪಾಸಿನ ಅಂಗಗಳಲ್ಲಿ ಗೆಡ್ಡೆಗಳು ಮಗುವಿಗೆ ಅಡ್ಡವಾಗಿದ್ದಾಗ
- ಯೋನಿ ಅಥವಾ ಗರ್ಭಾಶಯದ ಕೊರಳು ವಿಪರೀತ ಸಂಕೋಚನಗೊಂಡು ಹೆಚ್ಚು ಕಮ್ಮಿ ಮುಚ್ಚಿಕೊಂಡಿರುವಾಗ
- ಈಗಾಗಲೇ ಗರ್ಭಿಣಿ ಎರಡು ಸಲ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ
- ಗರ್ಭದಲ್ಲಿ ಮಗುವು ಸಹಜ ಹೆರಿಗೆಗೆ ಅನುಕೂಲಕರ ರೀತಿಯ ಭಂಗಿಯಲ್ಲಿ ಇಲ್ಲದ ಸಂದರ್ಭದಲ್ಲಿ
- ಗರ್ಭಾಶಯ ಅಪೇಕ್ಷಿತ ರೀತಿಯಲ್ಲಿ ಸಂಕುಚಿತವಾಗದ್ದಿದ್ದಾಗ
- ಕೊರಳು ಸರಿಯಾದ ಸಮಯದಲ್ಲಿ ಅಗಲವಾಗದ್ದಿದ್ದಾಗ
- ಪ್ರಸವಪೂರ್ವ ರಕ್ತಸ್ರಾವ, ಸಿಹಿಮೂತ್ರ ರೋಗ ಇತ್ಯಾದಿ ರೋಗಗಳಿದ್ದಾಗ
- ಹೊಕ್ಕುಳ ಬಳ್ಳಿ ಮಗುವಿನ ಕತ್ತಿಗೆ ಸುತ್ತಿ, ಹೆರಿಗೆ ಮುಂದುವರಿಯದೆ ಮಗುವಿನ ಹೃದಯದ ಬಡಿತ ಕ್ಷೀಣಿಸುತ್ತಿರುವಾಗ
ಗರ್ಭಿಣಿಯರಲ್ಲಿ ಪೋಷಕಾಂಶ ಕೊರತೆ, ಮಧುಮೇಹ, ಆಹಾರ ಪದ್ಧತಿ ಬದಲಾವಣೆ ಶಸ್ತ್ರಚಿಕಿತ್ಸೆ ಹೆರಿಗೆ ಹೆಚ್ಚಲು ಕಾರಣವಾಗಿದೆ. ರಾಜ್ಯದಲ್ಲಿ 2005-06ರಲ್ಲಿ ಒಟ್ಟಾರೆ ಶೇ.15.5 ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕ ನಡೆಯುತ್ತಿದ್ದವು. ಆದರೆ, 2016ರ ಅವಧಿಯಲ್ಲಿ ಶೇ.26.2 ಹೆರಿಗೆ ಸಿಸೇರಿಯನ್ ಆಗಿವೆ. ಅದರಲ್ಲೂ ನಗರ ಪ್ರದೇಶದಲ್ಲಿ ನಡೆಯುವ ಶೇ.29.2 ಹೆರಿಗೆಗಳು ಸಿಸೇರಿಯನ್ ಮೂಲಕವೇ ಆಗಿರುತ್ತವೆ ಎಂದು ವರದಿಯ ಅಂಕಿ ಅಂಶ ತಿಳಿಸಿವೆ.
ಕೆಲವು ಖಾಸಗಿ ಆಸ್ಪತ್ರೆಗಳ ಮಾರ್ಕೆಟಿಂಗ್ ಮನಃಸ್ಥಿತಿ
ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ಬಗ್ಗೆ ಅಪಸ್ವರ ಕೇಳಿಬರುತ್ತಿರುವ ಬೆನ್ನಲ್ಲೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವ ಪ್ರಮಾಣ 10 ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದನ್ನು ಗಮನಿಸಬೇಕು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 ನೀಡಿರುವ
ವರದಿಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ಅನಗತ್ಯವಾಗಿ ಖಾಸಗಿ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆ ಮಾಡುತ್ತಿವೆ ಎಂಬ ಆಪಾದನೆಗೂ ಇದು
ಪುಷ್ಟಿ ನೀಡಿದೆ. ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಹೆರಿಗೆ ಶೇ.8 ಏರಿಕೆಯಾಗಿದ್ದು, 2005-06ರ ಅವಧಿಯಲ್ಲಿ ಶೇ. 31.9 ಇದ್ದ ಸಿಸೇರಿಯನ್ ಹೆರಿಗೆ ಪ್ರಮಾಣ 2015-16ರ ಅವಧಿಯಲ್ಲಿ ಶೇ.40.3ಕ್ಕೆ ಏರಿಕೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ 10 ವರ್ಷದಲ್ಲಿ ಶೇ.0.3 ಕಡಿಮೆಯಾಗಿದೆ. ಇನ್ನು, ಬ್ಯಾಂಕ್ ಸಾಲ ಮಾಡಿ ಆಸ್ಪತ್ರೆಗಳನ್ನು ಕಟ್ಟುತ್ತಾರೆ. ಆ ಸಾಲ ತೀರಿಸಲು ರೋಗಿಗಳಿಗೆ ಸಬೂಬು ಹೇಳಲು ಆರಂಭಿಸುತ್ತಾರೆ. ಹೆರಿಗೆಗೆ ಬರುವವರಿಗೆ ಸಬೂಬು ಹೇಳಿ ಸಿಸೇರಿಯನ್ ಮಾಡುವ ಪ್ರವೃತ್ತಿಗಳು ಹೆಚ್ಚಾಗುತ್ತಿವೆ. ಬ್ರೆಜಿಲ್ ದೇಶದಲ್ಲೂ ಸಹ ಇತ್ತೀಚೆಗೆ ಸಿಸೇರಿಯನ್ ಹೆಚ್ಚಾಗಿದೆ. ಆದರೆ, ಬಹುತೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಹಜ ಹೆರಿಗೆಯಾಗುತ್ತದೆ. ಇದಕ್ಕಾಗಿ ಗರ್ಭಿಣಿಯಾದಾಗಿನಿಂದಲೇ ಇದಕ್ಕೆ ಮಾನಸಿಕ ಹಾಗೂ ದೈಹಿಕವಾಗಿ ಸಿದ್ದಪಡಿಸಲಾಗುತ್ತದೆ. ಸಾಮಾನ್ಯವಾಗಿ 10ರಲ್ಲಿ 9 ಪ್ರಕರಣಗಳಲ್ಲಿ ಸಹಜ ಹೆರಿಗೆಯಾಗಬೇಕು. ಆದರೆ, ಸಿಸೇರಿಯನ್ ಪ್ರಕರಣಗಳೇ ಹೆಚ್ಚಾಗುತ್ತಿರುವುದಕ್ಕೆ ಆಸ್ಪತ್ರೆಗಳ ಮಾರ್ಕೆಟಿಂಗ್ ಭೂತವೇ ಕಾರಣವಾಗಿದೆ.
ಲೇಖನ: ಡಾ.ಆರ್.ಪಿ. ಪೈ
ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಶಿವಮೊಗ್ಗ
Discussion about this post