ಕಲ್ಪ ಮೀಡಿಯಾ ಹೌಸ್ | ತುಮಕೂರು |
ಶಿವಮೊಗ್ಗ ಮೂಲದ ವಿದ್ವಾನ್ ಶೀಕಂಠ ಭಟ್ ನೇತೃತ್ವದ ನಗರದ ಪ್ರತಿಷ್ಠಿತ ಸಂಸ್ಥೆ ಅನುಗ್ರಹ ಸಂಗೀತ ಮಹಾವಿದ್ಯಾಲಯವು ಫೆ. 10 ಮತ್ತು 11 ರಂದು ಶ್ರೀ ತ್ಯಾಗರಾಜ, ಶ್ರೀ ಪುರಂದರ ಆರಾಧನಾ Tyagaraja-Shri Purandara Dasaru ಸಂಗೀತೋತ್ಸವ ಆಯೋಜಿಸಿದೆ. ನಗರದ ವಿವೇಕಾನಂದ ರಸ್ತೆಯ ಮಾಕಂ ಕಲ್ಯಾಣ ಮಂಟಪದಲ್ಲಿ 10ರ ಸಂಜೆ 5 ಕ್ಕೆ ಉತ್ಸವ ಚಾಲನೆಗೊಳ್ಳಲಿದೆ.
ಸಂಜೆ 5.10ಕ್ಕೆ ಕಿರಿಯ ವಿದ್ಯಾರ್ಥಿಗಳಿಂದ ಮತ್ತು ದೇವರನಾಮ ಉಚಿತ ತರಬೇತಿ ಶಿಬಿರದ ಶಿಬಿರಾರ್ಥಿಗಳಿಂದ ಹರಿದಾಸರ ದೇವರನಾಮ ಗೋಷ್ಠಿ ಗಾಯನ ನಡೆಯಲಿದೆ. 5.45ಕ್ಕೆ ಶ್ರೀ ಅನುಗ್ರಹ ಮಹಿಳಾ ಸಂಘದವರಿಂದ ದೇವರನಾಮ ಪ್ರಸ್ತುತಿ ನೆರವೇರಲಿದೆ. 6.15ಕ್ಕೆ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಲಿದ್ದಾರೆ. ರಾತ್ರಿ 7.45ರಿಂದ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ ಗಾಯನ ಸಂಪನ್ನಗೊಳ್ಳಲಿದೆ.
ಸಂಕೀರ್ತನ ಉತ್ಸವ
11ರ ಬೆಳಗ್ಗೆ 8ಕ್ಕೆ ಶ್ರೀರಾಮ ದೇವಾಲಯದಿಂದ ಕೆ.ಆರ್. ಬಡಾವಣೆ ಮಾರ್ಗದಲ್ಲಿ ದೇವರನಾಮಗಳ ಸಂಕೀರ್ತನ ಉತ್ಸವ ಆಯೋಜನೆಗೊಂಡಿದೆ. 9 ಕ್ಕೆ ಮಾಕಂ ಕಲ್ಯಾಣ ಮಂದಿರದಲ್ಲಿ ಹಿರಿಯ ವಿದ್ಯಾರ್ಥಿಗಳ ಶಾಸ್ತ್ರೀಯ ಸಂಗೀತ ಗಾಯನ ನೆರವೇರಲಿದೆ.
10ಕ್ಕೆ ಶ್ರೀ ತ್ಯಾಗರಾಜ ಸ್ವಾಮಿಗಳ ಘನರಾಗ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ವಿಜೃಂಭಿಸಲಿದೆ. ಹಿರಿಯ ಗಾಯಕರು, ವಿದ್ವಾಂಸರು ಏಕ ಕಂಠದಲ್ಲಿ ಪಂಚರತ್ನ ಕೃತಿಗಳನ್ನು ಹಾಡಲಿದ್ದಾರೆ.
Also read: ರಾಹುಲ್ ಗಾಂಧಿ ಹೇಳಿದ ಡ್ರೋಣ್ ಹಾಗೂ ಅದಾನಿ, ಅಂಬಾನಿ ಕಥೆ ಏನು?
ಸನ್ಮಾನ- ಬಿರುದು ಪ್ರದಾನ
ಬೆಳಗ್ಗೆ 11.30ಕ್ಕೆ ಅನುಗ್ರಹ ಸಂಗೀತ ಮಹಾವಿದ್ಯಾಲಯವು ವಿವಿಧ ರಂಗದ ಗಣ್ಯರಿಗೆ ಸನ್ಮಾನ- ಬಿರುದು ಪ್ರದಾನ ಮಾಡಲಿದೆ. ಹಿರಿಯ ಮೃದಂಗ ವಿದ್ವಾಂಸ ಅಂಜನ್ ಕುಮಾರ್, ಶ್ರೀಮಾತಾ ರೈಸ್‌ಮಿಲ್ ಉದ್ಯಮಿ ನಾಗೇಶ ಬಾಬು, ಸೋಮೇಶ್ವರಪುರ ವಾಸವಿ ಸಂಘದ ಅಧ್ಯಕ್ಷ ಡಾ. ಆರ್.ಎಲ್. ರಮೇಶ ಬಾಬು ಅವರಿಗೆ ಗೌರವಾರ್ಪಣೆ ನೆರವೇರಲಿದೆ.
ಉಡುಪಿಯ ಶ್ರೀವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಪಂಡಿತ ಬಿ. ಗೋಪಾಲಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಕಂ ಕಲ್ಯಾಣ ಮಂದಿರದ ಕಾರ್ಯದರ್ಶಿ ಎಂ.ಆರ್. ಅರವಿಂದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿದ್ವಾನ್ ಶ್ರೀಕಂಠ ಭಟ್ ಉಪಸ್ಥಿತರಿರುತ್ತಾರೆ.
ಪಂಡಿತ ಗೋಪಾಲಾಚಾರ್ಯರಿಂದ ವ್ಯಾಖ್ಯಾನ
5ಕ್ಕೆ ದೇವರನಾಮ ಗೋಷ್ಠಿ ಗಾಯನ, 5.30ಕ್ಕೆ ಶಾಸ್ತ್ರೀಯ ಗಾಯನವಿದೆ. ನಂತರ ಶ್ರೀರಾಮ ದೇವರ ಕುರಿತಾದ ದೇವರನಾಮಗಳನ್ನು ಶಿಬಿರದಲ್ಲಿ ಉಚಿತವಾಗಿ ಕಲಿತ ನೂರಾರು ನಾಗರಿಕರು, ಮಾತೆಯರು ಸಾಮೂಹಿಕವಾಗಿ ಗಾಯನ ಪ್ರಸ್ತುತಿ ಮಾಡಲಿದ್ದಾರೆ. ಪಂಡಿತ ಉಡುಪಿ ಬಿ. ಗೋಪಾಲಾಚಾರ್ ದೇವರನಾಮಗಳಿಗೆ ವ್ಯಾಖ್ಯಾನ ನೀಡಲಿದ್ದಾರೆ.
ಪಕ್ಕವಾದ್ಯ ಸಹಕಾರ
ಎರಡೂ ದಿನಗಳ ಕಾರ್ಯಕ್ರಮದಲ್ಲಿ ಗಾಯಕರಿಗೆ ಮತ್ತು ವಿದ್ಯಾರ್ಥಿಗಳ ಗೋಷ್ಠಿ ಗಾಯನಗಳಿಗೆ ವಿದ್ವಾನ್ ಮೈಸೂರು ಸಂಜೀವ ಕುಮಾರ್, ಪುರುಷೋತ್ತಮ ತುಮಕೂರು (ವಯೋಲಿನ್) ವಿದ್ವಾನ್ ಅಂಜನ್ ಕುಮಾರ್, ಮೈಸೂರು ಪಿ.ಎಸ್. ಶ್ರೀಧರ್ (ಮೃದಂಗ) ಸಹಕಾರ ನೀಡಲಿದ್ದಾರೆ ಎಂದು ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್. ಜೆ.ಎಸ್. ಶ್ರೀಕಂಠ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post