ಕಲ್ಪ ಮೀಡಿಯಾ ಹೌಸ್ | ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ |
ಕೆಲವು ವ್ಯಕ್ತಿತ್ವಗಳು ಕೇವಲ ತಮ್ಮ ಸಾಧನೆಯಿಂದಷ್ಟೇ ಅಲ್ಲ, ಅವರ ಬದುಕಿನ ಪ್ರತಿ ಹೆಜ್ಜೆಯಿಂದಲೂ ನಮ್ಮನ್ನು ಪ್ರೇರೇಪಿಸುತ್ತವೆ. ಇಂತಹ ಪ್ರೇರೇಪಣೆ ನೀಡುವಂತಹ ಅಪೂರ್ವ ವ್ಯಕ್ತಿತ್ವಗಳಲ್ಲಿ ಒಬ್ಬರು ಮಂಗಳೂರಿನ ಡಾ. ಪ್ರಿಯಾ ಹರೀಶ್.
ವಾರ್ತಾ ವಾಚಕರಾಗಿ, ನಿರೂಪಕರಾಗಿ, ಕಂಠದಾನ ಕಲಾವಿದರಾಗಿ ಮಾಧ್ಯಮ ಹಾಗೂ ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ತುಳುನಾಡಿನ ಪ್ರತಿಭೆ ಡಾ.ಪ್ರಿಯಾ ಹರೀಶ್. ಮೌಲ್ಯಗಳು, ಶಿಸ್ತು ಮತ್ತು ಶಿಕ್ಷಣವೇ ತಮ್ಮ ಜೀವನದ ಅಡಿಪಾಯ ಎಂಬುದನ್ನು ಸಾಬೀತುಪಡಿಸಿದ ಇವರ ಜೀವನಗಾಥೆಯೇ ನಿಜಕ್ಕೂ ಅದ್ಭುತ.
ಮೌಲ್ಯಗಳ ತಳಪಾಯದಲ್ಲಿ ಬೆಳೆದ ಜೀವನ
ಡಾ. ಪ್ರಿಯಾ ಅವರು ಬೆಳೆದಿದ್ದು ಜ್ಞಾನ ಮತ್ತು ಶ್ರಮಕ್ಕೆ ಪ್ರಾಮುಖ್ಯತೆ ನೀಡಿದ ಕುಟುಂಬದಲ್ಲಿ. ತಂದೆ ಬಿ. ವಿಠ್ಠಲ್ ಶೆಟ್ಟಿ ಅವರು ಶಿಕ್ಷಣದ ಮಹತ್ವ ಕಲಿಸಿದರೆ, ತಾಯಿ ನಿರ್ಮಲಾ ಶೆಟ್ಟಿ ಅವರು ಮನೆತನದ ಶಕ್ತಿಯಾಗಿ ನಿಂತರು. ಸಹೋದರ ಪ್ರಶಾಂತ್ ಅವರ ಬೆಂಬಲ ಇವರ ಪಾಲಿಗೆ ಸದಾ ಬೆನ್ನಲುಬಿನ ಶಕ್ತಿ.
ಜೀವನದಲ್ಲಿ ಎದುರಾದ ಕಠಿಣ ಸಂದರ್ಭಗಳನ್ನು ಮೆಟ್ಟಿ ನಿಲ್ಲಲು ಇವರಿಗೆ ಸ್ಫೂರ್ತಿಯಾದವರು ಅತ್ತಿಗೆ ಅಶ್ವಿನಿ ಶೆಟ್ಟಿ. ಅವರು ನೀಡಿದ ಅಚಲವಾದ ಆತ್ಮವಿಶ್ವಾಸ ಮತ್ತು ಧೈರ್ಯವೇ ಪ್ರಿಯಾ ಅವರು ಇಂದು ಜವಾಬ್ದಾರಿಯುತವಾಗಿ ಮುನ್ನಡೆಯಲು ಮುಖ್ಯ ಕಾರಣ.
ಮಕ್ಕಳೇ ಬದುಕಿನ ಹೊಸ ಅರ್ಥ
ಡಾ. ಪ್ರಿಯಾ ಅವರು ತಾಯಿಯಾಗಿ ತಮ್ಮ ಸಂಪೂರ್ಣ ಜೀವನ ಹಾಗೂ ಶಕ್ತಿಯನ್ನು ಮಕ್ಕಳ ಏಳ್ಗೆಗಾಗಿ ಮೀಸಲಿಟ್ಟಿದ್ದಾರೆ.
ಇವರ ಪುತ್ರಿ ಎ.ಜೆ. ಪ್ರಿಹಾಲಿ ಬಿಡಿಎಸ್ ಕಲಿಯುತ್ತಿದ್ದು, ನೃತ್ಯದಲ್ಲೂ ಸಹ ವಿಶಿಷ್ಟ ಪ್ರತಿಭೆ ಹೊಂದಿದ್ದಾರೆ. ಹಾಗೆಯೇ ದ್ವಿತೀಯ ಪಿಯುಸಿ ಓದುತ್ತಿರುವ ಪುತ್ರ ತ್ರಿಶೂಲ್ ಸಹ ಕರಾಟೆಯಲ್ಲಿ ಶಿಸ್ತು ಮತ್ತು ಸಾಹಸವನ್ನು ಮೈಗೂಡಿಸಿಕೊಂಡಿದ್ದಾರೆ.
ವಿದ್ಯೆಗೆ ಕೊನೆಯಿಲ್ಲದ ದಾರಿ: ಅಸಾಧಾರಣ ಶೈಕ್ಷಣಿಕ ಪಯಣ
ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟ ಇವರ ಸಾಧನೆಯ ಹಾದಿಯೇ ಒಂದು ರೋಚಕ. ಅರ್ಥಶಾಸ್ತ್ರದಲ್ಲಿ ಎಂಎ ಮತ್ತು ಎಂಫಿಲ್ ಪದವಿ ಗಳಿಸಿರುವ ಇವರು, ಅರ್ಥಶಾಸ್ತ್ರದಲ್ಲೇ ಸಂಶೋಧನೆ ನಡೆಸಿ ಪಿಎಚ್’ಡಿ ಪಡೆದಿದ್ದಾರೆ.
ಇದರೊಟ್ಟಿಗೆ ಮಾತೃಭಾಷೆಯ ಮೇಲಿನ ಅಭಿಮಾನದಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಎಂಎ ಕೂಡ ಪೂರೈಸಿದ್ದಾರೆ.
ಬಹುಮುಖ ಪ್ರತಿಭೆ-ಮಾಧ್ಯಮದಲ್ಲೂ ಛಾಪು
ಕಂಠದಾನ ಮತ್ತು ನಮ್ಮ ಕುಡ್ಲದ ನಂಟಿನ ಜೊತೆ ಕಲಾ ಸೇವೆ ಸಲ್ಲಿಸುತ್ತಿರುವ ಇವರ ತಮ್ಮದೇ ಆದ ವಿಶಿಷ್ಟ ಹೆಜ್ಜೆಗುರುತನ್ನು ಮೂಡಿಸಿದ್ದಾರೆ.
ಕಳೆದ 24 ವರ್ಷಗಳಿಂದ ‘ನಮ್ಮ ಕುಡ್ಲ’ ಚಾನೆಲ್’ನಲ್ಲಿ ವಾರ್ತಾವಾಚಕಿ ಮತ್ತು ನಿರೂಪಕಿಯಾಗಿ ಗುರುತಿಸಿಕೊಂಡಿರುವ ಇವರು, ಕಲಾಕ್ಷೇತ್ರದಲ್ಲೂ ದೊಡ್ಡ ಛಾಪನ್ನು ಮೂಡಿಸಿದ್ದಾರೆ.
ಇವರ ಕಂಠದಾನದ ಶಕ್ತಿ ಅಪಾರ. ದೈವಿಕ ಮತ್ತು ಪೌರಾಣಿಕ ಪಾತ್ರಗಳಿಗೆ ಧ್ವನಿ ನೀಡುವ ಮೂಲಕ ಕಲಾಭಿಮಾನಿಗಳ ಮನಗೆದ್ದಿದ್ದಾರೆ. ಮುಖ್ಯವಾಗಿ, ಅತೀವ ಜನಪ್ರಿಯತೆ ಗಳಿಸಿದ `ಶಿವಧೂತ ಗುಳಿಗ’ ನಾಟಕದಲ್ಲಿ ಅವರು ನೀಡಿದ ಚಾಮುಂಡಿ ಪಾತ್ರದ ಹಿನ್ನೆಲೆ ಧ್ವನಿ ಪ್ರೇಕ್ಷಕರ ಅಪಾರ ಪ್ರಶಂಸೆಗೆ ಪಾತ್ರವಾಗಿದೆ. ಇವರ ಗಂಭೀರ ಹಾಗೂ ದೈವಿಕ ಧ್ವನಿ ಆ ಪಾತ್ರಕ್ಕೆ ಹೊಸ ಮೆರುಗು ನೀಡಿದೆ.
ಜಾಹೀರಾತು, ಧಾರಾವಾಹಿ ಹಾಗೂ ಸಿನಿಮಾಗಳಿಗೂ ಇವರು ಧ್ವನಿ ನೀಡುತ್ತಾ, ಉತ್ತಮ ವಾಗ್ಮಿಯಾಗಿಯೂ ಮಿಂಚುತ್ತಿದ್ದಾರೆ.
ಒಟ್ಟಾರೆಯಾಗಿ, ಕುಟುಂಬದ ಮೌಲ್ಯಗಳು, ನಿರಂತರ ಕಲಿಕೆಯ ಹಸಿವು ಮತ್ತು ಕಲಾತ್ಮಕ ದಕ್ಷತೆಯ ಅಪೂರ್ವ ಸಂಗಮವೇ ಡಾ. ಪ್ರಿಯಾ ಹರೀಶ್. ಸವಾಲುಗಳನ್ನು ಸ್ಮೈಲ್ ಮಾಡುತ್ತಾ ಎದುರಿಸುವ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















