ಕಲ್ಪ ಮೀಡಿಯಾ ಹೌಸ್ | ಉಡುಪಿ |
ನಗರದಲ್ಲಿ ಸಂಚರಿಸುವ ಎಲ್ಲಾ ಸಿಟಿ ಬಸ್’ಗಳಿಗೆ ಜೂನ್ 1 ರ ಒಳಗಾಗಿ ಕಡ್ಡಾಯವಾಗಿ ಡೋರ್ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಗಡುವು ನೀಡಿದ್ದಾರೆ.
ಈ ಕುರಿತಂತೆ #Udupi ಉಡುಪಿ ಸಿಟಿ ಬಸ್ #CityBus ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಿ ಗಡುವು ನೀಡಿರುವ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಬಸ್ಸುಗಳಿಗೆ ಡೋರ್’ಗಳನ್ನು ಶೀಘ್ರವಾಗಿ ಅಳವಡಿಸಬೇಕಾಗಿರುತ್ತದೆ ಎಂದಿದ್ದಾರೆ.
ಮಾರ್ಚ್’ವರೆಗೆ ಶಾಲೆಗಳು ನಡೆಯುತ್ತಿರುವುದರಿಂದ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಬಸ್ಸುಗಳು ವ್ಯತ್ಯಯವಾಗುವುದನ್ನು ತಡೆಯಲು ಮತ್ತು ಎಲ್ಲಾ ಬಸ್’ಗಳಿಗೆ ಬಾಗಿಲುಗಳನ್ನು ಅಳವಡಿಸಲು ಸೀಮಿತ ಗ್ಯಾರೇಜ್’ಗಳು ಮಾತ್ರವೇ ಇರುವುದನ್ನು ಸಹ ಪರಿಗಣಿಸಿ, ಎಲ್ಲಾ ಬಸ್’ಗಳಿಗೆ ಬಾಗಿಲುಗಳನ್ನು ಅಳವಡಿಸಲು ಜೂನ್ 1 ರವರೆಗೆ ಸಮಯವಕಾಶವನ್ನು ನೀಡಿದ್ದಾರೆ.
ಇನ್ನು, ಎಫ್’ಸಿ ನವೀಕರಣಕ್ಕೆ ಬಾಕಿ ಇರುವಂತಹ ಬಸ್’ಗಳಿಗೆ ಜೂನ್ 1 ರೊಳಗಾಗಿ ಬಾಗಿಲನ್ನು ಅಳವಡಿಸುವ ಷರತ್ತಿಗೊಳಪಟ್ಟು ಅರ್ಹತೆ ಇದ್ದಲ್ಲಿ ಎಫ್’ಸಿ ನವೀಕರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಗಡುವು ದಿನಾಂಕದ ಒಳಗಾಗಿ ಬಸ್’ಗಳಿಗೆ ಬಾಗಿಲನ್ನು ಅಳವಡಿಸದಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪುಟ್ ಬೋರ್ಡ್’ನಲ್ಲಿ ನಿಂತು ಪ್ರಯಾಣಿಸದಂತೆ ಬಾಗಿಲುಗಳನ್ನು ಅಳವಡಿಸುವವರೆಗೆ ಅರಿವು ಮೂಡಿಸುವ ಕೆಲಸ ಮಾಡುವಂತೆಯೂ ಕೂಡಾ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















