ಆಗುಂಬೆ ಎಂದಾಕ್ಷಣ ನಮಗೆ ಜಿಟಿಜಿಟಿ ಮಳೆ. ಸುಂದರ ಸೂರ್ಯಾಸ್ತ, ಹಾವಿನ ಮೈನಂತೆ ಬಳುಕಿ ಬಳುಕಿ ಸಾಗಿರುವ ಘಾಟಿ ರಸ್ತೆ. ಸುತ್ತಲ ಹಸಿರ ವನರಾಜಿ.. ಕುಳಿರ್ಗಾಳಿ… ಹೀಗೆ ನಿಸರ್ಗವೇ ನಮ್ಮ ಮೈಮನ ಹೊಕ್ಕಂತಾಗುತ್ತದೆ.
ಆಗುಂಬೆ ಕರ್ನಾಟಕದ ಚಿರಾಪುಂಜಿ. ಅಲ್ಲಿನ ವನಸಿರಿಯಲ್ಲಿ ಭೋರ್ಗರೆವ ಜಲಧಾರೆಗಳಂತೂ ಮಳೆಗಾಲದಲ್ಲಿ ಮನಮೋಹಕ.

ಈಗ ಆಗುಂಬೆಯ ಪರಿಸರ, ಕೇವಲ ಸೂರ್ಯಾಸ್ತ ಒಂದೇ ಅಲ್ಲ ಇನ್ನಷ್ಟೂ ನಿಸರ್ಗ ಪ್ರಿಯರನ್ನು ಸೆಳೆಯುವ ಮುಖ್ಯ ಪ್ರವಾಸೀತಾಣವಾಗಿ ತನ್ನ ಚಹರೆ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿದೆ. ಆರೋಗ್ಯ ರಕ್ಷಣೆಯಲ್ಲಿ ಗಿಡಮೂಲಿಕೆಗಳ ಪ್ರಾಮುಖ್ಯತೆ ಬಗ್ಗೆ ಈಗೀಗ ಎಲ್ಲಿಲ್ಗದ ಜನಜಾಗೃತಿ ಮೂಡುತ್ತಿದೆ. ಇದಕ್ಕೆ ಪೂರಕವಾಗಿ ಆಗುಂಬೆಯ ಪಂಚಾಯತ್ ದಾಪುಗಾಲಿಕ್ಕಿದೆ.
ಪಂಚಾಯತ್ ಅಧ್ಯಕ್ಷ ಶ್ರೀನಂದನ್ ಹಸಿರುಮನೆ ಈ ಚಟುವಟಿಕೆಯ ಸೂತ್ರಧಾರರು. ಸುಮಾರು 2017 ರಿಂದ ಅವರ ಗಿಡಮೂಲಿಕಾ ವನ ಅಭಿವೃದ್ಧಿ ಕೆಲಸ ಶುರುವಾಗಿದೆ.

ನಾಲ್ಕು ಲಕ್ಷ ರೂ.ನಿಂದ ಆರಂಭಿಸಿ, ಪಂಚಾಯತ್ ವ್ಯಾಪ್ತಿಯ ನಾಲ್ಕು ಎಕರೆ ಪ್ರದೇಶದಲ್ಲಿ ವಿವಿಧ ಔಷಧೀಯ ಸಸ್ಯಗಳ ಸಮೂಹವನ್ನೇ ಬೆಳೆಸುವ ಸಾಹಸ ಮಾಡಿದ್ದಾರೆ. ಇದೆಲ್ಲವೂ ತಮ್ಮೊಬ್ಬರ ಪ್ರಯತ್ನವಲ್ಲ ಇಡೀ ಆಗುಂಬೆ ಪಂಚಾಯತ್’ನ ಎಲ್ಲ ಸದಸ್ಯರೂ, ಗ್ರಾಮಸ್ಥರೂ ಈ ವನಸಿರಿ ಬೆಳೆಸುವಲ್ಲಿ ಅವಿರತ ಶ್ರಮ ವಿನಿಯೋಗಿಸಿದ್ದಾರೆಂದು ನಂದನ್ ಅಭಿಮಾನ ವ್ಯಕ್ತಪಡಿಸುತ್ತಾರೆ. ನಂದನ್ ಅವರ ಉತ್ಸಾಹ ಕಂಡು ಜನ ಅವರನ್ನು ಮೂರನೆಯ ಬಾರಿಗೆ ಮತ್ತೆ ಪಂಚಾಯತ್ ಅಧ್ಯಕ್ಷರನ್ನಾಗಿ ಸತತ ಚುನಾಯಿಸಿದ್ದಾರೆ.

ವನೌಷಧೀಯ ಸಸ್ಯ ಬೆಳೆಸುವಲ್ಲಿ ಪಾರಂಪರಿಕವಾದ ನಕ್ಷತ್ರವನ, ರಾಶಿವನಗಳನ್ನು ವಿಫುಲವಾಗಿ ಪೋಷಿಸಿ ಬೆಳೆಸಿರುವ ಆಗುಂಬೆಯ ಮಂದಿಗೆ ನಿಸರ್ಗಪ್ರಿಯರು ಧನ್ಯವಾದ ಅರ್ಪಿಸಲೇಬೇಕು.

ಶ್ರೀನಂದನ್ ಅವರದ್ದು ದೂರದೃಷ್ಟಿ. ಪ್ರಸ್ತುತ ಈ ಸ್ಥಳವು ಆಗುಂಬೆ ಘಾಟಿಗಿಂತ ಎಂಟು ಕಿಮೀ ಮುಂಚೆಯೇ ನಮಗೆ ಕಾಣ ಸಿಗುತ್ತದೆ. ಅಲ್ಲಿ ರಸ್ತೆಯ ಪಕ್ಕದಲ್ಲೇ ಕಿರು ಮಾರಾಟ ಮಳಿಗೆಗೆ ಅಡಿಪಾಯವನ್ನೂ ಹಾಕಿಸಿದ್ದಾರೆ.
ಅಲ್ಲಿ ಈ ವನ ಬಲಗೊಂಡ ನಂತರ ರಸ್ತೆಯಲ್ಲಿ ಹಾದುಹೋಗುವವರಿಗೆ ಔಷಧೀಯ ಸಸ್ಯಗಳ ರಸಪಾನೀಯ, ಗಿಡಮೂಲಿಕೆಗಳ ಮಳಿಗೆ, ತಾಜಾ ತರಕಾರಿ ಮಾರಾಟ, ಪೂಜಾರ್ಹ ಸಮಿತ್ತುಗಳು, ದೊರೆಯುವಂತೆ ಮಾಡುವುದು ಹೀಗೆ ಅವರ ಯೋಜನೆ ಅನನ್ಯವಾಗಿದೆ.
ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಮೂಲಕ ಅವರಿಗೆ ಮಾಹಿತಿ ನೆರವು ನೀಡುವ ಪ್ರಯತ್ನವಾಗಿ ವೇದಿಕೆಯ ವತಿಯಿಂದ ಅಲ್ಲಿಗೆ ಭೇಟಿ ನೀಡಲಾಯಿತು.

ವೇದಿಕೆ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಕಾರ್ಯದರ್ಶಿ ಕೆ.ಎನ್. ಗೋಪಿನಾಥ್ ಮತ್ತು ನಿರ್ದೇಶಕರಾದ ಡಾ.ಸುಧೀಂದ್ರ, ಕೆ.ಜಿ. ಮಂಜುನಾಥ ಶರ್ಮಾ ಅವರನ್ನೊಳಗೊಂಡ ತಂಡಕ್ಕೆ ಪರಿಸರಪ್ರಿಯ ನಂದನ್ ಹರ್ಷೋಲ್ಲಾಸದಿಂದ ಬರಮಾಡಿಕೊಂಡರು. ಗಿಡಮೂಲಿಕಾ ವನದಲ್ಲಿ ಒಂದು ಸುತ್ತು ಹೋಗಿ ಬಂದೆವು.
ಆಗುಂಬೆಯನ್ನು ಕೇಂದ್ರವಾಗಿರಿಸಿ ಸೋಮೇಶ್ವರ, ಕುಂದಾದ್ರಿ, ಕೊಡಚಾದ್ರಿ, ನಗರ, ತೀರ್ಥಹಳ್ಳಿ ಕವಲೆದುರ್ಗ ಕೋಟೆ, ಸಾಗರ, ಕೆಳದಿ ಮುಂತಾಗಿ ಒಂದು ಪ್ರವಾಸೀ ವೃತ್ತ. ಹಾಗೆಯೇ ಸಾಹಸಪ್ರಿಯರಿಗೆ ಜಲಸಾಹಸ, ಶಿಲಾರೋಹಣ, ಚಾರಣ ಇತ್ಯಾದಿ ಚಟುವಟಿಕೆಗಳಿಗೆ ಚಾರಣಮಾರ್ಗ ಸೂಚನೆಗಳು. ಅಲ್ಲದೇ ಚಾರಣಿಗರಿಗೆ ಕಾಡಿನ ಆಯ್ದ ಸ್ಥಳಗಳಲ್ಲಿ ತಂಗಲು ಅನುಕೂಲ ಮಾಡಿಕೊಡುವ ಟೆಂಟ್’ಗಳಿಗೆ ಎತ್ತರದ ಕಟ್ಟೆಗಳ ನಿರ್ಮಾಣ, ಪಕ್ಷಿವೀಕ್ಷಣಾ ಗೋಪುರಗಳ ನಿರ್ಮಾಣ ಇವೆಲ್ಲವೂ ಆಗುಂಬೆ ಗ್ರಾಮ ಪಂಚಾಯತ್’ನಿಂದ ಮಾಡುವ ಯೋಜನೆಗಳಾಗಬೇಕಿದೆ. ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನೆರವು ಮತ್ತು ಮಾರ್ಗದರ್ಶನಕ್ಕೆ ಸದ್ಯ ನಂದನ್ ಅವರು ನಿರೀಕ್ಷಿಸುತ್ತಿದ್ದಾರೆ.

ಈ ಎಲ್ಲ ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆ ಮುಂದೆ ಪ್ರಸ್ತುತ ಪಡಿಸುವ ನಿರ್ಧಾರವನ್ನೂ ನಂದನ್ ನಮಗೆ ತಿಳಿಸಿದರು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಸಹಕಾರವನ್ನೂ ಕೋರಿದರು. ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಮತ್ತು ಕಾರ್ಯದರ್ಶಿ ಗೋಪಿನಾಥ್ ಅವರು ತಮ್ಮ ಸಲಹೆ ಸೂಚನೆಗಳನ್ನು ನಂದನ್ ಅವರೊಂದಿಗೆ ಹಂಚಿಕೊಂಡರು.
ಇನ್ನೊಂದು ವಿಶೇಷ:
ಅದು ಚಾರಣಪ್ರಿಯರಿಗೆ ಕೈಬೀಸಿ ಕರೆಯುವ ತಾಣ ನಮಗೆ ಪರಿಚಯಿಸಿದರು. ಅದೇ ಅವರೆಮನೆ. ಇದು ಸಂಪೂರ್ಣ ಹಸಿರೊಳಗೇ ಮುಳುಗಿದೆ. ಎತ್ತರದ ಬೆಟ್ಟದಿಂದಾವೃತ. ಚಾರಣ, ಸಾಹಸಿಗರಿಗೆ ಸವಾಲಾಗಿ ಕರೆಯುತ್ತದೆ.

ಅಲ್ಲಿ ಕಾಳಿಂಗ ಸರ್ಪ ಅಧ್ಯಯನ ಕೇಂದ್ರವಿದೆ. ಉರಗ ಪ್ರಿಯರಿಗೂ ಇದು ಸಂಶೋಧನೆಯ ತಾಣ. ಸ್ವಲ್ಪ..ಇನ್ನು ಕೆಲವೇ ವರ್ಷಗಳು… ನಾವ್ಯಾರಾದರೂ ಆಗುಂಬೆಗೆ ಪ್ರವಾಸ ಹೊರಟರೆ ಅಲ್ಲಿ ಕೇವಲ ಸೂರ್ಯಸ್ತ ಮಾತ್ರವಲ್ಲ… ವನೌಷಧಿ, ಸಸ್ಯ ರಸಪಾನೀಯ, ಗಿಡಮೂಲಿಕಾ ವನದಲ್ಲೊಂದು ಸುತ್ತು, ಸನಿಹದ ಅವರೆಮನೆ ಗುಡ್ಡ, ಕಾಳಿಂಗ ಸರ್ಪ ಅಧ್ಯಯನ ಕೇಂದ್ರ ಹೀಗೆ ಕಣ್ದಣಿಯೆ ನೋಡುವ, ಮನಮುದ ಹೊಂದುವ ತಾಣವಾಗಿ ಈ ಸ್ಥಳ ಭೇಟಿಗೆ ರಮ್ಯವೆನಿಸುತ್ತದೆ.
ಅಲ್ಲಿಗೆ ಭೇಟಿ ನೀಡುವವರು ಅಗತ್ಯವಾಗಿ ನಂದನ್ ಅವರಿಗೆ ಫೋನ್ ಮಾಡಲೇಬೇಕು. (ನಂದನ್ ಅವರ ಫೋನ್ ನಂ.9448238580)
ಲೇಖನ: ಡಾ.ಸುಧೀಂದ್ರ,
ಸಲಹಾ ಸಂಪಾದಕರು,
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ







Discussion about this post