ಶಿವಮೊಗ್ಗ: ಹಿರಿಯ ಪತ್ರಕರ್ತ ಆರ್.ಟಿ. ವಿಠ್ಠಲಮೂರ್ತಿ ಯವರು ಬರೆದಿರುವ ಇದೊಂಥರಾ ಆತ್ಮಕತೆ ಪುಸ್ತಕ ಅ.26 ರ ಶನಿವಾರ ಬೆಳಿಗ್ಗೆ 10-30ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್’ನಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಮಾಹಿತಿ ನೀಡಿದ ಅವರು, ಅ.26 ರಂದು ನನ್ನ ಜನ್ಮ ದಿನ. ಪ್ರತಿ ಜನ್ಮ ದಿನದಂದು ನನಗೆ ಶುಭಾಶಯದ ಉಡುಗೊರೆ ನೀಡುತ್ತಿರುವ ಆತ್ಮೀಯರ ಮುಂದೆ ನಾನು ಸಂಭ್ರಮದಿಂದ ಇಡುತ್ತಿರುವ ಕಾಣಿಕೆ ಇದು. ನನ್ನ ಕೈಲಿ ಕೊಡಲು ಸಾಧ್ಯವಿರುವ ಉಡುಗೊರೆ ಎಂದರೆ ಇದೊಂದೇ ಎಂದು ತಿಳಿಸಿದರು.
ಕಳೆದ ಮೂವತ್ತು ವರ್ಷಗಳಲ್ಲಿ ರಾಜಕಾರಣದ ಅಂಗಳದಲ್ಲಿ ನಾನು ಕಂಡ ಮಹಾನ್ ನಾಯಕರಿಂದ ಹಿಡಿದು ಹಲವರ ಅಂತರಂಗದ ಕತೆಗಳನ್ನು ಈ ಪುಸ್ತಕ ತನ್ನ ಸೆರಗಿನಲ್ಲಿ ಬೆಚ್ಚಗೆ ಇಟ್ಟುಕೊಂಡಿದೆ.
ಏಕಕಾಲಕ್ಕೆ ಅದು ನನ್ನ ಆತ್ಮದಲ್ಲಿ ಉಳಿದುಕೊಂಡ ಕತೆಗಳಾಗಿ, ಅದೇ ಕಾಲಕ್ಕೆ ಹಲ ಮಹನೀಯರ ಆತ್ಮ ಕತೆಯ ಭಾಗಗಳಾಗಿಯೂ ಇರುವುದರಿಂದ ಪುಸ್ತಕಕ್ಕೆ ಇದೊಂಥರಾ ಆತ್ಮಕತೆ ಎಂದು ಹೆಸರಿಟ್ಟಿದ್ದೇನೆ.
ನಾಡಿನ ಖ್ಯಾತ ಬಹುರೂಪಿ ಪ್ರಕಾಶನ ಪ್ರಕಟಿಸುತ್ತಿರುವ ಈ ಪುಸ್ತಕವನ್ನು ನೀವು ಖಂಡಿತವಾಗಿಯೂ ಇಷ್ಟಪಡುತ್ತೀರಿ ಎಂಬ ನಂಬಿಕೆ ನನಗಿದೆ. ಖ್ಯಾತ ಪತ್ರಕರ್ತರೂ ಆಗಿರುವ ’ಬಹುರೂಪಿ ಪ್ರಕಾಶನ’ದ ಮಾಲೀಕರಾದ ಜಿ.ಎನ್. ಮೋಹನ್ ಅವರು ಅದೆಷ್ಟು ಕಕ್ಕುಲತೆಯಿಂದ ಪುಸ್ತಕವನ್ನು ಹೊರತಂದಿದ್ದಾರೆಂದರೆ? ಈಗ ಅದನ್ನು ಮಾತುಗಳಲ್ಲಿ ಹೇಳಲಾರೆ ಎಂದು ಹೇಳಿದರು.
ಈ ಸಮಾರಂಭಕ್ಕೆ ಪುಸ್ತಕ ಪ್ರಿಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅವರಿ ಕೋರಿದ್ದಾರೆ.
Discussion about this post