ಅವರು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.. ಕನ್ನಡಕ್ಕೆ ಪವರ್ ಆದರೂ ಇಡಿಯ ಭಾರತ ಚಿತ್ರರಂಗದಲ್ಲೇ ವಿಶಿಷ್ಟ ಹಾಗೂ ವಿಭಿನ್ನವಾಗಿ ಗುರುತಿಸಿಕೊಂಡವರು. ಇಂತಹ ವ್ಯಕ್ತಿಯಿಂದ ಹೊಗಳಿಕೆ ತೆಗೆದುಕೊಳ್ಳುವುದು, ಅವರನ್ನು ಮೆಚ್ಚಿಸುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಆದರೆ, ಇಂತಹ ವ್ಯಕ್ತಿಯಿಂದಲೇ ಭೇಷ್ ಅನ್ನಿಸಿಕೊಂಡು, ಅವರ ಸಂಪೂರ್ಣ ಬೆಂಬಲವನ್ನು ಪಡೆದುಕೊಂಡಿದೆ ಶಿವಮೊಗ್ಗ ಯುವಕರ ಚಿತ್ರತಂಡ.
ಹೌದು… ಯೂಟ್ಯೂಬ್‌ನಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿರುವ ಟ್ರೇಲರ್ ಸಂಕಷ್ಟಕರ ಗಣಪತಿ… ಈ ಚಿತ್ರ ಈಗ ಬಿಡುಗಡೆಗೂ ಮುನ್ನವೇ ಗಾಂಧೀನಗರದಲ್ಲಿ ಸಂಚಲನ ಸೃಷ್ಠಿಸಿರುವುದು ಮಾತ್ರವಲ್ಲದೇ, ಚಿತ್ರ ರಸಿಕರನ್ನು ಕಾತರತೆಯಲ್ಲಿರಿಸಿದೆ.
ನಿಮಗೆ ಗೊತ್ತಿಲ್ಲದ ವಿಶೇಷ ಏನು ಗೊತ್ತಾ?
ಋತ್ವಿಕ್ ಮುರಳೀಧರ್ ಹಾಗೂ ಅರ್ಜುನ್ ಕುಮಾರ್ ಎಂಬ ಇಬ್ಬರು ಹುಡುಗರ ನೇತೃತ್ವದಲ್ಲಿ ಸುಮಾರು ನಾಲ್ಕು ವರ್ಷದ ಹಿಂದೆ ಶಿವಮೊಗ್ಗದಲ್ಲಿ ರಾಜ್ ಸಂಗೀತೋತ್ಸವ-2 ಎಂಬ ಅದ್ದೂರಿ ಕಾರ್ಯಕ್ರಮ ನಡೆಯುತ್ತದೆ. ಅಂದು ಆ ಸಾಮಾನ್ಯ ಹುಡುಗರಿಗೆ ಆಸೆಯೊಂದಿತ್ತು. ಅದು ತಮ್ಮ ಕಾರ್ಯಕ್ರಮಕ್ಕೆ ಪವರ್‌ಸ್ಟಾರ್ ಪುನೀತ್ ಅವರಿಂದು ಶುಭ ಹಾರೈಕೆ ಪಡೆಯಬೇಕು ಎಂಬುದು.. ಅದಕ್ಕಾಗಿ ಬಹಳಷ್ಟು ಪ್ರಯತ್ನ ಪಟ್ಟ ಇವರು, ಛಲಬಿಡದೇ ಬೆಂಗಳೂರಿಗೆ ತೆರಳಿ ಪುನೀತ್ ಅವರನ್ನು ಭೇಟಿಯಾಗಿ ಶುಭಾಷಯಗಳನ್ನು ಪಡೆದುಕೊಂಡೇ ಬರುತ್ತಾರೆ.
ಈ ಹಂತದಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಲು ಇವರು ಸಾಕಷ್ಟು ಪ್ರಯತ್ನಿಸುತ್ತಾರೆ. ಇವರ ಪ್ರಯತ್ನಕ್ಕೆ ಬೆಂಬಲವಾಗಿ ಅಂದು ನಿಂತು, ಪುನೀತ್ ಅವರನ್ನು ಭೇಟಿ ಮಾಡಿಸಿದ್ದು ಇಂದು ಕನ್ನಡ ಪ್ರಭ ಪತ್ರಿಕೆಯ ಶಿವಮೊಗ್ಗ ಸಂಚಿಕೆಯ ಜಾಹೀರಾತು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿನಯ್ ಕುಮಾರ್. ಮಾತ್ರವಲ್ಲ ರಾಜ್ ಸಂಗೀತೋತ್ಸವ ಯಶಸ್ಸಿನ ಹಿಂದಿನ ಪ್ರಮುಖ ಕೈಗಳಲ್ಲಿ ವಿನಯ್ ಅವರೂ ಸಹ ಒಬ್ಬರು ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.
ಅಂದು ಪುನೀತ್ ಹಾರೈಸಿದ್ದರ ಫಲವೋ, ಈ ಹುಡುಗರ ಶ್ರಮವೋ ಇಂದು ಈ ಹುಡುಗರು ಹಗಲಿರುಳು ಕಷ್ಟ ಪಟ್ಟು ರೂಪಿಸಿರುವ ಸಂಕಷ್ಟಕರ ಗಣಪತಿ ಎಂಬು ಪೂರ್ಣಪ್ರಮಾಣದ ಚಿತ್ರದ ಆಡಿಯೋ ಹಕ್ಕುಗಳನ್ನು ಇದೇ ಪುನೀತ್ ರಾಜ್‌ಕುಮಾರ್ ಖರೀದಿಸಿದ್ದಾರೆ. ನಿಜಕ್ಕೂ ಇದೊಂದು ವಿಶೇಷದಲ್ಲಿ ವಿಶೇಷ ಸಾಧನೆಯೇ ಸರಿ.
ಅಂದು ಈ ಹುಡುಗರು ಪುನೀತ್ ಅವರನ್ನು ಭೇಟಿಯಾದಾಗ ಇವರು ಸಾಮಾನ್ಯರು. ಅಂದು ಋತ್ವಿಕ್ ಮರಳೀಧರ್ ಒಬ್ಬ ಸಣ್ಣ ಗಾಯಕ ಹಾಗೂ ಅರ್ಜುನ್ ಕುಮಾರ್ ಓರ್ವ ಸಾಮಾನ್ಯ ಛಾಯಾಗ್ರಾಹಕರಾಗಿದ್ದರು. ಆದರೆ, ಇಂದು ಅರ್ಜುನ್ ಕುಮಾರ್ ಸಂಗೀತ ನಿರ್ದೇಶಕ, ಋತ್ವಿಕ್ ಮುರಳೀಧರ್ ನಿರ್ದೇಶಕರಾಗಿ ಬೆಳೆದು ಪುನೀತ್ ಅವರೊಂದಿಗೇ ವೇದಿಕೆ ಹಂಚಿಕೊಳ್ಳುವ ಮಟ್ಟಕ್ಕೆ ಸಾಧನೆ ಮಾಡಿದ್ದಾರೆ.
ಚಿತ್ರದ ಆಡಿಯೋ ಹಕ್ಕನ್ನು ಖರೀದಿಸಿರುವ ಪುನೀತ್ ಸ್ವತಃ ಇತ್ತೀಚೆಗೆ ಸಂಕಷ್ಟಕರ ಗಣಪತಿ ಯ ಆಡಿಯೋ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಚಿತ್ರದ ಶೀರ್ಷಿಕೆಯಲ್ಲೇ ಗಣಪತಿ ಇದ್ದಾನೆ. ಗಣಪತಿ ಎಂದರೆ ವಿಘ್ನ ನಿವಾರಕ. ಆ ಗಣಪತಿಯ ಆಶೀರ್ವಾದದೊಂದಿಗೆ ಈ ಚಿತ್ರ ಯಶಸ್ವಿ ನೂರು ದಿನ ಪೂರೈಸಲಿ, ಹೊಸಬರಿಗೆ ಬೆಂಬಲ ದೊರೆಯಲಿ.. ಇವರಿಗೆ ಜನಾಶೀರ್ವಾದ ದೊರೆಯಲಿ ಎಂದು ಹಾರೈಸಿದರು.
ನಾನಿನ್ನೂ ಸಿನೆಮಾ ನೋಡಿಲ್ಲ. ಟ್ರೇಲರ್ ಭರವಸೆ ಮೂಡಿಸಿದೆ. ಸಿನಿಮಾದ ಗುಣಮಟ್ಟ ಚೆನ್ನಾಗಿದೆ. ಯುವಕರ ತಂಡ ಒಳ್ಳೆಯ ಸಿನಿಮಾ ಮಾಡಿರುವ ನಂಬಿಕೆ ಇದೆ ಎಂದರು.
ಇನ್ನು, ಋತ್ವಿಕ್ ಮುರಳೀಧರ್ ಹಾಗೂ ಅರ್ಜುನ್ ಕುಮಾರ್ ಅವರ ಬಗ್ಗೆ ನೋಡುವುದಾದರೆ ಈ ಹುಡುಗರು 2016ರಲ್ಲಿ ಪನ್ಮಂಡ್ರಿ ಕ್ರಾಸ್ ಎಂಬ ಕಿರುಚಿತ್ರವೊಂದನ್ನು ರೂಪಿಸಿದ್ದರು. ಯೂಟ್ಯೂಬ್‌ನಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಶಿವಮೊಗ್ಗದ ಪ್ರತಿಷ್ಠಿತ ಅಂಬೆಗಾಲು ಪ್ರಶಸ್ತಿಯೂ ಲಭಿಸಿದೆ. ಅತ್ಯಂತ ಪ್ರಮುಖವಾಗಿ ಪ್ರತಿಷ್ಠಿತಿ ಸೈಮಾ ಪ್ರಶಸ್ತಿಯೂ ಸಹ ಈ ತಂಡಕ್ಕೆ ದೊರೆತಿದೆ.
ಈಗ ಈ ಇಬ್ಬರೂ ಹುಡುಗರು ದೊಡ್ಡ ತಂಡವೊಂದನ್ನು ಕಟ್ಟಿಕೊಂಡು ಪೂರ್ಣ ಪ್ರಮಾಣದ ಚಿತ್ರ ಸಿದ್ದಪಡಿಸಿದ್ದು, ಇಡಿಯ ಗಾಂಧಿನಗರವೇ ಕಣ್ಣರಳಿಸಿಕೊಂಡು ನೋಡುತ್ತಿದೆ.
ಚಿತ್ರದಲ್ಲೇನಿದೆ?
ಸಂಕಷ್ಟಕರ ಗಣಪತಿ ಚಿತ್ರ ಸಂಪೂರ್ಣ ರೊಮ್ಯಾಂಟಿಕ್ ಹಾಗೂ ಕಾಮಿಡಿ ಅಂಶಗಳನ್ನು ಒಳಗೊಂಡಿದ್ದು, ಒಬ್ಬ ಕಾರ್ಟೂನಿಸ್‌ಟ್ ಜೀವನನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅರ್ಜುನ್. ಏಲಿಯಮ್ ಹ್ಯಾಂಡ್ ಎಂಬ ನ್ಯೂರೊಲೋಜಿಕಲ್ ಸಿಂಡ್ರೊಮ್ ಬಗ್ಗೆಯೂ ಇದರಲ್ಲಿ ಪ್ರಸ್ತಾಪ ಮಾಡಲಾಗಿದೆ. ಏಲಿಯಮ್ ಹ್ಯಾಂಡ್ ನ್ಯೂರೋಲೋಜಿಕಲ್ ಸಿಂಡ್ರೋಮ್ ಎಂದರೆ ತಮ್ಮ ಎಡಗೈಯಿಂದ ಬೇರೆಯವರಿಗೆ ತನಗೆ ಅರಿವಿಲ್ಲದಂತೆ ಹೊಡೆಯುವುದು. ಈ ನ್ಯೂನ್ಯತೆಯಿಂದ ಬಳಲುವ ನಾಯಕ ಇದರಿಂದ ಎದುರಿಸುವ ಅನೇಕ ಸಂಕಷ್ಟಗಳನ್ನು ಯಾವ ರೀತಿ ಎದುರಿಸಿ ಅದರಿಂದ ಹೇಗೆ ಪಾರಾಗುತ್ತಾನೆ ಎಂಬುದೇ ಕತೆ.
ಒಂದು ಹಂತದಲ್ಲಿ ಖಾಯಿಲೆ ಆವರಿಸಿಕೊಂಡಾಗ ಆಗುವ ಪರಿಪಾಟಲುಗಳನ್ನು ಕಾಮಿಡಿ ಜೊತೆಗೆ ಸುಂದರ ಪ್ರೇಮ ಕತೆಯನ್ನು ಹೆಣೆಯಲಾಗಿದೆ.
ಸಂಕಷ್ಟ ಅಂದರೆ ತೊಂದರೆಗಳು, ಕರಕ್ಕೆ ಅರ್ಥ ಕೈ, ಈತನ ಹೆಸರು ಗಣಪತಿ ಆಗಿರುವುದರಿಂದ ಶೀರ್ಷಿಕೆಯನ್ನು ಇದೇ ರೀತಿಯಲ್ಲಿ ಇಡಲಾಗಿದೆ. ದೃಶ್ಯಗಳು ಸಹಜವಾಗಿ ಬರಲೆಂದು ನಿರ್ದೇಶಕರು ರೋಗಿ ಮತ್ತು ಚಿತ್ರಕಾರರನ್ನು ಭೇಟಿ ಮಾಡಿ ಅವರ ಹಾವಭಾವಗಳನ್ನು ಗ್ರಹಿಸಿ ಅದರಂತೆ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ.
Discussion about this post