ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ತಾಲೂಕಿನಲ್ಲಿ ಗುಣಮಟ್ಟ ಹಾಗೂ ಜ್ಞಾನಾಧಾರಿತ ಶಿಕ್ಷಣಕ್ಕೆ ಪರ್ಯಾಯ ಹೆಸರು ಎನ್ನುವ ರೀತಿಯಲ್ಲಿ ಬೆಳೆದುನಿಂತ ಶಿಕ್ಷಣ ಸಂಸ್ಥೆ ಕ್ರೈಸ್ಟ್ ಕಿಂಗ್.
ಸುಮಾರು ಮೂರು ದಶಕಗಳಿಂದ ಕಾರ್ಕಳದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ವಿದ್ಯಾದಾನದ ಸೇವಾ ಕೈಂಕರ್ಯ ನಡೆಸುತ್ತಾ ಬಂದಿದೆ. ಪದವಿಪೂರ್ವ ಶಿಕ್ಷಣದಲ್ಲಿ ಪ್ರಯೋಗಶೀಲತೆ ಹಾಗೂ ಆಧುನಿಕ ಬೋಧನಾ ಶೈಲಿಗೆ ಕಾರ್ಕಳದಲ್ಲಿ ಬುನಾದಿ ಹಾಕಿಕೊಟ್ಟ ಸಂಸ್ಥೆ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು.
ತಾಲೂಕಿನಲ್ಲಿ ಸ್ಮಾರ್ಟ್ ಕ್ಲಾಸ್ ಬೋಧನಾ ತಂತ್ರಜ್ಞಾನವನ್ನು ಪರಿಚಯಿಸಿದ ಕೀರ್ತಿ ಈ ಸಂಸ್ಥೆಯದ್ದು. ಪ್ರಸ್ತುತ ಈ ಸಂಸ್ಥೆಯಲ್ಲಿ ಪದವಿಪೂರ್ವ ಕಾಲೇಜಿಗಾಗಿಯೇ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ.

ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್(ರಿ) ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಪದವಿಪೂರ್ವ ಕಾಲೇಜಿಗಾಗಿ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ನಡೆಯುತ್ತಿದ್ದು, ಈಗಾಗಲೇ ನೆಲಮಹಡಿ ಹಾಗೂ ಮೊದಲ ಅಂತಸ್ತು ಪೂರ್ಣಗೊಂಡಿದೆ. 75 ಸಾವಿರ ಚದರ ಅಡಿ ವಿಸ್ತೀರ್ಣದ ಒಟ್ಟು ಐದು ಅಂತಸ್ತಿನ ಪದವಿಪೂರ್ವ ಕಾಲೇಜು ಕಟ್ಟಡ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಂಡು ತಲೆ ಎತ್ತಲಿದೆ.
ವಿಶೇಷತೆಗಳು
ವಿಶಾಲ ಸಭಾಂಗಣ, ಗ್ರಂಥಾಲಯ, ಲ್ಯಾಬ್, ಮಿನಿ ಥಿಯೇಟರ್‌ಗಳ ಸೌಲಭ್ಯಗಳನ್ನು ಈ ಕಟ್ಟಡ ಹೊಂದಿದೆ. ನೂತನ ಕಟ್ಟಡವು ಹಲವಾರು ಸೌಲಭ್ಯಗಳೊಂದಿಗೆ ಆಧುನಿಕ ಶಿಕ್ಷಣ ಹಾಗೂ ಶಿಕ್ಷಣಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಭವಿಷ್ಯದ ವಿಸ್ತರಣೆಗೆ ಅನುಕೂಲವಾಗುವಂತೆ ನಿರ್ಮಾಣವಾಗುತ್ತಿದೆ.
ಇದರಲ್ಲಿ ಒಟ್ಟು ಐವತ್ತು ತರಗತಿ ಕೊಠಡಿಗಳು ಲಭ್ಯವಾಗಲಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ ಸಾಹಿತ್ಯಿಕ ಪ್ರಜ್ಞೆ ಮೂಡಿಸಲು 8000 ಚದರ ಅಡಿಗಳ ವಿಶಾಲ ಗ್ರಂಥಾಲಯ ನಿರ್ಮಾಣವಾಗಲಿದೆ. ಮಕ್ಕಳಿಗೆ ಪಠ್ಯಪೂರಕ ಕಾರ್ಯಕ್ರಮ ವೀಕ್ಷಿಸಲು ಅನುವಾಗುವಂತೆ ನೂತನ ತಂತ್ರಜ್ಞಾನದ ಮಿನಿ ಥಿಯೇಟರ್ ನಿರ್ಮಾಣವಾಗಲಿದೆ. ಸುಮಾರು 1500 ವಿದ್ಯಾರ್ಥಿಗಳು ಏಕಕಾಲದಲ್ಲಿ ಕುಳಿತುಕೊಳ್ಳಬಲ್ಲ ವಿಶಾಲವಾದ ಸಭಾಂಗಣವೂ ಈ ಕಟ್ಟಡದಲ್ಲಿ ಇರಲಿದೆ.
ಉಳಿದಂತೆ ವಿಜ್ಞಾನ ವಿಭಾಗಗಳಿಗೆ ಬೇಕಾದ ಅಂತಾರಾಷ್ಟ್ರೀಯ ದರ್ಜೆಯ ಜೀವಶಾಸ್ತ್ರ, ರಸಾಯನ ಶಾಸ್ತ್ರ, ಭೌತಶಾಸ್ತ್ರ ಹಾಗೂ ಕಂಪ್ಯೂಟರ್ ಲ್ಯಾಬ್‌ಗಳು ಆಧುನಿಕ ಸೌಲಭ್ಯಗಳೊಂದಿಗೆ ತಲೆ ಎತ್ತಲಿವೆ. ಮುಂದಿನ ಆಗಸ್ಟ್ ಅಂತ್ಯದ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದ್ದು ಸೆಪ್ಟಂಬರ್ ತಿಂಗಳಿನಿಂದ ಕಾರ್ಯಾರಂಭಗೊಳಿಸಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ.
ಅತ್ಯುತ್ತಮ ಫಲಿತಾಂಶ
ಕಾರ್ಕಳ ತಾಲೂಕಿನಲ್ಲಿ ಪದವಿಪೂರ್ವ ಫಲಿತಾಂಶದಲ್ಲಿ ಮುಂಚೂಣಿಯಲ್ಲಿರುವ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆ ನಿರಂತರವಾಗಿ ನೂರು ಶೇಕಡಾ ಫಲಿತಾಂಶ ಪಡೆಯುತ್ತಿದೆ. ಅತೀ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಕೆಸಿಇಟಿ, ನೀಟ್, ಜೆಇಇ, ಸಿಎ, ಸಿಎಸ್ ತರಬೇತಿಗಳು ನಿರಂತರವಾಗಿ ನಡೆಯುತ್ತಿದ್ದು ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರಾಧಾನ್ಯತೆ ನೀಡಲಾಗುತ್ತಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡ ಮತ್ತು ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಅತ್ಯುನ್ನತ ದರ್ಜೆಯ ಶಿಕ್ಷಣ ಒದಗಿಸುತ್ತಿರುವ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು ಕಾರ್ಕಳದ ಪಾಲಿಗೆ ಒಂದು ಅನನ್ಯ ಕೊಡುಗೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post