ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆವರ್ಸೆ ಗ್ರಾಮದ ಅಪರೂಪದ ಆದರ್ಶ ಶಿಕ್ಷಕ ಭುಜಂಗ ಶೆಟ್ಟಿ ಅವರ ವೃತ್ತಿ ಬದುಕು ಇದೇ ತಿಂಗಳು 31ನೆಯ ತಾರೀಕಿನಂದು ಮುಕ್ತಾಯಗೊಳ್ಳಲಿದೆ. 30 ವರ್ಷಗಳ ಕಾಲ ನಮ್ಮೂರಿನ ಶಾಲೆಯಲ್ಲಿ ಸೇವೆ ಸಲ್ಲಿಸಿ ಆವರ್ಸೆ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ರೂಪಿಸಿ, ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಖಖಔಇಯಲ್ಲಿ ಶೇ.100ರಷ್ಟು ಫಲಿತಾಂಶವನ್ನು ಆವರ್ಸೆ ಸರಕಾರಿ ಪ್ರೌಢಶಾಲೆಗೆ ತಂದು ಕೊಟ್ಟ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಭುಜಂಗ ಶೆಟ್ಟಿ ಆವರ್ಸೆ ಕಲ್ಮನೆ ಅವರ ಸೇವೆಯನ್ನು ಸ್ಮರಿಸಬೇಕಾದ ದಿನ.
ಭುಜಂಗ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆವರ್ಸೆ ಗ್ರಾಮದಲ್ಲಿ ಬಚ್ಚು ಶೆಟ್ಟಿ ಮತ್ತು ಮಂಜಮ್ಮ ಶೆಟ್ಟಿ ದಂಪತಿಗಳ 4ನೆಯ ಪುತ್ರರಾಗಿ 960ರ ಅಕ್ಟೋಬರ್ 10ರಂದು ಆವರ್ಸೆ ಶ್ರೀ ಶಂಕರನಾರಾಯಣ ದೇವಸ್ಥಾನದ ಸಮೀಪದಲ್ಲಿರುವ ತಮ್ಮ ಸ್ವಗೃಹದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಆವರ್ಸೆಯಲ್ಲಿ 1975ನೆಯ ಇಸವಿಯಲ್ಲಿ ಮುಗಿಸಿದ ಇವರು, ತಮ್ಮ ಪ್ರೌಢಶಿಕ್ಷಣವನ್ನು ಗೋಳಿಯಂಗಡಿ ಸರಕಾರಿ ಶಾಲೆಯಲ್ಲಿ 1978ರಲ್ಲಿ ಪೂರ್ಣಗೊಳಿಸಿದರು. 1980ರಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಬಾರ್ಕೂರು ಕಾಲೇಜಿನಲ್ಲಿ ಪಡೆದುಕೊಂಡರು. ನಂತರ ಮುಂದಿನ ಉನ್ನತ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ತೆರಳಿ ಸಂಬಂಧಿಕರ ಮನೆಯಲ್ಲಿ ನೆಲೆಸಿ ಅಲ್ಲಿನ ಪ್ರತಿಷ್ಠಿತ ಸಂಸ್ಥೆ ಜೆಎಸ್’ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ಪದವಿ ಶಿಕ್ಷಣವನ್ನು ಮುಗಿಸಿದ ನಂತರ ತಮ್ಮ ವೃತ್ತಿ ಬದುಕನ್ನು ಒಬ್ಬ ಶಿಕ್ಷಕನಾಗಿ ಕಳೆಯಬೇಕು ಎಂದು ನಿರ್ಧರಿಸಿ ಬಿಪಿಎಡ್ ಅನ್ನು ಎಂವಿಎಎಸ್’ಕೆಜಿ ನಾಡಗಿರಿ ಕಾಲೇಜ್ ಧಾರವಾಡದಲ್ಲಿ 1985ನೆಯ ಇಸವಿಯಲ್ಲಿ ಉತ್ತೀರ್ಣರಾದರು.
ತನ್ನೂರಿಗೆ ತನ್ನೂರ ಶಾಲೆಗೆ ಏನಾದರೂ ಸೇವೆ ಮಾಡಬೇಕು ಎನ್ನುವ ತುಡಿತ ಮಿಡಿತಗಳನ್ನು ಹೊಂದಿರುವ ಭುಜಂಗ ಶೆಟ್ಟಿಗೆ ಅವರ ಆರಾಧ್ಯದೈವ ಶ್ರೀ ಶಂಕರ ನಾರಾಯಣ ದೇವರ ಕೃಪೆಯಿಂದ 1986ರಲ್ಲಿ ಆವರ್ಸೆ ಸರಕಾರಿ ಪ್ರೌಢಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡರು.
ಭುಜಂಗ ಮಾಷ್ಟ್ರು ಉತ್ತಮ ವ್ಯಕ್ತಿತ್ವದ ನೇರ ನಡೆ-ನುಡಿಯ ವ್ಯಕ್ತಿ. ಅವರು ಆವರ್ಸೆ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಸಮಯದಲ್ಲಿ ಮುಖ್ಯ ಶಿಕ್ಷಕರು ಇಲ್ಲದೆ ಇರುವ ಕಾರಣ ಸೇವೆಯ ಆಧಾರದಲ್ಲಿ ಭುಜಂಗ ಮಾಷ್ಟ್ರು ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡರು. ಭುಜಂಗ್ ಇವರು ಮುಖ್ಯ ಶಿಕ್ಷಕರಾದ ಮೇಲೆ ಆವರ್ಸೆ ಪ್ರೌಢಶಾಲೆಯ ಇತಿಹಾಸವೇ ಬದಲಾಯಿತು. ಭುಜಂಗ ಸರ್ ಮುಖ್ಯ ಶಿಕ್ಷಕರಾಗಿರುವ ಅವಧಿಯಲ್ಲಿ 2002-03ರ ಬ್ಯಾಚ್’ನವರು ಶೇ.100ರಷ್ಟು ಫಲಿತಾಂಶವನ್ನು ತಂದು ಕೊಟ್ಟಿರುವುದು ಆವರ್ಸೆ ಪ್ರೌಢಶಾಲೆಯ ಇತಿಹಾಸದಲ್ಲಿ ಸುವರ್ಣ ಯುಗ ಎಂದರೆ ತಪ್ಪಾಗಲಾರದು.
ಭುಜಂಗ ಮಾಷ್ಟ್ರು ಆವರ್ಸೆ ಪ್ರೌಢಶಾಲೆಗೆ ಅತ್ಯಂತ ಬಲಿಷ್ಠವಾದ ಅಡಿಪಾಯವನ್ನು ಹಾಕಿಕೊಟ್ಟಿದ್ದರು. ಆವತ್ತಿನಿಂದ ಇವತ್ತಿನವರೆಗೂ ಎಸ್’ಎಸ್’ಎಲ್’ಸಿಯಲ್ಲಿ ಪ್ರತಿ ವರ್ಷ ಶೇ.90ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವುದೇ ಇಲ್ಲ. ಆವರ್ಸೆ ಒಂದು ಚಿಕ್ಕ ಗ್ರಾಮವಾಗಿದ್ದು ಆರ್ಥಿಕ ಸಂಕಷ್ಟದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಅನೇಕ ಮಂದಿ ಭುಜಂಗ್ ಸರ್ ಕಾರಣದಿಂದ ಎಸ್’ಎಸ್’ಎಲ್’ಸಿಯನ್ನು ಮುಗಿಸಿದರು. ದಿವಂಗತ ಗಣೇಶ್ ಐತಾಳ ಹಾಗೂ ಭುಜಂಗ ಶೆಟ್ಟಿ ಇಬ್ಬರು ಆವರ್ಸೆ ಊರಿನ ಶಿಕ್ಷಣ ಕ್ರಾಂತಿ ಮಾಡಿದ ಮಹನೀಯರು. ಸರ್ಕಾರದ ಹಿಂದಿನ ಕಾನೂನಿನ ಅನ್ವಯ ದೈಹಿಕ ಶಿಕ್ಷಕರು ಕೂಡ ಮುಖ್ಯ ಶಿಕ್ಷಕರಾಗಬಹುದಿತ್ತು. ದೈಹಿಕ ಶಿಕ್ಷಕರಿಗೆ ಮುಖ್ಯ ಶಿಕ್ಷಕರರಾಗಲು ಆವಕಾಶ ಸಿಗದಿದ್ದರೆ ಭುಜಂಗ ಸರ್ ನಂತಹ ಒಬ್ಬರು ಮಾದರಿ ಮುಖ್ಯ ಶಿಕ್ಷಕರು ನಮಗೆ ದೊರಕುತ್ತಿರಲಿಲ್ಲ.
ಉತ್ತಮ ಟೀಚಿಂಗ್ ಟೀಮ್ ಮಾಡಿಕೊಂಡು ಆವರ್ಸೆ ಪ್ರೌಢಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ಆಟದ ಅಂಗಳವೇ ಇಲ್ಲದ ಪ್ರೌಢಶಾಲೆಯಲ್ಲಿ ಉತ್ತಮ ಆಟದ ಅಂಗಳವನ್ನು ಭುಜಂಗ್ ಸರ್ ಅವರ ಅವಿರತ ಪರಿಶ್ರಮದಿಂದ ನಿರ್ಮಿಸಲಾಯಿತು. ಇಡೀ ಜಿಲ್ಲೆಯೇ ಮೆಚ್ಚುವಂತಹದು ಫಲಿತಂಶವನ್ನು ನೀಡಿ ಆವರ್ಸೆ ಶಾಲೆ ಜನ ಮೆಚ್ಚುಗೆ ಗಳಿಸಿತು. ಶಿಕ್ಷಣ ಕ್ರೀಡೆ ಎಲ್ಲದರಲ್ಲೂ ಆವರ್ಸೆ ಶಾಲೆ ಮುಂಚೂಣಿಗೆ ಬರುವಂತೆ ಮಾಡಿದರು.
ಇವರ ಅವಧಿಯಲ್ಲಿ ಪ್ರತಿ ಎರಡು ವರ್ಷಕೊಮ್ಮೆ ಶಾಲೆಯಲ್ಲಿ ಸ್ಕೂಲ್ ಡೇ ಅದ್ದೂರಿಯಾಗಿ ಆಚರಿಸುತ್ತಿದ್ದರು. ಮಕ್ಕಳನ್ನು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಪ್ರತಿ ವರ್ಷ ಆವರ್ಸೆ ಪ್ರೌಢಶಾಲೆಯಲ್ಲಿ ಗಣೇಶ ಚತುರ್ಥಿಯ ದಿನದಂದು ಮೂರು ದಿನಗಳ ಕಾಲ ಸಾರ್ವಜನಿಕ ಗಣೇಶ ಹಬ್ಬವನ್ನು ಆಚರಿಸಲು ಅನುವು ಮಾಡಿಕೊಟ್ಟು ಸಾರ್ವಜನಿಕರ ವಿಶ್ವಾಸ ಗಳಿಸಿದರು. 1986 ರಿಂದ 2016 ತನಕ 19 ವರ್ಷ ದೈಹಿಕ ಶಿಕ್ಷಕರಾಗಿ ಹಾಗೂ 11 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ 30ವರ್ಷಗಳ ಸುದೀರ್ಘ ಸೇವೆಯನ್ನು ಆವರ್ಸೆ ಪ್ರೌಢಶಾಲೆಯಲ್ಲಿ ಸಲ್ಲಿಸಿದರು.
ಆವರ್ಸೆ ಹೈಸ್ಕೂಲ್’ನಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯ ಬಗ್ಗೆ ತರಬೇತಿಯನ್ನು ನೀಡುತ್ತಿದ್ದರು. ಅನೇಕ ಸಂಘ ಸಂಸ್ಥೆಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡುತ್ತಿದ್ದರು. ಹುಬ್ಬಳ್ಳಿಯ ಸ್ವಾಮೀಜಿ ಅವರನ್ನು ಕರೆಹಿಸಿ ಅದ್ಬುತ ಕಾರ್ಯಕ್ರಮವನ್ನು ಆಯೋಜಿಸಿದ್ದು ಇನ್ನು ಕೂಡ ಕಣ್ಣಿಗೆ ಕಟ್ಟಿದ ಹಾಗಿದೆ.
ಸ್ವಾಮಿ ವಿವೇಕಾನಂದರ ಬಗೆಗೆ ಸರಣಿ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಅವರ ವಿವೇಕ ಜಾಗ್ರತಗೊಳ್ಳುವ ಹಾಗೆ ಮಾಡುತ್ತಿದ್ದರು. ಪ್ರತಿ ವರ್ಷ ಶಾಲೆಯಲ್ಲಿ ಕ್ರೀಡಾ ಉತ್ಸವವನ್ನು ಆಯೋಜಿಸಿ ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಬೆಳೆಯುವಂತೆ ಮಾಡುತ್ತಿದ್ದರು. ಭುಜಂಗ ಸರ್ ಅವರ ಅವಧಿಯಲ್ಲಿ ಅನೇಕ ಮಂದಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಇರುವ ಎಲ್ಲಾ ನಿರ್ಧಾರಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರಲಿಲ್ಲ. ಒಟ್ಟಾರೆ ಹೇಳಬೇಕು ಎಂದರೆ ಸಾವಿರ ಸಾವಿರ ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಿದ ನಮ್ಮೂರ ಅಮೂಲ್ಯರತ್ನ ಭುಜಂಗ ಮಾಷ್ಟ್ರು.
ಭುಜಂಗ ಸರ್ ಅವರ ಅವಿರತ ಶ್ರಮದಿಂದ ಆವರ್ಸೆ ಸರ್ಕಾರಿ ಪ್ರೌಢಶಾಲೆ ಒಂದು ಮಾದರಿ ಶಾಲೆ ಎನಿಸಿಕೊಂಡಿತು. ಭುಜಂಗ ಸರ್ ಅವರ ಕಾರ್ಯ ವೈಖರಿ ಅಪಾರ ಜನಮನ್ನಣೆ ಗಳಿಸಿತು. ಉಡುಪಿ ಜಿಲ್ಲೆಯಲ್ಲಿ ಆವರ್ಸೆ ಶಾಲೆಗೆ ಎಂದರೆ ಎಲ್ಲರಿಗೂ ಮೊದಲು ಭುಜಂಗ್ ಸರ್ ಹೆಸರು ನೆನಪಾಗುತ್ತಿತ್ತು. ಆವರ್ಸೆ ಸರ್ಕಾರಿ ಶಾಲೆ ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎನ್ನುವ ಮಟ್ಟಿಗೆ ಸರ್ಕಾರಿ ಶಾಲೆಯನ್ನು ಕಟ್ಟಿ ಬೆಳೆಸಿದ ಕೀರ್ತಿ ಶ್ರೀಯುತ ಭುಜಂಗ ಶೆಟ್ಟಿ ಅವರಿಗೆ ಸಲ್ಲುತ್ತದೆ.
ಆವರ್ಸೆ ಪ್ರೌಢಶಾಲೆಯಿಂದ ವರ್ಗಾವಣೆಗೊಂಡು ಜಿಪಿಯುಸಿ ಕೊಕ್ಕರ್ಣೆಯಲ್ಲಿ ಎರಡು ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ನಂತರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣ ಅಧಿಕಾರಿಯಾಗಿ ನಿಯೋಜನೆಗೊಂಡು, ಬ್ರಹ್ಮಾವರ ಬಿಇಒ ಕಚೇರಿಯಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ ಅಕ್ಟೋಬರ್ 31ನೆಯ ತಾರೀಕಿನಂದು ತಮ್ಮ ವೃತ್ತಿ ಜೀವನದಿಂದ ನಿವೃತ್ತರಾಗುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜೀವನಕ್ಕೆ ಒಂದು ಹೊಸ ಚೈತನ್ಯ ನೀಡಿ. ತಮ್ಮ ದಿಟ್ಟ ನಿರ್ಧಾರಗಳಿಂದ ಖ್ಯಾತಿ ಗಳಿಸಿ, ಯಾರಿಗೂ ಎಳ್ಳಷ್ಟೂ ಕೆಡುಕನ್ನು ಬಯಸದ ಭುಜಂಗ ಸರ್ ನೀವು ನಿಮ್ಮ ವೃತ್ತಿ ಜೀವನದಿಂದ ನಿರ್ಗಮಿಸುತ್ತಿರುವುದು ನಮಗೆಲ್ಲರಿಗೂ ಬಹಳ ಬೇಸರದ ವಿಷಯವಾಗಿದೆ. ನಿಮ್ಮ ಮಾರ್ಗದರ್ಶನದ ಅವಶ್ಯಕತೆ ನಮಗೆ ಇನ್ನು ಬೇಕಿದೆ. ನಿಮ್ಮ ಆದರ್ಶ ಜೀವನ ಎಲ್ಲರಿಗೂ ಮಾದರಿಯಾಗಲಿ. ಸುದೀರ್ಘ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ. ನೆಮ್ಮದಿಯ ಬದುಕು ನಿಮ್ಮದಾಗಲಿ. ತಾಯಿ ಮಂದರ್ತಿ ದುರ್ಗಾಪರಮೇಶ್ವರಿ ಅಮ್ಮನವರು ಸದಾ ಕಾಲ ನಿಮಗೆ ಆರೋಗ್ಯ ಹಾಗೂ ಆಯಸ್ಸು ನೆಮ್ಮದಿಯನ್ನು ಕರುಣಿಸಲಿ ನಿಮ್ಮ ಬಾಳು ಬಂಗಾರವಾಗಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post