ಲಕ್ನೋ: ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಗಂಗೆಯ ಸ್ವಚ್ಛತೆಯನ್ನು ನಿರ್ಲಕ್ಷಿಸಿ, ಈಗ ಚುನಾವಣೆಯ ವೇಳೆ ರಾಜಕೀಯಕ್ಕಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತೀರ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಹೆಸರು ಹೇಳದೇ ಪ್ರಿಯಾಂಕ ಗಾಂಧೀಗೆ ಚಾಟಿ ಬೀಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕಾಂಗ್ರೆಸ್’ನ ಹೊಸ ಜನಾಂಗ(ನ್ಯೂ ಜನರೇಶನ್) ಗಂಗೆಯ ಸ್ವಚ್ಛತೆಯನ್ನು ಹಾಗೂ ಕುಂಭಮೇಳದ ಯಶಸ್ಸನ್ನು ಚುನಾವಣಾ ವಿಚಾರದ ಲಾಭವನ್ನಾಗಿ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ತಾನು ಅಧಿಕಾರದಲ್ಲಿದ್ದ ವೇಳೆ ಗಂಗೆಯ ಸ್ವಚ್ಛತೆಯನ್ನು ಕಾಂಗ್ರೆಸ್ ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಗಂಗೆ ಸ್ವಚ್ಛತೆಯಿಂದ ಕೂಡಿಲ್ಲ, ಜನರು ಅದನ್ನೇ ಸೇವಿಸುತ್ತಿದ್ದಾರೆ ಎಂದು ಮಾತನಾಡುತ್ತಿತ್ತೇ ವಿನಾ, ಸ್ವಚ್ಛತೆಗಾಗಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕಿಡಿ ಕಾರಿದ್ದಾರೆ.
ಪ್ರಸ್ತುತ ಬಿಜೆಪಿ ಸರ್ಕಾರದ ಕ್ರಮದಿಂದಾಗಿ ಗಂಗೆ ಸ್ವಚ್ಛಗೊಂಡಿದ್ದಾಳೆ. ಅಲ್ಲದೇ ಕುಂಭ ಮೇಳೆ ಅತ್ಯಂತ ಯಶಸ್ವಿಯಾಗಿದ್ದು, ಇದರ ಲಾಭವನ್ನು ತಾನು ಪಡೆದುಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಯಾಗ್’ರಾಜ್’ಗೆ ಭೇಟಿ ನೀಡಿ, ಗಂಗೆಗೆ ಪೂಜೆ ಸಲ್ಲಿಸಿ, ನೀರು ಸೇವಿಸಿದರು. ಅಲ್ಲದೇ, ಅಲ್ಲಿನ ಬೋಟ್’ನಲ್ಲಿ ಪ್ರಯಾಣ ಮಾಡಿದರು. ಸ್ವಚ್ಛವಾಗಿರುವ ಈ ಗಂಗೆಯನ್ನು ಈ ಉತ್ತಮ ಸ್ಥಿತಿಗೆ ತಂದವರು ಯಾರು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
Discussion about this post