ಒಂದು ದಿನ ನಮ್ಮ ನಮ್ಮ ತೋಟದಲ್ಲಿ ಒಂದು ಪುಟ್ಟ ಸಸಿಯೊಂದು ಅರಳಿತು! ಎಷ್ಟು ಸುಂದರವಾಗಿತ್ತೆಂದರೆ… ಒಮ್ಮೆ ಮೈ ಜುಮ್ಮೆನ್ನುವಷ್ಟು,
ನಾನು ಅದನ್ನು ಕಣ್ತುಂಬಿಕೊಂಡು ಅದರ ಚಿತ್ರವೊಂದನ್ನು ನನ್ನ 8ನೆಯ ತರಗತಿಯ ಪುಸ್ತಕದ ಕೊನೆಯಲ್ಲಿ ಬಿಡಿಸಿಟ್ಟುಕೊಂಡೆ.
ಆ ದಿನ ರಾತ್ರಿ ಮಂದಾರ ಗಿಡದ ಚಿತ್ರಣವೇ ಮನದಲ್ಲಿ. ಒಂದು ಆಲೋಚನೆ ಹುಟ್ಟಿತು. ಅದೇನೆಂದರೆ, ಆ ಗಿಡವನ್ನು ಒಂದು ದೊಡ್ಡ ಮರವಾಗಿ ಬೆಳೆಸಬೇಕು,ವೃಕ್ಷಗಳಿಗೆ ರಾಜನಾಗಿ ಮಾಡಬೇಕು ಎಂದು.
ಮಾರನೆಯ ದಿನ ಬೆಳಗ್ಗೆ ಶಾಲೆಗೆ ಹೋಗುವ ಮುನ್ನ ಅದನ್ನು ಬುಡಬೆರಕೆ ಕಿತ್ತು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ಸಗಣಿ-ಗೊಬ್ಬರ ಅದರಲ್ಲಿ ಬೆರೆಸಿ,
ಅದನ್ನು ನಮ್ಮ ಮನೆಯ ಮುಂದಿರುವ ದಾರಿಯ ಬದಿಯಲ್ಲಿ ನೆಟ್ಟು ನೀರು ಹಾಕಿ ಶಾಲೆಗೆ ತೆರಳಿದೆ.
ನಂತರದ ದಿನಗಳಲ್ಲಿ ಪ್ರತಿ ದಿನ ತಪ್ಪದೇ ಶಾಲೆಗೆ ಹೋಗುವ ಮುನ್ನ ಆ ಗಿಡಕ್ಕೆ ನೀರೆರೆದು ಹೋಗುತ್ತಿದ್ದೆ. ಕೆಲವೇ ದಿನಗಳಲ್ಲಿ, ಅಂದರೆ ಒಂದು ಆರೇಳು ತಿಂಗಳ ನಂತರ… ಮಂದಾರ ಗಿಡ-ಮಂದಾರ ಮರವಾಗಲು ಮುಂದಾಯಿತು.
ನಾನು ಅದೇ ಸಂತಸದಲ್ಲಿ ಅದರ ಬೇರೊಂದ ಕಿತ್ತು ರಸ್ತೆಯಲ್ಲಿದ್ದ ಮಂದಾರದ ಎದುರಿಗೆ ಅದೇ ವಿಧಾನದಲ್ಲಿ ಧರೆಗಿಳಿಸಿದೆ..!
ಅದು ಕೂಡ
ಸಸಿಯಾಗಿ,
ಗಿಡವಾಗಿ,
ಮರವಾಯಿತು..!
ನಾನು ಎರಡೂ ಮರಗಳಿಗೂ ನೀರೆರೆಯತೊಡಗಿದೆ. ನಾನು ಆಗ 9ನೆಯ ತರಗತಿಯಲ್ಲಿದ್ದೆ ನನ್ನ ಆ ವೃಕ್ಷದ ಮೇಲಿನ ಪ್ರೀತಿ ಎಂದಿಗೂ ಅಳಿಯುವಂತದ್ದಲ್ಲ. ಕೆಲವು ವರ್ಷಗಳ ನಂತರ ಮರಗಳು ಹೆಮ್ಮರವಾಗಿ ಬಿಟ್ಟವು! ಒಂದಕ್ಕೊಂದು ಕೊಂಬೆಗಳು ಹೆಣೆದು ನಿಂತವು, ಎರಡೂ ಮರಗಳು ಪ್ರೇಮಿಗಳಂತೆ ಒಟ್ಟು ಸೇರಿದವು. ಅದನ್ನು ನೋಡಲು ಎಷ್ಟು ಸೊಗಸಾಗಿತ್ತೆಂದರೆ! ಒಂದು ಊರಿನ ಹೆಬ್ಬಾಗಿಲಂತೆ ಭಾಸವಾಗುತ್ತಿತ್ತು.
ಆಗ ನಾನು ಪ್ರಥಮ ದರ್ಜೆಯಲ್ಲಿ ಓದುತ್ತಿದ್ದೆ. ನಮ್ಮೂರಿನ ಜನರೆಲ್ಲ ಕತ್ತಿ ಕೊಡಲಿ ಗರಗಸ ಹೊತ್ತು ಮನೆಯ ಬಳಿ ಬಂದರು? ಅಪ್ಪಾಜಿ ಗದ್ದೆಗೆ ಹೋಗಿದ್ದರು, ನಾನು ಮತ್ತೆ ಅಮ್ಮ ಇಬ್ಬರೇ ಮನೆಯಲ್ಲಿದ್ದೆವು, ಒಂದು ಭಾರಿ ನಿಬ್ಬೆರಗಾದೆವು!
ಸ್ವಲ್ಪ ಭಯದಿಂದಲೇ ಹೊರಗಡೆ ಹೋಗಿ ಕೇಳಿದೆ? ಏಕೆ? ಏನಾಯಿತು? ಎಲ್ಲರೂ ಏಕೆ ನಮ್ಮ ಮನೆಗೆ ಬಂದಿದೀರಾ!!! ಎಂದು.
ಅದಕ್ಕೆ ಅವರು, ನೋಡಪ್ಪಾ ತಮ್ಮಾ ನಿಮ್ಮ ಮನೆ ಎದುರಿರೋ ಮರಗಳು ನಮಗೆ ಬಹಳ ತೊಂದರೆಯಾಗುತ್ತಿವೆ. ಯಾವುದೇ ದೊಡ್ಡ ದೊಡ್ಡ ವಾವನಗಳು ಈ ಮರಗಳನ್ನು ದಾಟಿಹೋಗಲು ಆಗುತ್ತಿಲ್ಲ. ಅವುಗಳನ್ನು ಕಡಿಯಬೇಕೆಂದು ನಾವೆಲ್ಲ ಸೇರಿ ಬಂದೆವು. ಒಂದು ಸಾರಿ ನಿನಗೂ ಒಂದು ಮಾತು ಹೇಳಿ ಮರ ಕಡಿಯೋಣ ಎಂದು ಮನೆಗೆ ಬಂದಿದ್ದೇವೆ. ನಾವೇನು ನಿನ್ನ ಅನುಮತಿಗೆ ಬಂದಿಲ್ಲವೆಂದು ಹೇಳಿದರು!
ನನಗೆ ಅವರು ಹೇಳಿದ ಮಾತುಗಳು ಕಣ್ಣ ಮುಂದೆಯೇ ಬಂದುಬಿಟ್ಟಿತು. ಮರವನ್ನು ಕಡಿದ ಹಾಗೆಯೇ ಭಾಸವಾಯಿತು. ಕಣ್ಣೀರಿಳಿಸತೊಡಗಿದೆ… ಅಮ್ಮ ಬಂದು ಸಮಾಧಾನಿಸಿದರು.. ನಾನು ಅವರೊಂದಿಗೆ ಏನೂ ಮಾತನಾಡಲಿಲ್ಲ, ಮೌನವಾಗಿ ಮನೆ ಮುಂದಿರುವ ಕಟ್ಟೆಯ ಮೇಲೆ ಕುಳಿತೆ.
ಆಗ ಜನರೆಲ್ಲ… ಏನಪ್ಪಾ.. ನಾವೀಗ ಮರ ಕಡಿಯುತ್ತೇವೆ ಏನಾದ್ರು ಹೇಳೋದಿದ್ದರೆ ಹೇಳಿಬಿಡು. ಆಮೇಲೆ ನಮ್ಮ ಮೇಲೆ ಗೂಬೆ ಕೂರಿಸಬೇಡ ಎಂದರು.
ನಾನು ಆಗಲೂ ಮೌನವಾಗಿದ್ದೆ. ಆಗ ಒಂದು ಉಪಾಯ ಮಾಡಿದೆ. ಅವರು ಮರ ಕಡಿಯಲು ಹೊರಟಾಗಿತ್ತು. ಅವರನ್ನು ಮತ್ತೆ ಬಳಿಗೆ ಕರೆದೆ.
‘ಅಣ್ಣಾ ನಾ ಹೇಳುವ ಮಾತನ್ನು ಒಂಚೂರು ಕೇಳಿ ಎಂದೆ.
ಏನದು ಬೇಗ ಬೊಗಳಿ ಸಾಯಿ… ಎಂದರು!
ಅಣ್ಣ ನೀವೂ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ, ನನ್ನ ಮರಗಳು ಊರಿಗೆ ತೊಂದರೆಯಾಗಿವೆ, ಅವುಗಳನ್ನು ಕಡಿಯುವುದೆ ಸರಿ. ಆದರೀಗ ಬೇಡ ಅಣ್ಣಾ! ನನಗೆ ಮೂರು ದಿನಗಳ ಕಾಲಾವಕಾಶ ಕೊಡಿ, ನಾನೇ ಆ ಮರಗಳನ್ನು ಕಡಿದು ನಿಮ್ಮೆಲ್ಲರ ಸಮಸ್ಯೆಗಳನ್ನು ನಿವಾರಣೆ ಮಾಡುವೆ. ದಯವಿಟ್ಟು ಇದೊಂದು ಅವಕಾಶ ನೀಡಿ ಎಂದು ಬೇಡಿಕೊಂಡೆ.
ಜನರೆಲ್ಲ ನನ್ನ ಮಾತಿಗೆ ಮರುಳಾಗಿ ಆಯ್ತು ಇನ್ನು ಮೂರು ದಿನದೊಳಗೆ ಮರಗಳ ತಲೆ ಇರಬಾರದು ಎಂದು ಎಚ್ಚರಿಕೆ ನೀಡಿ ಹೋದರು. ಮಾರನೆಯ ದಿನ ಮುಂಜಾವಿನಲ್ಲಿ ಚಳಿ ಕಾಯಿಸುತ್ತಾ, ಚಹಾ ಸವಿಯುತ್ತ ಯೋಚಿಸತೊಡಗಿದೆ. ಆ ಒಂದು ದಿವಸ ನಾನು ಏನೂ ಮಾಡಲಿಲ್ಲ. ಇನ್ನು ಎರಡೇ ದಿನ ಬಾಕಿ ಉಳಿದವು. ಆಗ ಅದೇ ದಿನ ರಾತ್ರಿ ನನ್ನ ಉಪಾಯದಂತೆ.
ಎರಡೂ ಮರಗಳಿಗೂ ಅಮ್ಮನ ಎರಡು ಹಳೆಯ ಸೀರೆಗಳನ್ನು ತೊಡಿಸಿದೆ. ಒಂದು ಹಸಿರು ಸೀರೆ, ಇನ್ನೊಂದು ನೀಲಿ ಸೀರೆ. ನಂತರ ಸೀರೆಯ ಮೇಲೆ ಕುಂಕುಮ, ಅರಿಶಿಣ ಹಾಗೂ ಭಂಡಾರ ಎರಚಿದೆ. ಮನೆಯ ಅಟ್ಟದ ಮೇಲಿದ್ದ ಎರಡು ಹಳೆಯ ತ್ರಿಶೂಲಗಳನ್ನು ತಂದು ಮರಗಳೆದುರಿಗೆ ನಿಲ್ಲಿಸಿದೆ. ಆದರೂ ಮನದಲ್ಲೇಕೋ ಭಯವಾಗಿತ್ತು. ಅದು ಸಾಲೋದಿಲ್ಲವೆಂದು.
ಮರಗಳಿಗೆ ಒಂದೊಂದು ರಟ್ಟಿನ ಹಲಗೆ ಮಾಡಿ,
-ಮಂದಾರ ದೇವಿ
ಎಚ್ಚರ-
ಎಂದು ಬರೆದು ಮರಗಳಿಗೆ ನೇತುಹಾಕಿದೆ.
ಮಾರನೆಯ ದಿನ ಊರಿನ ಜನರಿಗೆಲ್ಲ ಆಶ್ಚರ್ಯ! ಏನಿದು ವಿಪರ್ಯಾಸ, ಹೇಗಾಯಿತು? ಇದೆಲ್ಲ ಎಂದು ಗೊಣಗಿಕೊಳ್ಳುತ್ತಿದ್ದರು. ನಾನು ಅಲ್ಲಿಯವರೆಗೂ ನೀರು ಹಾಕುತ್ತಲೇ ಇದ್ದೆ. ಕೆಲವೇ ದಿನಗಳಲ್ಲಿ ಒಬ್ಬೊಬ್ಬರಾಗಿ ಬಂದು ಹಾಲೆರೆದು ಪೂಜಿಸತೊಡಗಿದರು. ನಂತರದಲ್ಲಿ ಊರಿಗೆ ಮಗದೊಂದು ಹಾದಿ ಹುಡುಕಿದರು.
ನನ್ನ ವೃಕ್ಷಗಳು ಕಣ್ಣೆದುರೇ ಉಳಿದವು, ಕತ್ತಿ ಕೊಡಲಿಗಳೆಲ್ಲ ಮೂಲೆ ಸೇರಿದವು.
-ಲವ್ ಮೂನ್
Discussion about this post