ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಡಲೆಕಾಯಿ ಪರಿಷೆ ಎಂದರೆ ಕಡಲೆಕಾಯಿ ಹಬ್ಬ. ಎಲ್ಲಿ ನೋಡಿದರೂ ಕಡಲೆಕಾಯಿಯ ತಿನಿಸುಗಳು, ಕಾರ್ತಿಕಮಾಸದ ಕೊನೆಯ ಸೋಮವಾರ ಬಂತೆಂದರೆ ಬೆಂಗಳೂರಿಗರಿಗೆ ಸಂಭ್ರಮದ ಹಬ್ಬ. ಐತಿಹಾಸಿಕ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ಜಾತ್ರೆಯನ್ನು ಮಾಡುವ ವಿಶೇಷ ಸಂದರ್ಭ.
ಐಟಿ ನಗರ ಬೆಂಗಳೂರಿನ ಒಂದು ವೈಶಿಷ್ಟ್ಯವೆಂದರೆ, ಅದು ತನ್ನ ಮಾಲ್, ಹೈಫೈ, ಹೈಟೆಕ್‌ಗಳ ನಡುವೆಯೂ ತನ್ನ ಮೂಲ ಸಂಸ್ಕೃತಿಯ ಪ್ರತೀಕದಂತಹ ದಿರುಸು ತೊಟ್ಟು ಬಿಡುವುದು! ಸಾಮಾನ್ಯ ಜನ ಕೇಳರಿಯದ ಪಾಪ್ ಗಾಯಕನ ಕಚೇರಿಗೆ ಯುವಜನ ಸೇರುವಂತೆ ಕುಮಾರವ್ಯಾಸ ಭಾರತದ ವಾಚನ ಕಾರ್ಯಕ್ರಮಕ್ಕೂ ಸೇರುತ್ತಾರೆ. ಕನ್ನಡ ಸಾಹಿತ್ಯ ಸಮ್ಮೇಳನ ರಂಗೇರುತ್ತದೆ! ಪ್ರಾಯಶಃ ಇಂತಹದ್ದು ಜಗತ್ತಿನ ಇತರ ಯಾವುದೇ ಹೈಟೆಕ್ ನಗರದಲ್ಲಿ ಆಗುವುದೋ ತಿಳಿಯದು. ಇವುಗಳ ಸಾಲಿಗೆ ಸೇರಬೇಕಾದ್ದು ಬೆಂಗಳೂರಿನ ಕರಗ ಮತ್ತು ಕಡಲೆಕಾಯಿ ಪರಿಷೆ! ಕ್ಷಣಾರ್ಧದಲ್ಲಿ ಹಳ್ಳಿಯ ಗಂಧ ಪಸರಿಸುವುದು ಈ ಪರಿಷೆಯ ವೈಶಿಷ್ಟ್ಯ. ಕಾರ್ತಿಕಮಾಸದ ಕೊನೆ ಸೋಮವಾರ ನಡೆಯುವ ಈ ಪರಿಷೆ ಬೆಂಗಳೂರಿನ ಸಂಸ್ಕೃತಿಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ.
ಕಡಲೆಕಾಯಿ ಪುರಾಣ
ಡಾ.ಸೂರ್ಯನಾಥ ಕಾಮತರು ದಾಖಲಿಸಿರುವಂತೆ ಇಮ್ಮಡಿ ಕೆಂಪೇಗೌಡ (1585-1633)ನ ಕಾಲದಲ್ಲಿ ಬೆಂಗಳೂರಿನ ಹೊರಪ್ರದೇಶಗಳು ಅಭಿವೃದ್ಧಿಗೊಂಡವು. ಅದರಲ್ಲಿ ಆಗ ರಾಜಧಾನಿಯ ಹೊರಗಿದ್ದ ಸುಂಕೇನಹಳ್ಳಿ ಕೂಡ ಸೇರಿತ್ತು (ಈಗಿನ ಬಸವನ ಗುಡಿ). ಅಲ್ಲಿದ್ದ ಪ್ರಾಚೀನ ದೇಗುಲವಾದ ಗವಿಗಂಗಾಧರೇಶ್ವರ ದೇವಾಲಯವನ್ನು ವಿಸ್ತರಿಸಿ ಮುಖಮಂಟಪ. ಏಕಶಿಲಾತ್ರಿಶೂಲ, ಡಮರು, ಸೂರ‌್ಯಪಾನ ಶಿಲ್ಪಗಳನ್ನು ನಿರ್ಮಿಸಿದನು. ಬಯಲಿನಲ್ಲಿದ್ದ ದೊಡ್ಡಗಣಪತಿ ಮತ್ತು ಬಸವಣ್ಣನ ದೇಗುಲಗಳಿಗೆ ಮಂಟಪಗಳನ್ನು ಕಟ್ಟಲಾಯಿತು.
ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿ ಅದರ ಆವರಣದಲ್ಲಿ ಕಾರಂಜಿಕೆರೆಯನ್ನು ನಿರ್ಮಿಸಿದನು. (ಆ ಜಾಗದಲ್ಲಿ ಇವತ್ತು ಗಾಂಧಿಬಜಾರ್ ತಲೆ ಎತ್ತಿದೆ) ಕ್ರಿಶ 1498ರ ವೇಳೆಗೆ ಪೋರ್ಚುಗೀಸರು ಕಡಲೆಕಾಯಿಯನ್ನು ಭಾರತಕ್ಕೆ ಪರಿಚಯಿಸಿದರು. ಇದನ್ನು ತನ್ನ ರಾಜ್ಯಕ್ಕೆ ಪರಿಚಯಿಸಿದ ಕೆಂಪೇಗೌಡನು ಸುಂಕೇನಹಳ್ಳಿ ಸುತ್ತಮುತ್ತಲಿದ್ದ ಕೃಷಿ ಪ್ರದೇಶದಲ್ಲಿ ಅದರ ಬೆಳೆಗೆ ಪ್ರೋತ್ಸಾಹ ನೀಡಿದನು. ಹಾಗೆ ಬೆಳೆದ ಕಡಲೆಕಾಯಿಗೆ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಕಡಲೆಕಾಯಿ ಪರಿಷೆ ಕ್ರಿಶ 1600ರ ಸುಮಾರಿಗೆ ಕಾರಂಜಿಕರೆಯ ಆವರಣದಲ್ಲಿ ಆರಂಭವಾಗಿರಬಹುದು ಇದಕ್ಕೆ ಸ್ಥಳೀಯವಾದ ಐತಿಹ್ಯವೂ ಇದ್ದು ಸುಂಕೇನಹಳ್ಳಿ ಗ್ರಾಮಸ್ಥರು ಬೆಳೆದ ಕಡಲೆಕಾಯಿಬೆಳೆಯನ್ನು ಬಸವವೊಂದು ಹಾಳು ಮಾಡುತ್ತಿತ್ತೆಂದು ಅದನ್ನು ಪ್ರಾರ್ಥಿಸಿ ಕಾರ್ತಿಕಮಾಸದ ಕಡೆ ಸೋಮವಾರ ಜಾತ್ರೆ ಮಾಡಲು ಗ್ರಾಮಸ್ಥರು ತೀರ್ಮಾನಿಸಿದರೆಂದು ಈ ಐತಿಹ್ಯವು ಹೇಳುತ್ತದೆ.
ಕ್ರಿಶ 1600ರ ಸುಮಾರಿಗೆ ಕೆಂಪೇಗೌಡನು ಬಸವಣ್ಣ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ನಂದಿಕಂಬವನ್ನು ಸ್ಥಾಪಿಸಿ ಕಾರಂಜಿಕೆರೆಯ ಆವರಣದಲ್ಲಿ ಜಾತ್ರೆಗೆ ಅವಕಾಶ ಕಲ್ಪಿಸಿದನು ಎಂದು ಕಾರಂಜಿ ಆಂಜನೇಯಯನ ದೇವಸ್ಥಾನದ ಬಳಿ ಇರುವ ಶಾಸನದಲ್ಲೂ ಉಲ್ಲೇಖಿತವಾಗಿದೆ. ಹೀಗೆ ಧಾರ್ಮಿಕ ಮತ್ತು ವಾಣಿಜ್ಯಿಕ ಕಾರಣಗಳು ಸೇರಿ ‘ಕಡಲೆಕಾಯಿ ಪರಿಷೆ ಆರಂಭವಾಗಿರಬಹುದು. ಶಿವನು ಕೃಷಿಯ ಅಧಿದೇವತೆ. ಬಸವ ಅವನ ವಾಹನ ಈ ಭಾವನಾತ್ಮಕ ಕಾರಣವೂ ಈ ಜಾತ್ರೆ ಜನಪ್ರಿಯವಾಗಲು ಕಾರಣವಾಗಿರಬಹುದು. ಅಂತೂ ಕಳೆದ ಐದುನೂರು ವರ್ಷಗಳಿಂದ ಕಡಲೆಕಾಯಿ ಪರಿಷೆ ಜನಪ್ರಿಯವಾಗಿ ಬೆಳೆದು ಒಂದು ಪರಂಪರೆಯನ್ನು ನಿರ್ಮಿಸಿರುವುದು ಚಾರಿತ್ರಿಕ ಸತ್ಯ.
ಜಾತ್ರೆ ಹಿಂದಿನ ಕಥೆ
ಒಂದು ಜನಪದ ಕಥೆಯಂತೆ ಹೊಲ ಗದ್ದೆಗಳಲ್ಲಿ ಕಡಲೆಕಾಯಿ ಕಟಾವಿಗೆ ಬರುವ ಹೊತ್ತಿಗೆ ಗೂಳಿಯೊಂದು ಕದ್ದುಮುಚ್ಚಿ ಬಂದು ಬೆಳೆಯನ್ನು ಹಾಳುಮಾಡಿ ಹೋಗುತ್ತಿತ್ತು. ಬೆಳೆ ಉಳಿಸಿಕೊಳ್ಳುವ ಸಲುವಾಗಿ ಸುಂಕೇನಹಳ್ಳಿ ಗ್ರಾಮದ ರೈತರು ಹಗಲು, ರಾತ್ರಿ ಕೈಯಲ್ಲಿ ಮಾರಕಾಸ್ತ್ರವನ್ನು ಇಟ್ಟುಕೊಂಡು ಹೊಲವನ್ನು ಕಾವಲು ಕಾಯ್ದರು.
ಎಂದಿನಂತೆ ಹೊಲಕ್ಕೆ ನುಗ್ಗಿದ ಗೂಳಿ ಅಲ್ಲಿ ಗುಂಪಾಗಿ ನೆರೆದಿದ್ದವರನ್ನು ಕಂಡು ಹೆದರಿ ಓಡಿ ಹೋಯಿತು. ರೈತರೂ ಸುಮ್ಮನೆ ಬಿಡಲಿಲ್ಲ. ಅದನ್ನು ಅಟ್ಟಿಸಿಕೊಂಡು ಹೋದರು. ಬಸವ ಗುಡ್ಡವನ್ನೇರಿದ ಕಲ್ಲಾಗಿ ನಿಂತ. ದಿನಗಳೆದಂತೆ ಬೆಳೆಯುತ್ತಾ ಹೋದ. ರೈತರೋ ದಿಗ್ಮೂಢರಾದರು. ಇದು ಸಾಮಾನ್ಯ ಬಸವನಲ್ಲ, ನಮ್ಮನ್ನು ಹರಸಲು ಬಂದ ಶಿವನ ವಾಹನ ನಂದಿಯೇ ಎಂದು ಭಾವಿಸಿದರು.
ಆ ಬಸವನಿಗೆ ಪೂಜಿಸಲು ಆರಂಭಿಸಿದರು. ಮಾಡಿದ ತಪ್ಪಿಗೆ ಕ್ಷಮೆ ಕೋರಿದರು. ಹರಕೆಯ ರೂಪದಲ್ಲಿ ದಂಡವನ್ನು ಪಾವತಿಸಿದರು. ಬಸವನ ಪ್ರೀತ್ಯರ್ಥವಾಗಿ ಕಡಲೆಕಾಯಿಯ ನೈವೇದ್ಯವಾಗಿ ಅರ್ಪಿಸಿದರು. ಅಂದಿನಿಂದ ಪರಿಷೆ ನೆವದಲ್ಲಿ ಮೊದಲ ಕಡಲೆಕಾಯಿ ಬೆಳೆ ಬಸವನಿಗೆ ಅರ್ಪಿಸುವ ವಾಡಿಕೆ ಬಂತು.
ಚಳಿಗಾಲಕ್ಕೆ ನಾಂದಿ, ಎಲ್ಲೆಡೆ ಇಬ್ಬನಿಯ ತಾಂಡವ, ಇಂತಹ ತಣ್ಣನೆಯ ವಾತಾವರಣದಲ್ಲಿ ಕಡಲೆಕಾಯಿಯನ್ನು ಮೆಲ್ಲುವುದೆಂದರೆ ಅದೊಂದು ವಿಶೇಷಾನುಭವ. ಇಂತಹ ಐತಿಹಾಸಿಕ ಹಾಗೂ ಬೆಂಗಳೂರಿನ ಸಂಸ್ಕೃತಿಯ ಭಾಗದಂತಿರುವ ದೊಡ್ಡ ಬಸವಣ್ಣನ ಕಡಲೆಕಾಯಿ ಪರಿಷೆ ಇದೇ ನವೆಂಬರ್ 27 ರಿಂದ ಆರಂಭವಾಗುತ್ತದೆ. ಅಧಿಕೃತವಾಗಿ 3 ದಿನಗಳ ಕಾಲವಾದರೂ ಒಂದು ವಾರದ ಪರ್ಯಂತ ಈ ಪರಿಷೆ ನಡೆಯುತ್ತದೆ. ಯಾವುದಾದರೊಂದು ಸಂಜೆ ನಿಮ್ಮ ಮನೆಯವರು, ಸ್ನೇಹಿತರೊಂದಿಗೆ ಒಂದು ರೌಂಡ್ ಹಾಕಿ ಬಗೆಬಗೆಯ ಕಡಲೆಕಾಯಿ ಮೆಲ್ಲುವುದನ್ನು ಮರೆಯಬೇಡಿ.
ತಿಂದರೆ ರುಚಿ ಆರೋಗ್ಯಕ್ಕೆ ವರ
ಕಡಲೆಕಾಯಿ ಬಾಯಿಗೆ ರುಚಿ, ದೇಹಕ್ಕೂ ಹಿತ ಚಳಿಗಾಲದ ಈ ಅವಧಿಯಲ್ಲಿ ಕಡಲೆಕಾಯಿ ದೇಹಕ್ಕೆ ಅಗತ್ಯವಿರುವ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ.
ಒಮ್ಮೆ ತಿನ್ನ ಹೊರಟರೆ ಕೈಗೂ ಬಾಯಿಗೂ ನಡುವಣ ಜಗಳಕ್ಕೆ ಅಂತ್ಯವೇ ಇಲ್ಲ, ಎದುರಿನಲ್ಲಿಟ್ಟ ಕಡಲೆಕಾಯಿ ಮುಗಿಯುವ ತನಕ ಯಾವುದಕ್ಕೂ ಬಿಡುವಿಲ್ಲ. ಶೇಂಗಾದ ಆ ರುಚಿ ನಾಲಿಗೆಯಲ್ಲಿ ನಲಿಯುವಾಗ ಜಗತ್ತೇ ಮುಳುಗಿಹೋದರೂ ಗಮನಕ್ಕೆ ಬಾರದು. ಕಡಲೆಕಾಯಿಯ ಮಾಯೆಯೇ ಅಂಥದ್ದು, ಹಸಿಯಾಗಲಿ, ಹುರಿದಿದ್ದೇ ಆಗಲಿ, ಬೇಯಿಸಿದ್ದೇ ಆಗಲಿ ಅದರ ರುಚಿಗೆ ಸಾಟಿ ಬೇರಿಲ್ಲ.
ರುಚಿಯಷ್ಟೇ ಅಲ್ಲ, ಆರೋಗ್ಯದ ವಿಚಾರದಲ್ಲಿ ಶೇಂಗಾ ದೇಃಕ್ಕೆ ಪೂರಕ, ಸಿರಿವಂತರು ಬಾದಾಮಿ ಕೊಂಡು ತಿಂದರೆ ಬಡವರು ಕಡಲೆಕಾಯಿ ಚಪ್ಪರಿಸುತ್ತಾರೆ. ಹಾಗೆಂದೇ ಬಡವರ ಬಾದಾಮಿ, ಗಾಂಧೀಜಿಯವರಿಗೂ ಕಡಲೆಕಾಯಿ ಎಂದರೆ ಅಚ್ಚುಮೆಚ್ಚು. ಇದರಲ್ಲಿ ಅಧಿಕವಾಗಿರುವ ಪೋಷಕಾಂಶಗಳೇ ಇದಕ್ಕೆ ಬಾದಾಮಿಗೆ ಸರಿಗಟ್ಟುವ ಅಗ್ಗಳಿಕೆಯನ್ನು ತಂದುಕೊಟ್ಟಿದೆ.
Get in Touch With Us info@kalpa.news Whatsapp: 9481252093
Discussion about this post