ತುಮಕೂರು: ತುಮಕೂರಿನಲ್ಲಿ ರೌಡಿಗಳ ಹಾವಳಿ ಮಟ್ಟ ಹಾಕಲು ರಾತ್ರಿ ಹತ್ತು ಗಂಟೆ ಬಳಿಕ ಯಾವುದೇ ಅಂಗಡಿ ಮುಂಗಟ್ಟು. ರಸ್ತೆ ಬದಿ ನೈಟ್ ಕ್ಯಾಂಟೀನ್ ತೆರೆಯದಂತೆ ಕಟ್ಟು ನಿಟ್ಟಿನ ಫರ್ಮಾನು ಹೊರಡಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರ ಸ್ವರೂಪದ ಮತ್ತು ವಿರಳ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳ ವಿರುದ್ಧ ಬಳಲ್ಪಡುವ ಕೋಕಾ ಕಾಯ್ದೆಯಡಿ ಪ್ರಕರಣವೊಂದನ್ನು ದಾಖಲಿಸಲು ಮುಂದಾಗಿದೆ.
ತುಮಕೂರು ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಕೋಕಾ ಕಾಯ್ದೆ ಅಡಿ ಪ್ರಕರಣವೊಂದನ್ನು ದಾಖಲಿಸಲು ಜಿಲ್ಲಾ ಪೊಲೀಸರು ನಿರ್ಧರಿಸಿದ್ದಾರೆ. ಇಡೀ ರಾಜ್ಯದಲ್ಲೇ ಭಾರಿ ಚರ್ಚೆಗೆ ಗ್ರಾಸವಾಗಿದ್ದ ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣವನ್ನು ಕೋಕಾ ಕಾಯ್ದೆಯಡಿ ದಾಖಲಿಸಿಕೊಂಡಿದ್ದಾರೆ. ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳು ಪ್ರಕರಣದಡಿ ವಿಚಾರಣೆಗೆ ಹಾಜರಾಗಬೇಕಿದೆ.
ಕೋಕಾ ಕಾಯ್ದೆ ವಿಶೇಷತೆ ಏನು ?
ಗುಂಪುಗೂಡಿ ಭೀಕರ ಕೃತ್ಯ ನಡೆಸುವರ ವಿರುದ್ಧ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಯಕ್ಟ್ (ಕೋಕಾ)ನ್ನು ದಾಖಲಿಸಲಾಗುತ್ತದೆ. ಸಾಮಾನ್ಯವಾಗಿ ಕೋಕಾ ಕಾಯ್ದೆಯಡಿ ಪ್ರಕರಣದ ವಿಚಾರಣೆಯು ವಿಶೇಷವಾಗಿರುತ್ತದೆ. ಶಿಕ್ಷೆ ವಿಧಿಸುವ ಸಂದರ್ಭ, ವಿಚಾರಣೆ ವೇಳೆ ಅತಿ ಕಟ್ಟುನಿಟ್ಟಾದ ಪ್ರಕ್ರಿಯೆ ನಡೆಯುತ್ತದೆ. ಕೋಕಾ ಕಾಯ್ದೆ ಪ್ರಕರಣಗಳಿಗೆ ಬೆಂಗಳೂರಿನಲ್ಲಿರೋ ಪ್ರತ್ಯೇಕ ನ್ಯಾಯಾಲಯ ಮತ್ತು ಪ್ರತ್ಯೇಕ ವಿಶೇಷ ಸರ್ಕಾರಿ ಅಭಿಯೋಜಕರಿರುತ್ತಾರೆ. ಈ ಕಾಯ್ದೆಯಡಿ ದಾಖಲಾಗುವ ಕೇಸ್ ಗಳನ್ನು ಸಾಮಾನ್ಯ ಪ್ರಕರಣಗಳಂತೆ ಪರಿಗಣಿಸುವುದಿಲ್ಲ. ಅತಿ ವೇಗವಾಗಿ ವಿಚಾರಣೆ ನಡೆಯುತ್ತದೆ. ತನಿಖೆಯನ್ನೂ ಅಷ್ಟೇ ವೇಗದಲ್ಲಿ ಪೂರ್ಣಗೊಳಿಸಬೇಕಿರುತ್ತದೆ. ಈ ಕಾಯ್ದೆಯಡಿ ಪ್ರಕರಣಗಳ ಆರೋಪಿಗಳಿಗೆ ಜಾಮೀನು ದೊರೆಯುವುದು ಸುಲಭವಾಗಿರುವುದಿಲ್ಲ.
ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕೋಕಾ ಕಾಯ್ದೆ ಅಡಿ ಪ್ರಕರಣವೊಂದನ್ನು ಪೊಲೀಸರು ದಾಖಲಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ 10 ವರ್ಷಗಳ ಅವಧಿಯಲ್ಲಿ 2 ಪ್ರಕರಣಗಳಲ್ಲಿ ಚಾರ್ಜ್ಶೀಟ್ ಹಾಕಿ ಪ್ರಕರಣ ವಿಚಾರಣೆ ಹಂತದಲ್ಲಿರಬೇಕು. ಅದೇ ರೀತಿ ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣದಲ್ಲಿರೋ ಆರೋಪಿಯ ವಿರುದ್ಧವೂ ವಿಚಾರಣೆ ನಡೆಯುತ್ತಿದೆ. ಅದೇ ಸ್ವರೂಪದ ಪ್ರಕರಣದಲ್ಲಿ ಪುನಃ ಭಾಗಿಯಾಗಿದ್ದರೆ ಮತ್ತು ಗುಂಪುಗೂಡಿ ಕೃತ್ಯ ಎಸಗಿದ್ದರೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದಾಗಿದೆ. ಅಪರೂಪದ ಪ್ರಕರಣಗಳನ್ನು ಮಾತ್ರ ಕೋಕಾ ಕಾಯ್ದೆಯಡಿ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.
ಸೆಪ್ಟೆಂಬರ್ 30ರಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ 22ನೇ ವಾರ್ಡ್ ಕಾರ್ಪೊರೇಟರ್ ರವಿಕುಮಾರ್ ಅವರನ್ನು ತುಮಕೂರು ನಗರದ ಹೊರವಲಯದ ಬಟವಾಡಿ ಬಡಾವಣೆ ಸಮೀಪ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಂದು ಬೆಳ್ಳಂಬೆಳಗ್ಗೆ ಟೀ ಕುಡಿಯಲು ರಸ್ತೆ ಬದಿ ಕ್ಯಾಂಟೀನ್ಗೆ ಬಂದಿದ್ದ ರವಿಕುಮಾರ್ ಅವರನ್ನು ದುಷ್ಕರ್ಮಿಗಳು ಸಂಚು ರೂಪಿಸಿ ಕೊಲೆಗೈದಿದ್ದರು. ಖಾರದ ಪುಡಿಯನ್ನು ಮುಖಕ್ಕೆ ಎರಚಿ, ಕ್ಯಾಂಟರ್ ವಾಹನದಲ್ಲಿ ಬಂದಿದ್ದ ಐವರು ಏಕಾಏಕಿ ಮಚ್ಚು ಲಾಂಗ್ಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.
Discussion about this post