ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಲೋಕ ಕಂಡ ಶ್ರೇಷ್ಠ ಸಂತ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಶಿವನಲ್ಲಿ ಲೀನವಾಗಿದ್ದಾರೆ. ಆದರೆ, ಅವರ ಜೀವನ, ಹಾಕಿಕೊಟ್ಟ ಹಾದಿ ಇಡಿಯ ವಿಶ್ವಕ್ಕೇ ದಾರಿದೀಪವಾಗಿದೆ. ಇಂತಹ ಅವರ ಹಾದಿಯ ಮಹತ್ವದ ಉಪದೇಶ ಅನ್ನದಾನ ಹಾಗೂ ಅನ್ನದ ಮಹತ್ವ.
ತಮ್ಮ ಮಠದ ಮಕ್ಕಳಿಗೆ ವಿದ್ಯಾದಾನ ಮಾಡುವುದು ಮಾತ್ರವಲ್ಲ ಸ್ವತಃ ಬಹು ಹಿಂದೆ ತಾವೇ ಜೋಳಿಗೆ ಹಿಡಿದು ಮನೆ ಮನೆಗೆ ತೆರಳಿ ಭಿಕ್ಷಾ ಸಂಪಾದಿಸಿ, ಮಠದ ಮಕ್ಕಳಿಗೆ ವಿದ್ಯೆಯೊಂದಿಗೆ ಹೊಟ್ಟೆಯನ್ನೂ ಸಹ ತುಂಬಿಸುತ್ತಿದ್ದರು ಶ್ರೀಗಳು. ಅಂದು ಮಠದಲ್ಲಿ ಅವರ ಪ್ರಜ್ವಲಿಸಿದ ಅಡುಗೆ ಒಲೆ ಇಂದಿಗೂ ಸಹ ಉರಿಯುತ್ತಾ ಲಕ್ಷಾಂತರ ಮಂದಿಯ ಉದರಾಗ್ನಿಯನ್ನು ಶಾಂತಗೊಳಿಸುತ್ತಿದೆ.
ಪ್ರತಿದಿನ 10 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ ಮಾಡುತ್ತಾ, ಇದುವರೆಗೂ ಕೋಟ್ಯಂತರ ಭಕ್ತರ ಹಸಿವನ್ನು ನೀಗಿಸಿರುವ ಶ್ರೀಗಳ ಕಾರ್ಯ ಇಡಿಯ ಮನುಕುಲಕ್ಕೇ ಒಂದು ಮಾದರಿ.
ಶಿವಕುಮಾರ ಸ್ವಾಮಿಗಳ ಆಶ್ರಯದಲ್ಲಿ ಕಲಿತ ಪ್ರತಿ ವಿದ್ಯಾರ್ಥಿಗೂ ಜೀವನದ ಪಾಠದ ಜೊತೆಯಲ್ಲಿ ಅನ್ನದಾನ ಮಹತ್ವವನ್ನು ಅವರು ಕಲಿಸಿದ್ದಾರೆ. ಪ್ರತಿ ಅನ್ನದ ಅಗುಳಿನ ಮಹತ್ವವನ್ನು ಮಕ್ಕಳಿಗೆ ಹೇಳಿಕೊಟ್ಟಿರುವ ಶ್ರೀಗಳು ಹಲವು ಪೀಳಿಗೆಗೆ ಇದನ್ನು ಧಾರೆ ಎರೆದಿದ್ದಾರೆ.
ಶ್ರೀಗಳ ಇಂತಹ ಸೇವೆಯ ಪ್ರತಿಬಿಂಬವಾಗಿ ನಿನ್ನೆ ಶ್ರೀಮಠದಲ್ಲಿ ಕಂಡಿದೆ.
ಶ್ರೀಗಳ ಅಂತಿಮ ಕ್ರಿಯಾ ವಿಧಾನದ ವೇಳೆ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಲಕ್ಷಾಂತರ ಭಕ್ತರಿಗೆ ಶ್ರೀಗಳ ಆಸೆಯಂತೆ ಅನ್ನದಾನ ಮಾಡಲಾಯಿತು. ಈ ವೇಳೆ, ಪ್ರಸಾದ ರೂಪದಲ್ಲಿ ವಿತರಿಸಿದ ಅನ್ನವನ್ನು ಹಲವು ಮಂದಿ ಅರ್ಧಕ್ಕೆ ಚೆಲ್ಲಿತ್ತಿದ್ದರು. ಇದನ್ನು ಕಂಡ ಮಠದ ಓರ್ವ ಬಾಲಕ, ಕಸದ ಬುಟ್ಟಿಯ ಬಳಿ ನಿಂತು ಯಾರು ಅನ್ನವನ್ನು ಅರ್ಧಕ್ಕೇ ಚೆಲ್ಲುತ್ತಿದ್ದಾರೆ ಅವರಿಗೆ ಅನ್ನವನ್ನು ಚೆಲ್ಲಬೇಡಿ ಎಂದು ಹೇಳುತ್ತಿದ್ದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯವಯಸ್ಕ ವ್ಯಕ್ತಿಯೊಬ್ಬ ಅನ್ನ ಹಾಗೂ ಸಾಂಬಾರನ್ನು ಅರ್ಧಕ್ಕೆ ಚೆಲ್ಲುತ್ತಾರೆ. ಆದರೆ, ಆ ತಟ್ಟೆಯನ್ನು ಅವರಿಗೇ ವಾಪಾಸ್ ನೀಡುವ ಬಾಲಕ ಅನ್ನವನ್ನು ಚೆಲ್ಲಬೇಡಿ. ಪ್ರಸಾದ ಚೆಲ್ಲಿದರೆ ಮುಂದಿನ ಜನ್ಮದಲ್ಲಿ ಅನ್ನ ಸಿಗುವುದಿಲ್ಲ ಎಂದು ಹೇಳಿ, ಆ ವ್ಯಕ್ತಿ ಪೂರ್ತಿ ಊಟ ಮಾಡುವವರೆಗೂ ಆತ ಬಿಡುವುದಿಲ್ಲ.
ಅನ್ನವೆಂದರೆ ಪ್ರಸಾದ, ಪ್ರಸಾದ ಚೆಲ್ಲಿದರೆ ಮುಂದಿನ ಜನ್ಮದಲ್ಲಿ ಅನ್ನ ದೊರೆಯುವುದಿಲ್ಲ ಎಂಬಂತಹ ಅದ್ಬುತ ವಿಚಾರವನ್ನು ಈ ಬಾಲಕ ದೊಡ್ಡವರಿಗೆ ಹೇಳಿಕೊಡುತ್ತಾನೆ ಎಂದರೆ ಶ್ರೀಗಳು ಮಠದಲ್ಲಿನ ಮಕ್ಕಳಿಗೆ ಇನ್ನೆಂತಹ ಶ್ರೇಷ್ಠ ಸಂಸ್ಕಾರವನ್ನು ಕಲಿಸಿದ್ದಾರೆ ಎನ್ನುವುದು ತಿಳಿಯುತ್ತದೆ.
ಪ್ರಪಂಚದಲ್ಲಿ ಕೋಟ್ಯಂತರ ಮಂದಿ ತಿನ್ನಲು ಅನ್ನವಿಲ್ಲದೇ ಹಸಿವನಿಂದ ಮಲಗುತ್ತಾರೆ. ಲಕ್ಷಾಂತರ ಮಂದಿ ಹಸಿವಿನಿಂದ ಸಾಯುತ್ತಾರೆ. ಇಂತಹ ಸಂದರ್ಭದಲ್ಲಿ ತಿನ್ನುವ ಪ್ರತಿಯೊಂದು ವಸ್ತುವೂ ಪರಮಾತ್ಮನ ಸ್ವರೂಪ. ಯಾವುದೇ ಕಾರಣಕ್ಕೂ ಅನ್ನವನ್ನು, ತಿನ್ನುವ ಪದಾರ್ಥವನ್ನು ವ್ಯರ್ಥ ಮಾಡಬಾರದು ಎಂಬ ಸಂದೇಶವನ್ನು ಈ ಮಕ್ಕಳ ಮನದಲ್ಲಿ ಅಚ್ಚೊತ್ತುವ ಮೂಲಕ ವಿಶ್ವಕ್ಕೇ ಸಂದೇಶ ಸಾರಿರುವ ಶ್ರೀ ಶಿವಕುಮಾರ ಸ್ವಾಮಿಗಳು ಎಂದಿಗೂ ಭಕ್ತರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
Discussion about this post