ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಕರ್ನಾಟಕದಲ್ಲಿ ನಾಟಕದ ಚುನಾವಣೆಗಳಿಗೆನು ಕಮ್ಮಿ ಇಲ್ಲ, ಪ್ರತಿ ಚುನಾವಣೆಯಲ್ಲೂ ಹಲವು ನಾಟಕ, ಕಣ್ಣೀರು, ಜನನ ಮರಣ, ಕೊನೆ ಚುನಾವಣೆ, ಮತ ಭಿಕ್ಷೆ, ಅಪ್ಪ – ಮಕ್ಕಳು, ಅನುಕಂಪ ಎಲ್ಲಾ ತರಹದ ಜನರನ್ನು ಮರಳುಮಾಡುವ ಮಾತುಗಳನ್ನಾಡಿ ಭಾಷಣ ಮಾಡುವುದು ಕರಗತ ಮಾಡಿಕೊಂಡಿರುವ ರಾಜಕಾರಣಿಗಳು ಜನರನ್ನು ಭಾವನಾತ್ಮಕವಾಗಿ ಸೆಳೆದು ತಮ್ಮ ಭಾಷಣದಲ್ಲಿ ಜನರನ್ನು ಮರಳು ಮಾಡಿ ಮತ ಪಡೆಯುತ್ತಾರೆ. ಇಂತಹ ರಾಜಕೀಯ ಭಾವನಾತ್ಮಕ ವಿಷಯಕ್ಕೆ ಇತ್ತೀಚೆಗೆ ಸೇರ್ಪಡೆ ವೇದಿಕೆಯಲ್ಲಿ ಶಿರಸಾಷ್ಠಾಂಗ ನಮಸ್ಕಾರ ಮಾಡುವುದು, ಮಂಡಿಯೂರಿ ನಮಸ್ಕರಿಸುವುದು, ಸೆರಗೊಡ್ಡಿ ಬೇಡುವುದು, ಕೈ ಮುಗಿದು ನಿಮ್ಮ ಊರ ಮಗ-ಮಗಳು-ಸೊಸೆ-ಅಳಿಯ ಪದಗಳು. ಈ ತರಹದ ಮಾತುಗಳು, ವ್ಯಕ್ತಿತ್ವ ತೋರಿಸಿವುದು ಜನರಿಗೆ ಇವ ನಮ್ಮವ ಅನ್ನೊ ಭಾವನೆ ಬರಿಸುತ್ತದೆ, ಆದರೆ ಚುನಾವಣೆ ಮುಗಿದೊಡನೆ ಈ ಎಲ್ಲಾ ಪದಗಳು ಕೇವಲ ಪದಗಳಾಗಿ ಪತ್ರಿಕೆಗಳಲ್ಲಿ ಮಾತ್ರ ಸಿಗುತ್ತವೆ ಎಂಬುದು ವಾಸ್ತವ ಸತ್ಯ.
2018 ರ ಚುನಾವಣೆಯ ಪ್ರಚಾರಗಳು ಚುನಾವಣಾ ರಣಾಂಗದ ಚಿತ್ರಣವನ್ನೇ ಬದಲಿಸಿತು, ಲೋಕಸಭೆಯ ಚುನಾವಣೆ ಪ್ರಚಾರ ಮತ್ತಷ್ಟು ಚುನಾವಣಾ ಪ್ರಚಾರವನ್ನೇ ಹೊಲಸು ಮಾಡಿತು. ಸೈದ್ಧಾಂತಿಕ , ವೈಚಾರಿಕ ಟೀಕೆಗಳನ್ನು ಮೀರಿ ವೈಯಕ್ತಿಕ ಟೀಕೆಗಳತ್ತ ತಿರುಗಿತು, ಮಂಡ್ಯ ಕದನವಂತು ಹಲವು ಮಜ್ಜಲುಗಳನ್ನು ತೋರಿಸಿತು. ಜನರು ಈ ಚುನಾವಣಾ ಪ್ರಚಾರ ಭಾಷಣಗಳನ್ನು ಅಸಹ್ಯವಾಗಿ ನೋಡಲು ಪ್ರಾರಂಭವಾಯಿತು. ಇಬ್ಬರು ಮೂವರು ವ್ಯಕ್ತಿಗಳ ಸುತ್ತಾ ಸುತ್ತುತ್ತಾ ಭಾಷಣ ಮುಗಿಸುತ್ತಿದ್ದರು.

ಮಾನ್ಯ ಸಿದ್ದರಾಮಯ್ಯನವರೇ, ನೀವು ಜನ ನಾಯಕ ಸಿನಿಮಾ ನಾಯಕನಲ್ಲ ಕೇವಲ ಈ ಶಿಳ್ಳೆ ಚಪ್ಪಾಳೆಗಳ ವ್ಯಾಮೋಹಕ್ಕೆ ಮಾತನಾಡಿ ಜನರೆದುರು ಚಿಕ್ಕವರಾಗಬೇಡಿ ಎಂಬುದು ನಿಮ್ಮ ನೈಜ ಅಭಿಮಾನಿಗಳ ಮನದಾಳದ ಮಾತು. ನೀವು ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಟೀಕಿಸುವಾಗ ಅದರಲ್ಲೂ ಏಕವಚನದಲ್ಲಿ ಪ್ರಶ್ನಿಸಿದಾಗ ನಿಮ್ಮನ್ನು ಮತ್ತಷ್ಟು ಹುರಿದುಂಬಿಸುವ ಮಂದಿ ನಿಮ್ಮನ್ನು ಹಳ್ಳಕ್ಕೆ ತಳ್ಳುತ್ತಿರುವವರು ಎಂದು ನಿಮಗೆ ತಿಳಿದಿರಲಿ. ಪ್ರಧಾನಮಂತ್ರಿಗಳನ್ನು ಟೀಕಿಸುವ ಸಾಮರ್ಥ್ಯ ನಿಮಗೆ ಮಾತ್ರ ಎಂಬ ಹಸಿ ಹಸಿ ಸುಳ್ಳನ್ನು ಹೇಳಿ ನಿಮ್ಮನ್ನು ಉಬ್ಬಿಸಿ ಭಾಷಣದಲ್ಲಿ ಬಯ್ಯಿಸುವ ಮಂದಿ ನಿಮ್ಮಿಂದ ನಂತರದ ತಮಾಷೆಗಳನ್ನು ನೋಡಿ ವಿಕೃತ ಆನಂದ ಪಡೆಯುವವರು ಎಂಬುದು ನಿಮ್ಮ ನೆನಪಿನಲ್ಲಿರಲಿ.

ಇನ್ನು ಚುನಾವಣೆಗೆ ತಮ್ಮ ಬಳಿ ವಿಷಯವೇ ಇಲ್ಲದವರಂತೆ ರಾಜಕೀಯದ ರಾಜಕಾರಣಿಗಳ ತಯಾರಿಕ ಘಟಕ ಜಾತ್ಯತೀತ ಜನತದಳದ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಅದರ ವಿಚಾರಗಳನ್ನು ಟೀಕಿಸುತ್ತಾ ಮುಸಲ್ಮಾನರನ್ನು ಒಲೈಸಿ ಕೊಳ್ಳಬಹುದೆಂಬ ಕಲ್ಪನೆಯಲ್ಲಿ ವಿಚಾರ ಕೆದಕೆದರು. ಇದರಿಂದ ಅವರಿಗೆ ಒಂದೂ ಓಟು ಸಹ ಅವರಿಗೆ ಸಿಗುವುದಿಲ್ಲ ಎಂಬುದು ಅವರ ಅರಿವಿಗೆ ಇತ್ತೋ ಇಲ್ಲವೋ ಅನ್ನುವುದೇ ಅನುಮಾನ, ನಗರ ಪ್ರದೇಶದಿಂದ ದೂರ ವಿರುವ ಹಳ್ಳಿಗಳಲ್ಲಿ ಸಂಘದ ಕೆಲಸ ಕಾರ್ಯಗಳು ಎಂದೂ ಮತದಾನದ ವಿಷಯವೇ ಅಲ್ಲ. ಸುಮ್ಮನೆ ಬೇಡದ ವಿಷಯವನ್ನು ಕೆಣಕಿ ತಮ್ಮ ಹಾಗೂ ತಮ್ಮ ಕುಟುಂಬದವರ ಮೇಲೆ ಹಲವಾರು ಟೀಕೆಗಳನ್ನು ಸ್ವತಃ ಆಹ್ವಾನಿಸಿದರು. ತಮ್ಮ ಜೊತೆಗಿದ್ದವರೆ ಇಂದು ಬೇರೊಂದು ಪಕ್ಷದ ವೇದಿಕೆಯಿಂದ ನಿಮ್ಮ ವೈಯಕ್ತಿಕ ವಿಚಾರಗಳಾದ ಎರಡನೆಯ ವಿವಾಹ, ಕುಟುಂಬದ ಬಿರುಕುಗಳು, ನಿಮ್ಮ ಮತ್ತು ನಿಮ್ಮ ತಂದೆಯವರ ಸಂಬಂಧಗಳನ್ನೇ ಮಾತನಾಡಿದರು.
ಒಬ್ಬ ಸಾಮಾನ್ಯ ಪ್ರಜೆಗೆ ಅಥವಾ ನಿಮ್ಮದೇ ಪಕ್ಷದ ಕಟ್ಟ ಕಡೆಯ ಕಾರ್ಯಕರ್ತನಿಗೆ ನೀವು ಚರ್ಚಿಸಿದ, ಹರಿಬಿಟ್ಟ ವಿಷಯಗಳು ಉಪಯೋಗವಿದಯೇ ಎಂಬುದನ್ನು ಒಮ್ಮೆ ವಿಮರ್ಶಿಸಿ. ಕೇವಲ ಸಿದ್ದರಾಮಯ್ಯ, ಸಂಘ, ಜಮೀರ್ ನಿಮ್ಮ ವಿಷಯವೇ? ತಮ್ಮ ಮಗನನ್ನು ರಾಜಕೀಯದ ಮುನ್ನಲೆಗೆ ತರಲು ಪ್ರಯತ್ನಿಸುತ್ತಿರುವ ನೀವು ನಿಮ್ಮ ಮಗನಿಗೆ ಮಾಡುತ್ತಿರುವ ರಾಜಕೀಯ ಉಪದೇಶ ಇದೇನಾ? ಮಾನ್ಯ ಮಾಜಿ ಪ್ರಧಾನಿಗಳಾದ ದೇವೆಗೌಡರು ಒಂದು ರಾಜಕೀಯ ಫ್ಯಾಕ್ಟರಿಯನ್ನೇ ಕಟ್ಟಿದವರು. ಆದರೆ ಅವರ ಮುಂದಿನ ತಲೆಮಾರು ಅವರ ಸ್ವಂತ ಪಕ್ಷ ಉಳಿಸಿಕೊಳ್ಳಲು ಬಹಳ ಕಷ್ಟ ಪಡುತ್ತಿರುವುದು ವಿಪರ್ಯಾಸ. ಇಂದಿನ ಈ ಪರಿಸ್ಥಿತಿಗೆ ನಿಮ್ಮ ನಡವಳಿಕೆ, ಮಾತುಗಳೇ ಕಾರಣವೆಂದು ನಿಮ್ಮ ಪಕ್ಷದ ಶಾಸಕರಿಗೆ ನಿಮ್ಮ ಬಳಿ ಹೇಳುವ ಧೈರ್ಯವಿಲ್ಲದಿರಬಹುದು. ಆದರೆ ಜನಸಾಮಾನ್ಯರ ಭಾವನೆ ಒಮ್ಮೆ ಆ ರೀತಿ ಬಂದರೆ ಅದನ್ನು ಬದಲಿಸಲಾಗದು. ವಿಷಯದ ಆಯ್ಕೆ ಮತ್ತು ಅದರ ಮಂಡನೆಯಲ್ಲಿ ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಚುನಾವಣೆಯ ಅವಧಿಯಿಂದ ಎಡವಿದ್ದಾರೆ ಎಂಬುದು ಮಾತ್ರ ಸತ್ಯ. ನೀವು ನಿಮ್ಮ ಶಾಸಕರ ವಿಶ್ವಾಸಗಳನ್ನು ಕಳೆದುಕೊಂಡರು ಜನರು ನಿಮಗೆ ಕುಮಾರಣ್ಣ ಎಂದು ನೀಡಿರುವ ಮನೆಮಗನ ವಿಶ್ವಾಸ ಶಾಶ್ವತ. ಇದರ ಬಗ್ಗೆ ನಿಮ್ಮ ಗಮನವಿರಬೇಕು ಅದನ್ನು ಉಳಿಸಿಕೊಳ್ಳುವುದು ನಿಮಗೆ ಕಷ್ಟ ಸಾಧ್ಯವಲ್ಲ. ಜಾತಿ ಮತ್ತು ರೈತ ಸಮುದಾಯದ ಅತೀವ ಬೆಂಬಲವಿರುವ ನಿಮಗೆ ಚುನಾವಣೆ ಒಂದು ವಿಷಯವೇ ಅಲ್ಲ. ಆದರೂ ಈ ರಾಜಕೀಯ ಹಿನ್ನಡೆಯ ಕಾರಣದ ಸ್ವಯಂ ವಿಮರ್ಷೆ ಮತ್ತು ತಿದ್ದುಪಡಿ 2023 ರ ಚುನಾವಣೆಯ ದಿಕ್ಕನ್ನೇ ಬದಲಿಸಬಹುದು, ಸೂಕ್ತ ಮಾರ್ಗದರ್ಶಕರ ಅವಶ್ಯಕತೆ ಯುವ ಪಡೆಗೆ ನೀಡಿ.

ಒಂದು ಶಿಸ್ತಿನ ಪಕ್ಷದ ಮೌಲ್ಯವನ್ನು ಮೂರ್ನಾಲ್ಕು ಮಂದಿ ತಮ್ಮ ಮಾತುಗಳಲ್ಲಿ ಕಳೆಯುತ್ತಿದ್ದಾರೆ. ಅದೇ ಪಕ್ಷದಿಂದ ಪ್ರಧಾನಿ ಮತ್ತು ಸಂತೋಷ್ ಮಾತನಾಡುತ್ತಾರೆ, ಜನರಿಗೆ ತಲುಪುವ ರೀತಿ ಮಾತನಾಡುತ್ತಾರೆ, ನೀವುಗಳು ಯಾವುದೋ ಹಳ್ಳಿ ಕಟ್ಟೆಯ ಕುಡುಕರು ಮಾತನಾಡುವಂತೆ ಮಾತನಾಡುತ್ತೀರಿ. ಈ ಉಪ ಚುನಾವಣೆಯಲ್ಲಿ ನೀವು ಮಾಡಿದ ಅಭಿವೃದ್ಧಿ, ಕೊರೋನಾ ನಿರ್ವಹಣೆ, ಲಸಿಕೆಯ ಯಶಸ್ವಿ, ಅತಿವೃಷ್ಠಿ, ಅನಾವೃಷ್ಠಿ, ಬರಗಾಲ, ಆಕ್ಸಿಜನ್ ನಿರ್ವಹಣೆ, ಚಾಮರಾಜನಗರದಲ್ಲಿ ಆದ ಆಕ್ಸಿಜನ್ ಕೊರತೆಯ ಪಾಠ ಅದರಿಂದ ಆದ ತಿದ್ದುಪಡಿಗಳು, ಖಾತೆ ಕಂದಾಯದ ಸರಳೀಕರಣ, ಜಿಲ್ಲಾ ರಸ್ತೆಗಳ ಅಭಿವೃದ್ಧಿಗಳ ವಿಷಯಗಳನ್ನು ನೀವು ಚರ್ಚಿಸಬೇಕಿತ್ತು. ಆದರೆ ನಿಮ್ಮ ಎಲ್ಲಾ ಸಂಘಟನಾ ಶಕ್ತಿಯನ್ನು ಸಿದ್ದರಾಮಯ್ಯ ವಿರುದ್ಧ ಮಾತನಾಡಲು ಸಂಘಟಿಸಿದಿರಿ. ನೀವು ಅವರೊಬ್ಬರನ್ನೇ ಟೀಕಿಸುವುದು ಬೈಯ್ಯುಯುವುದು ಅವರನ್ನು ಜನಗಳ ಮುಂದೆ ನಿಮ್ಮ ಪಕ್ಷಕ್ಕಿಂತ ದೊಡ್ಡವರಂತೆ ಬಿಂಬಿಸುವಂತಾಗುವುದಿಲ್ಲವೇ?
ಒಟ್ಟಿನಲ್ಲಿ ಮೂರು ಪಕ್ಷಗಳೂ ಸಹ ಈ ಬೈ ಎಲೆಕ್ಷನ್ ಅನ್ನು ಬಯ್ಯುವ ಎಲೆಕ್ಷನ್ ಹಾಗೂ ಚ್ಠಿ ಎಲೆಕ್ಷನ್ ಆಗಿ ಮಾರ್ಪಡಿಸಿದ್ದೀರಿ. ಈ ಎಲೆಕ್ಷನ್ ಬೊಮ್ಮಾಯಿಯವರ ಮುಂದಿನ ಭವಿಷ್ಯ ಹಾಗೂ ಮುಂದಿನ ಅವಧಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯ ಅಳತೆಗೋಲಾಗಬಹುದಾಗಿತ್ತು. ಪಕ್ಷದ ಒಳಗೆ ಹೊಸ ನಾಯಕತ್ವದ ಬೆಳವಣಿಗೆ ಎಲ್ಲವನ್ನೂ ಪರೀಕ್ಷಿಸಬಹುದಿತ್ತು. ಇನ್ನು ವಿರೋಧ ಪಕ್ಷಗಳಿಗೆ ಮುಂದಿನ ಚುನಾವಣೆಗೆ ಈಗಿನಿಂದಲೆ ವೇದಿಕೆ ಸಿದ್ದಪಡಿಸಕೊಳ್ಳಬಹುದಿತ್ತು. ಸರ್ಕಾರದ ವಿರುದ್ದದ ಜನಾಭಿಪ್ರಾಯದ ಕ್ರೋಢೀಕರಣ, ಅದರ ಸೂಕ್ತ ಮಂಡಿಕೆ ಮಾಡಿ ಒಂದಷ್ಟು ಮತಗಳನ್ನು ಭದ್ರಗೊಳಿಸಬೇಕಿತ್ತು. ಆದರೆ ಚುನಾವಣೆಯನ್ನು ನ್ಯಾಯಯುತವಾಗಿ ಗೆಲ್ಲುವ ಯಾವ ಹಂಬಲವೂ ಈ ಪಕ್ಷಗಳಿಗಿಲ್ಲ ಎಂದು ಅನ್ನಿಸುತ್ತದೆ. ಕೇವಲ ಮುಖಸ್ತುತಿಯ ಮಾತುಗಳು, ಪರರ ನಿಂದನೆಗಳು, ಟೀಕೆಗಳು, ಬೈಯ್ಯುವಿಕೆ, ಪ್ರಚೋದನೆ, ಪ್ರಲಾಪನೆ, ಹಂಗಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಿಸುವುದು, ಸರ್ಕಾರ ವಿರುದ್ಧ ಮಾತನಾಡಿದರೆ ಆತನನ್ನು ಕಾಂಗಿ, ದೇಶದ್ರೋಹಿ ಎಂದು ಬಿಂಬಿಸುವುದು ಇಷ್ಟಕ್ಕೆ ಸೀಮಿತವಾಗಿದೆ ರಾಜ್ಯ ಭಾ.ಜ.ಪ ಎಂಬುದು ವಿಪರ್ಯಾಸ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post