ಕಲ್ಪ ಮೀಡಿಯಾ ಹೌಸ್ | ತಿರುಪತಿ |
ಮಕ್ಕಳಿಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಇಲ್ಲಿನ ತಿಮ್ಮಪ್ಪನ ದೇಗುಲಕ್ಕೆ ದೇಶದ ನಾನಾ ಭಾಗಗಳಿಂದ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದು ಭಾರೀ ಜನದಟ್ಟಣೆ ನಿರ್ಮಾಣವಾಗಿದೆ. ಕಳೆದ 2-3 ದಿನಗಳಿಂದ ಕನಿಷ್ಠ 30 ಗಂಟೆಗಳ ಕಾಲ ಸರದಿಯಲ್ಲಿ ಕಾದ ಬಳಿಕವೇ ದೇವರ ದರ್ಶನಕ್ಕೆ ಅವಕಾಶ ಲಭ್ಯವಾಗುತ್ತಿದೆ. ಬುಧವಾರ ಒಂದೇ ದಿನ 79,207 ಭಕ್ತಾದಿಗಳು ದೇವರ ದರ್ಶನ ಪಡೆದಿದ್ದು ಒಟ್ಟು 3.19 ಕೋಟಿ ರು. ದೇಣಿಗೆ ಸಂಗ್ರಹವಾಗಿದೆ ಎಂದು ಟಿಟಿಡಿ ತಿಳಿಸಿದೆ.
ಕೆಲ ದಿನಗಳ ಹಿಂದೆ ವಿಶ್ವವಿಖ್ಯಾತ ತಿರುಪತಿ Thirupathi ವೆಂಕಟೇಶ್ವರ ದೇವಸ್ಥಾನದಲ್ಲಿ ಭಾರಿ ಭದ್ರತಾ ವೈಫಲ್ಯ ಉಂಟಾಗಿತ್ತು. ನಿಷೇಧದ ಹೊರತಾಗಿಯೂ ದೇವಸ್ಥಾನದ ಒಳಗೆ ಮೊಬೈಲ್ ತೆಗೆದುಕೊಂಡು ಹೋದ ಭಕ್ತನೊಬ್ಬ ದೇಗುಲದ ಗೋಪುರ ಹಾಗೂ ಇತರ ಭಾಗಗಳನ್ನು ಚಿತ್ರೀಕರಿಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಚಿನ್ನದ ಲೇಪಿತ ಆನಂದ ನಿಲಯಂ (ಗೋಪುರ) ಹಾಗೂ ವಿಮಾನ ಪ್ರಕಾರಂ (ಗರ್ಭಗುಡಿಗೆ ಸುತ್ತಲಿನ ಭಾಗ) ಭಾಗಗಳನ್ನು ಚಿತ್ರೀಕರಿಸಲಾಗಿದೆ. ಇದರ ಬೆನ್ನಲ್ಲೇ ದೇವಸ್ಥಾನ ಮಂಡಳಿಯು ಘಟನೆ ಕುರಿತು ತನಿಖೆಗೆ ಆದೇಶಿಸಿದೆ. ಪ್ರಾಥಮಿಕ ಹಂತದಲ್ಲಿ ಭದ್ರತಾ ಲೋಪವನ್ನು ತಡೆಗಟ್ಟುವಲ್ಲಿ ವಿಫಲವಾದ ಕಾರಣ ದೇವಸ್ಥಾನದ ಭದ್ರತಾ ವಿಭಾಗವು ತನಿಖೆ ಎದುರಿಸಬೇಕಾಗುತ್ತದೆ ಎನ್ನಲಾಗಿದೆ.
ದೇವಸ್ಥಾನದ ಒಳಗೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಷೇಧಿಸಲಾಗಿದೆ. ಆದರೂ ವಿಡಿಯೋ ಚಿತ್ರೀಕರಿಸಿರುವ ಅಪರಿಚಿತ ಭಕ್ತಾದಿ, ಭದ್ರತಾ ಸಿಬ್ಬಂದಿಯನ್ನು ದಾಟಿ ಹೇಗೆ ಮೊಬೈಲ್ ಅಥವಾ ಕ್ಯಾಮರಾ ಕೊಂಡೊಯ್ದು ವಿಡಿಯೋ ಮಾಡಿದ್ದಾನೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಭಾನುವಾರ ತಿರುಮಲದಲ್ಲಿ ಸುರಿದ ಧಾರಾಕಾರ ಮಳೆಯಿಂದ 2 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇದೇ ವೇಳೆ ಘಟನೆ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















