ದೇಶದಲ್ಲಿ ಎಲ್ಲಾ ಜಾತಿಯವರೂ ಉತ್ತಮ ಸ್ಥಿತಿವಂತರಾದಾಗಲೇ ದೇಶಕ್ಕೆ ಬಲಿಷ್ಟತೆ ಬರುತ್ತದೆ. ದೇಶ ಎಂಬುದು ಒಂದು ದೊಡ್ಡ ಫಲ ಬರುವ ವೃಕ್ಷ. ಒಂದು ವೃಕ್ಷವೆನಿಸುವುದು ಅದಕ್ಕೆ ರೆಂಬೆ ಕೊಂಬೆ, ಬೇರು, ಹಸಿರೆಲೆ ಚಿಗುರೆಲೆ, ಹಣ್ಣೆಲೆ, ಫಲ-ಪುಷ್ಪಗಳು ಕೊಂಬೆಯದ್ದಾಗಿ ತರಗೆಲೆ ಇವುಗಳೆಲ್ಲ ಇದ್ದಾಗ ಆ ವೃಕ್ಷವನ್ನು ಆಧರಿಸಿ ನೆರಳಿಗಾಗಿಯೋ, ಹಸಿವು ನೀಗಿಸಿಕೊಳ್ಳುವುದಕ್ಕಾಗಿಯೋ, ಔಷಧಿಯನ್ನು ಪಡೆಯುವುದಕ್ಕಾಗಿಯೋ ಪಶು ಪಕ್ಷಿ, ಹುಳ-ಹುಪ್ಪಟೆ, ದುಂಬಿಗಳು ಎಲ್ಲವೂ ಸೇರಿದಂತೆ ಮನುಷ್ಯನೂ ಕೂಡಾ ಆಶ್ರಯ ಪಡೆಯುತ್ತಾನೆ. ಇಲ್ಲಿ ಜಾತಿ ತಾರತಮ್ಯ ಬೇಧವೇ ಇರುವುದಿಲ್ಲ. ಇದೊಂದು ಒಗ್ಗಟ್ಟಿಗಾಗಿ ಇರುವಂತಹ ವೇದಿಕೆ. ಅದೇ ರೀತಿ ಎಲ್ಲಾ ಜಾತಿಯವರು ಬೇಧ ಭಾವ ಇಲ್ಲದೆ ಸಮಾಜದಲ್ಲಿ ಬೆರೆತರೆ ಅದು ಸಮಾಜದ ಸ್ವಾಸ್ಥ್ಯವನ್ನು ಇನ್ನಷ್ಟು ಬಲಿಷ್ಠ ಮಾಡುತ್ತದೆ.
ಒಕ್ಕಲಿಗ ಸಮುದಾಯಕ್ಕೆ ಭಾರೀ ನಷ್ಟ
ಈ ವಿಚಾರದಲ್ಲಿ ಈಗ ನಾನಿಂದು ಒಕ್ಕಲಿಗರ ವಿಚಾರ ಬರೆಯಲು ಆಸಕ್ತನಾಗಿದ್ದೇನೆ. ಮೊದಲಾಗಿ ಕರ್ನಾಟಕವನ್ನೇ ತೆಗೆದುಕೊಳ್ಳೋಣ. ಇಲ್ಲಿ ಒಕ್ಕಲಿಗರು ಬಲಿಷ್ಠ ಸಮುದಾಯ. ಆದರೆ ಇದರ ನಾಯಕತ್ವದ ಲಾಭ ಪಡೆದು ಒಕ್ಕಲಿಗರಿಗೆ ತಲೆ ತಗ್ಗಿಸುವಂತೆ ಮಾಡಿದವರೂ ಕಾಣುತ್ತಾರೆ. ಅಂದರೆ ಆ ನಾಯಕರುಗಳಿಗೆ ಮಾರ್ಗದರ್ಶನದ ಕೊರತೆ ಎಂದೇ ಹೇಳಬಹುದು. ಯಾವ್ಯಾವುದೋ ಪಕ್ಷಗಳ ಬಲವರ್ಧನೆಗಾಗಿ ಮಾಡಬಾರದ್ದನ್ನು ಮಾಡಿ ಅಥವಾ ಸ್ವಾರ್ಥದಿಂದ ಒಕ್ಕಲಿಗರ ಮರ್ಯಾದೆಯನ್ನು ಮಣ್ಣುಪಾಲಾಗುವಂತೆ ಮಾಡಿದ್ದು ಕಾಣಬಹುದು. ಮೇಲ್ನೋಟಕ್ಕೆ ಒಕ್ಕಲಿಗರ ವಿರೋಧಿಗಳಿಗೆ ಇದು ಸಂತಸ ತಂದಿದ್ದರೂ ಇಡೀ ರಾಜ್ಯಕ್ಕೆ ಆ ಸಮುದಾಯದ ಪಥನವು ಭಾರೀದೊಡ್ಡ ನಷ್ಟವೇ. ಹೀಗೇ ಮುಂದುವರೆದರೆ ಅಳಿದೂರಿಗೆ ಉಳಿದವನೇ ಅರಸ ಎಂಬಂತಾದೀತು. ಹಿಂದೆ ಚಾಣಕ್ಯನಂತವರು ಜಾತಿಗಳನ್ನು ಗುರುತಿಸಿ, ಅವರವರಿಗೆ ತಕ್ಕುದಾದ ಜವಾಬ್ದಾರಿಯನ್ನು ನೀಡಿ ದೇಶ ಕಟ್ಟಿದ್ದರು. ಅದೇ ಪಾಠ ಮುಂದುವರೆಯುತ್ತಾ ಬಂದರೂ, ಹಣದ ದಾಹ, ಸ್ವಾರ್ಥಗಳು ಜಾತಿಗೇ ಮಾರಕವಾಯ್ತು.
ಇದು ಧ್ವನಿ ಕುಗ್ಗಿಸುವಂತಹದ್ದೇ
ಡಿಕೆಶಿಯಂತಹ ಉತ್ತಮ ನಾಯಕತ್ವದ ಲಾಭವನ್ನು ಪಡೆದ ಕಾಂಗ್ರೆಸ್ ಪಕ್ಷವು ಡಿಕೆಶಿ ಸಹಿತ ಇಡೀ ಸಮುದಾಯಕ್ಕೇ ಹಿಂಸೆ ನೀಡಿದ್ದು ಕಣ್ಣಾರೆ ನೋಡಬಹುದು. ಅಂದರೆ ಡಿಕೆಶಿಯವರಿಗೆ ಮಾರ್ಗದರ್ಶನ ಸರಿಯಾಗಿ ಇರುತ್ತಿದ್ದರೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುವ ಯೋಗ ಪಡೆಯಬಹುದಾಗಿತ್ತು. ಇನ್ನೊಂದೆಡೆ ಅಂಬರೀಷ್ ಅವರಿಗೂ ಇದೇ ರೀತಿಯ ಮಾನಸಿಕ ಹಿಂಸೆಯಾಯ್ತು. ಉನ್ನತ ಸ್ಥಾನದಿಂದ ಕಿತ್ತು ಹಾಕಲಾಯ್ತು. ಸ್ಥಾನ ಮಾನ ಕೊಡದೆ ಅವಮಾನಿಸಲಾಯ್ತು. ಒಂದು ವೇಳೆ ಇನ್ನೊಬ್ಬ ಒಕ್ಕಲಿಗನಿಗೆ ಉತ್ತಮ ಮಾರ್ಗದರ್ಶನ ನೀಡಿ ಒಳ್ಳೆಯ ನಾಯಕತ್ವ ನೀಡುತ್ತಿದ್ದರೆ ಒಂದು ಕ್ಷಮೆ ಇತ್ತು. ಹಾಗೆ ಮಾಡಲಿಲ್ಲ. ಕಾಟಾಚಾರಕ್ಕೆ ಮೆರವಣಿಗೆ ಪ್ರತಿಭಟನೆ ನಡೆಸಿ ಕೈ ತೊಳೆದುಕೊಂಡರು. ಇನ್ನೊಂದಡೆ ಜೆಡಿಎಸ್ ಒಕ್ಕಲಿಗ ನಾಯಕತ್ವದಲ್ಲಿ ಮುಂದುವರೆದಿದ್ದರೂ, ಕಾಂಗ್ರೆಸ್ಸಿನೊಡನೆ ಸೇರಿ ತಮ್ಮ ನಾಯಕತ್ವದ ಸರ್ವಾಧಿಕಾರ ತೋರಿಸಿ ಪಥನವಾದರು. ಇದೆಲ್ಲವೂ ಒಂದು ರೀತಿಯಲ್ಲಿ ಒಕ್ಕಲಿಗ ನಾಯಕರಿದ್ದರೂ ಒಕ್ಕಲಿಗರ ಧ್ವನಿ ಕುಗ್ಗಿಸುವಂತದ್ದೇ ಎಂದು ಹೇಳಬೇಕು.
ಬಿಜೆಪಿಯಲ್ಲೂ ಕಮಾಂಡಿಂಗ್ ಇರುವ ನಾಯಕರು ಎಲ್ಲ ಸಮುದಾಯಕ್ಕೆ ಬೇಕು
ಇನ್ನು ಬಿಜೆಪಿಯನ್ನು ನೋಡಿದರೂ ಇಲ್ಲೂ ಅದೇ ರೀತಿ ನೀತಿ. ಬಿಜೆಪಿಯಲ್ಲಿ ಒಕ್ಕಲಿಗರ ಬಲ ಇಲ್ಲವೇ? ಇದೆ. ಆದರೆ ಸರಿಯಾದ ನಾಯಕತ್ವ ಇಲ್ಲ. ನಾಯಕತ್ವ ಎಂದರೆ commanding ಇರುವ ವ್ಯಕ್ತಿತ್ವ ಇರಬೇಕು. ಇದು ಎಲ್ಲಾ ಸಮುದಾಯದಲ್ಲೂ ಇರಲೇಬೇಕು. ಕುರುಬ, ಲಿಂಗಾಯತ, ಬ್ರಾಹ್ಮಣ ಇತ್ಯಾದಿ ಎಲ್ಲಾ ಸಮುದಾಯದಲ್ಲೂ ಇಂತಹ ನಾಯಕರಿರಬೇಕು. commanding ಎಂದರೆ ಒತ್ತಡ ಹಾಕಿ ಮತ ಹಾಕಿಸುವುದೊ, ಬೆದರಿಸುವುದೋ ಅಲ್ಲ. ಆ ಸಮುದಾಯದಲ್ಲಿ ತಪ್ಪುಗಳಾಗದಂತೆ ಸರಿಪಡಿಸುತ್ತಾ, ಅವರನ್ನು ಪ್ರಬುದ್ಧರನ್ನಾಹಿಸಿ, ಒಳ ಒಳಗೆ ಇನ್ನೊಬ್ಬ ಬಲಿಷ್ಟನನ್ನು ತಯಾರು ಮಾಡಬೇಕು. ಬಲಿಷ್ಠರಾಗಬೇಕಾದರೆ ದೇಶಪ್ರೇಮ, ವ್ಯವಹಾರ ಜ್ಞಾನ, ಸಂಘಟನಾ ಸಾಮರ್ಥ್ಯ ಇರುವಂತದ್ದು. ಈಗ ಇದರೊಳಗೆ ಲಾಬಿ ನಡೆಸಿ ಬಲಿಷ್ಟರಿಗೆ ಸರಿಯಾದ ಸ್ಥಾನಮಾನ ನೀಡದೆ sidelineಗೆ ಹಾಕುವಂತಹ ಕೆಲಸ ನಡೆಯುತ್ತಿರುವುದು ದುಃಖದ ವಿಚಾರ. ಬಿಜೆಪಿಯಲ್ಲಿ ಆರ್. ಅಶೋಕ್, ಸಿ.ಟಿ. ರವಿ ಇದ್ದರೂ ಅವರ ಏಳಿಗೆ, ಕೆಲಸಗಳು ತೃಪ್ತಿಕರ ಆಗಿಲ್ಲ. ಯಾಕೆಂದರೆ ಅವರಿಗೆ ಸಂಘಟನಾ ಜವಾಬ್ದಾರಿ ಅಂತಹ ಪ್ರಮಾಣದಲ್ಲಿ ನೀಡಿಲ್ಲ. ಆದರೆ ಅವರಿಗೂ ಎದ್ದು ನಿಂತು ಕೇಳುವ ಸಾಮರ್ಥ್ಯ ಇಲ್ಲ. ಯಾಕೆಂದರೆ ಪರ್ಯಾಯ ನಾಯಕರನ್ನು ಅವರು ಬೆಳೆಸಲಿಲ್ಲ.
ನಾನು ನೋಡುತ್ತಿರುವಂತೆ ಪ್ರಕರ ವಾಗ್ಮಿ, ಉತ್ಸಾಹಿ, ಕರ್ನಾಟಕ ರಾಜ್ಯದ ಭೌಗೋಳಿಕ ಪರಿಜ್ಞಾನ ಇದ್ದಂತಹ ವ್ಯಕ್ತಿ ನಟ ಜಗ್ಗೇಶ್ ಅವರು. ಆದರೆ ಬಿಜೆಪಿಯು ಅವರ ವ್ಯಕ್ತಿತ್ವವನ್ನರಿತು ಕೊಟ್ಟಂತಹ ಜವಾಬ್ದಾರಿ ಏನೂ ಸಾಲದು. ಅವರಿಗೆ ಬಿಜೆಪಿಯಲ್ಲಿ ಉತ್ತಮ ಜವಾಬ್ದಾರಿ ನೀಡಿ, ಒಕ್ಕಲಿಗರ ಒಂದು ಮೇರು ಸ್ವರವನ್ನಾಗಿಸಬಹುದಿತ್ತು ಮತ್ತು ಅದನ್ನು ನಿಭಾಯಿಸುವ ಸಾಮರ್ಥ್ಯ ಅವರಿಗೆ ಇತ್ತು. ಹೌದು ಒಕ್ಕಲಿಗರಿಗೆ ಪ್ರಾಧಾನ್ಯತೆ ನೀಡಿದ್ದೇವೆ ಎಂದು ದುರ್ಬಲ ಒಕ್ಕಲಿಗರನ್ನು ಕುಳ್ಳಿರಿಸಿದರೆ ಹೇಗೆ? ಆ ದುರ್ಬಲರು ಪ್ರಾಮಾಣಿಕರೂ ಆಗಿರಬಹುದು ಅಥವಾ ಒಳ್ಳೆಯ ಆಡಳಿತಗಾರರೂ ಆಗಿರಬಹುದು. ಆದರೆ ಅವರಲ್ಲಿ ಅಂತಹ ಒಂದು ಸೇನಾನಿತ್ವ ಇಲ್ಲದಿದ್ದರೆ ಇದು ಆ ಸಮುದಾಯದ ಶಕ್ತಿಗೆ ಕೊರತೆಯೇ.
ಜಗ್ಗೇಶ್ ಅವರ ಸಾಮರ್ಥ್ಯಕ್ಕೆ ತಕ್ಕ ಸ್ಥಾನ ಬೇಕು
ನನ್ನ ಲೆಕ್ಕಾಚಾರ ಪ್ರಕಾರ ಈಗ ಬಿಜೆಪಿ ಮಾಡಬೇಕಾದ ಮುಖ್ಯ ಕೆಲಸ ಎಂದರೆ ಒಕ್ಕಲಿಗರ ಶಕ್ತಿಯನ್ನು ಹೆಚ್ಚಿಸಬೇಕಾದುದು ಮತ್ತು ಆ ಸಮುದಾಯವನ್ನು ಪ್ರಬುದ್ದ ಮತ್ತು ಅಡ್ಡದಾರಿ ಹಿಡಿಯದಂತೆ ಮಾಡಬೇಕಾಗಿದೆ. ಈಗ ಜಗ್ಗೇಶ್ ಅವರಿಗೆ ಆ ಸಾಮರ್ಥ್ಯ ಇದೆ. ಇನ್ನೊಂದು ಹದಿನೈದು ವರ್ಷದ ಬಳಿಕ ಅವರಿಗೆ ಜವಾಬ್ದಾರಿ ಕೊಟ್ಟರೇನು ಬಿಟ್ಟರೇನು? ಕಾಲಕ್ಕೆ ತಕ್ಕಂತ ನಾಯಕತ್ವ ಇರಬೇಕು. ಕೇವಲ ಓಟಿನ ಸಮಯದಲ್ಲಿ ವೇದಿಕೆಯಲ್ಲಿ ಜಗ್ಗೇಶ್ ಉತ್ತಮ ಭಾಷಣಗಾರ, ಅವರು ಬಿಜೆಪಿಗೆ ಬೇಕು ಎಂದರೆ ಅದು ಕೇವಲ ಪಕ್ಷಕ್ಕಾಗಿ ಮಾತ್ರವೇ ಆಯಿತೇ ವಿನಃ ಸಮುದಾಯಕ್ಕೆ ಆಗಲಾರದು. ಪಕ್ಷವೂ ಬೆಳೆಯಬೇಕು, ಪಕ್ಷದ ಬೆಳವಣಿಗೆಗೆ ಸಮುದಾಯಗಳ ಬಲಿಷ್ಠತೆ ಕೊಡುಗೆಗಳೂ ಬೇಕು. ಹೀಗಿದ್ದಾಗ ರಾಜ್ಯ, ದೇಶವು ಉದ್ದಾರ ಆಗುತ್ತದೆ.
ಮಹಾಭಾರತದಲ್ಲಿ ಧೃತರಾಷ್ಟ್ರನಿಗೆ ಕೃಷ್ಣನು ಹೇಳಿದ ಮಾತು ನೆನಪಾಗುತ್ತದೆ. ಕೌರವ ಪಾಂಡವರು ಅನ್ಯೋನ್ಯವಾಗಿ ಬಲಿಷ್ಠರಿದ್ದರೆ ಈ ದೇಶಕ್ಕೆ ಹೊರಗಿನ ವಿದೇಶಿ ದುಷ್ಟರಿಂದ ಅಪಾಯ ಇದೆಯೇ ಎಂದಿದ್ದ.
ಅದೇ ರೀತಿ ಜಾತಿಬೇಧ ಇಲ್ಲದ ಜಾತಿ ಸಮುದಾಯದ ಬಲಿಷ್ಠತೆ ಬೇಕೇ ಬೇಕು. ಜಗ್ಗೇಶ್ ಅವರಿಗೆ ಪಕ್ಷದೊಳಗೆ ಸಂಘಟನಾ ಸಾಮರ್ಥ್ಯ ಹೆಚ್ಚಿಸುವಂತಹ ಸ್ಥಾನಮಾನ ಕೊಡಿ, ಚುನಾವಣೆಯಲ್ಲಿ ಅವರೊಬ್ಬ ಜನಪ್ರತಿನಿಧಿಯಾಗುವ ಅವಕಾಶ ಕೊಡಿ, ಉನ್ನತ ಸ್ಥಾನ-ಮಾನ ಕೊಡಿ. ಅದನ್ನು ಅವರು ನಿಭಾಯಿಸುತ್ತಾರೆ ಎಂಬ ನಂಬಿಕೆ ನನಗಿದೆ. ಇದರಿಂದ ಒಕ್ಕಲಿಗರ ಜವಾಬ್ದಾರಿಯು ಹೆಚ್ಚಾಗಿ ಸುಭದ್ರ ಸರಕಾರಕ್ಕೆ ಒಕ್ಕಲಿಗರ ಕೊಡುಗೆ ಸಿಗಲಿದೆ. ಆದರೆ ಇದರ ದುರುಪಯೋಗವಾದರೆ ನಾವೀಗ ನೋಡುವ ದುರಂತವೂ ಆದೀತು. ಜಗ್ಗೇಶ್ ಅವರು ಧರ್ಮಕ್ಕೆ ತಲೆಬಾಗುವ, ತಲೆ ಕೊಡುವವರಾಗಿರುವುದರಿಂದ ಅವರಿಗೆ ಸ್ಥಾನಮಾನ ಕೊಟ್ಟರೆ ಅದನ್ನು ಸುಸೂತ್ರವಾಗಿ ನಿಭಾಯಿಸುತ್ತಾರೆ. ಒಂದೆಡೆ ಕಣ್ಣಿಗೆ ಕಾಣುವ ಮತ್ತೊಂದಡೆ ಕಣ್ಣಿಗೆ ಕಾಣದ ಗ್ರಹ ಲೆಕ್ಕಾಚಾರದ(ಜಾತಕ) ಮಾತಾಗಿದೆ.
Discussion about this post