ಉಪ್ಪಿನಂಗಡಿ: ಸಾಮಾನ್ಯವಾಗಿ ಐಎಎಸ್, ಐಪಿಎಸ್’ನಂತಹ ಹುದ್ದೆಯಲ್ಲಿರುವ ಅಧಿಕಾರಿಗಳು ತಮ್ಮ ದೈನಂದಿನ ಕರ್ತವ್ಯ ಹಾಗೂ ವೈಯಕ್ತಿಕ ಜೀವನದ ಕುರಿತಾಗಿ ಮಾತ್ರ ಚಿಂತಿಸುತ್ತಾರೆ. ಜನರಿಗೆ ಅಷ್ಟು ಸುಲಭವಾಗಿ ಸಿಗುವುದಿಲ್ಲ ಹಾಗೂ ಸಮಾಜದ ಕುರಿತಾಗಿ ಕಾಳಜಿಯಿರುವುದಿಲ್ಲ ಎಂದು ಹಲವರು ಆರೋಪಿಸುತ್ತಾರೆ. ಆದರೆ, ಇವೆಲ್ಲಕ್ಕೂ ವಿರುದ್ಧವಾಗಿ ಇಲ್ಲೊಬ್ಬ ಐಪಿಎಸ್ ಅಧಿಕಾರಿ ವಿದ್ಯಾರ್ಥಿಗಳ ಭವಿಷ್ಯದ ಕುರಿತಾಗಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಹೌದು… ಉಪ್ಪಿನಂಗಡಿ ಠಾಣೆಯ ಐಪಿಎಸ್ ಅಧಿಕಾರಿ ಪ್ರದೀಪ್ ಗುಂಟಿ ಇಂತಹ ಪ್ರಶಂಸನೀಯ ಕಾರ್ಯ ಮಾಡುತ್ತಿರುವ ವ್ಯಕ್ತಿ. ವಿಶೇಷ ಎಂದರೆ ಇವರ ಈ ಕಾರ್ಯಕ್ಕೆ ಅವರ ಧರ್ಮಪತ್ನಿಯೂ ಸಹ ಕೈಜೋಡಿಸಿದ್ದಾರೆ. ಇಷ್ಟಕ್ಕೂ ಈ ಅಧಿಕಾರಿ ಮಾಡಿದ್ದೇನು? ಮುಂದೆ ಓದಿ.
ಇತ್ತೀಚೆಗೆ ಎಸ್’ಎಸ್’ಎಲ್’ಸಿ ಮುಗಿಸಿ ಪದವಿ ಪೂರ್ವ ಕಾಲೇಜುಗಳಿಗೆ ತೆರಳುವ ಉತ್ಸಾಹದಲ್ಲಿದ್ದಾರೆ ಇಲ್ಲಿನ ಮಕ್ಕಳು. ಇಂತಹ ಸಂದರ್ಭದಲ್ಲಿ ಇವರಿಗೆಲ್ಲಾ ಸರಿಯಾದ ಮಾರ್ಗದರ್ಶನ ಅಗತ್ಯ ಎಂಬ ಕಾರಣದಿಂದ ಪ್ರದೀಪ್ ಗುಂಟಿ ಮಾಹಿತಿ ನೀಡುವ ಕಾರ್ಯಕ್ಕೆ ಮುಂದಾದರು. ಇದಕ್ಕಾಗಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮ ಧರ್ಮಪತ್ನಿ ಶೈನಿ ಪ್ರದೀಪ್ ಅವರನ್ನೂ ಕರೆತಂದರು.
ಇಲ್ಲಿನ ಸರ್ಕಾರಿ ಶಾಲೆಗೆ ಆಗಮಿಸಿ ವಿದ್ಯಾರ್ಥಿನಿಯರಿಗೆ ವಿಶೇಷ ಉಪನ್ಯಾಸ ಮಾಡಿದ ಶೈನಿ ಅವರು, ಸ್ವರಕ್ಷಣೆ, ಲೈಂಗಿಕ ಕಿರುಕುಳದಿಂದ ಪಾರಾಗುವ ವಿಚಾರ, ಹಾಗೂ ಮೊಬೈಲ್ ಪೋನ್, ಸಾಮಾಜಿಕ ಜಾಲತಾಣ, ಫೇಸ್ ಬುಕ್, ವಾಟ್ಸಪ್, ಮುಂತಾದವುಗಳನ್ನು ಯಾವ ರೀತಿಯಲ್ಲಿ ಜಾಗ್ರತೆ ಯಿಂದ ಬಳಸಬೇಕು. ಅವುಗಳ ದುಷ್ಪರಿಣಾಮ ಯಾವ ಯಾವ ರೀತಿಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಆಗುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಎಸ್’ಎಸ್’ಎಲ್’ಸಿ ಯ ನಂತರ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯಲು ರಜೆಯಲ್ಲಿ ಯಾವ ರೀತಿಯ ತಯಾರಿ ನಡೆಸಬೇಕೆಂದು ಸಲಹೆಯನ್ನೂ ನೀಡಿದರು.
ಓರ್ವ ಐಪಿಎಸ್ ಅಧಿಕಾರಿ ತಮ್ಮ ಪತ್ನಿಯನ್ನು ಕರೆದುಕೊಂಡು ಬಂದು ವಿದ್ಯಾರ್ಥಿನಿಗಳಿಗೆ ಮುಂದಿನ ಭವಿಷ್ಯದ ಯಾವ ರೀತಿಯಲ್ಲಿ ರೂಪುಗೊಳಿಸಬೇಕೆಂಬ ಅತ್ಯುತ್ತಮ ಕಾರ್ಯಕ್ರಮ ನಡೆಸಿರುವುದಕ್ಕೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಐಪಿಎಸ್ ಅಧಿಕಾರಿ ಪ್ರದೀಪ್ ಗುಂಟಿ ಹಾಗೂ ಪತ್ನಿ ಶೈನಿ ಪ್ರದೀಪ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕೃಪೆ: DIVU
Discussion about this post