ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದೇಶವ್ಯಾಪಿ ಲಾಕ್ ಡೌನ್ ಮತ್ತಷ್ಟು ದಿನ ಮುಂದುವರೆದಿದೆ. ಕೊರೋನಾ ಪ್ರಕರಣ ಹೆಚ್ಚಾಗಿರುವಂತಹ ಹಿನ್ನಲೆಯಲ್ಲಿ ಸೀಲ್ ಡೌನ್ ವಿಧಿಸುವ ಮೂಲಕ ಗೃಹಬಂಧನ ಮತ್ತಷ್ಟು ಬಿಗುವಾಗಿದೆ. ಈ ರೀತಿಯ ಸರ್ಕಾರಿ ಘೋಷಿತ ಸುದೀರ್ಘ ರಜೆ ಇತಿಹಾಸದಲ್ಲೇ ಮೊದಲ ಬಾರಿಯೇನೋ.
ಮನೆಯಲ್ಲಿ ಸದಸ್ಯರು ದಿನಿವಿಡೀ ಇರೋದ್ರಿಂದ ಮನೆಯ ವಾತಾವರಣವೇ ಜಾಮ್ ಆಗಿದೆ(ಹಾಸ್ಯಕ್ಕಾಗಿ). ಸರ್ಕಾರಿ, ಖಾಸಗಿ, ವ್ಯವಹಾರ, ಉದ್ದಿಮೆ, ದಿನಗೂಲಿ, ಕಲೆ, ಮನರಂಜನೆ ಕಚೇರಿ ಎಲ್ಲ ರೀತಿಯ ವೃತ್ತಿನಿರತರಿಗೂ ಇದೊಂದು ಸುದೀರ್ಘ ರಜೆ. ಒಂದು ದಿನವಾದರೆ ಸರಿ. ಎರಡು ದಿನವೂ ಸರಿ. ಅಮ್ಮಮ್ಮಾ ಅಂದ್ರೆ ಒಂದು ವಾರ ಕೆಲಸವಿಲ್ಲದೆ ರಜೆಯಲ್ಲಿ ಮನೆಯಲ್ಲಿರಬಹುದು. ಆದ್ರೂ ಇತರ ರಜೆಗಳಲ್ಲಾದ್ರೆ ಸ್ನೇಹಿತರ ಮನೆಗೋ, ಮಾರ್ಕೆಟ್ಟಿಗೋ, ವಾಕಿಂಗೋ, ಹೀಗೆಲ್ಲಾ ಹೊರಗಡೆ ಸಂಚಾರ ಮಾಡುತ್ತಿದ್ದೆವು. ಆದರೆ ಈ ತುರ್ತು ಪರಿಸ್ಥಿತಿ ರಜೆಯಲ್ಲಿ ಅದಕ್ಕೆಲ್ಲಾ ನಿರ್ಬಂಧ.. ಎಲ್ಲೂ ಹೋಗುವಂತಿಲ್ಲ.
ಎರಡು, ಮೂರು ಅಥವಾ ಹೆಚ್ಚು ಸದಸ್ಯರಿರೋ ಮನೆಗಳಲ್ಲಿ ಪರಿಸ್ಥಿತಿ ಒಂದು ತೆರನಾದ್ರೆ, ಒಂಟಿಯಾಗಿರುವವರ ಮೇಲೆ ಈ ನಿರ್ಬಂಧ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮನೆಯಲ್ಲೇ ಕುಳಿತು ಏಕತಾನತೆ ಹೆಚ್ಚಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಹೆಚ್ಚಿನ ವರ್ಗಗಳಿಗೆ ಇತ್ತ ಕೆಲಸವಿಲ್ಲ. ಸಂಪಾದನೆಯಿಲ್ಲ ಎಂಬ ಚಿಂತೆ. ಅದೆಷ್ಟೋ ಜನರಿಗೆ ಆಹಾರಕ್ಕೂ ಪರದಾಟ. ಇನ್ನು ಸ್ತ್ರೀ ಪುರುಷ ಬೇಧವಿಲ್ಲದೆ ಕೆಲಸಕ್ಕೆ ಹೋಗುವ ವರ್ಗದ ಗೋಳು ಅಂದ್ರೆ ಬೆಳಗ್ಗೆಯಿಂದ ರಾತ್ರಿ ಮಲಗೋವರೆಗೂ ಎಷ್ಟು ದಿನ ತಾನೇ ಟಿವಿಗೆ ಅಂಟಿಕೊಳ್ಳಲು ಸಾಧ್ಯ. ಎಷ್ಟು ಸಿನಿಮಾ ನೋಡಲು ಸಾಧ್ಯ? ಒಂದು ಹಂತಕ್ಕೆ ಮೊಬೈಲ್ ಗೇಮೂ ಸಾಕೆನಿಸಿಬಿಡುತ್ತದೆ. ಕಣ್ಣಿಗೂ ದಣಿವು.. ದೇಹಕ್ಕಂತೂ ಶ್ರಮವಿಲ್ಲ. ಹೀಗೆ ನಿದ್ರೆ ಸುಳಿಯುವುದೂ ತ್ರಾಸವೇ.. ಇಂಟರ್ ನೆಟ್ ಬಳಕೆ ಒಂದು ಹಂತದಲ್ಲಿ ಮನಸಿಗೆ ಕೆಲಸ ಕೊಟ್ರೂ ದೈಹಿಕವಾಗಿ ನಿಷ್ಕ್ರಿಯವಾಗಿರಬೇಕಾಗುತ್ತದೆ. ಮನೆಯ ಹೊರಗೆ ದುಡಿಯುವವರ ಪಾಡು ಹೀಗಾದರೆ ಮನೆಗೆಲಸದಲ್ಲಿ ಬಿಡುವು ರಜೆಯೇ ಇಲ್ಲದ ಗೃಹಿಣಿಯರಿಗೆ ಈ ಲಾಕ್ ಡೌನ್ ಖುಷಿ ನೀಡಿದೆಯೇ?? ಆರಂಭಿಕ ಹಂತದಲ್ಲಿ ಈ ಅನಿರೀಕ್ಷಿತ ರಜೆ ಸಂಭ್ರಮ ತಂದರೂ ಪರಿಣಾಮದ ಬಿಸಿ ಮಹಿಳೆಯರನ್ನೂ ತಟ್ಟಿದೆ. ಗೃಹಿಣಿಯರಿಗೂ ಅದೇ ರೂಲ್ಸು. ಶಾಪಿಂಗ್ ಹೋಗುವಂತಿಲ್ಲ.. ಸಂಜೆ ವಾಕಿಂಗ್ ಹೋಗುವಂತಿಲ್ಲ. ಕ್ಲಬ್, ಪಾರ್ಟಿ, ಫಂಕ್ಷನ್ ಎಲ್ಲವೂ ಬಂದ್.. ಬಂದ್.. ಬಂದ್.. ಮನೆಗೆ ಬೇಕಾಗುವ ಸಾಮಗ್ರಿಗಳ ಕೊರತೆ, ಗಂಡ ಮಕ್ಕಳು ಅತ್ತೆ ಮಾವ ಅಪ್ಪ ಅಮ್ಮ ಬಯಸಿದ ಅಡುಗೆ ಮಾಡಿ ಹಾಕಲು ಸಾಧ್ಯವಾಗುತ್ತಿಲ್ಲ. ಅಂತೂ ಗೃಹಿಣಿಯರಿಗೂ ಮೊದಮೊದಲು ಖುಷಿ ನೀಡಿದ್ದ ಈ ಕೊರೊನ ರಜೆ ಈಗೀಗ ತಲೆನೋವಾಗಿರೋದಂತೂ ನಿಜ.
ಹಾಗಾದ್ರೆ ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿರುವ ಈ ಗೃಸದುಪಯೋಗ ಪಡಿಸಿಕೊಳ್ಳುವುದು ಹೇಗೆ? ಈ ಬಿಡುವಿನ ದಿನಗಳನ್ನು ಮನೆಯೊಳಗೇ ವ್ಯಕ್ತಿತ್ವ ವಿಕಸನಕ್ಕೆ ಬಳಸಿಕೊಳ್ಳಿ.
1. ಅಂತರ ಕಡಿತಗೊಳಿಸಿ, ಸಂಪರ್ಕ ಸಾಧಿಸಿ
ಹೌದು.. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕಡಿತಗೊಳಿಸಬೇಕಿರುವುದು ಸಂಬಂಧಗಳ ಅಂತರ. ಕೆಲಸದೊತ್ತಡ, ಕೌಟುಂಬಿಕ ಸಮಸ್ಯೆ, ತಾಪತ್ರಯ, ಮಕ್ಕಳ ವಿದ್ಯಾಭ್ಯಾಸ, ದೂರದೂರು, ವಿದೇಶ ಅಂತ ಹಲವಾರು ಕಾರಣಗಳಿಂದ ಅದೆಷ್ಟೋ ಸ್ನೇಹ ಸಂಬಂಧಗಳು ದೂರವಾಗಿರುತ್ತವೆ. ಈ ಬಾಂಧವ್ಯಗಳನ್ನು ಮತ್ತೆ ಬೆಸೆಯಲು ಇದೊಂದು ಸುಸಂದರ್ಭ. ಸ್ನೇಹ, ಸಂಬಂಧಗಳ ನಡುವೆ ಉಂಟಾದ ಅಂತರ ಈಗ ಕಡಿತಗೊಳಿಸಿ. ಈಗಂತೂ ಹೇಗೂ ಪುರುಸೊತ್ತು ಇದ್ದೇ ಇದೆ. ದೂರಾಗಿರೋ ಸ್ನೇಹಿತರ, ಬಂಧುಗಳ ನಂಬರ್’ಗೆ ಕರೆ ಮಾಡಿ ಮನಸಾರೆ ಹರಟೆ ಹೊಡೆಯಿರಿ.. ಹಳೆಯ ಸುಮಧುರ ನೆನಪುಗಳನ್ನು ಹಂಚಿಕೊಳ್ಳಿ. ನಿಮ್ಮ ಕುಟುಂಬ, ಸಂಸಾರದಲ್ಲಾಗಿರುವ ಹೊಸ ಬದಲಾವಣೆಗಳ ಕುರಿತಾಗಿ ಮಾತನಾಡಿ.. ಅವರ ಸಾಧನೆ, ಬೆಳವಣಿಗೆಯನ್ನು ಅಭಿನಂದಿಸಿ. ಅವರು ಕೆಲಸದೊತ್ತಡದಲ್ಲಿರುತ್ತಾರೆ. ಕರೆ ಮಾಡಿ ಮಾತನಾಡಲು ಇದು ಸರಿ ಸಮಯವೋ ಎಂದು ಯೋಚಿಸುವ ಅಗತ್ಯವಿಲ್ಲ. ಹೇಗಿದ್ದರೂ ಲಾಕ್ ಡೌನ್’ಗೆ ಇದೇ ಪರಿಸ್ಥಿಯಲ್ಲಿ ಅವರೂ ಇರುತ್ತಾರೆ.. ಆದ್ದರಿಂದ ಈ ಸಂದರ್ಭ ನೀವು ಮಾಡುವ ಕರೆ ಆಪ್ತರಿಗೆ ಖುಷಿ ನೀಡಿಯೇ ನೀಡುತ್ತದೆ.
2. ಪ್ರಾರ್ಥನೆ ಮಾಡಿ
ದೇವರು, ಪ್ರಾರ್ಥನೆ ಮೊದಲಾದ ವಿಚಾರಗಳು ಸಹಜವಾಗಿಯೇ ಮಹಿಳೆಯರ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಆದ್ರೆ ಈ ಆತಂಕದ ದಿನಗಳು ಪ್ರಾರ್ಥನೆಗೆ ಅತಿ ಸೂಕ್ತವಾದ ಸಮಯ. ನಾವು ಆರೋಗ್ಯದಿಂದಿರಬಹುದು. ಸುರಕ್ಷತೆಯಿಂದಿರಬಹುದು. ಆದ್ರೆ ಕೊರೊನಾ ಬಾಧೆಗೆ ಒಳಗಾವದವರ ಒಳಿತಿಗಾಗಿ, ದೂರದ ಊರು, ದೇಶಗಳಲ್ಲಿ ಅಪಾಯದ ಆತಂಕದಲ್ಲಿರುವ ನಮ್ಮವರಿಗಾಗಿ, ಅವರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸಿ. ಕೊರೋನಾ ಮಾತ್ರವಲ್ಲದೆ ಲಾಕ್ ಡೌನ್ ಸಂದರ್ಭ ದೀರ್ಘ ಕಾಲೀನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸರಿಯಾದ ಸಮಯಕ್ಕೆ ಔಷಧಿಗಳು ದೊರಕದೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯೂ ಇದೆ.. ಅಂತಹವರಿಗಾಗಿ, ವಯೋವೃದ್ಧರಿಗಾಗಿ, ಅಶಕ್ತರಿಗಾಗಿ ನಿಮ್ಮ ಪ್ರಾರ್ಥನೆ ಮೀಸಲಾಗಿರಲಿ.. ನಿಸ್ವಾರ್ಥ ಪ್ರಾರ್ಥನೆ ಮನಸಿಗೆ ನೆಮ್ಮದಿ ನೀಡುತ್ತದೆ. ಸಾಧ್ಯವಾದರೆ ಮಕ್ಕಳಿಗೂ ಭಜನೆ, ಪೌರಾಣಿಕ, ಚರಿತ್ರೆ ಮೊದಲಾದ ವಿಚಾರಗಳಲ್ಲಿ ಆಸಕ್ತಿ ಮೂಡಿಸಿ. ಇತ್ತೀಚಿಗೆ ಪ್ರಧಾನಿ ಮೋದಿ ನೈತಿಕ ಬೆಂಬಲಕ್ಕಾಗಿ ಕರೆ ನೀಡಿದ್ದ ದೀಪ ಅಭಿಯಾನ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಆದರೆ ದೀಪ ಬೆಳಗಿಸುವುದು, ಆಧ್ಯಾತ್ಮಿಕ ಜೀವನ ಶೈಲಿ ನಿಸ್ಸಂಶಯವಾಗಿಯೂ ಮನಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
3. ಹವ್ಯಾಸಕ್ಕೆ ಒತ್ತು ಕೊಡಿ
ಈಗಂತೂ ಕೈಯ್ಯಲ್ಲಿ ಬೇಜಾನ್ ಸಮಯವಿದೆ. ಕಾಲೇಜು ದಿನಗಳಲ್ಲಿ ನಾನು ಹಾಡುತ್ತಿದ್ದೆ, ಡ್ಯಾನ್ಸ್ ಮಾಡ್ತಿದ್ದೆ, ಪೇಂಟಿಂಗ್, ಬರವಣಿಗೆ, ಕೈ ಕಸೂತಿ, ಮಾಡುತ್ತಿದ್ದೆ. ಕವಿತೆ ಬರೆಯುತ್ತಿದ್ದೆ. ಈಗ ಅದಕ್ಕೆಲ್ಲ ಸಮಯ ಸಿಗುತ್ತಿಲ್ಲ ಎಂದು ಕೊರಗುತ್ತಿದ್ದೆವು. ನಮ್ಮ ನೆಚ್ಚಿನ ಹವ್ಯಾಸಗಳು ಬದಲಾದ ಜೀವನಶೈಲಿಯಲ್ಲಿ ಹಿಂದುಳಿದು ಬಿಟ್ಟಿರುತ್ತವೆ. ಈಗ ಹಾಗಲ್ಲ. ನಿಮ್ಮ ನೆಚ್ಚಿನ ಹವ್ಯಾಸಕ್ಕೊಂದು ಸಮಯ ದೊರೆತ ಹಾಗಾಗಿದೆ. ಈ ಲಾಕ್ ಡೌನ್ ಮುಗಿಯುವ ವೇಳೆಗೆ ಹೊಸ ಕೌಶಲ್ಯ ಕರಗತವಾಗಲಿ.
4. ಮನೆಯೇ ವಿಶ್ವವಿದ್ಯಾನಿಲಯ
ಕಲಿಯಬೇಕು ಎಂಬ ಹಂಬಲವುಳ್ಳವರಿಗೆ ಮೂಲಗಳು ಹೇಗಾದರೂ ಒದಗುತ್ತವೆ ಅನ್ನೋ ಹಾಗೆ ಅಂಗೈಯಲ್ಲೇ ಜ್ಞಾನ ಭಂಡಾರ ಲಭ್ಯವಿದೆ. ಇಂಟರ್’ನೆಟ್’ನಲ್ಲಿ ತಡಕಾಡಿದ್ರೆ ನಿಮ್ಮ ಆಸಕ್ತಿಯ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಗಳು ದೊರಕುತ್ತವೆ. ಇಂಟರ್ ನೆಟ್ ನಲ್ಲಿ ನಿಮ್ಮ ಕ್ಷೇತ್ರ, ವಿಜ್ಞಾನ, ಇತಿಹಾಸ, ತಂತ್ರಜ್ಞಾನ, ಶಿಕ್ಷಣಕ್ಕೆ ಸಂಬಂಧಪಟ್ಟ ಹೊಸ ವಿಚಾರಗಳನ್ನು ಕಲಿಯುವ ಮೂಲಕ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ
5. ಪುಸ್ತಕ ಓದಿ
ಟಿವಿ ಮೊಬೈಲ್ ಏನೇ ಇದ್ರೂ ಪುಸ್ತಕ ಓದುವ ಆನಂದವೇ ಬೇರೆ. ಈಗ ನಾವದರಿಂದ ವಂಚಿತರಾಗಿದ್ದೇವೆ. ಹಾಗಾದರೆ ಬಿಡುವಿನ ವೇಳೆಯಲ್ಲಿ ಮತ್ತೆ ಪುಸ್ತಕ ಓದಲು ಶುರು ಮಾಡಬಾರದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲೂ ಪುಸ್ತಕ ಪ್ರೇಮಿಗಳು ಪುಸ್ತಕ ಓದುವ ಛಾಲೆಂಜ್ ಹರಿಯಬಿಡುತ್ತಿರುವುದು ಸಂತೋಷದಾಯಕ. ಎಂ.ಕೆ ಇಂದಿರಾ, ವೈದೇಹಿ, ತ್ರಿವೇಣಿ, ಅನಸೂಯಾ ಸಂಪತ್, ಅನಸೂಯಾದೇವಿ, ಕಮಲಾ ಹಂಪನಾ, ಟಿ. ಸುನಂದಮ್ಮ, ಪದ್ಮಾ ಶೆಣೈ, ಮೊದಲಾದವರ ಪುಸ್ತಗಳು ಇಂದಿಗೂ ಮೌಲ್ಯ ಕಳೆದುಕೊಂಡಿಲ್ಲ. ಓದಿ ನೋಡಿ
6. ಅಡುಗೆ ಮನೆಯೇ ಪ್ರಯೋಗ ಶಾಲೆ
ಲಾಕ್ ಡೌನ್ ಗೋಳು ಅಂದ್ರೆ ಮನೆಯಲ್ಲಿ ಅಡುಗೆ ಮಾಡಲು ಬೇಕಾದ ಸಾಮಗ್ರಿಗಳು ಬೇಕಾದಂತೆ ಸಿಗುತ್ತಿಲ್ಲ. ಮನೆಯಲ್ಲೂ ಸ್ಟಾಕ್ ಇಲ್ಲ ಎಂದು ಕೊರಗಬೇಡಿ. ಫಿಜಾ, ಬಗರ್ರ, ನೂಡಲ್ಸ್, ಪಾಸ್ತಾ, ಗೋಬಿ ಗೆ ಗೋಲಿ ಹೊಡೀರಿ. ಮನೆಯಲ್ಲೇ ಇರುವ ಪದಾರ್ಥಗಳಿಂದ ಆರೋಗ್ಯಕರ ಆಹಾರ ತಯಾರಿಸಿ ಮನೆಯ ಸದಸ್ಯರನ್ನು ಖುಷಿಪಡಿಸುವುದು ಹೇಗೆ ಎಂದು ಯೋಚಿಸಿ. ಕಡಿಮೆ ಖರ್ಚಿನಲ್ಲಿ, ಪೌಷ್ಠಿಕತೆಯುಳ್ಳ, ಮನೆಯವರು ಇಷ್ಟ ಪಡುವಂತೆ ಪಾಕ ಮಾಡಿದ್ರೆ ನೀವೇ ಸೂಪರ್ ವುಮನ್..
7. ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ
ರಜೆ ಸಿಕ್ತು. ಹಾಯಾಗಿರೋಣ ಎಂದು ಹೊಟ್ಟೆ ತುಂಬಾ ತಿಂದು, ಟೀವಿ ನೋಡ್ತಾ ಮೊಬೈಲ್ ಸ್ಕ್ರಾಲ್ ಮಾಡ್ತಾ ಟೈಂ ಪಾಸ್ ಮಾಡೋಣ ಅಂದುಕೊಂಡರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಇದರ ಪರಿಣಾಮ ಕೇವಲ ಒಂದೆರಡು ತಿಂಗಳಲ್ಲಿ, ಅಡ್ಡಡ್ಡ ಮೈಯ್ಯೂ, ದೊಡ್ಡ ಹೊಟ್ಟೆಯೂ ಬೆಳೆದು ಬಿಡೋದು ಗ್ಯಾರಂಟಿ. ಅದಕ್ಕಾಗಿ ಮನೆಯ ಕೆಲಸವನ್ನೆಲ್ಲಾ ಆದಷ್ಟು ಮೆಷಿನ್ ಸಹಾಯವಿಲ್ಲದೆ ಮಾಡಲು ಪ್ರಯತ್ನಿಸಿ. ಈ ದಿನಗಳಲ್ಲಿ ಲಿಫ್ಟ್, ವಾಶಿಂಗ್ ಮೆಷಿನ್ ಮೊದಲಾದುವುಗಳಿಗೆ ರೆಸ್ಟ್ ಕೊಡಿ.. ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ.. ದಿನಕ್ಕೆ ಕನಿಷ್ಠ 40 ನಿಮಿಷ ನಡಿಗೆಯ ಅಭ್ಯಾಸ, ಹಾಗೂ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಫಿಟ್ ಆಗಿರಿ
8. ಆಡು ಆಡು… ಆಟ ಆಡು
ಮೊಬೈಲ್ ಗೇಂ, ಪಬ್ ಜಿ, ಇವೇ ಆಟಗಳಲ್ಲ. ಹೇಗೂ ಮನೆಯ ತುಂಬಾ ಸದಸ್ಯರಿದ್ದಾರೆ. ಹಾಗಾದ್ರೆ ಕೇರಂ, ಲೂಡಾ, ಚೆಸ್, ಚನ್ನಮಣೆ, ಹಾಗೂ ಇನ್ನಿತರ ಗ್ರಾಮೀಣ ಕ್ರೀಡೆಗಳಲ್ಲಿ ಸಿಗುವ ಆನಂದವನ್ನು ನೋಡಿ.. ಹೀಗೆ ಸಮಯ ಕಳೆಯುವುದರಿಂದ ಕುಟುಂಬದವರೊಂದಿಗೆ ಆತ್ಮೀಯತೆಯೂ ಹೆಚ್ಚಾಗುತ್ತದೆ. ಸಮಯ ಕಳೆಯಲು ಉತ್ತಮ ಮನರಂಜನೆಯೂ ಹೌದು
9. ಮಾತು ಬೆಳ್ಳಿ
ಮನಸಿನ ವಿಚಾರಗಳನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಇದೊಂದು ಸುದೀರ್ಘ ಬಿಡುವು. ಮುಕ್ತ ಮಾತುಕತೆಯ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸಿ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಿ.. ಸಕಾರಾತ್ಮಕ, ಆತ್ಮವಿಶ್ವಾಸ ತುಂಬುವಂತಹಾ ಮಾತುಗಳನ್ನೇ ಆಡಿ. ಮನಸಾರೆ ಹರಟೆ ಹೊಡೆಯಿರಿ. ಗಂಡ ಮಕ್ಕಳ ಆಸಕ್ತಿಗಳನ್ನು ಪ್ರೋತ್ಸಾಹಿಸಿ.. ಆಗ ನೋಡಿ, ಮನೆಯ ವಾತಾವರಣವೇ ಬದಲಾಗುತ್ತದೆ.
10. ಹೆಲ್ಪಿಂಗ್ ಹಾಂಡ್
ಈ ಸಂದರ್ಭ ನಮಗೂ ಸಮಾಜ ಸೇವೆಗೆ ಅವಕಾಶ ಸಿಕ್ಕಿದ್ದಿದ್ರೆ ಎಂದು ಹಲವರು ಯೋಚಿಸುವುದುಂಟು.. ಚಿಂತೆ ಬೇಡ. ನಮ್ಮ ಕೈಲಾದ ಸಹಾಯ ಮಾಡುವುದೂ ಸಮಾಜ ಸೇವೆಯೇ. ನಿಮ್ಮ ನೆರೆ ಹೊರೆ ಅಥವಾ ನೀವಿರುವ ಪ್ರದೇಶದಲ್ಲಿ ಯಾರಿಗಾದರೂ ಸಹಾಯದ ಅವಶ್ಯತೆ ಇದ್ದರೆ ತಕ್ಷಣ ನೆರವಿಗೆ ಧಾವಿಸಿ.. ಸೇವಾ ವರ್ಗದ ನೌಕರರಿಗೆ ಅಗತ್ಯ ಬಿದ್ದಾಗ ಸಾಧ್ಯವಾದ್ರೆ ಸಹಾಯ ಮಾಡಿ.
11. ಬ್ಯೂಟಿ ಸ್ಲೀಪ್
ಒತ್ತಡದ ಕೆಲಸ, ಜವಾಬ್ದಾರಿ ಅದೆಷ್ಟೋ ಬಾರಿ ನೆಮ್ಮದಿಯ ನಿದ್ರೆಯನ್ನು ಕಸಿದುಕೊಂಡು ಬಿಡುತ್ತದೆ. ರಾತ್ರಿ ಪಾಳಿಗಳಲ್ಲಿ ದುಡಿಯುವರ ಪಾಡಂತೂ ಬಲು ಕಷ್ಟ. ಆದ್ರೆ ಈಗ ಸುಖನಿದ್ರೆಗೆ ಯಾವ ತೊಡಕೂ ಇಲ್ಲ.. ಚಿಂತಾರಹಿತರಾಗಿ ಬ್ಯೂಟಿ ಸ್ಲೀಪ್ ನ ಆನಂದವನ್ನು ಪಡೆಯಿರಿ.
ಮೇಲೆ ಹೇಳಿರುವ ವಿಚಾರಗಳನ್ನು ಗೃಹಿಣಿಯರು ಮಾತ್ರವಲ್ಲದೆ ಎಲ್ಲರೂ ಪಾಲಿಸಬಹುದು.. ಮನೆಯ ಸ್ವಾಸ್ಥ್ಯ ಕಾಪಾಡುವಲ್ಲಿ ನೀವು(ಮಹಿಳೆಯರು) ಸೇನಾನಿಗಳು… ನಿಮ್ಮ ಯೋಜನೆ, ಕ್ರಿಯೆಗಳ ಮೇಲೆ ಮನೆಯ ಸಂತೋಷ ನೆಲೆಸಿದೆ. ಈ ದಿನಗಳನ್ನು ಆದಷ್ಟು ಸಂತೋಷದಾಯಕವಾಗಿ ಮಾಡುವುದು ಈ ಸಮಯದ ತುರ್ತು…
Get in Touch With Us info@kalpa.news Whatsapp: 9481252093
Discussion about this post