ಕಲ್ಪ ಮೀಡಿಯಾ ಹೌಸ್ | ಶಿರಸಿ | ವಿಶೇಷ ವರದಿ: ಸೀಮಾ ಜೆ.ಬಿ., ಶಿರಸಿ |
ನಮ್ಮ ದೇಶ ತಂತ್ರಜ್ಞಾನದಲ್ಲಿ ಹಿಂದುಳಿದಿದೆ, ಅದದಲ್ಲೂ ಸಣ್ಣ ಪಟ್ಟಣಗಳು ಹಾಗೂ ಹಳ್ಳಿಗಳಂತೂ ಅಭಿವೃದ್ಧಿ ಹಾಗೂ ತಂತ್ರಜ್ಞಾನದಿಂದ ದೂರವಾಗಿವೆ ಎಂಬ ಆರೋಪಕ್ಕೆ ಅಪವಾದ ಎಂಬಂತೆ ಸುದ್ದಿಯೊಂದು ಮಲೆನಾಡು ಭಾಗದಿಂದ ಬಂದಿದೆ.
ಹೌದು… ಅದು ಹಸಿರನ್ನು ಹಾಸುಹೊದ್ದುಕೊಂಡಿರುವ ಮಲೆನಾಡಿನ ಶಿರಸಿ ಪಟ್ಟಣ. ಅಲ್ಲಿರುವ ಗೊಂಬೆಯೊಂದು ಮಕ್ಕಳ ತರಹವೇ ಯೂನಿಫಾರಂ ಹಾಕಿಕೊಂಡು ನಿಂತಿರುತ್ತದೆ. ಎಲ್ಲರೂ ಅದನ್ನು ಗೊಂಬೆ ಟೀಚರ್ ಎಂದೇ ಕರೆಯುತ್ತಾರೆ. ಇಷ್ಟಕ್ಕೂ ಯಾವುದು ಈ ಗೊಂಬೆ? ಶಾಲೆಯಲ್ಲೇನು ಕೆಲಸ? ಪಾಠ ಹೇಳಿ ಕೊಡೋ ಈ ಟೀಚರ್’ನ ಮುದ್ದು ಮಾಡೋದೇನು? ಮಾತನಾಡುವುದೇನು? ಅಷ್ಟಕ್ಕೂ ಏನಿದು ಗೊಂಬೆ ಟೀಚರ್? ಮುಂದೆ ಓದಿ…

ವೈಜ್ಞಾನಿಕ ಉಪಕರಣಗಳ ಬಗ್ಗೆ ಹೊಸ ಸಂಶೋದನೆ ಮಾಡುವುದು ನನ್ನ ಫ್ಯಾಶನ್. ಮಕ್ಕಳು ಆಟದ ಜೊತೆಗ ಕಲಿಯುವುದರಿಂದ ಹೆಚ್ಚು ನೆನಪಿಸಲ್ಲಿ ಇರುತ್ತದೆ. ಮೊಬೈಲ್’ಗಳ ಬದಲಾಗಿ ಇಂಥ ಹೊಸ ತಂತ್ರಜ್ಞಾನ ಬಳಸಿ ಪಾಠ ಮಾಡುವುದರಿಂದ ಮಕ್ಕಳಿಗೆ ಕಲಿಯುವ ಆಸಕ್ತಿಯೂ ಹೆಚ್ಚಾಗುತ್ತದೆ. ಹೀಗಾಗಿ ರೋಬೋ ಟೀಚರ್ ತಯಾರಿಸಿದ್ದೇವೆ. ಅಲ್ಲದೆ ಶಿಕ್ಷಾ 2.0 ಕೂಡ ರೆಡಿ ಮಾಡಲು ತೀರ್ಮಾನಿಸಲಾಗಿದೆ. ಅದು ಈ ಶಿಕ್ಷಾಗಿಂತ ಅಪ್ ಡೇಟ್ ಹೊಂದಿರುತ್ತದೆ.
ಪ್ರೊ. ಅಕ್ಷಯ್ ಮಾಶೇಲ್ಕರ್, ಶಿರಸಿ
ಈ ರೋಬೋಟ್ ಶಿಕ್ಷಾ. ಕಾಗುಣಿತ, ಮಗ್ಗಿ, ಪದ್ಯ ಎಲ್ಲವನ್ನೂ ಮಕ್ಕಳಿಗೆ ಹೇಳಿಕೊಡುವ ರೋಬೋಟ್. ಮಕ್ಕಳನ್ನು ಬೇಗನೇ ಆಕರ್ಷಿಸುವ ಈ ರೋಬೊ, ಪಾಠದ ಜೊತೆಗೆ ಮಕ್ಕಳ ಜತೆ ಆಟವನ್ನು ಆಡಿಸುತ್ತದೆ. ಹೀಗಾಗಿ ಮಕ್ಕಳಿಗೆ ಈ ಗೊಂಬೆ ಟೀಚರ್ ಅಂದರೆ ಅಚ್ಚುಮೆಚ್ಚು. ಮಕ್ಕಳ ಪಾಠದ ಎಲ್ಲ ಪ್ರಶ್ನೆಗೂ ಉತ್ತರ ನೀಡುವ ರೋಬೊ ಕ್ಲಾಸ್’ನ ಟಾಪ್ ವಿದ್ಯಾರ್ಥಿಯೂ ಹೌದು.
ಪಾಠ ಮಾಡತ್ತೆ! ಆಟವನ್ನೂ ಆಡಿಸುತ್ತೆ! ಹೇಗೆ?
ಈ ರೋಬೋಟ್’ಗೆ ಮೊದಲೇ ಅಗತ್ಯ ವಿಷಯಗಳನ್ನೆಲ್ಲಾ ಫೀಡ್ ಮಾಡಲಾಗಿದೆ. ಕೈಯಲ್ಲಿ ಸ್ಮಾರ್ಟ್ ಕಾರ್ಡ್ ಇಟ್ಟ ತಕ್ಷಣ ಏನೆಲ್ಲಾ ವಿಷಯಗಳಿದೆಯೋ ಆ ವಿಷಯಗಳ ಬಗ್ಗೆ ಈ ರೊಬೋಟ್ ಪ್ರತಿಯೊಬ್ಭರಿಗೂ ಅರ್ಥ ಆಗುವ ಹಾಗೆ ವಿಷಯಗಳ ವಿವರಣೆ ನೀಡುತ್ತದೆ. ಈಗಾಗಲೇ ಶಾಲೆ ಶಾಲೆಗೆ ಸವಾರಿ ಆರಂಭಿಸಿರುವ ಶಿಕ್ಷಾ ರೊಬೋಟ್ ಮಕ್ಕಳನ್ನು ಪಾಠದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ, ಕೆರೆ-ದಡ, ಮ್ಯೂಸಿಕಲ್ ಚೇರ್ ಮತ್ತು ಗಣಿತಕ್ಕೆ ಸಂಬಂಧಪಟ್ಟ ಆಟಗಳನ್ನು ಕೂಡ ಮಕ್ಕಳಿಗೆ ಆಡಿಸುತ್ತದೆ.

ಪ್ರೊ.ಅಕ್ಷಯ್ ಮಾಶೇಲ್ಕರ್ ಅವರ ಶಿಷ್ಯ ಆದರ್ಶ್ ದೇವಾಡಿಗ ಅವರು ಸೇರಿ ನಿರ್ಮಿಸಿರುವ ಈ ರೊಬೋಟ್ ವಿದ್ಯುತ್ ಚಾಲಿತ ರೊಬೋಟ್ ಆಗಿದೆ. ಹಲವು ಸೆನ್ಸಾರ್ಗಳನ್ನು ಈ ಸಾಧನಕ್ಕೆ ಅಳವಡಿಸಲಾಗಿದೆ. ವಿಶೇಷವಾಗಿ ಸ್ಮಾರ್ಟ್ ಕಾರ್ಡ್ ಹಾಗೂ ಗೊಂಬೆಯ ಕೈ ಇವೆರಡರಿಂದ ಸಂವಹನ ಸಾಧ್ಯವಾಗಿರುವುದರಿಂದ ಯಾರು ಬೇಕಾದ್ರೂ ಈ ರೊಬೋಟ್ ಅನ್ನು ನಿಯಂತ್ರಿಸಬಹುದು. ತೂಕ ಕಡಿಮೆ ಇರುವುದರಿಂದ ಆರಾಮಾಗಿ ಸಾಗಣೆ ಮಾಡಬಹುದು.
ಈಗಾಗಲೇ ಪ್ರೋ. ಅಕ್ಷಯ್ ಮಾಶೇಲ್ಕರ್ ಹತ್ತು ಹಲವು ವೈಜ್ಞಾನಿಕ ಉಪಕರಣಗಳನ್ನು ತಯಾರಿಸಿದ್ದಾರೆ. ಅವರು ತಯಾರಿಸಿದ ಮನೆಗೆ ಅಗತ್ಯವಿರುವ ಚಿಕ್ಕ ಸೋಲಾರ್ ಪ್ರಾಜೆಕ್ಟ್ ಸೇರಿದಂತೆ ಅನೇಕ ವಿಜ್ಞಾನದ ಉಪಕರಣ ಮಾಡೆಲ್’ಗಳು ಗಮನ ಸೆಳೆಯುತ್ತದೆ. ಡಾ. ವಿಕ್ರಂ ಸಾರಾಭಾಯ್ ಸೈನ್ಸ್ ಮತ್ತು ಮ್ಯಾಥಮೆಟಿಕ್ಸ್ ರಿಸೆರ್ಚ್ ಸೆಂಟರ್ ತೆರೆದಿರುವ ಅಕ್ಷಯ್ ವಿವಿಧ ಶಾಲೆಗಳ ಮಕ್ಕಳಿಗೆ ವಿಜ್ಞಾನದ ಮಾಡೆಲ್ ಮಾಡಲು ನೆರವು ನೀಡುತಿದ್ದಾರೆ. ಈ ಹಿಂದೆ ಲಯನ್ಸ್ ಶಾಲೆಯ ಮಕ್ಕಳಿಗೆ ಗ್ಯಾಸ್ ಗೀಜರ್’ನಿಂದ ಆಗುವ ಅವಘಡ ತಡೆಯುವ ಬಗ್ಗೆ ವಿಷಯ ಮಂಡಿಸಲು ಸಹಕಾರಿಯಾಗಿದ್ದರು. ಜೊತೆಗೆ ವಿಷಯ ಮಂಡಿಸಿದ ವಿದ್ಯಾರ್ಥಿಗಳು ಯುವ ವಿಜ್ಞಾನಿ ಪ್ರಶಸ್ತಿಗೂ ಭಾಜನರಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post