ಕಲ್ಪ ಮೀಡಿಯಾ ಹೌಸ್ | ಉಡುಪಿ |
ಜನ ಕಾಂಗ್ರೆಸ್ ನ್ನು ಗೆಲ್ಲಿಸುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರು ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ ಎಂದರು.
ಅವರು ಇಂದು ಉಡುಪಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಸಿದ್ದರಾಮಯ್ಯ Siddaramaiah ಅವರ ನೇತೃತ್ವದಲ್ಲಿ 5 ವರ್ಷ ಆಡಳಿತ ಮಾಡಿದಾಗಲೂ ನಾವೇ ಗೆಲ್ಲುತ್ತೇವೆ ಎನ್ನುತ್ತಿದ್ದರು. ಯಡಿಯೂರಪ್ಪ ಹಾಗೂ ಹೆಚ್.ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎನ್ನುತ್ತಿದ್ದರು . 77 ಸ್ಥಳಗಳಿಗೆ ಬಂದು ನಿಂತರು. ಅಧಿಕಾರ ನಡೆಸಿ, ಕಾರ್ಯಕ್ರಮಗಳನ್ನು ಕೊಟ್ಟಾಗಲೇ, ಜನ ತಿರಸ್ಕಾರ ಮಾಡಿದ್ದಾರೆ. ಒಡೆದಾಳುವ, ಸಮಾಜ ಒಡೆಯುವ ನೀತಿ, ಕರ್ನಾಟಕವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿರುವುದನ್ನು ಜನ ಮರೆತಿಲ್ಲ. ಅವರು ಹೇಳಿದ್ದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದರು.
ಕರಾವಳಿಯಲ್ಲಿ ಹೆಚ್ಚಿನ ಹೂಡಿಕೆ
ನವೀಕರಿಸಬಹುದಾದ ಇಂಧನ, ವಿಶೇಷವಾಗಿ ಹೈಡ್ರೋಜನ್ ಇಂಧನ, ಅಮೋನಿಯಾ ಕರಾವಳಿ ಪ್ರದೇಶದಲ್ಲಿಯೇ ಹೆಚ್ಚಿದ್ದು, ಮಂಗಳೂರು ಮತ್ತು ಉಡುಪಿ ಪ್ರದೇಶದಲ್ಲಿ ಹೂಡಿಕೆಯ ನಿರೀಕ್ಷೆಯಲ್ಲಿದ್ದೇವೆ ಎಂದರು.
ಸುಳ್ಳು ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಸುಳ್ಳು
ಎ. ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ 50 ವರ್ಷ ಸಂಪೂರ್ಣ ಭ್ರಷ್ಟ ಸರ್ಕಾರವನ್ನೇ ನಡೆಸಿದರು. ಭ್ರಷ್ಟಾಚಾರದಲ್ಲಿಯೇ ಮುಳುಗಿದ್ದರು. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಅವರಿಂದಲೇ ಪ್ರಾರಂಭವಾಗಿದ್ದು, ದಾಖಲೆ ಪ್ರಮಾಣದಲ್ಲಿ ಭ್ರಷ್ಟಾಚಾರ ವಾಗಿದೆ. ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸುಳ್ಳು ಆರೋಪ ಮಾಡುತ್ತಾರೆ. ಅವರ ಆರೋಪ ಸುಳ್ಳಿನಿಂದ ಕೂಡಿದೆ. ಸುಳ್ಳು ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಸುಳ್ಳು ಎನ್ನುವುದು ಸ್ಪಷ್ಟವಾಗಿದೆ ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ತನಿಖೆಗಳಾಗುತ್ತಿವೆ ಎಂದರು.
ಭತ್ತ ಖರೀದಿ ಕೇಂದ್ರ
ಕರಾವಳಿಯಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ಬೇಡಿಕೆಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಜನಸಂಕಲ್ಪ ನಂತರ ರಥಯಾತ್ರೆ
ಜನಸಂಕಲ್ಪ ಯಾತ್ರೆ ಕಲ್ಯಾಣ ಕರ್ನಾಟಕದಲ್ಲಿ ನಡೆದಿದ್ದು, ಕರಾವಳಿಯಲ್ಲಿ ಇಂದು ಪ್ರಾರಂಭವಾಗುತ್ತಿದೆ. ಪ್ರತಿಯೊಂದು ಕ್ಷೇತ್ರಕ್ಕೂ ಭೇಟಿ ನೀಡುತ್ತೇವೆ. ನಾಳೆ ಗದಗ, ಹಾವೇರಿ, ನಾಡಿದ್ದು ಬೆಳಗಾವಿಯಲ್ಲಿ ಜನಸಂಕಲ್ಪ ಯಾತ್ರೆ ನಡೆಯಲಿದೆ. ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿ ಪಕ್ಷದ ಸಂಘಟನೆಯ ಜೊತೆಗೆ ಜನಸಂಘಟನೆಯನ್ನು ಮಾಡಲಿದ್ದೇವೆ. ಅಭೂತಪೂರ್ವ ಬೆಂಬಲ ಎಲ್ಲೆಡೆ ವ್ಯಕ್ತವಾಗುತ್ತಿದೆ. ಉತ್ಸಾಹ ಮೂಡಿದೆ. ಈ ಯಾತ್ರೆ ಮುಗಿದ ನಂತರ ಉತ್ತರ, ದಕ್ಷಿಣ ಎರಡೂ ದಿಕ್ಕಿನಿಂದ , ರಥ ಯಾತ್ರೆ ಪ್ರಾರಂಭವಾಗಲಿದ್ದು. 224 ಕ್ಷೇತ್ರಗಳಲ್ಲಿಯೂ ಕೂಡ ರಥಯಾತ್ರೆ ಸಂಚರಿಸಲಿದೆ ಎಂದರು
ಟೋಲ್ ಅಕ್ರಮದ ಬಗ್ಗೆ ಎನ್.ಹೆಚ್.ಐ.ಎ ಅವರಿಗೆ ವರದಿ ನೀಡಲಾಗಿದೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಮುರುಘಾ ಮಠದ ಪ್ರಕರಣದಲ್ಲಿ ತನಿಖೆ ಮುಂದುವರೆದಿದ್ದು, ಕಾನೂನಾತ್ಮಕ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post