ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯ ಸಚಿವ ಸಂಪುಟ ಸದಸ್ಯರಲ್ಲಿ ಯಾವುದೇ ಗೊಂದಲ ಇಲ್ಲ. ಸಮನ್ವಯದ ಕೊರತೆಯೂ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ವಿರೋಧ ಪಕ್ಷದವರು ಸುಮ್ಮನೆ ವಿರೋಧ ಮಾಡಬೇಕು ಎಂದು ಮಾಡುತ್ತಿದ್ದಾರೆ. ಇಲ್ಲಿ ಯಾರಲ್ಲೂ ಸಮನ್ವಯತೆ ಕೊರತೆ ಕಾಡುತ್ತಿಲ್ಲ. ಎಲ್ಲ ಸಚಿವರೂ ಜಿಲ್ಲಾ ಪ್ರವಾಸ ಕೈಗೊಂಡು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಸರ್ಕಾರ ಜನರ ಪ್ರಾಣ ರಕ್ಷಣೆಗೆ ಏನೆಲ್ಲ ಮಾಡಬೇಕು ಎಂಬ ಬಗ್ಗೆ ಕಾನೂನುಬದ್ಧವಾಗಿ ಮಾಡುತ್ತಿದೆ. ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಇದಕ್ಕೆ 550 ಕೋಟಿ ರೂಪಾಯಿ ಮಾತ್ರ ಖರ್ಚಾಗಿದೆ. ಸುಮ್ಮನೆ 1200 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳುತ್ತಾರೆ. ವಿಧಾನಸೌಧಕ್ಕೆ ಬರಲಿ, ಪರಿಶೀಲನೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ರಾಜ್ಯಾದ್ಯಂತ ಲಾಕ್ ಡೌನ್ ಮಾಡುವ ಇಂಗಿತ ರಾಜ್ಯ ಸರ್ಕಾರಕ್ಕಿಲ್ಲ. ಹಾಗಂತ ಪರಿಸ್ಥಿತಿಯ ತೀವ್ರತೆಯನ್ನು ನೋಡಿಕೊಂಡು ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ಲಾಕ್ ಡೌನ್ ವಿಷಯದಲ್ಲಿ ಸಂಪೂರ್ಣ ಅಧಿಕಾರವನ್ನು ಈಗಾಗಲೇ ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ದೇವೇಗೌಡರ ಹೇಳಿಕೆ ಬಗ್ಗೆ ಸಚಿವರಾದ ಸೋಮಶೇಖರ್ ಪ್ರತಿಕ್ರಿಯೆ ನೀಡಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093







Discussion about this post