ಕಲ್ಪ ಮೀಡಿಯಾ ಹೌಸ್
ಚೈತ್ರದ ಚೈತನ್ಯ – ಯುಗಾದಿ
ಮಾನವನ ಬದುಕು-ಸುಖ-ದುಃಖಗಳ ಸಂಗಮ, ಮನುಕುಲ-ಸಿಹಿ-ಕಹಿ, ಹಸಿ-ಬಿಸಿ, ಸೋಲು-ಗೆಲುವು, ನಗು-ಅಳು, ರಾತ್ರಿ-ಹಗಲುಗಳೊಂದಿಗೆ ಬಾಳುತ್ತಾ ಬಂದಿದೆ. ಬದುಕಿನ ಯಶಸ್ಸು ಇವುಗಳ ಸಮತೋಲನವನ್ನೇ ಅವಲಂಬಿಸಿದೆ. ‘ಸುಖ-ದುಃಖಗಳ ಸಮರಸವೇ ಜೀವನ’ ಎಂದಿದ್ದಾರೆ ಅನುಭವಿಗಳು. ಜಯ-ಅಪಜಯ ಬದುಕಿನ ಅವಿಭಾಜ್ಯ ಅಂಶಗಳು. ಇವುಗಳನ್ನು ಸಮಾನವಾಗಿ ನೋಡುವ ದೃಷ್ಟಿಯನ್ನು ಮಾನವ ಬೆಳಸಿಕೊಳ್ಳಬೇಕು ಎಂಬ ತಿಳಿವಳಿಕೆಯನ್ನು ಜನಮನಕ್ಕೆ ತಿಳಿಸುವ ಹಬ್ಬವೇ ಯುಗಾದಿ.
ಹೊಸತನವನ್ನು ನಿರೀಕ್ಷಿಸುವುದು, ಹೊಸತನ್ನು ಆಚರಿಸುವುದು ಬದುಕಿನ ನಿತ್ಯಮಂತ್ರ. ಹಳೆಯ ಕಳೆಯನ್ನು ಕಳೆದು ಹೊಸಭಾವ ಜಲದಿ ಮಿಂದು ನಿನ್ನೆಯನ್ನು ಮರೆತು ನಾಳೆಗಾಗಿ ಹಂಬಲಿಸುವುದು ಯುಗಧರ್ಮ. ಸರಸ, ಸಂಭ್ರಮ ಉತ್ಸಾಹದೊಂದಿಗೆ ಹೊಸ ಕಾಲವನ್ನು ಸ್ವಾಗತಿಸುವ ಸಾಂಸ್ಕತಿಕ ಆಚರಣೆಯೇ ಯುಗಾದಿ. ಜೀವನ ಎಂದೂ ಹಳತಾಗದು. ಭೂಮಿಗೆ ಬದುಕಿಗೆ ಹೊಸ ಚೈತನ್ಯ ನೀಡಲು ಪ್ರತಿವರ್ಷವೂ ಬರುವ ಯುಗಾದಿ ಪುನರ್ಜನ್ಮದ ಸಂಕೇತ.
ಪ್ರಾಚೀನ ರೋಮನ್ ಕವಿ ಓವಿಡ್ ಒಮ್ಮೆ ಜ್ಯೋತಿಷಿ ಜಾನುಸ್‌ನ್ನು ಕೇಳಿದ: ‘ಹೊಸ ವರ್ಷ ಜನವರಿಯಿಂದಲೇ ಏಕೆ ಆರಂಭವಾಗಬೇಕು’? ಎಂದು. ಅದಕ್ಕೆ ಜ್ಯೋತಿಷಿ, ‘ಜನವರಿ ತಿಂಗಳಿನಲ್ಲಿ ಸೂರ‌್ಯ ಮಕರ ರಾಶಿ ಪ್ರವೇಶಿಸುತ್ತಾನೆ. ಅಂದಿನವರೆಗೆ ಹಿಮದಿಂದ ಮಂಕಾಗಿದ್ದ ಜಗತ್ತು ಅಂದಿನಿಂದ ಸ್ವಚ್ಛವಾಗಿ ಜನತೆಯಲ್ಲಿ ಹೊಸ ಉತ್ಸಾಹ, ನವೋದಯ ಆರಂಭವಾಗುವುದರಿಂದ, ಅಂದಿನಿಂದ ಹೊಸ ವರ್ಷದ ಆರಂಭ’ ಎಂದು ಉತ್ತರವಿತ್ತ.
ಹಿಂದೂ ಸಂವತ್ಸರಾರಂಭದ ಶುಭದಿನವಾದ ಯುಗಾದಿಯೂ-ಚೈತ್ರ ಶುದ್ಧ ಪಾಡ್ಯಮಿಯೂ ಅಷ್ಟೇ ಮಹತ್ವ ಪೂರ್ಣವಾದದ್ದು. ಕಾಲಚಕ್ರ ಆಭಾದಿತವಾಗಿ ತಿರುಗುತ್ತಲೇ ಇರುತ್ತದೆ. ಕಲ್ಪ ಮನ್ವಂತರವಾಗಿ, ಮನ್ವಂತರ ಯುಗವಾಗಿ, ಯುಗಗಳು ವರ್ಷವಾಗಿ, ವರ್ಷಗಳು ಋತು-ಮಾಸ-ದಿನವಾಗಿ ಕಾಲಚಕ್ರ ಸುತ್ತುತ್ತಲೇ ಇರುತ್ತದೆ. ಈ ಕಾಲಗಣನೆಗೆ ನಮ್ಮ ಪೂರ್ವಿಕರು ಅಪ್ಪಟ ಸ್ವಂತಿಕೆಯುಳ್ಳ ಭರತಭೂಮಿಗೆ ನಿಷ್ಠವಾದ ಕೆಲವು ಸೂತ್ರಗಳನ್ನು ಕಂಡು ಕೊಂಡಿದ್ದರು.
ಈ ಸೂತ್ರಗಳಲ್ಲಿ ನಿಸರ್ಗದ ನಿರಂತರತೆಯಿದೆ. ಪ್ರಕೃತಿಯ ಪರಾಕಾಷ್ಠೆ ಇದೆ. ಎಲ್ಲೆಲ್ಲೂ ಚೈತ್ರದ ವೈಭವವೋ ವೈಭವ!
‘ನೂರು ತರುವಿನ ತಳಿರ ಕೈಯಲಿ ನೂರು ಹೂವಿನ ದೀಪವು; ನೂರು ವರ್ಣದ ನೂರು ರಾಗದ ಚಿಲುಮೆ ಚಿಮ್ಮಿದೆ ಎಲ್ಲೆಡೆ’!.
ನಿಸರ್ಗ ಹೃದಯದಂತೆಯೇ ಜಗಹೃದಯವೂ ಆನಂದಮಯ. ಎಲ್ಲೆಲ್ಲೂ ಆನಂದ; ಉತ್ಸಾಹ, ವರ್ಷಾರಂಭದ ವಸಂತ ಋತು ಹಾಗೂ ಮಧ್ಯದ ಶರದ್ ಋತುಗಳಿಗೆ ನಮ್ಮ ಸಂಸ್ಕತಿಯಲ್ಲಿ ವಿಶೇಷ ಆದ್ಯತೆಗಳಿದ್ದು, ನಿಸರ್ಗದಲ್ಲಾಗುವ ಬದಲಾವಣೆಗಳಿಗೆ ಈ ಋತುಗಳ ಆಗಮನ ಪೂರಕವಾಗಿದೆ. ಅನಿಷ್ಟ ನಿವಾರಣೆ ಹಾಗೂ ದೇವತಾನುಗ್ರಹಕ್ಕೆ ಈ ಋತುಗಳ ಆರಂಭ ಕಾಲ ಅತ್ಯಂತ ಶ್ರೇಷ್ಠ ಎಂಬ ಪರಿಗಣನೆ ಇದೆ.
ಚೈತ್ರ ಮಾಸದ ಶುಕ್ಲ ಪಕ್ಷದ ಪ್ರಥಮ ದಿನ ಸೂರ್ಯೋದಯದ ವೇಳೆಗೆ ಬ್ರಹ್ಮನು ಜಗತ್ತನ್ನು ಸಮಗ್ರವಾಗಿ ಸೃಷ್ಟಿಸಿದೆ. ಅಂದಿನಿಂದಲೇ ಆರಂಭವಾಯಿತು ಕಾಲಗಣನೆ. ಮೊದಲು ಯುಗಾದಿಯನ್ನು ಬ್ರಹ್ಮನ ಪೂಜೆಯಿಂದಲೇ ಆರಂಭಿಸುತ್ತಿದ್ದರು. ಇಂದು ಕೂಡ ರಾಜಾಸ್ತಾನದ ಪುಷ್ಕರ ಸರೋವರದಲ್ಲಿಯ ಬ್ರಹ್ಮ ಮಂದಿರದಲ್ಲಿ ಯುಗಾದಿ ಹಬ್ಬದಂದು ವಿಶೇಷ ಪೂಜೆ ನಡೆಯುತ್ತದೆ.
ಚಂದ್ರ ಹಾಗೂ ಸೂರ‌್ಯರ ಚಲನೆಗನುಸಾರವಾಗಿ ಭಾರತದಲ್ಲಿ ಆಚರಿಸುವ ಎರಡು ಮುಖ್ಯ ಯುಗಾದಿಗಳೆಂದರೆ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ.
ಚಾಂದ್ರಮಾನ ಯುಗಾದಿಯನ್ನು ಚೈತ್ರ ಮಾಸದ ಪ್ರಥಮ ದಿನವಾದ ಪಾಡ್ಯದಿಂದ ಆಚರಿಸುತ್ತಾರೆ. ಸೌರಮಾನ ಯುಗಾದಿಯನ್ನು ಸೂರ‌್ಯನು ಮೇಷರಾಶಿಯನ್ನು ಪ್ರವೇಶಿಸುವ ದಿನ ಆಚರಿಸುತ್ತಾರೆ. ತುಳುನಾಡು, ಕೇರಳ ಮತ್ತು ತಮಿಳುನಾಡುಗಳಲ್ಲಿ ಸೌರಮಾನ ರೀತ್ಯಾ ಮೇಷ ಸಂಕ್ರಮಣದ ಮರುದಿನ ಏಪ್ರಿಲ್ 14 ರಂದು ಆಚರಿಸುತ್ತಾರೆ.
ಅದಿತೀರ್ಥಂಕರನ ಜ್ಯೇಷ್ಠ ಪುತ್ರ ಭರತ ಚಕ್ರವರ್ತಿಯ ಭೂಮಂಡಲ ದಿಗ್ವಿಜಯ ಮಹೋತ್ಸವವೂ ಯುಗಾದಿಯಂದೇ ನಡೆದದ್ದು, ಅಂದಿನಿಂದಲೇ ಶಾಲಿವಾಹನ ಶಕೆಯ ಪ್ರಾರಂಭ.
1) ಈ ದಿವಸದಲ್ಲಿ ಯಾವ ವಾರ ಇರುತ್ತದೆಯೋ ಅದರ ಗ್ರಹವನ್ನೇ ಇಡೀ ವರ್ಷದ ಅಧಿಪತಿ ಎಂದು ಕರೆಯುತ್ತಾರೆ. ಉದಾಹರಣೆ – ಈ ದಿವಸ ಗುರುವಾರವಾದರೆ ಇಡೀ ಸಂವತ್ಸರಕ್ಕೆ ಗುರುವು ಅಧಿಪತಿ ಅನ್ನಿಸುತ್ತಾರೆ. ಪ್ರತಿ ಸಂವತ್ಸರದಲ್ಲೂ ಅತ್ಯಂತ ಪವಿತ್ರವಾಗಿರುವ ಮುಹೂರ್ತಗಳು ಮೂರೂವರೆ ಗೆಂ ಕಾಲ ಇರುತ್ತದೆ. ಅವುಗಳಲ್ಲಿ ಯುಗಾದಿಯೂ ಒಂದು. ವೈದಿಕ ಸಂಪ್ರದಾಯದವರು ಮಾತ್ರವಲ್ಲದೆ. ಇರಾನಿಗರೂ ಕೂಡ ತಮ್ಮ ವರ್ಷ ಪ್ರಾರಂಭವನ್ನು ಈ ದಿನದಿಂದಲೇ ಮಾಡಿ, ಅದನ್ನು ‘ನೌರೋಜ್ ಎಂದು ಕರೆಯುತ್ತಾರೆ.
‘ಉಂಡದ್ದೇ ಉಗಾದಿ ಮಿಂದದ್ದೇ ದೀಪಾವಳಿ’ ಎಂಬ ಅನುಭವ ಜನ್ಯ ನುಡಿಯನ್ನು ಕೇಳದವರಾರು? ದೀಪಾವಳಿಯಂದು ಅಭ್ಯಂಜನಕ್ಕೆ ಆದ್ಯತೆಯಾದರೆ, ಯುಗಾದಿಯಂದು ಭೋಜನಕ್ಕೆ ಆದ್ಯತೆ! ಕರ್ನಾಟಕದ ಹೆಚ್ಚಿನ ಪ್ರದೇಶಗಳಲ್ಲಿ ವಸಂತಾಗಮನದ ಸಮಯಕ್ಕೆ ಸುಗ್ಗಿ ಮುಗಿದಿರುತ್ತದೆ. ಬೆವರು ಸುರಿಸಿ ಬೆಳೆದ ಫಲ ರೈತನ ಮನೆ ತುಂಬಿರುತ್ತದೆ. ಭೂಮಾತೆ ಕರುಣಿಸಿದ ಫಲವನ್ನು ಸಡಗರ ಸಂಭ್ರಮದಿಂದ ರೈತ ಮಕ್ಕಳು ಉಗಾದಿಯಂದು ಮೃಷ್ಟಾನ್ನ ಭೋಜನದ ಸವಿಯನ್ನು ಉಣ್ಣುತ್ತಾರೆ.
ಮಂಗಳ ಸ್ನಾನ, ನೂತನ ವಸ್ತ್ರಧಾರಣೆ, ಇಷ್ಟದೇವತಾರಾಧಎ ಇವೇ ಮುಂತಾದವು ಎಲ್ಲ ಹಬ್ಬಗಳಲ್ಲೂ ಸಾಮಾನ್ಯ ಸಂಪ್ರದಾಯಗಳು. ಯುಗಾದಿ ಹಬ್ಬದ ಎರಡು ವಿಶೇಷ, ವಿಶಿಷ್ಟ ವಿಧಿಗಳೆಂದರೆ 1) ಬೇವು-ಬೆಲ್ಲದ ಸೇವನೆ ಮತ್ತು 2) ಪಂಚಾಂಗ ಶ್ರವಣ. 2) ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಕಾಲಕೋಶದ ಪಂಚಾಂಗಗಳು. ಇವುಗಳ ಜ್ಞಾನದೊಡನೆ ಕರ್ಮವನ್ನು ಮಾಡಬೇಕು.
ಅದರಲ್ಲಿಯೂ ಕಾಲ ಪುರುಷನನ್ನು ಆರಾಧಿಸಿ ಅವನ ಪ್ರಸಾದವನ್ನು ಪಡೆದ ದಿವಸದಲ್ಲಿ ಅವುಗಳ ಶ್ರವಣಮಾಡಿ, ಅದರಿಂದ ವರ್ಷದ ಆದಿಮಂಗಲವನ್ನಾಚರಿಸುವುದು ಪ್ರಭಾವಕಾರಿಯಾದ ವಿಧಿಯೇ ಆಗಿದೆ. ಆ ದಿವಸದ ಪಂಚಾಂಗವನ್ನು ಮಾತ್ರವಲ್ಲದೆ ಇಡೀ ಸಂವತ್ಸರ ಗ್ರಹ, ನಕ್ಷತ್ರ ಮುಂತಾದವುಗಳ ಸಾಮಾನ್ಯವಾದ ಯೋಗಗಳನ್ನು ಕೇಳಿ ತಿಳಿದರೆ, ಅದಕ್ಕೆ ತಕ್ಕಂತೆ ವರ್ಷದ ಕಾರ‌್ಯಭಾರಕ್ಕೆ ಯೋಜನೆ ಹಾಕಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.
ಹಾಗೆಯೇ ವಿವೇಕಪೂರ್ಣವಾಗಿ ಪಂಚಾಂಗ ಶ್ರವಣ ಮಾಡಿಸುವ ದೈವಜ್ಞನಿಗೆ ಕೃತಜ್ಞತೆಯಿಂದ ಯಥೋಚಿತವಾಗಿ ಸಂಭಾವನೆಯನ್ನು ನೀಡುವುದು ಈ ಪೂಜೆಯ ಸಾದ್ಗುಣ್ಯಕ್ಕೆ ಕಾರಣವಾಗುತ್ತದೆ.
ಬೇವು ಬೆಲ್ಲದ ಸೇವನೆ ಅತ್ಯಂತ ಮಹತ್ವಪೂರ್ಣವಾದದ್ಲು ಮತ್ತು ಅರ್ಥಗರ್ಭಿತವಾದದ್ದು. ಅದು ಮನುಷ್ಯ ಜೀವನದ ಮಹಾನ್ ತತ್ವವೊಂದನ್ನು – ಮನುಷ್ಯನಾದವನು ಸುಖ-ದುಃಖಗಳನ್ನು ಸಮಾನವಾಗಿ ಕಾಣುವ ಸ್ಥಿತಪ್ರಜ್ಞತೆಯನ್ನು ಗಳಿಸಿಕೊಳ್ಳಬೇಕೆಂಬ ತತ್ವವನ್ನು ತಿಳಿಸುತ್ತದೆ. ಬೇವಿನ ಕಹಿಯುಂಡವನೇ ಬೆಲ್ಲದ ಸಿಹಿಯನ್ನು ಅನುಭವಿಸಬಲ್ಲ.
ಶಾಕ್ತ ಸಂಪ್ರದಾಯದಲ್ಲಿ ರೇಣುಕಾದಿ ಮಾತೃದೇವತೆಗಳ ಪೂಜೆಯಲ್ಲಿ ಬೇವಿನ ಮರಕ್ಕೆ ವಿಶೇಷ ಪ್ರಾಶಸ್ತ್ಯ ಉಂಟು. ಬೇವಿನ ಚಿಗುರೆಲೆಯು ಉಗಾದಿಯ ದೇವತೆಯಾದ ಪ್ರಜಾಪತಿ ಕಾಲಪುರುಷನಿಗೆ ಅತಿಪ್ರಿಯವಾಗಿದೆ. ಅಂತೆಯೇ ವೈದ್ಯಕೀಯ ದೃಷ್ಟಿಯಿಂದ ಅದರ ಕ್ರಿಮಿನಾಶಕ, ರೋಗನಿವಾರಕ ಗುಣ ವಿಶೇಷಗಳು ಅಮೂಲ್ಯವಾದುವು.
ಹಿಂದೂ ಸಂಪ್ರದಾಯ ರೀತ್ಯ ಸಂವತ್ಸರಗಳ ಒಟ್ಟು ಸಂಖ್ಯೆ 60. ಪ್ರಭವದಿಂದ ಪ್ರಾರಂಭವಾಗಿ ಅಕ್ಷಯ (ಕ್ಷಯ)ದೊಂದಿಗೆ ಕೊನೆಗೊಳ್ಳುವ ಸಂವತ್ಸರಗಳ ಹೆಸರುಗಳು ಮನುಷ್ಯ ಜೀವನದ ವಿವಿಧ ಘಟ್ಟಗಳನ್ನೂ, ಗತಿ ಸ್ವರೂಪವನ್ನೂ ಸೂಚಿಸುತ್ತದೆ.
ಯುಗಾದಿ ಆಚರಣೆ ಪ್ರದೇಶಕ್ಕನುಗುಣವಾಗಿ ತನ್ನ ರೂಪ ವೈವಿಧ್ಯಗಳನ್ನು ವಿಸ್ತರಿಸಿಕೊಂಡಿದೆ. ಆಶಯ ಒಂದೇ ಆಗಿದ್ದರೂ, ಆಚರಣೆ ಬಹುಬಗೆಯಾಗಿದೆ.
ಉತ್ತರ ಕರ್ನಾಟಕದಲ್ಲಿ ಯುಗಾದಿ ‘ಗುಡಿ ಪಾಡವ’ ಎಂಬ ಮರಾಠಿ ಸಂಪ್ರದಾಯದ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಅಂದು ಮನೆಯ ಮುಂದೆ ಒಂದು ಕೋಲನ್ನು ನಿಲ್ಲಿಸಿ ಅದಕ್ಕೆ ಬಣ್ಣದ ಬ್ಟೆಯೊಂದನ್ನು ಸಿಕ್ಕಿಸಿ, ಅದರ ಮೇಲೆ ಒಂದು ತಂಬಿಗೆಯನ್ನು ಬೋರಲಾಗಿ ಹಾಕಿ, ಅದನ್ನು ಬೇವಿನ ತೋರಣದಿಂದ ಸಿಂಗರಿಸುತ್ತಾರೆ.
ಈ ಧ್ವಜಕ್ಕೆ ‘ಇಂದ್ರಧ್ವಜ’ವೆಂದು ಹೆಸರು. ಪುರುವಂಶದ ವಸುರಾಜನು ಇಂದ್ರನಿಂದ ಯುದ್ಧದಲ್ಲಿ ಜಯಗಳಿಸಿ ಪುಷ್ಪಹಾರವನ್ನು ಪಡೆದು ಯುಗಾದಿಯ ಶುಭದಿನದಂದು ತನ್ನ ನಗರವನ್ನು ಪ್ರವೇಶಿಸಿ, ಇಂದ್ರನ ಗೌರವಾರ್ಥ ಉತ್ಸವವನ್ನು ನಡೆಸಿದನಂತೆ.
ಯುಗಾದಿಯನ್ನು ಕೇರಳ ಹಾಗೂ ತುಳುನಾಡುಗಳಲ್ಲಿ ‘ವಿಷು’ ಹಬ್ಬವಾಗಿ ಆಚರಿಸುತ್ತಾರೆ. ಅಂದು ಪ್ರತಿ ಮಲೆಯಾಳಿಗಳ ಮನೆಯಲ್ಲಿ ವಿಷು ಕಣೆಯಿಡುವ ಸಂಭ್ರಮವಿರುತ್ತದೆ. ‘ಕಣೆ’ ಎಂದರೆ ಕಾಣುವುದು. ಸಮೃದ್ಧಿಯಾದುದನ್ನು ಸರ್ವಶ್ರೇಷ್ಠವಾದುದನ್ನೂ ನೋಡುವುದು ಎಂದರ್ಥ.
ಹಿಂದಿನ ರಾತ್ರಿಯೇ ದೇವರ ಕೋಣೆಯಲ್ಲಿ ಅಥವಾ ತುಳಸಿಕ್ಟೆಯ ಎದುರು ರಂಗೋಲಿ ಹಾಕಿ ಹರಿವಾಣದಲ್ಲಿ ಅಕ್ಕಿ, ತೆಂಗಿನಕಾಯಿ, ಹಣ್ಣು, ತರಕಾರಿ ಮುಂತಾದ ಪವಿತ್ರ ವಸ್ತುವನ್ನಿಟ್ಟು ಬದಿಯಲ್ಲಿ ಕನ್ನಡಿಯಿಟ್ಟು ಚಿನ್ನದ ಸರ, ಪ್ಟೆವಸ್ತ್ರಗಳಿಂದ ಸಿಂಗರಿಸುತ್ತಾರೆ. ಬೆಳಗ್ಗೆ ಎದ್ದು ದೀಪ ಹಚ್ಚಿ ಬೇರೆ ಏನನ್ನೂ ನೋಡುವುದಕ್ಕಿಂತ ಮೊದಲು ಕಣೆ ನೋಡಿ ನಮಸ್ಕರಿಸುತ್ತಾರೆ. ಬದಿಯಲ್ಲಿಟ್ಟ ಕನ್ನಡಿಯಲ್ಲಿ ಮುಖನೋಡಿಕೊಳ್ಳುತ್ತಾರೆ. ಆ ವರ್ಷವಿಡೀ ಮಂಗಳಕಾರಕ ದೃಶ್ಯಗಳು ತಮಗೆ ಕಾಣಸಿಗುತ್ತವೆ ಎಂಬ ನಂಬಿಕೆ ಅವರದು.
ಇಲ್ಲಿ ಮುಪ್ಪಿಗೆ ಎಡೆಯಿಲ್ಲ; ನಿರಾಶೆಗೆ ಆಸ್ಪದವಿಲ್ಲ, ವೈರಾಗ್ಯಕ್ಕೆ ನೆಲೆಯಿಲ್ಲ. ಪ್ರತಿದಿನವೂ ಮಾನವರಿಗೆ ಹೊಸ ಚೈತನ್ಯ, ಹೊಸ ಹುರುಪು, ಹೊಸ ಹುಟ್ಟು, ದಿನದಿನೂ ವರ್ಷ ವರ್ಷವೂ ನಾವು ಜಗತ್ತಿನೊಂದಿಗೆ ಪ್ರೀತ-ಪ್ರೇಮಗಳ ಸುಮಧುರ ಬಾಂಧವ್ಯವನ್ನು ಪುನರುಜ್ಜೀವನಗೊಳಿಸಿ, ನವೀಕರಿಸಿ ಕೃತಾರ್ಥರಾಗುತ್ತೇವೆ. ಇದುವೇ ಬದುಕಿನ ಸವಿ, ಸ್ವಾರಸ್ಯ, ಸಾರ್ಥಕ್ಯ. ಇದೇ ಯುಗಾದಿಯ ದಿವ್ಯ, ಚಿರನೂತನ ಸಂದೇಶವೂ ಹೌದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post