ಕಲ್ಪ ಮೀಡಿಯಾ ಹೌಸ್ | ತುಮಕೂರು |
ನಾಡಿನ ಸಾಹಿತ್ಯ- ಸಂಸ್ಕೃತಿ ಅಭ್ಯುದಯಕ್ಕೆ, ಸಮಾಜ ಪರಿವರ್ತನೆಗೆ ದಾಸ ಸಾಹಿತ್ಯದ #Dasasahitya ಕೊಡುಗೆ ಅಪಾರವಾಗಿದೆ ಎಂದು ಉಡುಪಿಯ #Udupi ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ, ಪಂಡಿತ ಬಿ. ಗೋಪಾಲಾಚಾರ್ ಹೇಳಿದರು.
ನಗರದ ಅನುಗ್ರಹ ಸಂಗೀತ ಮಹಾವಿದ್ಯಾಲಯ ನಗರದ ವಿವೇಕಾನಂದ ರಸ್ತೆಯ ಮಾಕಂ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ತ್ಯಾಗರಾಜ, ಶ್ರೀ ಪುರಂದರ ಆರಾಧನಾ ಸಂಗೀತೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ರಂಗದ ಗಣ್ಯರಿಗೆ ಸನ್ಮಾನ-ಬಿರುದು ಪ್ರದಾನ ಮಾಡಿ ಅವರು ಮಾತನಾಡಿದರು.

ಪರಮ ಪವಿತ್ರವಾದ ದಾಸ ಸಾಹಿತ್ಯದಲ್ಲಿ ವಿಕಾರ ಎಲ್ಲೂ ಇಲ್ಲ. ಸಮಗ್ರ ವಿಕಾಸವಿದೆ. ಯಾರಿಗೆ ದೇಹ- ಮನಸ್ಸು ಆರೋಗ್ಯವಾಗಿರುವುದೋ ಅಂಥವರಿಂದ ದೇಶವೂ ವಿಕಾಸವಾಗುವುದು ಎಂಬ ಉದಾತ್ತ ಚಿಂತನೆ ಇದೆ ಎಂದರು.
ಧನ್ಯತೆಗಾಗಿ ಸಂಗೀತ ಕಲಿಯಿರಿ
ಅನುಗ್ರಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ, ಹಿರಿಯ ಸಂಗೀತ ವಿದ್ವಾಂಸ ಜೆ.ಎಸ್. ಶ್ರೀಕಂಠ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತವನ್ನು ಕೇವಲ ಸರ್ಟಿಫಿಕೇಟ್‌ಗಾಗಿ ಕಲಿಯಬಾರದು. ಜೀವನದ ಧನ್ಯತೆಗಾಗಿ, ಆತ್ಮಾನಂದಕ್ಕಾಗಿ ಅಭ್ಯಾಸ ಮಾಡಬೇಕು. ಈ ರಂಗದಲ್ಲಿ ಸಂಸ್ಕಾರವಿದೆ, ಸಂಭ್ರಮವಿದೆ. ಬದುಕನ್ನು ಸಮಗ್ರವಾಗಿ ವಿಕಸನಮಾಡುವ ವಿಧಾನವಿದೆ. ಇದನ್ನು ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು ಎಂದರು.

ಸಂಗೀತಕ್ಕೆ ಪಾಲಕರೇ ಪ್ರಮುಖ ಪೋಷಕರು. ಅವರನ್ನೂ ಆದರಿಸುವುದು ನಮ್ಮ ಕರ್ತವ್ಯ ಎಂದರು.
ಮಾತೆಯರು ಮನೆಯಲ್ಲಿ ಬೆಳಗ್ಗೆ, ಸಂಜೆ ಪೂಜೆ ವೇಳೆಗಾದರೂ ಒಂದು ದೇವರನಾಮ ಹಾಡಬೇಕು. ಆಗ ಇಡೀ ಕುಟುಂಬ ಸಂತೋಷದಿಂದ ಇರಲು ಸಾಧ್ಯ. ದೇವರ ಅನುಗ್ರಹಕ್ಕೆ ಕಲಿಯುಗದಲ್ಲಿ ಗಾಯನ ಮಾತ್ರ ಪ್ರಧಾನ ಮಾಧ್ಯಮ ಎಂದು ಶ್ರೀಕಂಠ ಭಟ್ ಹೇಳಿದರು.
ಗೌರವ ಸಮರ್ಪಣೆ
ಇದೇ ಸಂದರ್ಭ ಹಿರಿಯ ಮೃದಂಗ ವಿದ್ವಾಂಸ ಅಂಜನ್ ಕುಮಾರ್ ಅವರಿಗೆ ಲಯಾನುಗ್ರಹ ಶ್ರೀ, ಶ್ರೀಮಾತಾ ರೈಸ್‌ಮಿಲ್ ಉದ್ಯಮಿ ನಾಗೇಶ ಬಾಬು ಅವರಿಗೆ ಕಲಾ ಪೋಷಕ ಅನುಗ್ರಹ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಜೆ ನಡೆದ ಸಮಾರೋಪದಲ್ಲಿ ಸೋಮೇಶ್ವರಪುರ ವಾಸವಿ ಸಂಘದ ಅಧ್ಯಕ್ಷ ಡಾ. ಆರ್. ಎಲ್. ರಮೇಶ ಬಾಬು ಅವರಿಗೆ ಸಾಂಸ್ಕೃತಿಕ ಕಲಾ ಪೋಷಕ ಅನುಗ್ರಹ ಶ್ರೀ ಬಿರುದು ನೀಡಿ ಸನ್ಮಾನಿಸಲಾಯಿತು.

ಗಾಯನ- ಕಛೇರಿ
ಆರಾಧನಾ ಉತ್ಸವದ ಅಂಗವಾಗಿ ವಿದ್ಯಾಲಯದ ಕಿರಿಯ, ಹಿರಿಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಗಾಯನದ ವಿವಿಧ ಗೋಷ್ಠಿ, ಸಂಕೀರ್ತನೆ ಉತ್ಸವ ನಡೆಯಿತು. ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ಪುರಂದರ ದಾಸರ ನವರತ್ನ ಮಾಲಿಕೆ, ಶ್ರೀ ತ್ಯಾಗರಾಜ ಸ್ವಾಮಿಗಳ ಘನರಾಗ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಸಂಪನ್ನಗೊಂಡಿತು.
ವ್ಯಾಖ್ಯಾನ
ಸಂಜೆ ನಡೆದ ದೇವರನಾಮ ಗೋಷ್ಠಿ ಗಾಯನ, ಶ್ರೀ ರಾಮ ದೇವರ ಕುರಿತಾದ ದೇವರನಾಮಗಳನ್ನು ಶಿಬಿರದಲ್ಲಿ ಉಚಿತವಾಗಿ ಕಲಿತ ನೂರಾರು ನಾಗರಿಕರು, ಮಾತೆಯರು ಸಾಮೂಹಿಕವಾಗಿ ಗಾಯನ ಪ್ರಸ್ತುತ ಪಡಿಸಿದರು. ಪಂಡಿತ ಉಡುಪಿ ಬಿ. ಗೋಪಾಲಾಚಾರ್ ದೇವರನಾಮಗಳಿಗೆ ಮನೋಜ್ಞ ವ್ಯಾಖ್ಯಾನ ನೀಡಿದರು.
ಪಕ್ಕವಾದ್ಯ ಸಹಕಾರ: ವಿದ್ವಾನ್ ಮೈಸೂರು ಸಂಜೀವ ಕುಮಾರ್, ಪುರುಷೋತ್ತಮ ತುಮಕೂರು (ವಯೋಲಿನ್) ವಿದ್ವಾನ್ ಅಂಜನ್ ಕುಮಾರ್, ಮೈಸೂರು ಪಿ.ಎಸ್. ಶ್ರೀಧರ್ (ಮೃದಂಗ) ಸಹಕಾರ ನೀಡಿದರು.
ತುಮಕೂರಿನ ಅನುಗ್ರಹ ಸಂಗೀತ ಮಹಾವಿದ್ಯಾಲಯವು ಮಾಕಂ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ತ್ಯಾಗರಾಜ, ಶ್ರೀ ಪುರಂದರ ಆರಾಧನಾ ಉತ್ಸವದಲ್ಲಿ ಹಿರಿಯ ಮೃದಂಗ ವಿದ್ವಾಂಸ ಅಂಜನ್ ಕುಮಾರ್, ಉದ್ಯಮಿ ನಾಗೇಶ ಬಾಬು ಅವರಿಗೆ ಸನ್ಮಾನಿಸಲಾಯಿತು. ವಿದ್ವಾನ್ ಶ್ರೀಕಂಠ ಭಟ್, ಪಿ.ಎಸ್. ಶ್ರೀಧರ್, ಸುಬ್ಬುಕೃಷ್ಣ, ವಸುಮತಿ ಭಟ್ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post