ಕಲ್ಪ ಮೀಡಿಯಾ ಹೌಸ್ | ತುಮಕೂರು |
ಇತ್ತಿಚಿನ ದಿನಗಳಲ್ಲಿ ಮೂಖ ಜೀವಿಗಳ ಮೇಲೆ ಕಿಡಿಗೇಡಿ ಕೃತ್ಯಗಳು ಹೆಚ್ಚಾಗುತ್ತಿವೆ. ತುಮಕೂರಿನಲ್ಲಿ ಹಸುವಿನ ಬಾಲ ಕತ್ತರಿಸಿ ಕಿರಾತಕ ಕೃತ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಬೀಡಾಡಿ ಹಸುವೊಂದು ತುಮಕೂರು ನಗರ ಅಶೋಕ ನಗರ, ವಿದ್ಯಾನಗರ, ಎಸ್ಐಟಿ ಬಡಾವಣೆಗಳಲ್ಲಿ ಓಡಾಡಿಕೊಂಡಿತ್ತು. ಈ ಬಡಾವಣೆಯ ಅಂಗಡಿ ಮಾಲೀಕರು, ಮನೆಯವರು ಹಸುವಿಗೆ ಧಾನ್ಯವನ್ನು, ಹಣ್ಣುಗಳನ್ನು ಕೊಡುತಿದ್ದರು. ಆದರೆ ಕೆಲ ದಿನಗಳ ಹಿಂದೆ ರಾತ್ರಿವೇಳೆ ಯಾರೋ ಕಿಡಿಗೇಡಿಗಳು ಹಸುವಿನ ಬಾಲವನ್ನು ಮಾರಕಾಸ್ತ್ರಗಳಿಂದ ಕೊಯ್ದು ವಿಕೃತಿ ಮೆರೆದಿದ್ದಾರೆ. ಮಾರಕಾಸ್ತ್ರಗಳಿಂದ ಹಸುವಿನ ಬಾಲ ಕೊಯ್ದು ಬಾಲ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.
ಹಸುವಿನ ಬಾಲ ಅಷ್ಟೇ ಅಲ್ಲ, ಪೃಷ್ಠ ಭಾಗಕ್ಕೂ ಗಾಯಗೊಳಿಸಿ ವಿಕೃತಿ ಮೆರೆದಿದ್ದು, ನಿರಂತರ ರಕ್ತ ಸುರಿಯುತ್ತಿರುವುದನ್ನು ಕಂಡ ಸಾರ್ವಜನಿಕರು ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಬಜರಂಗದಳ ಕಾರ್ಯಕರ್ತರು ಪಶು ವೈದ್ಯರನ್ನು ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ.
ಬೆಂಗಳೂರಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿದ್ದ ಘಟನೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ತುಮಕೂರಿನಲ್ಲಿ ಅದೇ ಮಾದರಿಯಲ್ಲಿ ಹಸುವಿಗೆ ಹಿಂಸೆ ನೀಡಿರುವುದು ಕೋಮು ಭಾವನೆ ಕೆರಳಿಸಲು ಈ ಕೆಲಸ ನಡೆದಿದೆ ಎಂದು ಆರೋಪ ಕೇಳಿಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















