ಕಲ್ಪ ಮೀಡಿಯಾ ಹೌಸ್ | ತುಮಕೂರು |
ರಾಜ್ಯದಲ್ಲಿ 226 ತಾಲ್ಲೂಕುಗಳಲ್ಲಿ 200ಕ್ಕೂ ಹೆಚ್ಚು ತಾಲೂಕುಗಳನ್ನ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು, ತುಮಕೂರು ಜಿಲ್ಲೆಯ 10 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ GParameshwar ತಿಳಿಸಿದರು.
ತುಮಕೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಮಗೆ ಹಣಕಾಸಿನ ಕೊರತೆ ಇಲ್ಲ. ಈಗಾಗಲೇ 19 ಕೋಟಿ ಹಣ ಜಿಲ್ಲಾಧಿಕಾರಿ ಅಕೌಂಟ್ ಗೆ ಹಾಕಲಾಗಿದೆ. ಆ ಹಣ ಯಾವುದಕ್ಕೆ ಬಳಸಬೇಕು ಎಂಬ ಸೂಚನೆ ನೀಡಲಾಗಿದೆ. ಹಾಗೂ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಗುಳೆ ಹೋಗುವಂತಹವರಿಗೆ ಕೆಲಸ ಒದಗಿಸುವ ಕಾರ್ಯಕ್ಕೆ ಹಣ ಮೀಸಲಿಡಲಾಗಿದ್ದು, ಸುಮಾರು 550 ಕೋಟಿ ಹಣ ಎಲ್ಲಾ ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಯಲ್ಲಿದೆ ಎಂದರು.
ಬರ ನಿರ್ವಹಣೆಗಾಗಿ ಕೇಂದ್ರ ಸರ್ಕಾರದಿಂದ ಇನ್ನು ಯಾವುದೇ ನೆರವು ಬಂದಿಲ್ಲ. ಅವರು ಬಂದು ಸಮೀಕ್ಷೆ ನಡೆಸಿ ಹೋಗಿದ್ದಾರೆ. ಹಸಿರು ಚೆನ್ನಾಗಿದೆ ಎಂದು ಅವರು ವರದಿ ಬರೆದುಕೊಂಡು ಹೋಗಿದ್ದಾರೆ. ಅವರ ಕಣ್ಣಿಗೆ ಬರ ಕಾಣಿಸಿಲ್ಲ, ನಮ್ಮ ಕಣ್ಣಿಗೆ ಬರ ಕಾಣಿಸುತ್ತಿದೆ. ಸುಮಾರು 36 ಸಾವಿರ ಕೋಟಿ ನಷ್ಟ ಆಗಿದೆ. ರಾಜ್ಯದ ಎಲ್ಲಾ ತಾಲೂಕಿನಲ್ಲಿ ಬರದ ಛಾಯೆ ಕಾಣಿಸುತ್ತಿದೆ. ಸುಮಾರು 65% ಮಳೆ ಈ ಬಾರಿ ಆಗಿಲ್ಲ. ಕಳೆದ ಎರಡು ವರ್ಷದಿಂದ ಮಳೆ ಚೆನ್ನಾಗಿ ಆಗಿರೋದ್ರಿಂದ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಆದರೆ, ಬೆಳೆಗೆ ಸಮಸ್ಯೆ ಎದುರಾಗಿದೆ. 17 ಸಾವಿರ ಕೋಟಿ ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಹಾಗೂ ಬರ ಪರಿಹಾರದ ನೀರಿಕ್ಷೆಯಲ್ಲಿದ್ದೆವೆ, ಅವರು ಎಷ್ಟು ಕೊಡ್ತಾರೆ ಗೊತ್ತಿಲ್ಲ ಎಂದು ವಿವರಿಸಿದರು.
ಮಹಾರಾಷ್ಟ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ
ಮರಾಠ ಮೀಸಲಾತಿ ಬಗ್ಗೆ ಮಹಾರಾಷ್ಟ್ರದಲ್ಲಿ ಹೋರಾಟ ನಡೆಯುತ್ತಿದ್ದು, ಆ ಸಂದರ್ಭದಲ್ಲಿ ಯಾವುದೇ ರಾಜ್ಯದ ವಾಹನಗಳು ಕಂಡಲ್ಲಿ ಅವುಗಳ ಮೇಲೆ ಕಲ್ಲು ತೂರಿದ್ದಾರೆ. ಕೆಲವು ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಅದೇ ರೀತಿ ನಮ್ಮ ಕೆಎಸ್‌ಆರ್‌ಟಿಸಿ ಬಸ್‌ಗೂ ಬೆಂಕಿ ಹಚ್ಚಿದ್ದಾರೆ. ನಾವು ಇದನ್ನ ಗಮಿನಿಸಿದ್ದೇವೆ. ಗಡಿ ಪ್ರದೇಶದಲ್ಲಿ ಎಲ್ಲಾ ರೀತಿಯ ಕಟ್ಟೇಚ್ಚೆರವನ್ನು ಮಾಡಿದ್ದೇವೆ ಎಂದರು.
ಕೇರಳದಲ್ಲಿ ಬಾಂಬ್ ಬ್ಲಾಸ್ ಆಗಿದ್ದ ಸಂದರ್ಭದಲ್ಲಿ ತಾವು ಮಂಗಳೂರಿನಲ್ಲಿದ್ದು, ತಕ್ಷಣ ಕೇರಳ ಗಡಿಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇವತ್ತು ಇಡೀ ಬೆಳಗಾವಿ, ಬೀದರ್, ಗುಲಬರ್ಗಾದಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಾವು ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವಾಗ ಮಹಾರಾಷ್ಟ್ರದವರು ಕರಾಳ ದಿನವನ್ನು ಆಚರಣೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಮರಾಠಿ ಮುಖಂಡರು ನಮ್ಮ ಕರ್ನಾಟಕದ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ ಮಾಡುತ್ತಾರೆ. ಅದು ಒಂದು ವೇಳೆ ಗಡಿ ದಾಟಿ ಬಂದು ರಾಜ್ಯದಲ್ಲಿ ಆ ರೀತಿಯ ಭಾಷಣ ಮಾಡಿದ್ರೆ ತಕ್ಷಣ ಅವರನ್ನ ಅರೆಸ್ಟ್ ಮಾಡುತ್ತೇವೆ. ಅವರು ಯಾರೆ ಆಗಿರಲಿ, ಎಷ್ಟು ದೊಡ್ಡವರೇ ಆಗಿರಲಿ ಮಂತ್ರಿ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ತಾಕತ್ತಿನ ಸವಾಲ್ ಹಾಕಿರುವ ರಮೇಶ್ ಜಾರಕಿಹೋಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹಸಚಿವರು, ಸಾಕ್ಷಿ ಕೊಡಲಿ ಮೊದಲು, ಸಾಕ್ಷಿ ಕೊಟ್ಟ ಮೇಲೆ ಅದರ ಬಗ್ಗೆ ಯೋಚನೆ, ಸಾಕ್ಷೆ ಕೊಟ್ಟ ಮೇಲೆ ನಾವು ನ್ಯಾಯನೇ ಕೊಡಿಸೋದು, ಅನ್ಯಾಯ ಕೊಡೋದಿಲ್ಲ ಎಂದು ಖಡಕ್ ಆಗಿ ಉತ್ತರಿಸಿದರು.
Also read: ಭಾಷಾಭಿಮಾನ ನವೆಂಬರ್ ಮಾಹೆಗೆ ಸೀಮಿತವಾಗದೆ ಪ್ರತಿನಿತ್ಯ ಕನ್ನಡಿಗರಾಗಿರಬೇಕು: ಡಿಸಿ ಸೆಲ್ವಮಣಿ
ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಸುಭದ್ರವಾಗಿದೆ. 135 ಶಾಸಕರನ್ನು ಆರಿಸಿ ಕಳುಹಿಸಿದ್ದಾರೆ, ನಾವು ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ಕೊಡುತ್ತ್ತಿದ್ದೇವೆ. ಪ್ರತಿಪಕ್ಷದವರು ಟೀಕೆ ಮಾಡ್ತಾರೆ ಮಾಡಲಿ. ನಾನು ಅವರಲ್ಲಿ ಮನವಿ ಮಾಡೋದು ಏನು ಅಂದ್ರೆ,.. ಧನಾತ್ಮಕ ಟೀಕೆಗಳನ್ನ ಮಾಡಿ. ಸಲಹೆ ಸೂಚನೆಗಳನ್ನ ಕೊಡಿ, ನಾವು ಅದನ್ನ ಸ್ವೀಕಾರ ಮಾಡುತ್ತೇವೆ. ಅದನ್ನ ಬಿಟ್ಟು ಸರ್ಕಾರ ಕೆಡುತ್ತಿವಿ, 20 ಜನ ಅಲ್ಲಿ ಹೋದ್ರು, 30 ಜನ ಇಲ್ಲೋದ್ರು, ಇವೆಲ್ಲಾ ಏನು ಆಗಲ್ಲ. ಯಾರೇ ಈತರ ಕನಸು ಕಂಡರೆ ಅದು ಕನಸಾಗಿಯೇ ಉಳಿಯುತ್ತದೆ ಸೂಚ್ಯವಾಗಿ ನುಡಿದರು.
ಸಿಎಂ ನಮ್ಮ ಮನೆಗೆ ಬಂದಿದ್ದು ಸೌಜನ್ಯದ ಭೇಟಿ
ಮುಖ್ಯಮಂತ್ರಿ ಅವರು ನಮ್ಮ ಮನೆಗೆ ಬಂದಾಗ ಊಟದ ಸಮಯ ಆಗಿತ್ತು. ಊಟ ಮಾಡ್ತಿರಾ ಅಂತ ಕೇಳಿದೆ. ಅವಾಗ ಅವರು ಮಾಡ್ತಿನಪ್ಪ, ಮುದ್ದೆ ಮಾಡಿದ್ರೆ ಹೇಳು ಊಟ ಮಾಡ್ತಿನಿ ಅಂದ್ರು, ಮುದ್ದೆ ಜೊತೆ ಕೋಳಿ ಸಾರು ಮಾಡಿದ್ದೀರಾ ಅಂತ ಕೇಳಿದರು. ನಮ್ಮ ಮನೆಲಿ ನಾಟಿ ಕೋಳಿ ಸಾರನ್ನ ಮಾಡಿಸಿದ್ದೆ. ಅವರು ನಾಟಿ ಕೋಳಿ ಇಷ್ಟಪಡ್ತಾರೆ, ಹಾಗಾಗಿ ನಾಟಿ ಕೋಳಿ ಸಾರು, ಅನ್ನ ಮುದ್ದೆ ಊಟ ಮಾಡಿಕೊಂಡು ಹೋದರು. ಮೈಸೂರಲ್ಲಿ ದಸರಾಗೆ ಹೋದಾಗ ಪರಮೇಶ್ವರ್ ಒಂದು ಊಟ ಹಾಕಿಸಿಲ್ಲ ಅಂತ ಸಿಎಂ ಹೇಳಿದ್ದರು. ಬೆಂಗಳೂರಿಗೆ ಬಂದಾಗ ಬನ್ನಿ ನಾಳೆ, ಇಲ್ಲ ನಾಡಿದ್ದು ಅಂತ ಹೇಳಿದ್ದೆ. ಹಾಗಾದ್ರೆ ಫಿಕ್ಸ್ ಮಾಡಿ ಬರ್ತಿನಿ ಅಂತ ಹೇಳಿದ್ದರು ಎಂದು ಸ್ಪಷ್ಟನೆ ನೀಡಿದರು.
ಪರಮೇಶ್ವರ್ ಮುಂದಿನ ಸಿಎಂ ಆಗಬೇಕು ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸ್ವಾಭಾವಿಕವಾಗಿ ನಮ್ಮ ಜಿಲ್ಲೆಗೆ ಒಂದು ಸ್ಥಾನ ಸಿಗಬೇಕು. ನಮ್ಮ ಕೆಲಸ ಕಾರ್ಯಗಳು ಆಗಬೇಕು. ಜಿಲ್ಲೆಯ ಜ್ವಲಂತ ಸಮಸ್ಯೆಗಳು ಬಗೆಹರಿಯಬೇಕು ಅನ್ನೋದು ಸ್ವಾಭಾವಿಕ. ಅದು ನಮ್ಮ ಕೈಯಲ್ಲಿ ನಿಮ್ಮ ಕೈಯಲ್ಲಿ ಇಲ್ವಲ್ಲ. ಐದು ವರ್ಷಕ್ಕೆ ಜನ ನಮ್ಮನ್ನ ಆರಿಸಿದ್ದಾರೆ. ಜನರ ಆಶಯದಂತೆ ಆಡಳಿತ ಕೊಡಬೇಕು ಅಂತ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹಾಗೂ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಅಲ್ಲಿಗೆ ನಾನು ಪುಲ್ ಸ್ಟಾಪ್ ಆಗ್ತಿನಿ ಎಂದರು.
ಸೈಬರ್ ಪ್ರಕರಣ ತಡೆಗೆ ಹೊಸ ನೀತಿ ಜಾರಿ
ನಮ್ಮ ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದೇವೆ. ಹೋಂ ಡಿಪಾರ್ಟ್ಮೆಂಟ್ ಹಾಗೂ ಐಟಿ ಡಿಪಾರ್ಟ್ಮೆಂಟ್ ಸೇರಿ, ಒಂದು ಸಮಿತಿಯನ್ನ ಮಾಡಿದ್ದಾರೆ. ಆಂಟಿ ಸೈಬರ್ ಕಾನೂನನ್ನ ತರಲು ಒಂದು ಅಜೆಂಡಾ ರೂಪಿಸಲು ಜವಾಬ್ದಾರಿ ಕೊಟ್ಟಿದ್ದಾರೆ. ನಾವು ಸದ್ಯದಲ್ಲೇ ಅದನ್ನ ಪ್ರಕಟಣೆ ಮಾಡುತ್ತೇವೆ. ಸೈಬರ್ ಪ್ರಕರಣಗಳನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪ್ರತಿನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಇನ್ಮೇಲೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಹೆಚ್ಚು ಸೈಬರ್ ಪ್ರಕರಣಗಳೇ ಆಗುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಅವುಗಳನ್ನ ನಿಯಂತ್ರಣ ಮಾಡಲು ಕಾನೂನುಗಳು ಅಷ್ಟೊಂದು ಬಲಿಷ್ಠವಾಗಿಲ್ಲ. ಅದಕ್ಕಾಗಿ ನಾವೊಂದು ಹೊಸ ಸೈಬರ್ ನೀತಿಯನ್ನು ತರಲು ಚಿಂತನೆ ನಡೆಸಲಾಗಿದೆ ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post