ಕಲ್ಪ ಮೀಡಿಯಾ ಹೌಸ್ | ವಾಷಿಂಗ್ಟನ್ |
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump)ಅವರು ಶ್ವೇತಭವನದ ಓವಲ್ ಕಚೇರಿಯಲ್ಲಿ ಭಾರತೀಯ ಮೂಲದ ಪ್ರಮುಖ ಉದ್ಯಮಿಗಳು, ಸಿಇಒಗಳು ಹಾಗೂ ತಮ್ಮ ಆಡಳಿತದ ಗಣ್ಯರೊಂದಿಗೆ ದೀಪಾವಳಿ ಹಬ್ಬವನ್ನು (Diwali Festival) ಸಂಭ್ರಮದಿಂದ ಆಚರಿಸಿದರು.
ಶುಕ್ರವಾರ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ, ಖ್ಯಾತ ಬಾಣಸಿಗ ವಿಕಾಸ್ ಖನ್ನಾ, ಉದ್ಯಮಿ ವಿಶಾಲ್ ಗೊಂಡಾಲ್, ಐಬಿಎಂ ಸಿಇಒ ಅರವಿಂದ್ ಕೃಷ್ಣ, ಮೈಕ್ರಾನ್ ಟೆಕ್ನಾಲಜಿ ಮುಖ್ಯಸ್ಥ ಸಂಜಯ್ ಮೆಹ್ರೋತ್ರಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಅಮೆರಿಕದ ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಹಾಗೂ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ನಿರ್ದೇಶಕ ಜಯ್ ಭಟ್ಟಾಚಾರ್ಯ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೀಪ ಬೆಳಗಿಸುವ ಮೂಲಕ ಸಂಭ್ರಮಕ್ಕೆ ಚಾಲನೆ
ಓವಲ್ ಕಚೇರಿಯಲ್ಲಿ ದೀಪ ಬೆಳಗಿಸುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೀಪಾವಳಿ ಆಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಸಾಮಾಜಿಕ ಭದ್ರತಾ ಆಡಳಿತದ ಉಪ ಆಯುಕ್ತ ಅರ್ಜುನ್ ಮೋದಿ ಸೇರಿದಂತೆ ಪ್ರಮುಖರು ಹಾಜರಿದ್ದರು.
ಧಲ್ಲಾ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷೆ ಹಾಗೂ ಸಿಇಒ ರೂಬಿ ಧಲ್ಲಾ, ನ್ಯಾಕ್ ಸಿಸ್ಟಮ್ಸ್ ಸಂಸ್ಥಾಪಕ ರಾಜೀವ್ ಶರ್ಮಾ, ಕೇಶವಂ ಡಿಸಿ ಅಧ್ಯಕ್ಷ ವಿಶ್ವಜಿತ್ ಮಲ್ಲಂಪಾಟಿ, ಉದ್ಯಮಿ ಹೇತಲ್ಕುಮಾರ್ ಪಟೇಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Trump: ಟ್ರಂಪ್ಗೆ ಹನುಮಾನ್ ಚಾಲೀಸಾ ಉಡುಗೊರೆ
ದೀಪಾವಳಿ ಆಚರಣೆಯಲ್ಲಿ ಭಾಗವಹಿಸಿದ್ದ ಜಿಒಕ್ಯೂಐ (GOQii) ಟೆಕ್ನಾಲಜೀಸ್ ಸಂಸ್ಥಾಪಕ ಹಾಗೂ ಸಿಇಒ ವಿಶಾಲ್ ಗೊಂಡಾಲ್ ಅವರು ಅಧ್ಯಕ್ಷ ಟ್ರಂಪ್ ಅವರಿಗೆ ತುಳಸಿದಾಸರ ಹನುಮಾನ್ ಚಾಲೀಸಾ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಟ್ರಂಪ್ ಅವರೊಂದಿಗೆ ದೀಪಾವಳಿ ಆಚರಿಸಿದ್ದು ಗೌರವದ ಕ್ಷಣವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ದೀಪ ಬೆಳಗಿಸಿದ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಯಾಗಲಿ ಹಾಗೂ ಕತ್ತಲೆಯ ಮೇಲೆ ಬೆಳಕಿನ ವಿಜಯವಾಗಲಿ ಎಂದು ಪ್ರಾರ್ಥಿಸಿರುವುದಾಗಿ ಅವರು ತಿಳಿಸಿದ್ದಾರೆ.
Also Read>> ಕೈಟ್ ಬೀಚ್ನಲ್ಲಿ 5 ಕಿ.ಮೀ. ಸಮುದಾಯ ಓಟ: ಭಾರತ-ಯುಎಇ ಬಾಂಧವ್ಯಕ್ಕೆ ಮತ್ತಷ್ಟು ಬಲ
2003ರಲ್ಲಿ ಆರಂಭವಾದ ಶ್ವೇತಭವನದ ದೀಪಾವಳಿ ಸಂಪ್ರದಾಯ
ಶ್ವೇತಭವನದಲ್ಲಿ ದೀಪಾವಳಿ ಆಚರಿಸುವ ಸಂಪ್ರದಾಯವನ್ನು 2003ರಲ್ಲಿ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಆರಂಭಿಸಿದ್ದರು. ಆರಂಭದಲ್ಲಿ ಐಸೆನ್ಹೋವರ್ ಎಕ್ಸಿಕ್ಯೂಟಿವ್ ಆಫೀಸ್ ಕಟ್ಟಡದಲ್ಲಿ ಭಾರತೀಯ ಮೂಲದ ಅಮೆರಿಕನ್ನರು ಹಾಗೂ ಭಾರತೀಯ ರಾಜತಾಂತ್ರಿಕರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.
2009ರಲ್ಲಿ ಅಧ್ಯಕ್ಷ ಬರಾಕ್ ಒಬಾಮ ಅವರು ಶ್ವೇತಭವನದ ಈಸ್ಟ್ ರೂಮ್ನಲ್ಲಿ ಸ್ವತಃ ದೀಪ ಬೆಳಗಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಅಂದಿನಿಂದ ಶ್ವೇತಭವನದ ವಿವಿಧ ಸ್ಥಳಗಳಲ್ಲಿ ದೀಪಾವಳಿ ಆಚರಣೆ ಹಾಗೂ ದೀಪ ಬೆಳಗಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಬಾರಿ ಓವಲ್ ಕಚೇರಿಯಲ್ಲಿ ನಡೆದ ಆಚರಣೆಯು ಭಾರತ ಮತ್ತು ಅಮೆರಿಕ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತೊಮ್ಮೆ ಪ್ರತಿಬಿಂಬಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









