Saturday, March 25, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನಾಳೆ: ಸೌಭಾಗ್ಯಪ್ರದ ವಟಸಾವಿತ್ರೀ ವ್ರತ: ಆಚರಣೆ ಯಾಕೆ?

ಜೂನ್ 17 ಸೌಭಾಗ್ಯಪ್ರದ ವಟಸಾವಿತ್ರೀ ವ್ರತ ತನ್ನಿಮಿತ್ತ ಈ ಸಕಾಲಿಕ ಲೇಖನ

June 16, 2019
in Special Articles
0 0
0
Share on facebookShare on TwitterWhatsapp
Read - 7 minutes

ಹಿಂದೂ ಧರ್ಮದಲ್ಲಿ ಎಷ್ಟು ದೇವತೆಗಳಿದ್ದಾರೋ ಅಷ್ಟು ವ್ರತಗಳಿವೆ ಎಂದರೆ ಅತಿಶಯೋಕ್ತಿಯೇನಲ್ಲ. ಈ ವ್ರತಗಳಲ್ಲಿ ಹೆಚ್ಚಿನವು ಸ್ತ್ರೀಯರೇ ಆಚರಿಸುವಂಥವು. ಅಂಥ ವ್ರತಗಳಲ್ಲಿ `ವಟಸಾವಿತ್ರೀ ವ್ರತ’ವೂ ಒಂದು. ಜ್ಯೇಷ್ಠಮಾಸದ ಪಾಡ್ಯದಿಂದ ಪ್ರಾರಂಭವಾಗುವ ಈ ವ್ರತವು ಸಮಾಪ್ತಿಗೊಳ್ಳುವುದು ಅದೇ ಮಾಸದ ಹುಣ್ಣಿಮೆಯಂದು. ಆದರೆ ಬಹುತೇಕ ಕಡೆಗಳಲ್ಲಿ ಹುಣ್ಣಿಮೆಯಂದೇ ಈ ವ್ರತದ ಆಚರಣೆ ನಡೆಯುತ್ತದೆ.

ಅಲ್ಪಾಯುಷಿ ಎಂದು ಗೊತ್ತಿದ್ದರೂ ಸತ್ಯವಾನನನ್ನು ವರಿಸಿದವಳು ಮಧ್ಯದೇಶದ ರಾಜಕುಮಾರಿ ಸಾವಿತ್ರಿ. ಒಂದು ದಿನ ಸತ್ಯವಾನ ಕಟ್ಟಿಗೆ ತರಲು ಹೊರಟಾಗ ಸಾವಿತ್ರಿ ಆತನನ್ನು ಹಿಂಬಾಲಿಸಿದಳು. ಕಾಡಿನಲ್ಲಿ ಕಟ್ಟಿಗೆ ಒಟ್ಟುಮಾಡಿ ಬಳಲಿದ ಸತ್ಯವಾನ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲೆಂದು ಮಲಗಿದ್ದು ವಟವೃಕ್ಷದ ಅಡಿಯಲ್ಲಿ. ಅಲ್ಲಿಗೆ ಬಂದು ಸತ್ಯವಾನನ ಪ್ರಾಣವನ್ನು ಸೆಳೆದ ಯಮಧರ್ಮನನ್ನು ಹಿಂಬಾಲಿಸಿದ ಸಾವಿತ್ರಿ, ಅವನೊಡನೆ ವಾದಿಸಿ ಪತಿಯ ಪ್ರಾಣವನ್ನು ಮರಳಿ ಪಡೆದಳು. ಯಾವ ವಟವೃಕ್ಷದ ಬುಡದಿಂದ ಸತ್ಯವಾನನ ಪ್ರಾಣವನ್ನು ಕೊಂಡೊಯ್ದಿದ್ದನೋ ಅಲ್ಲಿಗೆ ಮರಳಿ ಅವನ ಮೃತದೇಹದಲ್ಲಿ ಮತ್ತೆ ಪ್ರಾಣವಾಯು ಸಂಚರಿಸುವಂತೆ ಮಾಡಿದ ಯಮಧರ್ಮ. ಸಾವಿತ್ರಿಯ ಪತಿಯ ಆಯುಷ್ಯದಂತೆಯೇ ತಮ್ಮ ಪತಿಯ ಆಯುಷ್ಯವೂ ಹೆಚ್ಚಾಗಲೆಂದು ಸುಮಂಗಲಿಯರು ಈ ವ್ರತವನ್ನು ಆಚರಿಸುತ್ತಾರೆ.


ಆಚರಣಾ ಕ್ರಮ
ಮದುವೆಯಾದ ಸ್ತ್ರೀಯರು ತಲೆಸ್ನಾನ ಮಾಡಿ ಮಡಿಯುಟ್ಟು ವಟವೃಕ್ಷಕ್ಕೆ ಷೋಡಶೋಪಚಾರ ಪೂಜೆ ಮಾಡಬೇಕು. ಪೂಜೆಯ ಪ್ರಾರಂಭದಲ್ಲಿ `ನನಗೆ ಮತ್ತು ನನ್ನ ಪತಿಗೆ ಆರೋಗ್ಯ ಸಂಪನ್ನ ದೀರ್ಘಾಯುಷ್ಯ ದೊರೆಯಲಿ’ ಎಂದು ಸಂಕಲ್ಪ ಮಾಡಬೇಕು. ಪೂಜೆಯಲ್ಲಿ ಅಭಿಷೇಕವಾದ ನಂತರ ವಟವೃಕ್ಷಕ್ಕೆ ಪ್ರದಕ್ಷಿಣಾಕಾರದಲ್ಲಿ ಮೂರು ಸುತ್ತು ಹತ್ತಿಯ ದಾರವನ್ನು ಸುತ್ತಬೇಕು. ವಟವೃಕ್ಷಕ್ಕೆ 108 ಪ್ರದಕ್ಷಿಣೆ ಸಲ್ಲಿಸುತ್ತ ಅದರ ಕಾಂಡಕ್ಕೆ ಹತ್ತಿಯ ದಾರವನ್ನು 108 ಸುತ್ತು ಸುತ್ತಿ ಕಟ್ಟುವ ಕ್ರಮವೂ ಕೆಲವೆಡೆಗಳಲ್ಲಿದೆ. ಆ ನೂಲು ಯಮನ ಪಾಶಕ್ಕಿಂತ ನೂರೆಂಟು ಪಟ್ಟು ಉದ್ದ ಮತ್ತು ವಟವೃಕ್ಷದ ಮೂಲಕ ಪ್ರತಿನಿಧಿಸಲ್ಪುಡುವ ಪತಿಯ ದೀರ್ಘಾಯುಷ್ಯಕ್ಕೆ ಪತ್ನಿಯಿಂದ ರಕ್ಷಣೆ, ಹಾರೈಕೆಗಳ ಭದ್ರ ಬಂಧ ಎಂಬುದರ ಸಂಕೇತವಾಗಿದೆ.

ಪೂಜೆಯ ಕೊನೆಯಲ್ಲಿ ‘ನನಗೆ ಅಖಂಡ ಸೌಭಾಗ್ಯ, ಪತಿಗೆ ಆರೋಗ್ಯ ಸಂಪನ್ನ ದೀರ್ಘಾಯುಷ್ಯ ಲಭಿಸಲಿ, ಪ್ರತಿ ಜನ್ಮದಲ್ಲೂ ಈ ಪತಿಯೇ ಸಿಗಲಿ. ನಮ್ಮ ಕುಟುಂಬವು ಧನಧಾನ್ಯ ಮಕ್ಕಳು, ಬಂಧುಬಳಗದಿಂದ ಈ ವಟವೃಕ್ಷದಂತೆ ವಿಸ್ತಾರವಾಗಿ ಬೆಳೆಯಲಿ’ ಎಂದು ಪ್ರಾರ್ಥಿಸಿಕೊಳ್ಳಬೇಕು. ನೈವೇದ್ಯ ಸಮರ್ಪಣೆ, ವಿಪ್ರರಿಗೆ ದಕ್ಷಿಣೆ, ಮುತ್ತೈದೆಯರಿಗೆ ಬಾಗಿನ ಕೊಡುವುದು, ಸತ್ಯವಾನ-ಸಾವಿತ್ರಿ ಕಥೆ ಪಠಿಸುವುದು ಇತ್ಯಾದಿಗಳೆಲ್ಲ ಈ ವ್ರತದಲ್ಲೂ ಇವೆ. ಆಯಾ ಪ್ರದೇಶಗಳಿಗೆ ವಿಶಿಷ್ಟವಾದ ಸಣ್ಣಪುಟ್ಟ ಬದಲಾವಣೆಗಳೂ ಇರುತ್ತವೆ.


ವಟವೃಕ್ಷದ ಪರಿಕಲ್ಪನೆಗೆ ವಿಶೇಷ ಅರ್ಥವಿದೆ. ಮಹಾಪ್ರಳಯವಾದಾಗ ಬಾಲಮುಕುಂದನ ರೂಪದಲ್ಲಿರುವ ಪರಮಾತ್ಮನು ಮಲಗಿರುವುದು ವಟವೃಕ್ಷದ ಎಲೆಯ ಮೇಲೆ. ಈ ವೃಕ್ಷವು ಹಲವು ದೇವತೆಗಳ ವಾಸಸ್ಥಾನವೂ ಹೌದು. ಕೊಂಬೆಗಳಿಂದ ನೆಲದವರೆಗೆ ಬರುವ ಬೇರುಗಳಿಂದಾಗಿ ಇದು ತುಂಬ ವಿಸ್ತಾರವಾಗಿರುತ್ತದೆ. ಪವಿತ್ರ ಯಜ್ಞವೃಕ್ಷಗಳಾದ ಅಶ್ವತ್ಥ, ಅತ್ತಿ, ಶಮಿ, ವಟ ಇವುಗಳಲ್ಲಿ ವಟವೃಕ್ಷದ ಆಯುಷ್ಯವೇ ಅತ್ಯಧಿಕವಾದುದು. ಈ ಹಿನ್ನೆಲೆಯಲ್ಲಿ ವಟಸಾವಿತ್ರೀ ವ್ರತದ ಆಚರಣೆಯು ಮಹತ್ವದ್ದಾಗಿದೆ.

ದಿಟ್ಟ ಪತಿವ್ರತೆ ಸಾವಿತ್ರಿ
ಎದೆಯೊಲವು
ಋತ ನಿಯಮಕ್ಕತೀತವೆಂಬುದನ್ನು
ನಾನೆಂದೂ ವೀರ ಕ್ಷತ್ರಿಯ ಪುತ್ರಿ..
ಕುವೆಂಪು ಅವರ ಯಮನ ಸೋಲು ನಾಟಕದ ಸಾಲುಗಳಿವು..

ಅಬ್ಬಾ.. ಎಂತಹಾ ಆತ್ಮವಿಶ್ವಾಸ ಈ ಸಾವಿತ್ರಿಯದು… ಸಾಮಾನ್ಯವಾಗಿ ಸಾವಿತ್ರಿ ಎಂಬ ಹೆಸರು ಕೇಳಿದೊಡನೇ ಎಲ್ಲರ ಮನಸ್ಸಿನಲ್ಲಿ ಮೂಡುವುದು ಸಾವಿನ ಸಂಚಿಗೇ ಸೋಲು ತಂದ, ಪತಿಯ ಪ್ರಾಣವನ್ನೇ ಯಮನಿಂದ ಬೇಡಿ ತಂದ ಸತಿ ಸಾವಿತ್ರಿಯ ದೈವೀಕ ಪಾತಿವ್ರತ್ಯ…! ಆದರೆ ಸಾವಿತ್ರಿಯದು ಪತಿಯ ಪ್ರಾಣಕ್ಕೋಸ್ಕರ ದೈನ್ಯತೆಯಿಂದ ಬೇಡುವಂತಹ, ಬರೀ ದೀನತೆಯೇ ತುಂಬಿರುವಂತಹ ಕರುಣಕಥೆಯಂತೂ ಖಂಡಿಕಾ ಅಲ್ಲ. ಕಷ್ಟಕ್ಕೆ ಹೆದರದ, ಇಟ್ಟ ಹೆಜ್ಜೆ ಹಿಂದಿಡದ, ಮುಂದಿಟ್ಟ ಹೆಜ್ಜೆಯನ್ನು ಸಮರ್ಥಿಸಿಕೊಳ್ಳುವ ಛಾತಿಯಿದ್ದ, ಸ್ಪಷ್ಟನಿಲುವಿನ, ಖಚಿತ ಗೆಲುವಿನ ಗಮ್ಯವನ್ನು ಹೊತ್ತ ದಿಟ್ಟ ಹೆಣ್ಣುಮಗಳ ಸ್ಫೂರ್ತಿದಾಯಕ ಕಥೆ.

ಭಾರತದ ಪುಟಗಳಲ್ಲಿ ಸಾವಿತ್ರಿಯ ಕಥೆ ವನಪರ್ವತದಲ್ಲಿ ಬರುತ್ತದೆ.ಮಧ್ಯದೇಶದ ರಾಜನಾಗಿದ್ದ ಅಶ್ವಪತಿ ರಾಜನು ಸಂತಾನವಿಲ್ಲೆಂದು ಕೊರಗಿ ದೇವಿ ಸಾವಿತ್ರಿಯನ್ನು ಕುರಿತು ಘೋರ ತಪಗೈದು ಪಡೆದ ಅಪರೂಪದ ಸಂತಾನ ಈ ಸಾವಿತ್ರಿ.ಸಾವಿತ್ರಿಯ ಕೃಪಾಕಟಾಕ್ಷದಿಂದ ಹುಟ್ಟಿದ್ದರಿಂದ ಅವಳ ಹೆಸರನ್ನೇ ಪಡೆದ ಸಾವಿತ್ರಿಯು ಯೋಗ್ಯಪ್ರಾಯಕ್ಕೆ ಬರುತ್ತಲೇ ತನ್ನ ತಂದೆಯ ಅನುಮತಿ ಪಡೆದು ತನಗೆ ಯೋಗ್ಯವರನನ್ನು ಹುಡುಕಿಕೊಳ್ಳಲು ಭೂ ಸಂಚಾರಕ್ಕೆ ಹೊರಡುತ್ತಾಳೆ. ಅಪ್ಸರೆಯಂತೆ, ಬಂಗಾರದ ಪುತ್ಥಳಿಯಂತೆ ಶೋಭಿಸುತ್ತಿದ್ದ ಈ ಸಂಸ್ಕಾರಿ ಸತ್ಕುಲಪ್ರಸೂತೆ ಇಡೀ ಭೂಲೋಕ ತಿರುಗಿ ಮರಳಿ ಬಂದು ತಾನು ಸಾಲ್ವದೇಶದ ದ್ಯುಮತ್ಸೇನ ರಾಜನ ಮಗ ಸತ್ಯವಾನನನ್ನು ವರಿಸಲು ನಿಶ್ಚಯಿಸಿದ್ದೇನೆ ಎನ್ನುತ್ತಾಳೆ. ಆಗ ರಾಜ ಅಶ್ವಪತಿಯ ಆಸ್ಥಾನದಲ್ಲಿ ಉಪಸ್ಥಿತರಿದ್ದ ತ್ರಿಲೋಕ ಸಂಚಾರಿ ನಾರದರು ಈ ವಿಷಯದಲ್ಲಿ ಯಾಕೋ ಅಸಮ್ಮತಿಯ ಮುಖಭಾವದಲ್ಲಿದ್ದುದು ಅಶ್ವಪತಿಯ ಆತಂಕಕ್ಕೆ ಕಾರಣವಾಯಿತು. ಅವರನ್ನು ರಾಜನು ಕೂತೂಹಲದಿಂದ ವಿಚಾರಿಸಿದಾಗ ನಾರದರು ಸತ್ಯವಾನನು ಸರ್ವಗುಣಸಂಪನ್ನನೇ ಆದರೂ ಅಲ್ಪಾಯು. ಇನ್ನವನ ಆಯಸ್ಸು ಒಂದೇ ವರ್ಷ.. ‘ಸಂವತ್ಸರೇಣ ಕ್ಷೀಣಾಯುಃ’ ಎಂದು ಬಿಡುತ್ತಾರೆ..!


ಅಶ್ವಪತಿಯು ಆಘಾತಕ್ಕೊಳಗಾಗಿ ಸಾವಿತ್ರಿಯ ನಿರ್ಧಾರ ಬಲು ಅಚಲವಾಗಿತ್ತು. ಮನಸಾ ಅವನನ್ನು ಒಪ್ಪಿಯಾದ ಮೇಲೆ ಅವನೇ ನನ್ನ ಪತಿಯೆಂದು ಪಟ್ಟು ಹಿಡಿದ ಸಾವಿತ್ರಿಯ ಹಠಕ್ಕೆ ಮಣಿದ ಅಶ್ವಪತಿಯು ಕಡೆಗೂ ಮದುವೆಗೆ ಒಪ್ಪಬೇಕಾಗುತ್ತದೆ. ಆದರೆ ಅಷ್ಟರಲ್ಲಿ ದ್ಯುಮತ್ಸೇನನು ವೈರಿಗಳಿಂದ ಸೋಲಿಸಲ್ಪಟ್ಟು ದೇಶಭ್ರಷ್ಟನಾಗಿ. ಅಷ್ಟಲ್ಲದೇ ಕುರುಡನೂ ಆಗಿ ತನ್ನ ಸಂಸಾರ ಸಮೇತ ಅರಣ್ಯದಲ್ಲಿ ಇರಬೇಕಾಗಿ ಬಂದಿತ್ತು. ಆದರೂ ಸಾವಿತ್ರಿ ಧೃತಿಗೆಡದೇ ತಾನು ದ್ಯುಮತ್ಸೇನನ ಮಗ ಸತ್ಯವಾನನನು ವರಿಸಲು ಮುಂದಾಗುತ್ತಾಳೆ. ಅಗ್ನಿಸಾಕ್ಷಿಯಾಗಿ ಇಬ್ಬರ ವಿವಾಹ ನೆರವೇರಿದ ನಂತರ ರಾಜಕುಮಾರಿ ಸಾವಿತ್ರಿಯು ತನ್ನ ಅಮೂಲ್ಯವಾದ ರತ್ನಾಭರಣಗಳನ್ನು ಮತ್ತು ರಾಜ ಉಡುಪುಗಳನ್ನು ತೆಗೆದಿಟ್ಟು ಪರ್ಣಶಾಲೆಗೆ ಒಪ್ಪುವಂತಹ ನಾರುಮಡಿಗಳನ್ನುಟ್ಟು ತನ್ನ ಅತ್ತೆಮಾವನ ಸೇವೆಯಲ್ಲಿ ನಿರತಳಾಗಿ ಹಾಗೆಯೇ ತನ್ನ ಪತ್ನೀಧರ್ಮವನ್ನೂ ಅತೀ ಪ್ರೀತಿಯಿಂದ ನಿಭಾಯಿಸುತ್ತಾ ಬರುವ ಅತಿಥಿಗಳ ಸತ್ಕಾರ, ದೇವರ ಧ್ಯಾನ ಹೀಗೇ ಎಲ್ಲದರಲ್ಲೂ ಸಂಸ್ಕಾರವಂತಳಾಗಿ ಇರುತ್ತಿದ್ದರೂ ಮನದ ಮೂಲೆಯಲ್ಲಿ ನಾರದರಂದಿದ್ದ ‘ಸಂವತ್ಸರೇಣ ಕ್ಷೀಣಾಯುಃ’ ಎಂಬ ವಚನ ಸದಾ ಅವಳ ಮನದಲ್ಲಿ ಅನುರಣಿಸುತ್ತಲೇ ಇತ್ತು. ಈ ವಿಷಯವನ್ನು ತನ್ನ ಅತ್ತೆಮಾವ ಗಂಡನೊಡನೆ ಹೇಳಿಕೊಳ್ಳದೇ ತಾನ್ನೊಬ್ಬಳೇ ಒಳಗೇ ವೇದನೆ ಅನುಭವಿಸುತ್ತಾ ಗಂಡನೊಡನೇ ಆತ್ಮಸಖಿಯಂತೆ ಅರೆಕ್ಷಣ ಅವನನ್ನು ಬಿಡದೇ ಅನುಸರಿಸಿಕೊಂಡು ಇದ್ದಳು.


ಆದರೆ ಸುಖದ ದಿನಗಳು ಬಲು ತುರುಸಿನಿಂದ ಓಡುತ್ತವೆಯಲ್ಲವೇ. ಹಾಗೆಯೇ ಸಾವಿತ್ರಿ ಸತ್ಯವಾನರ ಮದುವೆಯಾಗಿ ಒಂದು ವರುಷವಾಗಲು ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಇತ್ತು. ತನ್ನ ಮುತ್ತೈದೆ ತನವನ್ನು ಕಾಪಾಡಿಕೊಳ್ಳು ಸಾವಿತ್ರಿಯು ರಾತ್ರಿ ಹಗಲೆನ್ನದೇ ಹರಕೆಗಳ ಹೊತ್ತು ತ್ರಿರಾತ್ರವೆಂಬ ವ್ರತವನ್ನು ಆಚರಿಸಿದಳು. ಅವಳ ವ್ರತ ನಿಯಮಗಳು ಎಲ್ಲರಿಗೂ ತನ್ನ ಕಷ್ಟಗಳನ್ನು, ಕಾಡುತ್ತಿರುವ ಕೇಡನ್ನು ಹೇಳಿಕೊಳ್ಳದ ಸಮಚಿತ್ತ ಅವಳದು.

ಕಡೆಗೂ ಬಂತು ಸತ್ಯವಾನನು ಆಯುಷ್ಯದಲ್ಲಿ ಅಂತಿಮ ದಿನ. ಕಾಡಿಗೆ ಕಟ್ಟಿಗೆಯೊಡೆಯಲು ಹೊರಟ ಅವನ ಜೊತೆ ಹೊರಡುವ ಮುನ್ನ ತನ್ನ ಅತ್ತೆಮಾವಂದಿರಿಗೆ ನಮಿಸಿ, ದೇವರಿಗೆ ದೀಪ ಹಚ್ಚುತ್ತಾ ಕುಂಕುಮಭಾಗ್ಯವ ಬೇಡಿ, ಋಷಿಮುನಿಗಳಿಗೆ ನಮಸ್ಕರಿಸಿ ‘ದೀರ್ಘಸುಮಂಗಲೀಭವ’ ಎನ್ನುವ ಆರ್ಶೀವಾದ ಪಡೆದಳು.ತ್ರಿರಾತ್ರ ವ್ರತ ಮುಗಿದಿದ್ದರೂ ಊಟವನ್ನೂ ಮಾಡದೇ ಹೊರಟ ಅವಳ ಹೃದಯ ಮೂಕವಾಗಿ ಆಳುತ್ತಿದ್ದರೂ ದಿಟ್ಟ ಧಾರ್ಮಿಕ ಮನಸ್ಸು ಧೈರ್ಯ ಹೇಳುತ್ತಿತ್ತೇನೋ. ಪ್ರತಿಹೆಜ್ಜೆ ಇಡುವಾಗಲೂ ಸಾವಿತ್ರಿ ಸತ್ಯವಾನನ ನೆರಳಾಗಿದ್ದರೂ ಕಾಲ ಯಾರನ್ನು ಕಾಯುತ್ತದೆ..? ಕಾಲಪುರುಷನಿಗೆ ಕರುಣೆಯೇ ಇಲ್ಲವಂತೆ.ಕಾಲನ ದೂತರು ಬಂದು ಕಾಲೆಳೆದರೆ ಕಾಲನ ಅಧೀನರಾಗುವದಷ್ಟೇ ಮನುಷ್ಯನಿಗುಳಿಯುವುದು. ಹಾಗೆ ಸುಸ್ತಾಗಿ ಉರುಳಿದ ಸತ್ಯವಾನನು ಸಾವಿತ್ರಿಯ ತೊಡೆಯೊರಗಿ ಮಲಗಿದವನು ಹಾಗೆಯೇ ಪ್ರಾಣೋತ್ಕ್ರಮಣದ ಗಳಿಗೆಗೆ ಎರವಾದನು. ಸಾವಿತ್ರಿಗೆ ಆಕಾಶವೇ ಕಳಚಿ ಬಿದ್ದಂತಾಯಿತು.ಪರಿಪರಿಯಾಗಿ ರೋದಿಸುತ್ತಾ ದೈವಕ್ಕೆ ಮೊರೆ ಹೋಗುತ್ತಿದ್ದವಳು ಸತ್ಯವಾನನ ಜೀವಾತ್ಮವನ್ನು ಒಯ್ಯಲು ಬಂದಿದ್ದ ಕೆಂಪು ಬಟ್ಟೆಯನ್ನುಟ್ಟಿದ್ದ ಸೂರ್ಯನಂತೆ ಪ್ರಕಾಶಿಸುತ್ತಿದ್ದ ಯಮನನ್ನು ಕಂಡು ಬೆಚ್ಚಿದಳು. ಆದರೆ ನಂತರ ನಡೆದಿದೆಲ್ಲವೂ ಧರ್ಮದೊಡನೇ ಧರ್ಮದ ಯುದ್ಧ… ಕಾಲಧರ್ಮದೊಡನೆಯೇ ಒಲವ ಧರ್ಮ ಯುದ್ಧ..!

ಬಂದ ಯಮ ಸಮಯ ವ್ಯಯಿಸದೇ ಸತ್ಯವಾನನ ಜೀವಾತ್ಮವನ್ನು ಪಾಶದಲ್ಲಿ ಸೆಳೆದುಕೊಂಡು ಹೊರಟೇಬಿಟ್ಟನು.ಛಲ ಬಿಡದೇ ಅವನನ್ನೇ ಹಿಂಬಾಲಿಸಿದ ಸಾವಿತ್ರಿಯು ಯಮನೊಡನೇ ‘ಮದುವೆಯಾದ ಈ ಒಂದು ವರ್ಷದಲ್ಲಿ ಅರೆಗಳಿಗೆ ಬಿಟ್ಟಿರದ ನನ್ನ ಪ್ರಿಯನನ್ನು ನಾ ಅನುಸರಿಸುವುದು ಪತ್ನೀಧರ್ಮವಲ್ಲವೇ..? ವಿವಾಹದ ಕಾಲದಲ್ಲಿ ಸತಿಪತಿಯರು ಏಳು ಹೆಜ್ಜೆಗಳನ್ನಿಟ್ಟು ಅಗ್ನಿಯ ಸುತ್ತ ಪ್ರದಕ್ಷಿಣೆ ಬಂದು ಶಾಶ್ವತವಾದ ಮಿತ್ರತ್ವವನ್ನು ಪಡೆದಿರುವುದಿಲ್ಲವೇ..? ಸತ್ಪುರುಷರು ಯಾವ ಧರ್ಮವನ್ನು ಪ್ರಧಾನವೆನ್ನುತ್ತಾರೋ ಆ ಆತ್ಮಧರ್ಮದ ಪ್ರಕಾರ ನನ್ನ ಪತಿಯನ್ನು ನನ್ನಿಂದ ಬೇಡುತ್ತಿದ್ದೇನೆ.. ಯಮನೇ ನನ್ನ ಈ ಜಿಜ್ಞಾಸೆಗೆ ಉತ್ತರಿಸು ಮತ್ತು ಪತಿಭೀಕ್ಷೆ ನೀಡು’ ಎಂದಾಗ ಅವಳ ಧರ್ಮಸಮ್ಮತವಾದ ಮಾತಿಗೆ ಒಪ್ಪಿ ಮೆಚ್ಚುವ ಯಮನು ಪತಿಭಿಕ್ಷೆಯನ್ನು ಹೊರತುಪಡಿಸಿ ಏನನ್ನಾದರೂ ವರ ಕೇಳೆಂದಾಗ ತಾ ಹೊಕ್ಕ ಗಂಡನ ಮನೆಯ ಶ್ರೇಯಸ್ಸನ್ನೇ ಸದಾ ಬಯಸುವ ಈ ಆದರ್ಶ ಹೆಣ್ಣು ತನ್ನ ಮಾವನವರಾದ ದ್ಯುಮತ್ಸೇನರ ಅಂಧತ್ವ ನೀಗಿಸಿ ಅವರು ಅತಿಬಲಿಷ್ಠರಾಗಲಿ ಎನ್ನುವ ವರ ಪಡೆದಳು. ತಥಾಸ್ತು ಎನ್ನುತ್ತಾಲೇ ‘ಸಾಕು ನನ್ನೊಡನೆ ಪಯಣಿಸಿದ್ದು. ಹೊರಡುಬಿಡು ಆಶ್ರಮಕ್ಕೆ ನಿನ್ನ ಗಂಡನ ಔಧ್ರ್ವ ದೈಹಿಕ ಕ್ರಿಯೆಗಳನ್ನು ಮಾಡಲು’ ಎಂದು ಯಮನು ಸಾವಿತ್ರಿಯನ್ನು ಅನುನಯಿಸಲು ಪ್ರಯತ್ನಿಸಿದನು. ಆದರೆ ಸಾವಿತ್ರಿ ಛಲಗಾತಿ ಹೆಣ್ಣು.ಗಂಡನನ್ನು ಮರಳಿ ಪಡೆಯಲೇಬೇಕೆಂಬ ಉತ್ಕಟ ವಾಂಛೆಯಲ್ಲಿ ಮತ್ತೆ ಮುಂದೆ ಹೊರಟ ಯಮನನ್ನೇ ಬಿಡದೇ ಬಿಂಬಾಲಿಸುತ್ತಾ ಯಮನೊಡನೆಯೇ ಧರ್ಮಜಿಜ್ಞಾಸೆ ಮಾಡುತ್ತಾ ಇನ್ನೂ ಎರಡು ವರಗಳನ್ನು ಯಮನಿಂದ ಪಡೆದಳು.

ಅವಳ ಧರ್ಮಜ್ಞಾನಕ್ಕೂ, ಬುದ್ಧಿಪ್ರಚೋದಕ ಮಾತುಗಳಿಗೂ ಪ್ರಸನ್ನನಾಗಿ ಪತಿಭಿಕ್ಷೆಯ ಹೊರತು ಏನಾದರೂ ಎರಡು ವರಗಳ ಕೇಳೆಂದ ಯಮಧರ್ಮ. ತನ್ನ ಮಾವನ ಕಳೆದುಹೋದ ರಾಜ್ಯ ಮರಳಿ ಸಿಗಲೆಂದೂ ಮತ್ತು ತನ್ನ ತವರು ಮನೆಯಲ್ಲಿ ಗಂಡು ಸಂತಾನವಿರದ ಕಾರಣ ತನ್ನ ತಾಯಿಗೆ ನೂರು ಔರಸಪುತ್ರರು ದಯಪಾಲಿಸೆಂದು ಕೇಳಿ ಯಮನ ಹತ್ತಿರ ತಥಾಸ್ತು ಎನಿಸಿಕೊಂಡ ಸಾವಿತ್ರಿ ಹೀಗೇ ತನ್ನ ತವರು ಮನೆ ಮತ್ತು ತನ್ನ ಗಂಡನ ಮನೆಯನ್ನು ತನ್ನ ಕುಶಾಗ್ರಮತಿಯ ಚಾಣಾಕ್ಷತನದಿಂದ ಉತ್ತರೋತ್ತರ ಶ್ರೇಯೋಭಿವೃದ್ಧಿಯಾಗುವಂತೆ ಮಾಡುತ್ತಾಳೆ. ಅಂದರೂ ಯಮನ ಬೆನ್ನು ಬಿಡದ ಸಾವಿತ್ರಿಯು ಯಮನನ್ನು ಸ್ತುತಿಸುತ್ತಾ ‘ನೀನು ಸೂರ್ಯಪುತ್ರನು. ಆದ್ದರಿಂದಲೇ ವೈವಸ್ವತನೆಂದು ಕರೆಯಲ್ಪಟ್ಟಿರುವೆ. ನಿನ್ನಿಂದಲೇ ಧರ್ಮವು ಪೃಥ್ವಿಯಲ್ಲಿ ಆಚರಿಸಲ್ಪಡುವುದರಿಂದ ನಿನ್ನನ್ನೂ ಧರ್ಮರಾಜನೆಂದು ಕರೆಯುತ್ತಾರೆ. ಧರ್ಮಾಚರಣೆಯೇ ಸನಾತನ ಧರ್ಮದ ತಿರುಳು.ಸಜ್ಜನರು ತಮ್ಮಲ್ಲಿ ಶರಣು ಬಂದ ವೈರಿಗಳಿಗೂ ದಯೆ ತೋರುವರು. ಹೀಗಿರುವಾಗ ನನಗೆ ಪತಿಭಿಕ್ಷೆ ನೀಡಬಾರದೇ ಓ ಯಮಧರ್ಮನೇ’ ಎಂದು ಬೇಡಿದಾಗ ಯಮನು ಅವಳ ಜ್ಞಾನಪ್ರಚೋದಕ ಮಾತುಗಳಿಂದ ಸುಪ್ರೀತನಾಗಿ ಮಗಳೇ, ಪತಿಭಿಕ್ಞೆಯನ್ನು ಬಿಟ್ಟು ಇನ್ನೊಂದು ವರವನ್ನು ಕೇಳೆಂದಾಗ ಸಾವಿತ್ರಿಯು ನನಗೆ ಸತ್ಯವಾನನಿಂದ ನೂರು ಔರಸ ಪುತ್ರರನ್ನು ಕರುಣಿಸು ಎಂದು ಕೇಳಿದಾಗ ಯಮಧರ್ಮನು ತಕ್ಷಣವೇ ತಥಾಸ್ತು ಎಂದು ಬಿಡುತ್ತಾನೆ. ಆಗ ಸಾವಿತ್ರಿ ಯಮನನ್ನು ‘ಓ ದೇವನೇ.. ದಾಂಪತ್ಯ ಬಲವಿಲ್ಲದೇ ಮಕ್ಕಳನ್ನು ಹೇಗೆ ಪಡೆಯಲಿ. ಗಂಡನಿಲ್ಲದೇ ವರಬಲದಿಂದ ಪಡೆಯುವ ಮಕ್ಕಳಲ್ಲಿ ನನಗೆ ಬಯಕೆಯಿಲ್ಲ. ಆದ್ದರಿಂದ ನನ್ನ ಪತಿಯು ಜೀವಂತವಾಗುವಂತೆ ಅನುಗ್ರಹಿಸು. ಅವನಿಲ್ಲದೇ ನಾನು ಅರೆಕ್ಷಣವೂ ಬದುಕಲಾರೆ. ನನಗೆ ಪತಿಭಿಕ್ಷೆಯನ್ನು ನೀಡಿಬಿಡು’ ಎಂದು ಆದ್ರ್ರತೆಯಿಂದ ಬೇಡಿಕೊಳ್ಳುತ್ತಾಳೆ. ಆಗ ಕಠೋರ ಮೃತ್ಯುಧಾರಿ ಯಮದೇವನು ಕರಗಿ ನೀರಾಗಿ ಕರುಣಾಮಯಿಯಾದನು. ಸಾವಿತ್ರಿಯ ನಿಚ್ಚಳ ಸಜ್ಜನಿಕೆಯ ಪಾಶಕ್ಕೆ ಸಿಕ್ಕು ಪರಭಾವಗೊಂಡು ಯಮನು ಅವಳ ಪಾತಿವ್ರತ್ಯವನ್ನು ಬಗೆಬಗೆಯಾಗಿ ಕೊಂಡಾಡಿ ಅವಳ ಪತಿಯ ಜೀವವನ್ನು ವಿಮುಕ್ತಿಗೊಳಿಸುತ್ತಾ ಪ್ರಾಂಜಲ ಮನಸ್ಸಿನಿಂದ ಹರಸುತ್ತಾ ಅಂತರ್ಧಾನನಾದನು.


ಹೀಗೆ ತನ್ನವರಿಗೆಲ್ಲಾ ಶ್ರೇಯಸ್ಸು ಬಯಸಿದ ಧರ್ಮಶಕ್ತಿಯಿಂದಲೇ ಸಾವಿತ್ರಿ ಯಮಧರ್ಮನನ್ನು ಸೋಲಿಸಿ ತನ್ನ ಧೀಶಕ್ತಿಯನ್ನು ಮೆರೆದಳು.

ಹೆಣ್ಣು ಬಾಲ್ಯದಲ್ಲಿ ತಂದೆಯ ರಕ್ಷಣೆಯಲ್ಲೂ, ಯೌವನದಲ್ಲಿ ಪತಿಯ ರಕ್ಷಣೆಯಲ್ಲೂ ಮತ್ತು ವೃದ್ಧಾಪ್ಯದಲ್ಲಿ ತನ್ನ ಮಕ್ಕಳ ರಕ್ಷಣೆಯಲ್ಲೂ ಇರಬೇಕೆಂಬ ಸಿದ್ಧ ಪ್ರಮೇಯಕ್ಕೆ ಅಪವಾದವಾಗಿ ಇರುವಂತಹ ಬದುಕು ಈ ದಿಟ್ಟಹೆಣ್ಣು ಸಾವಿತ್ರಿಯದು. ಬಾಲ್ಯದಲ್ಲೂ ಯೌವ್ವನದಲ್ಲೂ ತಂದೆಯ ಹಾಗೂ ಮದುವೆಯ ನಂತರ ಗಂಡನ ಮತ್ತು ನಂತರದಲ್ಲಿ ಮಕ್ಕಳ ಗರ್ವವಾಗೂ, ಹೆಮ್ಮೆಯಾಗೂ ಹಾಗೂ ರಕ್ಷಣೆಯಾಗೂ ಇದ್ದ ಪ್ರಬುದ್ಧ ಜೀವನ್ಮುಖಿ ಛಲಗಾತಿ ಈ ಸಾವಿತ್ರಿ. ಬಂದ ಪರಿಸ್ಥಿತಿಗಳಿಗೆ ಕುತ್ತಿಗೆಯನ್ನು ಕೊಟ್ಟು ಎಲ್ಲಾ ವಿಧಿಲಿಖಿತ ಎಂದು ತಪ್ಪನ್ನೆಲ್ಲಾ ಹಣೆಬರಹಕ್ಕೆ ಒರಗಿಸುವಂತಹ ಪಲಾಯನವಾದವು ಎಂದಿಗೂ ಸುಳಿಯದಂತಹ ಸಕಾರಾತ್ಮಕ ಹೆಣ್ಣು ಈ ಸಾವಿತ್ರಿ. ‘ಧರ್ಮವಂ ಧರ್ಮದಿಂದ ಗೆಲ್ಲುವೆನು’ ಎನ್ನುತ್ತಾ ಧರ್ಮಸೂಕ್ಷ್ಮಗಳಿಂದಲೇ ಧರ್ಮಯುದ್ಧ ಗೆದ್ದ ಧರ್ಮಪತ್ನಿಯಿವಳು. ನಾವು ನಿಮಿತ್ತ ಮಾತ್ರ ಎಂಬಂತಹ ನಿರ್ಲಿಪ್ತತೆಯೇ ಮೈವೆತ್ತಂತಹ ಪುರಾಣಗಳಲ್ಲಿ ಕಾಣಬರುವ ನೂರಾರು ಹೆಣ್ಣುಮಕ್ಕಳ ಮಧ್ಯೆ ತನ್ನ ಛಲದಿಂದ ಯಮನನ್ನೇ ಸೋಲಿಸಿದ ಜೀವನ್ಮುಖಿ ಸಾವಿತ್ರಿ ವಿಶಿಷ್ಟವಾಗಿ ನಿಲ್ಲುತ್ತಾಳಲ್ಲವೆ?

ಸದ್ಗುಣವಂತೆ ಸಾವಿತ್ರಿ
ಸದ್ಗುಣ ಸಂಪನ್ನೆಯಾದ ಸಾವಿತ್ರಿ ತನ್ನ ಮೃದು ಸ್ವಭಾವದಿಂದಲೇ ಯಮನನ್ನು ಗೆದ್ದಳು. ಮದ್ರದೇಶದ ರಾಜ ಅಶ್ವಪತಿ ಸಾವಿತ್ರಿದೇವಿಯ ಉಪಾಸಕ.ದೇವಿಯ ಅನುಗ್ರಹದಿಂದ ಹುಟ್ಟಿದ ಹೆಣ್ಣು ಕೂಸಿಗೆ ಅವಳದೇ ಹೆಸರಿಟ್ಟ. ಸಾವಿತ್ರೀ ಎಂದು. ಕಾಲಕಳೆದಂತೆ ರೂಪವತಿಯೂ, ಗುಣಸಂಪನ್ನೆಯೂ ಆಗಿ ಬೆಳೆದು ನಿಂತಳು ಸಾವಿತ್ರಿ. ಒಮ್ಮೆ ಸಾವಿತ್ರಿಯೂ ಪ್ರಾತರ್ವಿಧಿಗಳನ್ನು ನಡೆಸಿ, ದೇವತಾರ್ಚನೆಯನ್ನು ಮುಗಿಸಿ ಎಂದಿನಂತೆ ತಂದೆ, ತಾಯಿಗೆ ವಂದಿಸಲು ಪುಷ್ಪಾಂಜಲಿಯಾಗಿ ಬಳಿ ಬಂದು ನಮಿಸಿದಳು. ಆರ್ಶೀವದಿಸಿ ಪ್ರೀತಿಯಿಂದ ತಂದೆ ಹೇಳಿದ…

‘ಮಗು!ನಿನಗೆ ಯೋಗ್ಯನಾದ ವರನನ್ನು ನೀನೇ ಹುಡುಕಿ ತಾ.ಅವನು ಸಮರ್ಥನು ಹೌದೋ ಎಂದು ಪರೀಕ್ಷಿಸಿ ವಿವಾಹ ಮಾಡುವೆನು’. ವರ ತನಗೆ ಯೋಗ್ಯನಾಗಿರಬೇಕು, ತಂದೆ ಮೆಚ್ಚುವಂತಿರಬೇಕು. ಅಂತಹ ಹುಡುಗನನ್ನು ಹುಡುಕುತ್ತಾ ಮಂತ್ರಿಯೊಡನೆ ರಥದಲ್ಲಿ ಎಲ್ಲಾ ದಿಕ್ಕುಗಳಲ್ಲೂ ಸಂಚರಿಸಿದಳು ಸಾವಿತ್ರಿ. ಕೆಲ ದಿನಗಳ ಬಳಿಕ ವರಾನ್ವೇಷಣೆ ಮುಗಿಸಿದ ಸಾವಿತ್ರಿ ಹಿಂದಿರುಗಿದಳು. ಆಗ ತಂದೆಯೊಡನೆ ನಾರದರು ಮಾತನಾಡುತ್ತಿದ್ದರು. ಸಾವಿತ್ರಿ ಇಬ್ಬರಿಗೂ ನಮಿಸಿ ಹೇಳಿದಳು.


‘ಪೂಜ್ಯರೇ!ಸಾಳ್ವ ದೇಶದ ರಾಜ ದ್ಯುಮತ್ಸೇನ. ದೃಷ್ಟಿಹೀನನಾಗಿ ಕುರುಡನಾದ.ಮಗನು ಇನ್ನೂ ಬಾಲಕ. ಇದು ಸರಿಯಾದ ಸಮಯವೆಂದು ಶತ್ರುಗಳು ದೇಶವನ್ನಾಕ್ರಮಿಸಿದರು.ರಾಜ್ಯ ಭ್ರಷ್ಟನಾದ ದ್ಯುಮತ್ಸೇನನು ಕಾಡು ಸೇರಿ ಋಷಿಗಳಂತೆ ಆಶ್ರಮವಾಸಿಯಾಗಿರುವನು. ಅವನ ಮಗನು ಈಗ ಯುವಕ. ಹೆಸರು ಸತ್ಯವಾನ ಹೆಸರಿಗೆ ತಕ್ಕ ಗುಣ. ಅವನನ್ನು ಮನದಲ್ಲೇ ವರಿಸಿರುವೆ. ಇನ್ನು ನಿಮ್ಮ ಇಚ್ಛೆ’.

ಸಾವಿತ್ರಿಯ ಸಂಕಲ್ಪ ಶಕ್ತಿ
ಅಶ್ವಪತಿಗೆ ಹಿಗ್ಗು. ನಾರದರ ಬಳಿ ವರನ ಕುಲ-ಗೋತ್ರ-ಚಾರಿತ್ರ್ಯಗಳ ಬಗ್ಗೆ ಕೇಳಿ ತಿಳಿದ.ಎಲ್ಲದರಲ್ಲೂ ಮಗಳಿಗೆ ಅನುರೂಪನಾದ ವರನೇ. ಒಂದೇ ದೋಷವೆಂದರೆ ನಾರದರ ಮಾತಿನಂತೆ ಅವನಿಗೆ ಇನ್ನು ಒಂದೇ ವರ್ಷ ಆಯಸಷ್ಟೇ! ಅಶ್ವಪತಿ ಹೆದರಿದ. ಈ ವರನು ಬೇಡವೆಂದು ಮಗಳಿಗೆ ಹೇಳಿದ.ಆಗ ಅವಳಾಡಿದ ಮಾತು ಎಲ್ಲ ಹೆಣ್ಣುಮಕ್ಕಳಿಗೂ, ಹಿರಿಯರಿಗೂ ಮೇಲ್ಪಂಕ್ತಿಯಾಗುವಂಥಹದ್ದು.

‘ತಂದೆ, ವಸ್ತು ತುಂಡಾಗುವುದು ಒಂದೇ ಬಾರಿ. ಒಮ್ಮೆ ಮಾತ್ರ ಕನ್ಯೆಯನ್ನು ಕೊಡಲು ಸಾಧ್ಯ.ಮಾತೂ ಕೂಡ ಒಮ್ಮೆ ಆಡಿದರೆ ಮುಗಿಯಿತು.ಈ ಮೂರು ಒಮ್ಮೆ ಮಾತ್ರ ಕೊಡಲು ಬರುವುದು. ಹಿಂತಿರುಗಿ ಪಡೆಯಲು ಬಾರದು.

‘ಅವನು ದೀರ್ಘಾಯುವೇ ಆಗಲಿ, ಅಲ್ಪಾಯುವೇ ಆಗಲಿ, ನಿನಗೆ ಯೋಗ್ಯನೆಂತಲೇ ಒಪ್ಪಿದೆ. ಒಮ್ಮೆ ಮನವು ನಿಶ್ಚಯಿಸಿದ ಮೇಲೆ ಬದಲು ಬೇಡ. ಅವನು ಹೇಗೇ ಇರಲಿ. ಅವನನ್ನು ಬಿಟ್ಟು ಬೇರೊಬ್ಬನನ್ನು ನನ್ನ ಮನವು ಚಿಂತಿಸದು. ಪ್ರಮಾಣಂ ಮೇ ಮನಸ್ತತಃ. ನನ್ನ ಮನವೇ ಈ ಪ್ರವೃತ್ತಿಗೆ ಪ್ರಮಾಣವಾಗಿದೆ’.


ಸಾವಿತ್ರಿಯ ಮಾತನ್ನೇ ನಾರದರು ಅನುಮೋದಿಸಿದರು. ‘ಅವಳು ಸಮರ್ಥ ಹೆಣ್ಣು.ಅವಳ ಸಂಕಲ್ಪವು ಸಾತ್ವಿಕವೂ, ಪ್ರಬಲವೂ ಆಗಿದೆ. ಧರ್ಮಬದ್ಧವಾಗಿದೆ. ಅಧರ್ಮವೇ ಅವಳ ರಕ್ಷಣೆಗೆ ನಿಲ್ಲುವುದು.‘ಧರ್ಮೋ ರಕ್ಷತಿ ರಕ್ಷಿತಃ’ ಸತ್ಯವಾನನಲ್ಲಿರುವ ಗುಣಗಳು ಮತ್ತೊಬ್ಬನಲ್ಲಿ ದುರ್ಲಭ ಆದ್ದರಿಂದ ಅವನೇ ತಕ್ಕ ವರ. ಇವರ ವಿವಾಹ ನೆರವೇರಿಸುವುದೇ ಉಚಿತ’.

ಅಶ್ವಪತಿ ವಿವಾಹ ಸಿದ್ಧತೆಗಳನ್ನು ನಡೆಸಿದನು. ಗುರು ಹಿರಿಯರ ಪರಿವಾರದೊಡನೆ ಮದುವೆ ದಿಬ್ಬಣ ಹೊರಟಿತು.ನಾಡಿನಿಂದ ಕಾಡಿನೆಡೆಗೆ. ಆಶ್ರಮವನ್ನು ಸಮೀಪಿಸಿದಾಗ ಕಾಲ್ನಡಿಗೆಯಲ್ಲೇ ಬಂದು ರಾಜರ್ಷಿ ದ್ಯುಮತ್ಸೇನನ್ನು ಕಂಡು ಪರಿಚಯ ಹೇಳಿಕೊಂಡನು. ಅಭಿಲಾಷೆಯನ್ನು ವ್ಯಕ್ತಪಡಿಸಿದನು. ದ್ಯುಮತ್ಸೇನ ಮೊದಲು ಸಂಕೋಚಿಸಿದರೂ ನಂತರ ಈ ಸಂಬಂಧಕ್ಕೊಪ್ಪಿದನು. ಎಲ್ಲರೂ ಸೇರಿ ವಿವಾಹ ನೆರವೇರಿಸಿದರು.ತವರಿನ ಪರಿವಾರವು ಹಿಂದಿರುಗಿದ ಕೂಡಲೇ ಸಾವಿತ್ರಿಯು ಎಲ್ಲಾ ಆಭರಣಗಳನ್ನು ಕಳಚಿ ಸರಳ ಉಡುಗೆ ತೊಟ್ಟಳು.

ಪತಿಯನ್ನು ಅನುಸರಿಸಿದಳಾ ಸತಿ
ಒಂದು ವರ್ಷ ಸಮೀಪಿಸಲು ಸಾವಿತ್ರಿ ಕೆಲ ದಿನ ಕಠಿಣ ವ್ರತಗಳನ್ನು ಆಚರಿಸಿದಳು. ಯಾವಾಗಲೂ ಜಾಗರೂಕಳಾಗಿರುತ್ತಿದ್ದಳು. ಒಂದು ವರ್ಷ ತುಂಬುವ ದಿನ ಬಂದೇ ಬಿಟ್ಟಿತು. ಅಂದು ಮಾತ್ರ ಅವಳು ಕ್ಷಣ ಕ್ಷಣವೂ ಪತಿಯನ್ನೇ ಅನುಸರಿಸುವ ಸಂಕಲ್ಪ ತೊಟ್ಟಳು. ಸತ್ಯವಾನನು ಹಣ್ಣು, ಸೌದೆ, ತರಲು ಕೊಡಲಿ ಹಿಡಿದು ಮುಂಜಾನೆಯೇ ಕಾಡಿಗೆ ಹೊರಟ. ಕೂಡಲೇ ಸಾವಿತ್ರಿಯು ಓಡಿ ಬಂದು ಅತ್ತೆ-ಮಾವರಲ್ಲಿ ಅನುಮತಿ ಪಡೆದು ಪತಿಯನ್ನು ಅನುಸರಿಸಿ ಹೊರಟಳು.

ಎಂದೂ ಆಶ್ರಮದಿಂದ ಹೊರಗೆ ಬಾರದ ಹೆಂಡತಿಗೆ ಸತ್ಯವಾನನು ಇಂದು ಉತ್ಸಾಹದಿಂದ ನದಿ-ತೊರೆಗಳನ್ನೂ, ಗಿರಿ-ಪರ್ವತಗಳನ್ನೂ, ನಾನಾ ಬಗೆಯ ಹಕ್ಕಿಗಳನ್ನೂ ಪ್ರಕೃತಿಯ ಸೊಬಗನ್ನೂ, ವೈಚಿತ್ರ್ಯಗಳನ್ನೂ ತೋರಿಸಿ ಸಂತಸ ಪಡುತ್ತಿದ್ದ. ಸಾವಿತ್ರಿಗೆ ಮಾತ್ರ ಅವನ ರಕ್ಷಣೆಯಲ್ಲೇ ಪೂರ್ಣಗಮನ.


ಸ್ವಲ್ಪ ವಿಶ್ರಮಿಸುವೆನೆಂದು ಸತಿಯ ತೊಡೆಯ ಮೇಲೆ ತಲೆಯಿಟ್ಟು ಹಾಗೆಯೇ ಮಲಗಿದ. ಸಾವಿತ್ರಿಗೆ ಅವನ ಪ್ರಾಣೋತ್ಕ್ರಮಣ ಕಾಲ ಸಮೀಪಿಸಿತೆಂದು ಅರಿವಾಯಿತು. ತಾನೀಗ ಏನು ಮಾಡಬೇಕೆಂದು ಯೋಚಿಸುತ್ತಿದ್ದಳು. ಪತಿಯ ಬಳಿಯೇ ಪುರುಷಾಕೃತಿಯೊಂದು ಕಂಡಿತು. ಕೈಜೋಡಿಸಿ ನಮಿಸಿ ಆತನ ಪರಿಚಯ ಕೇಳಿದಳು.

ಯಮನಿತ್ತ ವರಗಳು
ಯಮ ಪರಿಚಯ ಹೇಳಿದ. ಸತ್ಯವಾನನ ಸನ್ನಡೆತೆಗೆ ಮೆಚ್ಚಿ ಸ್ವತಃ ತಾನೇ ಪ್ರಾಣಗಳನ್ನು ಒಯ್ಯಲು ಬಂದೆನೆಂದು ಹೇಳಿದ. ಪಾಶದಿಂದ ಸತ್ಯವಾನನ ಪ್ರಾಣ ಬಂಧಿಸಿ, ದೇಹದಿಂದ ಬೇರ್ಪಡಿಸಿ ಪ್ರಯಾಣ ಆರಂಭಿಸಿದ. ಸಾವಿತ್ರಿ ಪತಿಯ ದೇಹ ರಕ್ಷಣೆಗೆ ತಕ್ಕ ವ್ಯವಸ್ಥೆ ಮಾಡಿ ಯಮನನ್ನು ಅನುಸರಿಸಿದಳು.

ತನ್ನನ್ನೇ ಹಿಂಬಾಲಿಸುತ್ತಿದ್ದ ಸಾವಿತ್ರಿಯನ್ನು ನೋಡಿ ಯಮ ಹೇಳಿದ. ‘ಸಾವಿತ್ರಿ! ನನ್ನನ್ನೇಕೆ ಹಿಂಬಾಲಿಸುವೆ? ಹಿಂದಿರುಗು. ದೇಹಕ್ಕೆ ತಕ್ಕ ಸಂಸ್ಕಾರಗಳನ್ನು ನಡೆಸಿ ಋಣಮುಕ್ತಳಾಗು’.


‘ದೇವನೇ! ಎಷ್ಟು ದೂರವಾದರೂ ಪತಿಯನ್ನುನ್ನು ಸರಿಸುವುದು ಸತಿಯ ಧರ್ಮ. ಧರ್ಮಪಾಲನೆಯ ಬಲದಿಂದಲೂ, ನಿನ್ನ ಅನುಗ್ರಹದಿಂದಲೂ ನಾನು ಎಷ್ಟು ದೂರ ನಡೆದರೂ ನಿನ್ನನ್ನು ಹಿಂಬಾಲಿಸಬಲ್ಲೆ. ನಿನ್ನೊಡನೆ ನಡೆಯಲು ನನಗೆ ಭಯವಿಲ್ಲ’.

‘ನಿನ್ನ ಮೃದು – ಮಧುರ ಮಾತನ್ನು ಮೆಚ್ಚಿದೆ. ಪತಿಯ ಪ್ರಾಣವನ್ನು ಬಿಟ್ಟು ಬೇಕಾದ ವರಕೇಳು ನೀಡುವೆ’
‘ಯಮದೇವ! ರಾಜ್ಯಭ್ರಷ್ಟನಾಗಿ, ಅಂಧನಾಗಿ ಅರಣ್ಯದಲ್ಲಿರುವ ಮಾವ ದೃಷ್ಟಿ ಪಡೆದು ಬಲಾಢ್ಯನೂ, ತೇಜಸ್ವಿಯೂ ಆಗಬೇಕು’.
‘ಸಾವಿತ್ರಿ! ನೀನು ಹೇಳಿದಂತೆಯೇ ನಡೆಯುವುದು. ನೀನು ಬಹಳ ದೂರ ನಡೆದು ಬಳಲಿರುವೆ ಹಿಂತಿರುಗು’
‘ದೇವ! ಪತಿಯು ಸಮೀಪದಲ್ಲಿರುವಾಗ ನನಗೆ ಶ್ರಮವಿಲ್ಲ. ಅವನೊಬ್ಬ ಜತೆಗಿದ್ದರೆ ಎಲ್ಲಿ ಬೇಕಾದರೂ ಇರುವೆನು. ಇದರೊಂದಿಗೆ ಸಜ್ಜನ-ಪತಿಯು ಸಮೀಪದಲ್ಲಿರುವಾಗ ನನಗೆ ಶ್ರಮವಿಲ್ಲ. ಅವನೊಬ್ಬ ಜತೆಗಿದ್ದರೆ ಎಲ್ಲಿ ಬೇಕಾದರೂ ಇರುವೆನು. ಇದರೊಂದಿಗೆ ಸಜ್ಜನವಾದ ನಿನ್ನ ಸಹವಾಸವೂ ನನಗೆ ಹಿತವಾಗಿದೆ’.

ಅವಳ ಮಾತಿಗೆ ಮನಸೋತ ಯಮ ಮತ್ತೆ ವರವನ್ನು ಕೇಳೆಂದೆ.

ಮಾವನಿಗೆ ರಾಜ್ಯ ಲಾಭವಾಗಲಿ’ ಎಂದಳು. ಹೀಗೆಯೇ ಯಮನನ್ನು ಹಿಂಬಾಲಿಸುತ್ತ ಮಧುರ ಮಾತನಾಡುತ್ತಾ, ಮಾತಿನ ಪಾಶದಲ್ಲಿಯೇ ಯಮನನ್ನು ಬಂಧಿಸಿ ಮತ್ತೆ ಎರಡು ವರ ಪಡೆದಳು.


‘ನನ್ನ ತಂದೆ ಅಶ್ವಪತಿಯು ನೂರು ಮಂದಿ ಪುತ್ರರನ್ನು ಪಡೆಯಲಿ. ನಾಲ್ಕನೆಯ ವರವಾಗಿ.. ನನಗೆ ಕುಲೋದ್ಧಾರಕರೂ, ಬಲಶಾಲಿಗಳೂ ಆದ ನೂರು ಮಂದಿ ಔರಸಪುತ್ರರಾಗಬೇಕು’.

ಯಮನು ಸಾವಿತ್ರಿಯ ಧರ್ಮಬದ್ಧವೂ, ಜಾಣತನವೂ ಹೊಂದಿದ ಜೇನಿನಂತ ಮಾತಿಗೆ ತಲೆದೂಗಿ ನಾಲ್ಕನೆಯ ವರವನ್ನೂ ಅನುಗ್ರಹಿಸಿ ಸಿಕ್ಕಿಕೊಂಡ. ಮತ್ತೆ ಐದನೆಯ ವರವನ್ನು ಕೊಡಲು ಸಿದ್ಧನಾದಾಗ ಸಾವಿತ್ರಿಯು ಕೇಳಿದಳು.

‘ಔರಸ ಪುತ್ರರೆಂದರೆ ನನ್ನ ಪತಿಯಿಂದಲೇ ನನಗೆ ನೂರು ಮಕ್ಕಳಾಗಲಿ ಎಂದಲ್ಲವೇ? ಪತಿಯನ್ನು ನೀನು ಒಯ್ದರೆ ನಿನ್ನ ವರವೇ ಸುಳ್ಳಾಗಿ, ನೀನು ಮಾತು ತಪ್ಪಿದಂತಾಗುತ್ತದೆ. ಆದ್ದರಿಂದ ದಯಮಾಡಿ ನನ್ನ ಪತಿಯನ್ನು ಬದುಕಿಸಿ ನನ್ನನ್ನು ಅನುಗ್ರಹಿಸಿ ನಿನ್ನ ಮಾತು ನೆರವೇರುವಂತೆ ಮಾಡು’. ಯಮನು ಸಂತೋಷಗೊಂಡು ಸತ್ಯವಾನನ ಜೀವವನ್ನು ಪಾಶದಿಂದ ಬಡಿಸಿ ಮತ್ತೆ ದೇಹದಲ್ಲಿಟ್ಟನು.

ಡಾ.ಗುರುರಾಜ ಪೋಶೆಟ್ಟಿಹಳ್ಳಿ

Tags: Dr. Gururaja PoshettihalliHinduPativrate SavitriVatasavitree vrataYamaಡಾ.ಗುರುರಾಜ ಪೋಶೆಟ್ಟಿಹಳ್ಳಿಪತಿವ್ರತೆ ಸಾವಿತ್ರಿಯಮವಟವೃಕ್ಷವಟಸಾವಿತ್ರೀ ವ್ರತಷೋಡಶೋಪಚಾರ ಪೂಜೆ
Previous Post

ಗೋಭಕ್ಷಕರಿಗೆ ಅಪಮೃತ್ಯು ನಿಶ್ಚಿತ ಎಂಬಲ್ಲಿ ಸಂಶಯವಿಲ್ಲ

Next Post

ಭದ್ರಾವತಿ: ಭೂಮಿ ಹಕ್ಕು ನೀಡಲು ಒತ್ತಾಯಿಸಿ ಜೂ: 17 ರಂದು ಪ್ರತಿಭಟನೆಗೆ ನಿರ್ಧಾರ

kalpa

kalpa

Next Post

ಭದ್ರಾವತಿ: ಭೂಮಿ ಹಕ್ಕು ನೀಡಲು ಒತ್ತಾಯಿಸಿ ಜೂ: 17 ರಂದು ಪ್ರತಿಭಟನೆಗೆ ನಿರ್ಧಾರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಗಮನಿಸಿ! ಮಾರ್ಚ್ 25ರಂದು ಶಿವಮೊಗ್ಗ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ

March 24, 2023

ಕೂಡ್ಲಿಗೆರೆ ಗ್ರಾಪಂ ಅಧ್ಯಕ್ಷರಾಗಿ ಗೌರಮ್ಮ ಮಹದೇವ್ ಅವಿರೋಧ ಆಯ್ಕೆ

March 24, 2023

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅತ್ಯಾಧುನಿಕ ತುರ್ತು ಚಿಕಿತ್ಸಾ ವಾಹನ ಹಸ್ತಾಂತರ

March 24, 2023

ಚುನಾವಣೆ ಹಿನ್ನೆಲೆ: ಬಳ್ಳಾರಿ ಜಿಲ್ಲೆಯಲ್ಲಿ 18 ಚೆಕ್ ಪೋಸ್ಟ್, ಅಕ್ರಮ ಮದ್ಯ, ವಸ್ತುಗಳು ಸೀಜ್

March 24, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಗಮನಿಸಿ! ಮಾರ್ಚ್ 25ರಂದು ಶಿವಮೊಗ್ಗ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ

March 24, 2023

ಕೂಡ್ಲಿಗೆರೆ ಗ್ರಾಪಂ ಅಧ್ಯಕ್ಷರಾಗಿ ಗೌರಮ್ಮ ಮಹದೇವ್ ಅವಿರೋಧ ಆಯ್ಕೆ

March 24, 2023

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅತ್ಯಾಧುನಿಕ ತುರ್ತು ಚಿಕಿತ್ಸಾ ವಾಹನ ಹಸ್ತಾಂತರ

March 24, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!