ನಮ್ಮ ದೇಹದೊಳಗೆ ಸಹಸ್ರ ಗಣ-ಪತಿಗಳಿದ್ದಾರೆ ಎಂಬುದನ್ನರಿತರೆ ಗಣಪತಿ ನಮಗೊಲಿವನು. ದೇಹದೊಳಗೆ 72 ಸಾವಿರ ಪ್ರಧಾನ ನಾಡಿಗಳು ಮತ್ತು ಅದರ ಉಪನಾಡಿಗಳು ನಿರಂತರ ಕೆಲಸ ಮಾಡುತ್ತಿವೆ. ಈ ನಾಡಿಗಳಲ್ಲಿ ದೇಹದ ಒಂದೊಂದು ಕ್ರಿಯಾದಿಗಳಿಗೆ ಒಂದೊಂದು ಗುಂಪುಗಳಿವೆ.
ಹಾಗೆಯೇ ಕ್ರಿಯಾಭಂಗವಾಗದಂತೆ ರಕ್ಷಣೆ ನೀಡಲೂ ಅನೇಕ ನಾಡಿ ಸಮೂಹಗಳಿವೆ. ಇಂತಹ ಅನೇಕ ಸಮೂಹಗಳ ಗಣಪತಿಗಳಿಗೆ ಮೂಲಾಧಾರವಾಗಿ ಇನ್ನೊಂದು ಪ್ರಧಾನ ಗಣಪತಿ ಇದ್ದಾನೆ. ಅವನೇ ಭಗವಂತ. ವಿಶ್ವಂಭರ ರೂಪಿ ಮಹಾಗಣಪತಿ.
ಬಹಳ ಪೂರ್ವದಿಂದಲೇ ಗಣಪತಿ ಆರಾಧನೆ ಇತ್ತು. ಈ ಮೊದಲ ಮೃಣ್ಮಯ ಗಣಪತಿ ಮಾಡಿದ್ದೇ ತಾಯಿ ಪಾರ್ವತಿ ದೇವಿ. ಶಿವನ ಕೋಪಕ್ಕೆ ಈ ಮೃಣ್ಮಯ ಗಣಪತಿಯ ಶಿರವು ಛೇಧಿಸಲ್ಪಟ್ಟಾಗ, ನೊಂದ ಶಿವನು ಆನೆಯ ಮೊಗವನ್ನಿರಿಸಿ ಪಾರ್ವತಿಗೆ ಆರಾಧನೆಗೆ ಸಹಾಯ ಮಾಡಿದ.
ನಂತರ ಪ್ರತೀ ಭಾದ್ರಪದ ಮಾಸದ ಬಹುಳ ಚೌತಿಯು ಗಣಪತಿಯ ಹಬ್ಬವಾಯ್ತು. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ. ಪ್ರಪಂಚದಾದ್ಯಂತ ಗಣಪತಿ ಆರಾಧನೆಯ ಚರಿತ್ರೆಗಳು ಸಿಗುತ್ತದೆ.
ಗಣಪತಿ ಅಥರ್ವ ಶೀರ್ಷವನ್ನು ಅಧ್ಯಯನ ಮಾಡಿದಾಗ ಗಣಪತಿಯ ಮಹಿಮೆ ತಿಳಿಯಬಹುದು.
ತ್ವಂಭೂಮಿರಾಪೋನಲೋನಿಲೋ ನಭಃ ಎಂದಿದ್ದಾರೆ. ಇದನ್ನು ಬಿಡಿಸಿದರೆ ಭೂಮಿ+ ಆಪೋ+ ಅನಲ+ಅನಿಲ+ನಭಃ= ಅಂದರೆ ಶಿಖಿಭೂಖಪಯೋಮರುತ್= ಪಂಚ ತತ್ವಗಳಾದ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶಗಳೆಂಬ ಐದು ತತ್ವಗಳಲ್ಲಿ ಗಣಪತಿಯ ಸಾನ್ನಿಧ್ಯವಿದೆ. ಐದು ತತ್ವಗಳಿಂದಲೇ ಇಡೀ ಬ್ರಹ್ಮಾಂಡ ಮತ್ತು ಅದರೊಳಗಿನ ಚರಾಚರಗಳು. ಹಾಗಾಗಿ ಇಡೀ ಬ್ರಹ್ಮಾಂಡವೇ ವಿಶ್ವಂಭರ ರೂಪಿ ಮಹಾಗಣಪತಿಯ ಅಧೀನ ಎಂದರ್ಥ.
ಇದಕ್ಕಾಗಿ ಮೊದಲ ಪೂಜೆಯನ್ನು ಗಣಪತಿಗೇ ಮಾಡುವ ವಾಡಿಕೆ ಶುರುವಾಯ್ತು.
ಇಂತಹ ವಿರಾಟ ಸ್ವರೂಪಿ ಮಹಾಗಣಪತಿಯನ್ನು ಪೂಜೆಗಳಲ್ಲಿ ‘ತ್ರಿಕೋಣ ಮಾಧ್ಯಗತಂ’ ತ್ರಿಕೋಣದ ಮಧ್ಯದಲ್ಲಿ ಆರಾಧಿಸಿದರು. ಸ್ವಸ್ತಿಕಾ ಮಧ್ಯೇ ಎಂದು ಗಣಪತಿಯನ್ನು ಪೂಜಿಸಿದರು. ಮೃಣ್ಮಯದಲ್ಲಿ ಗಜಮುಖ ಸ್ವರೂಪದಲ್ಲಿ ಆಚರಿಸಲು ಶುರುಮಾಡಿದರು. ಬಾಹ್ಯ ಜಗತ್ತಿಗೆ ನಾವು ಭಕ್ತಿಶ್ರದ್ಧೆಯಿಂದ ಆರಾಧಿಸುವ ಬಿಂಬರೂಪಿ ಗಣಪತಿಯು, ದೇಹಾಂತರ್ಗತ ಗಣಪತಿಗೆ ಪ್ರಿಯವಾಗಿ ಸಕಲ ವಿಘ್ನಗಳೂ ನಿವಾರಣೆ ಆಗುತ್ತದೆ. ಯಾವುದೇ ಕಾರ್ಯ ಮಾಡಬೇಕಾದರೂ ಗಣಪತಿಯನ್ನು ‘ನಿರ್ವಿಘತಾ ಸಿದ್ಧ್ಯರ್ಥೇ’ ಎಂದು ಮೊದಲ್ಗೊಂಡೇ ಕಾರ್ಯಾರಂಭ ಮಾಡುವುದನ್ನು ಕಾಣಬಹುದು.
ದಾಸವರೇಣ್ಯರ ಹಾಡುಗಳೂ ಗಣಪತಿಯ ಬಗ್ಗೆ ಚಿಂತನೆ ನಡೆಸಿದೆ. ‘ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ ಸಂದಾನು ರಣದಲಿ ಗಣನಾಥ’ ಎಂದು ಹೇಳಿದ್ದಾರೆ. ಅದೇ ಹಾಡಿನಲ್ಲಿ,’ ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ’ ಎಂದು ಗಣಪನ ಪೂಜಿಸಿ ಬಂಧ ಮುಕ್ತನಾದ ವಿಚಾರ ಹೇಳಿದ್ದಾರೆ.
ಇದು ಪುರಾಣ ಕಥೆಯಾದರೆ, ಬಾಲಗಂಗಾಧರ ತಿಲಕರು ಯಾವಾಗ ಗಣಪತಿಯ ಆರಾಧನೆ ಮಾಡಿ ಸ್ವಾತಂತ್ರ್ಯಕ್ಕಿಳಿದರೋ ಅದು ವರವಾಯ್ತು. ಹಾಗಾಗಿ ದೇಹವ್ಯಾಪಿಯಾಗಿ ಗಣಪತಿ ನಮ್ಮೊಳಗೇ ಇದ್ದಾನೆ ಎಂಬ ಆರಿವು ನಮಗಾದಾಗ ಯಾವ ವಿಘ್ನವೂ ನಮ್ಮತ್ತ ಸುಳಿಯಲಾರದು.
॥ಗಂ ಗಣಪತಯೇ ನಮಃ॥
-ಪ್ರಕಾಶ್ ಅಮ್ಮಣ್ಣಾಯ,
ಜ್ಯೋರ್ತಿವಿಜ್ಞಾನಂ
Discussion about this post