ಕಲ್ಪ ಮೀಡಿಯಾ ಹೌಸ್ | ಉತ್ತರ ಕನ್ನಡ |
ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಶಾಲಾ ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಬೆನ್ನಲ್ಲೇ ಮುರ್ಡೇಶ್ವರ ಬೀಚನ್ನು #MurdeshwaraBeach ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಈ ಕುರಿತಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದು, ಪ್ರವಾಸಿಗರ ಸುರಕ್ಷತೆಯ ಹಿತದೃಷ್ಠಿಯಿಂದ ಮುರ್ಡೇಶ್ವರ ಬೀಚನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಡಿ.10ರಂದು ಕೋಲಾರದ ಮುಳಬಾಗಿಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕಾಗಿ #EducationalTour ಉತ್ತರ ಕನ್ನಡ #UttarKannada ಜಿಲ್ಲೆಯ ಮುರ್ಡೇಶ್ವರಕ್ಕೆ ಬಂದಿದ್ದರು. ಈ ವೇಳೆ ವಿದ್ಯಾರ್ಥಿಗಳು ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರು.
ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಜಿಲ್ಲಾಡಳಿತ ಕಾಣೆಯಾದವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ಇಂದು ಮೂವರು ವಿದ್ಯಾರ್ಥಿನಿಯರು ಸಹ ಮೃತಪಟ್ಟಿದ್ದು, ಇಂದು ಶವ ಹೊರತೆಗೆಯಲಾಗಿದೆ.
ಘಟನೆಯಿಂದ ಆಘಾತಕ್ಕೆ ಒಳಗಾದ ಬೇರೆ ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ. ಎಲ್ಲ ವಿದ್ಯಾರ್ಥಿಗಳನ್ನು ಮುಳಬಾಗಿಲಿಗೆ ಸುರಕ್ಷಿತವಾಗಿ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.
ಇನ್ನು, ಸಮುದ್ರದಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿನಿಯರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ #Siddharamaiah ಅವರು ಘೋಷಣೆ ಮಾಡಿದ್ದಾರೆ.
ದುರ್ಘಟನೆ ನಡೆದ ಬೀಚ್’ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಭೇಟಿ ನೀಡಿದ್ದರು. ಅಲ್ಲದೇ, ಆಘಾತದಿಂದ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯರನ್ನು ದಾಖಲಿಸಲಾಗಿದ್ದ ಆಸ್ಪತ್ರೆಯ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಯರನ್ನು ಸ್ವತಃ ಭೇಟಿಯಾಗಿ ಮಾಹಿತಿ ಪಡೆದುಕೊಂಡು, ಧೈರ್ಯ ತುಂಬಿದ್ದು ಅವರ ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ.
3 ವಿದ್ಯಾರ್ಥಿನಿಯರ ಶವ ಪತ್ತೆ
ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದ್ದು, ಬೋಟ್ ಮೂಲಕ ಮೃತ ದೇಹಗಳನ್ನು ಪತ್ತೆ ಮಾಡಲಾಗಿದೆ.ಮೃತ ವಿದ್ಯಾರ್ಥಿನಿಯರನ್ನು ದೀಕ್ಷಾ(15), ಲಾವಣ್ಯ(15), ವಂದನಾ(15) ಎಂದು ಗುರುತಿಸಲಾಗಿದೆ.
ಮೂವರು ವಿದ್ಯಾರ್ಥಿನಿಯರು ನಿನ್ನೆ ಇಲ್ಲಿನ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ತತಕ್ಷಣವೇ ಕರಾವಳಿ ಕಾವಲು ಪಡೆಯ #CoastGuard ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೋಟ್ ಮೂಲಕ ಶವಗಳನ್ನು ಹೊರ ತೆಗೆದಿದ್ದಾರೆ. ನಿನ್ನೆ ಓರ್ವ ವಿದ್ಯಾರ್ಥಿನಿ ಶ್ರವಂತಿ (15) ಶವ ಪತ್ತೆಯಾಗಿತ್ತು.
ನೀರಿನಲ್ಲಿ ಕೊಚ್ಚಿ ಹೋಗಿದ್ದ ಉಳಿದ ಮೂವರು ವಿದ್ಯಾರ್ಥಿನಿಯರಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಇದೀಗ ಮೂವರು ವಿದ್ಯಾರ್ಥಿನಿಯರ ಶವವನ್ನು ಸಮುದ್ರದಿಂದ ಹೊರತೆಗೆಯಲಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಲೈಫ್ ಗಾರ್ಡ್ #LifeGuard ಸಿಬ್ಬಂದಿಗಳಿಗೆ ತುರ್ತು ಸಂದರ್ಭದಲ್ಲಿ ಅಗತ್ಯ ಇರುವ ಜೀವ ರಕ್ಷಕ ಸಾಮಗ್ರಿಗಳು ಇಲ್ಲಿಯ ತನಕ ನೀಡದೆ ಇರುವುದರಿಂದ ಸಕಾಲದಲ್ಲಿ ಜೀವ ರಕ್ಷಣೆ ಮಾಡಲು ವಿಫಲರಾಗಿರುತ್ತಾರೆ. ಅಲ್ಲದೆ ನುರಿತ ತರಬೇತಿ ಪಡೆದ ಸಿಬ್ಬಂದಿಗಳಲ್ಲದೆ ಇರುವುದು ಜೀವ ರಕ್ಷಣೆ ಮಾಡಲು ಅಸಮರ್ಥರಾಗಿರುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post