There may be medical tools in your hands to treat the patient, but those hands must be that of a loving, warm and conscientious human being..
ಇದು ವೈದ್ಯಕೀಯ ಲೋಕದಲ್ಲಿರುವ ವ್ಯಕ್ತಿಗಳು ಅರಿತಿರಬೇಕಾದ ವಿಚಾರ. ಆದರೆ, ಸೇವಾ ಮನೋಭಾವನೆ ಹೊರತಾಗಿ ವ್ಯವಹಾರದಂತಾಗಿರುವ ವೈದ್ಯ ವೃತ್ತಿಯಲ್ಲಿ ಇಂದು ಹಣ ಗಳಿಕೆಯನ್ನೇ ಮುಖ್ಯ ಉದ್ದೇಶ ಮಾಡಿಕೊಂಡಿರುವ ವೈದ್ಯರೇ ಬಹಳಷ್ಟು ಮಂದಿ ಕಾಣಸಿಗುತ್ತಾರೆ. ಇಂತಹ ಎಲ್ಲ ಆರೋಪಗಳಿಗೆ ಅಪವಾದವಾಗಿ ಕರ್ನಾಟಕ ವೈದ್ಯಕೀಯ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಮೂಲಕ ಸಾಧನೆ ಮಾಡಿದ ಕೆಲವೇ ಕೆಲವು ವೈದ್ಯರ ಸಾಲಿನಲ್ಲಿ ವಿರಾಜಿಸುತ್ತಿರುವವರು ಡಾ. ರಾಮದಾಸ ಪಾಂಡುರಂಗ ಪೈ.
ಡಾ. ರಾಮದಾಸ ಪಾಂಡುರಂಗ ಪೈ ಅವರ ವೈದ್ಯಕೀಯ ಕ್ಷೇತ್ರದ ಶೈಕ್ಷಣಿಕ ಹಾಗೂ ಸೇವಾಪರತೆಯ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡಿದರೆ ಭವ್ಯ ಇತಿಹಾಸವೇ ತೆರೆದುಕೊಳ್ಳುತ್ತದೆ.
ಮೊಟ್ಟ ಮೊದಲನೆಯದಾಗಿ ಇವರ ವೈದ್ಯಕೀಯ ಶಿಕ್ಷಣವೇ ಒಂದು ಮಹತ್ಸಾಧನೆ. ಜನರಲ್ ಸರ್ಜನ್’ನಲ್ಲಿ ಎಂಎಸ್ ಮಾಡಿದ ಡಾ.ಆರ್.ಪಿ. ಪೈ, ಕೊಪ್ಪದಲ್ಲಿ ಅಂದರೆ ಗ್ರಾಮೀಣ ಕರ್ನಾಟಕದಲ್ಲಿ ಸರ್ಜರಿಯಲ್ಲಿ ಪಿಎಚ್‌ಡಿ ಮಾಡಿದ್ದು, ಇಂತಹ ವೈದ್ಯರಲ್ಲಿ ಅಂದು ರಾಜ್ಯದಲ್ಲೇ ಇವರು 5ನೆಯವರು. ಅಂದು ಇಂತಹ ವೈದ್ಯರು ದೇಶದಲ್ಲಿ ಕೇವಲ 10ರಿಂದ 12 ಮಂದಿ ಮಾತ್ರ ಇದ್ದರು ಎನ್ನುವುದು ಗಮನಿಸಬೇಕಾದ ಅಂಶ.
ಇನ್ನುಳಿದಂತೆ ಇವರ ಶೈಕ್ಷಣಿಕ ಸಾಧನೆಯೆಂದರೆ ಕಮ್ಯೂನಿಟಿ ಮೆಡಿಸನ್’ನಲ್ಲಿ ಎಂಡಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್’’ನಲ್ಲಿ ಎಂಡಿ, ಎಫ್’ಎಜಿಇ, PDF in Exp Med and Surg ತನ್ನ ಸಾಧನೆಯ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ.
ಇನ್ನು, ಇವರ ಸೇವಾ ಸಾಧನೆಯನ್ನು ನೋಡುವುದಾದರೆ, ಮದರ್ ಥೆರೇಸಾ ಮಿಷನರ್ ಆಫ್ ಚಾರಿಟಿಯಲ್ಲಿ ಅಡ್ವೈಸರ್, ಮಣಿಪಾಲ್ ಯೂನಿವರ್ಸಿಟಿಯಲ್ಲಿ ನಿರ್ದೇಶಕರಾಗಿ, ಅಡ್ಮಿನಿಸ್ಟ್ರೇಟರ್ ಆಗಿ, ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದು, ಕಮ್ಯೂನಿಟಿ ಮೆಡಿಸಿನ್ ಫಾದರ್ ಮುಲ್ಲರ್’ನಲ್ಲಿ ಪ್ರೊಫೆಸರ್ ಆಗಿ, ಆಸ್ಟಿçಯಾದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್’ನಲ್ಲಿ ಅತಿಥಿ ಪ್ರಾಧ್ಯಾಪಕರಾಗಿ, ಡಬ್ಲ್ಯೂಎಚ್’ಒ(ಎಸ್’ಇಎಆರ್’ಒ) ಸಲಹೆಗಾರರಾಗಿ, ಯೆನೆಪೋಯಾದಲ್ಲಿ ಕಮ್ಯೂನಿಟಿ ಮೆಡಿಸನ್ ಹಾಗೂ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್’ನ ಎಚ್’ಒಡಿ ಆಗಿ, ನೇಪಾಳದ ಪೋಕ್ರಾದಲ್ಲಿ ಮಣಿಪಾಲ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್’ನ ಫೌಂಡಿಂಗ್ ಡೀನ್ ಆಗಿ ಸೇವೆ ಸಲ್ಲಿಸಿದ್ದು, ಸದ್ಯ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಹಾಗೂ ರಿಸರ್ಚ್ ಸೆಂಟರ್’ನಲ್ಲಿ ಡೈರೆಕ್ಟರ್ ಆಫ್ ಅಕಾಡೆಮಿಸ್, ರಿಸರ್ಚ್ ಅಂಡ್ ಹಾಸ್ಪಿಟಲ್ ಡೆವಲಪ್ಮೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ವೈದ್ಯಕೀಯ ಕ್ಷೇತ್ರಕ್ಕೆ ಡಾ.ಆರ್.ಪಿ. ಪೈ ಕಾಲಿಟ್ಟ ವೇಳೆಯಲ್ಲಿ ಆಸಕ್ತಿಯಿಂದ ಬಂದವರೇ ವಿನಾ ಸೇವಾಸಕ್ತಿಯಿಂದ ಅಡಿಯಿಟ್ಟವರಲ್ಲ. ಈ ವಿಚಾರವನ್ನು ಯಾವುದೇ ಬಿಗುಮಾನವಿಲ್ಲದೇ ಹೇಳಿಕೊಳ್ಳುವ ಪೈ ಅವರು, ಮದರ್ ಥೆರೇಸಾ ಮಿಷನರ್ ಆಫ್ ಚಾರಿಟಿಯ ಸಂಪರ್ಕಕ್ಕೆ ಬಂದ ನಂತರ ಸೇವೆ ಎಂಬುದೇ ಉಸಿರಾಯಿತು ಎನ್ನುತ್ತಾರೆ.
ವೈದ್ಯರು ತಮ್ಮ ವೃತ್ತಿಯಲ್ಲಿ ನೈತಿಕತೆಯನ್ನು ಎಂದಿಗೂ ಮರೆಯಬಾರದು. ನಿಮ್ಮ ಬಳಿ ಹಣವಿದ್ದ ಮಾತ್ರಕ್ಕೆ ನಿಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಡಿ. ಬದಳಾಗಿ, ಅವರ ಮನಸ್ಸಿನಲ್ಲಿ ನಾನು ವೈದ್ಯನಾಗಿ ಸೇವೆ ಮಾಡಬೇಕು ಎಂಬು ಮೂಡಿದರೆ ಮಾತ್ರ ಮಾಡಿ.
-ಡಾ.ರಾಮದಾಸ್ ಪಾಂಡುರಂಗ ಪೈ
ಇನ್ನು, ಡಾ.ಪೈ ಅವರ ವೈದ್ಯಕೀಯ ಸಾಧನೆಯನ್ನು ಹೇಳುವುದಾದರೆ, ಅದು ಕರುನಾಡಿಗರಿಗೇ ದೊಡ್ಡ ಹೆಮ್ಮೆ ಎನ್ನಬಹುದು. ಈಗ ಮುಂದುವರೆದ ವೈದ್ಯಕೀಯ ಆವಿಷ್ಕಾರಗಳ ಅವಕಾಶದಿಂದ ವಿವಿಧ ರೀತಿಯ ಸಾಧನೆಗಳನ್ನು ವೈದ್ಯರು ಮಾಡುತ್ತಾರೆ. ಆದರೆ, ಡಾ.ಪೈ ಆಗಿನ ಕಾಲದಲ್ಲೇ ಕೇವಲ 7 ನಿಮಿಷದಲ್ಲಿ ಅಪೆಂಡಿಕ್ಸ್ ಸರ್ಜರಿ ಮಾಡಿ ಯಶಸ್ವಿಯಾದ ವೈದ್ಯ.
ಇಂತಹ ಸಾಧನೆಯ ಮುಂದುವರೆದ ಭಾಗವಾಗಿ ಕೇವಲ 20 ನಿಮಿಷಗಳ ಅವಧಿಯಲ್ಲಿ ಸ್ಕಿನ್ ಟು ಸ್ಕಿನ್ ಸಿಸೇರಿಯನ್ ಸರ್ಜರಿಯನ್ನು ಮಾಡುವ ಮೂಲಕ ಹೊಸಭಾಷ್ಯವನ್ನೇ ಬರೆದವರು.
ಮತ್ತೊಂದು ಉಲ್ಲೇಖಿಸಲೇಬೇಕಾದ ವಿಚಾರವೆಂದರೆ, ಪೈ ಅವರ ಸೇವಾವಧಿಯಲ್ಲಿ ಎಷ್ಟೋ ಬಾರಿ ಸರ್ಜರಿ ಮಾಡುವ ವೇಳೆ ಅವರೇ ಅನಸ್ತೇಶಿಯಾವನ್ನೂ ಸಹ ಕೊಟ್ಟಿರುವ ಉದಾಹರಣೆಗಳಿವೆ.
ಇನ್ನು, ಸಾಹಿತ್ಯಿಕವಾಗಿ ಇವರ ಒಲವೂ ಸಹ ಹೆಚ್ಚಾಗಿದ್ದು, ತ್ರಿವೇಣಿ, ಕಾರಂತರ ಪುಸ್ತಕಗಳು ಇವರ ಮಸ್ತಕದಲ್ಲಿ ಅಚ್ಚಾಗಿವೆ. ಯಶಸ್ವಿ ವೈದ್ಯರಾಗಿದ್ದೂ ಸಹ ಸಾಹಿತ್ಯ ಹಾಗೂ ಕಾದಂಬರಿಗಳಲ್ಲಿನ ಇವರ ಆಸಕ್ತಿ ನಿಜಕ್ಕೂ ಅಚ್ಚರಿ ಮೂಡಿಸುವಂತಹದ್ದು.
ಸೇವೆಯಾಗಿರಬೇಕಾದ ವೈದ್ಯಕೀಯ ಕ್ಷೇತ್ರ ಇಂದಿನ ದಿನಗಳಲ್ಲಿ ವ್ಯಾಪಾರೀಕರಣಗೊಂಡಿರುವ ಸಂದರ್ಭದಲ್ಲಿ ನೈತಿಕತೆಗಳೇ ಇಲ್ಲದೇ ವೈದ್ಯರ ಸಂಖ್ಯೆ ಹೆಚ್ಚು. ಹೀಗಿರುವಾಗ, ತಮ್ಮ ಅಮೂಲ್ಯವಾದ ಸುಧೀರ್ಘ ಶಿಕ್ಷಣ ಜ್ಞಾನ ಹಾಗೂ ವೃತ್ತಿ ನೈಪುಣ್ಯತೆಯನ್ನು ಸದ್ವಿನಿಯೋಗ ಮಾಡುತ್ತಿರುವ ಡಾ.ಪೈ ಅವರ ಸೇವೆ ಹಾಗೂ ವಯಸ್ಸು ನಿಜಕ್ಕೂ ಸಾರ್ಥಕ್ಯ. ಇಂತಹ ವೈದ್ಯರೊಬ್ಬರನ್ನು ತಮ್ಮ ಸೇವಾ ಹಾದಿಯ ಪ್ರಮುಖರನ್ನಾಗಿಸಿಕೊಂಡಿರುವ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿಜಕ್ಕೂ ಪ್ರಶಂಸನೀಯ.
ಟಾರ್ಚ್ ಲೈಟ್’ನಲ್ಲಿ ಸರ್ಜರಿ!
ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವ ವೇಳೆ ಒಮ್ಮೆ ಮಧ್ಯರಾತ್ರಿ 1 ಗಂಟೆ ವೇಳೆಗೆ ಒಂದು ಪ್ರಕರಣ ಬರುತ್ತದೆ. ಆದರೆ, ಆ ಭಾಗದಲ್ಲಿ ವಿದ್ಯುತ್ ಇರಲಿಲ್ಲ. ಆದರೆ, ಸರ್ಜರಿ ಮಾಡಲೇಬೇಕು. ಹೀಗಾಗಿ, ಗಟ್ಟಿ ಮನಸ್ಸು ಮಾಡಿ ಟಾರ್ಚ್ ಲೈಟ್ ಸಹಾಯದಿಂದಲೇ ಶಸ್ತ್ರಚಿಕಿತ್ಸೆಯನ್ನು ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ಡಾ.ಪೈ ಅವರ ಕರ್ತವ್ಯ ಶ್ರದ್ಧೆ ಹಾಗೂ ಪರತೆ ನಿಜಕ್ಕೂ ಇಡಿಯ ವೈದ್ಯಕೀಯ ಸಮೂಹಕ್ಕೇ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.
ಗಿನ್ನಿಸ್ ಕೈ ತಪ್ಪಿದ ಸೆರೆಂಡಿಪಿಟಿ ವೈದ್ಯ
ಸಾಮಾನ್ಯವಾಗಿ ಒಂದೋ ಎರಡೋ ಡಿಗ್ರಿ, ಮಾಸ್ಟರ್ ಡಿಗ್ರಿ ಪಡೆದು ದುಡಿಮೆಗೆ ಇಳಿಯುವವರು ಈ ಕಾಲದಲ್ಲಿ ಹೆಚ್ಚು. ಆದರೆ, ಅಂದಿನ ಕಾಲದಲ್ಲೇ ಒಂದೇ ಯೂನಿವರ್ಸಿಟಿಯಿಂದ, ಒಂದೇ ಘಟಿಕೋತ್ಸವದಲ್ಲಿ ಎರಡು ಎಂಡಿಗಳನ್ನು ಪಡೆದು ದಾಖಲೆ ಮಾಡಿದ್ದರು ಡಾ.ಪೈ. ಒಂದೇ ಕಾನ್ವೋಕೇಶನ್ನಲ್ಲಿ ಕಮ್ಯೂನಿಟಿ ಮೆಡಿಸನ್’ನಲ್ಲಿ ಎಂಡಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್’ನಲ್ಲಿ ಎಂಡಿ ಏಕಕಾಲಕ್ಕೆ ಪಡೆದಿದ್ದರು. ಆದರೆ, ಈ ಸಾಧನೆಯನ್ನು ಗಿನ್ನಿಸ್ ದಾಖಲೆಗೆ ಸೇರಿಸುವಂತೆ ಸಲ್ಲಿಕೆಯಾಗಿದ್ದ ಕೋರಿಕೆಯನ್ನು ಸಂಸ್ಥೆ ತಿರಸ್ಕರಿಸಿತು ಎಂದರೆ ನಿಜಕ್ಕೂ ಓರ್ವ ಅಪೂರ್ವ ಸಾಧಕನಿಗೆ ಆದ ನಿರ್ಲಕ್ಷವೇ ಸರಿ. ಆದರೆ, ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೇ, ತಮ್ಮ ಸಾಧನೆಗೆ ಒಂದೊಂದೇ ಗರಿಯನ್ನು ಮೂಡಿಸಿಕೊಳ್ಳುತ್ತಾ ಬರುತ್ತಿರುವ ಡಾ.ಪೈ ನಿಜಕ್ಕೂ ಓರ್ವ ಮಾದರಿಯೇ ಸರಿ.
Discussion about this post