ದಿನ ಬೆಳಗಾದರೆ ಕರ್ನಾಟಕ ರಾಜ್ಯದಾದ್ಯಂತ ದಿನಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಒಂದೇ ಸುದ್ದಿ. ಪಶ್ಚಿಮ ಘಟ್ಟ ಶ್ರೇಣಿ, ಸಹ್ಯಾದ್ರಿ ಶ್ರೇಣಿಯ ಕಾಡಿನಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ಮಂಗನ ಕಾಯಿಲೆ ಬಿಸಿ ಹಾಗೂ ಹಲವಾರು ಜನರ ಸಾವು, ಅನೇಕರು ಅಸ್ಪತ್ರೆಗೆ ದಾಖಲು, ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭ.
ಸಾಗರ ತಾಲೂಕಿನಿಂದ ಆರಂಭವಾದ ಮಂಗನಕಾಯಿಲೆ ವ್ಯಾಧಿ, ಸೊರಬ, ತೀರ್ಥಹಳ್ಳಿ, ಭದ್ರಾವತಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ದೂರದ ಊರಾದ ಕೋಲಾರಗಳಲ್ಲಿ ಪ್ರತಿನಿತ್ಯ ಮಂಗಗಳ ಶವಗಳು ಪತ್ತೆಯಾಗುತ್ತಿವೆ. ವ್ಯಾಧಿಯ ಪ್ರಮಾಣ ದಿನೇ ದಿನೇ ಏರುಮುಖವಾಗುತ್ತಿದೆ. ಸಾವಿನ ಸುದ್ದಿಯೂ ದಿನನಿತ್ಯದ ಸುದ್ದಿಯಾಗಿದೆ. ಮಂಗನ ಕಾಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ನಿಷ್ಕಿçಯವಾಗಿದೆ.
ಈ ಕಾಯಿಲೆ ಕಾಣಿಸಿಕೊಂಡ ಎಲ್ಲ ಗ್ರಾಮಗಳು ಕಾಡಿನ ಅಂಚಿನಲ್ಲಿಯೇ ಇವೆ. ಅವರಿಗೆ ಹಲವು ಸವಾಲುಗಳು, ರೈತ ಮತ್ತು ವನ್ಯಪ್ರಾಣಿಗಳ ಸಂಘರ್ಷಗಳು, ಮೂಲಭೂತ ಸೌಕರ್ಯದಿಂದ ವಂಚಿತರಾದವರು ಇಲ್ಲಿ ಬದುಕನ್ನು ಸವೆಸುತ್ತಿದ್ದಾರೆ. ಸರ್ಕಾರ ಬಗರ್‌ಹುಕುಂ ಸಾಗುವಳಿ ಕಾನೂನು, ಅಕ್ರಮ ಸಕ್ರಮ, 94-ಸಿ, ಕೆರೆ ಕುಂಟೆಗಳ ಅತಿಕ್ರಮಣ, ಭೂ ಕಬಳಿಕೆ, ಒತ್ತುವರಿಗಾಗಿ ಕಾಡಿಗೆ, ಹುಲ್ಲಿನ ಗುಡ್ಡಗಳಿಗೆ ಬೆಂಕಿ ಹಚ್ಚುವ ಮೂಲಕ ಕಾಡು – ಹುಲ್ಲುಗಾವಲುಗಳು ನಾಶಹೊಂದಿ ಆ ಜಾಗದಲ್ಲಿ ಲಂಟಾನ, ಕಾಂಗ್ರೆಸ್ ಕಳೆಗಳೇ ಮೊದಲಾದ ಉಣುಗಿಗೆ ಅನುಕೂಲವಾದ ಪೊದೆಗಳು ಬೆಳೆದು ನಿಲ್ಲುವಂತಾಗಿದೆ. ಪೊದೆಗಳ ನಡುವೆ ಬೆಳೆದ ಉಣುಗುಗಳು ಜನ ಜಾನುವಾರುಗಳ ಸಂಪರ್ಕಕ್ಕೆ ಬಂದು ನಾಡಿಗೆ ಲಗ್ಗೆ ಇಟ್ಟಿವೆ.
ತಲತಲಾಂತರದಿಂದ ನ್ಯಾಯಯುತವಾಗಿ ರೈತ ಕುಟುಂಬಗಳು ಬಗರ್‌ಹುಕುಂ ಮಾಡಿ ಸಾಗುವಳಿ ಮಾಡುತ್ತಿರುವವರಿಗೆ ಇಂದಿಗೂ ಹಕ್ಕುಪತ್ರಗಳು ದೊರೆಯದೇ ಅತಂತ್ರವಾಗಿವೆ. ರಾಜಕಾರಣಿಗಳು ಓಟಿನ ದುರಾಸೆಗಾಗಿ ಹಾಗೂ ಹಣ ಸಂಪಾದನೆಗಾಗಿ ಬೇಕಾಬಿಟ್ಟಿ ಅತಿಕ್ರಮಣದ ಮೂಲಕ, ಕಾಡಿಗೆ ಬೆಂಕಿ ಹಚ್ಚಿಸಿ ಕಾಡು ಮುಕ್ತವನ್ನಾಗಿಸಿ ಸದರಿ ಜಾಗಗಳನ್ನು ತಾವು ಮತ್ತು ತಮ್ಮವರಿಗೆ ಮಂಜೂರು ಮಾಡಿಸಿಕೊಡುತ್ತಿದ್ದಾರೆ.
ಮಾಜಿ ಕಂದಾಯ ಮಂತ್ರಿಗಳು ಸೇರಿದಂತೆ ಅನೇಕ ರಾಜಕಾರಣಿಗಳು ನೀಡಿ ನೀರು, ಮರಳು, ಸರ್ಕಾರದ ಜಾಗಗಳು, ಮನುಷ್ಯರಿಗೇ ಹೊರತು ಪ್ರಾಣಿಗಳಿಗಲ್ಲ ಎಂದು ಹೇಳಿ ಇದಕ್ಕೆ ಮನಸೋಇಚ್ಛೆ ಕುಮ್ಮಕ್ಕು ನೀಡುತ್ತಿರುವುದು ವಿಷಾದನೀಯ. ಇದಕ್ಕೆ ಭ್ರಷ್ಟ ಅಧಿಕಾರಿಗಳೂ ಕಾನೂನು ಸಮ್ಮತವಲ್ಲದಿದ್ದರೂ ಹಕ್ಕುಪತ್ರ ದೊರೆಯುವಂತೆ ಮಾಡಲು ಸಹಕರಿಸುತ್ತಿದ್ದಾರೆ. ಹೀಗೆ ನಾಶವಾದ ಕಾಡಿನ ಮಂಗಗಳೂ ಸೇರಿದಂತೆ ಇತರೆ ವನ್ಯ ಮೃಗಗಳು ನಾಡಿಗೆ ಬರುತ್ತಿರುವುದು, ಇಲ್ಲೂ ಆಹಾರ ನೀರು ದೊರೆಯದೇ ಸನಿಹದಲ್ಲಿಯೇ ಸಾಯುತ್ತಿರುವುದು ಮಂಗನ ಕಾಲೆ ಹರಡಲು ಕಾರಣವಾಗಿದೆ.
ಈಗಲಾದರೂ ಜನರು ಇಂತಹ ದುರಾಸೆಯನ್ನು ಬಿಟ್ಟು ತಮ್ಮ ಕೈಯಲ್ಲೇ ಇರುವ ಕಾಡು, ನದಿ, ಗುಡ್ಡ, ಬೆಟ್ಟಗಳ ಸಂರಕ್ಷಣೆಯ ಮೂಲಕ ಪ್ರಾಣಿ ಸಂಕುಲಕ್ಕೆ ಅವುಗಳನ್ನು ಬಿಟ್ಟುಕೊಟ್ಟಲ್ಲಿ ಮಾತ್ರ ಈ ದುರಂತಕ್ಕೊಂದು ಅಂತ್ಯ ಕಾಣಬಹುದೇನೋ. ಇಲ್ಲವಾದಲ್ಲಿ ಕೇರಳ – ಕೊಡಗಿನಲ್ಲಿ ಹೇಳಿದಂತೆ ಪ್ರಕೃತಿಯೇ ನಮಗೆ ಮುಟ್ಟಿ ನೋಡಿಕೊಳ್ಳುವಂತೆ ಪಾಠ ಹೇಳುತ್ತದೆ.
ಇನ್ನಾದರೂ ಯೋಚಿಸಿ, ಇದು ನಮಗೆ ಎಚ್ಚರಿಕೆಯ ಗಂಟೆ. ರಾಜಕಾರಣ, ಹಣದ ಆಮಿಷ, ಅತಿ ಆಸೆಗಳನ್ನು ಬದಿಗಿಟ್ಟು ನಮ್ಮ ಬದುಕನ್ನು ಹಸನು ಮಾಡಿಕೊಳ್ಳುವುದು ಬಿಡುವುದು ನಮ್ಮ ಕೈಯಲ್ಲಿದೆ. ಇಂತಹ ಕಾಲೆಗಳ ಬಿಸಿ ನಗರ ಪ್ರದೇಶಗಳಲ್ಲಿಯೇ ಕಾಲ ಕಳೆಯುತ್ತಿರುವ ರಾಜಕಾರಣಿಗಳು, ಅಧಿಕಾರಿಗಳಿಗೆ ತಗುಲಿದರೆ ಇದಕ್ಕೊಂದು ಪಶ್ಚಿಮಘಟ್ಟವೂ ಉಳಿದೀತು.
ಲೇಖನ: ಕೆ. ವೆಂಕಟೇಶ್, ಕವಲಕೋಡು
Discussion about this post