ಕಲ್ಪ ಮೀಡಿಯಾ ಹೌಸ್ | ವಯನಾಡ್/ಬೆಂಗಳೂರು |
ಕಾಡಾನೆ ದಾಳಿಯಿಂದ ಮೃತಪಟ್ಟ ಕೇರಳದ ವ್ಯಕ್ತಿಗೆ ರಾಜ್ಯ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಈ ವಿಚಾರ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಕೇರಳದ ವಯನಾಡ್ ಬಳಿಯಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅಲ್ಲಿನ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ವ್ಯಕ್ತಿಯ ಕುಟುಂಬವನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದರು. ಆನಂತರ ಮೃತನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ. ಆದರೆ, ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ 15 ಲಕ್ಷ ರೂ. ಪರಿಹಾರ ಘೋಷಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕದ ಅರಣ್ಯ ಸಚಿವರು ಹೇಳುವುದೇನು?
ಇನ್ನು, ಪ್ರಕರಣ ಕುರಿತಂತೆ ಮಾತನಾಡಿರುವ ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕರ್ನಾಟಕದ ಬಂಡಿಪುರದ ಕಾಡಾನೆ ತುಳಿದು ಕೇರಳದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೀಗಾಗಿ, ಪರಿಹಾರ ನೀಡಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
Also read: ಎ.24-30: ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಶಿಬಿರ | ಯಾರೆಲ್ಲಾ ಪಾಲ್ಗೊಳ್ಳಬಹುದು?
ಕುಮಾರಸ್ವಾಮಿ ವಾಗ್ದಾಳಿ
ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನಮ್ಮ ರೈತರಿಗೆ ಎರಡು ಸಾವಿರ ರೂ. ಪರಿಹಾರ ನೀಡುತ್ತಾರೆ. ಆದರೆ, ಕೇರಳದ ವ್ಯಕ್ತಿ ಸತ್ತರೆ ನಮ್ಮ ರಾಜ್ಯ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ನೀಡುತ್ತಾರೆ. ಸಿದ್ದರಾಮಯ್ಯ ಅವರ ಸಲಹೆಯ ಮೇರೆಗೇ 15 ಲಕ್ಷ ರೂ. ಪರಿಹಾರ ನೀಡಿರುತ್ತಾರೆ ಎಂದು ಟೀಕಿಸಿದ್ದಾರೆ.
ಅಲ್ಲಿ ಆನೆ ತುಳಿದರೆ, 15 ಲಕ್ಷ ಕೊಡುತ್ತೀರಿ. ಇಲ್ಲಿ ಆನೆ ತುಳಿದರೆ 5ಲಕ್ಷ ಕೊಡುತ್ತೀರಿ. ಅದಕ್ಕೂ ಕಚೇರಿಗೆ ಅಲೆಯಬೇಕು. ವೀರಾವೇಷದಿಂದ ಒಳಗೆ ಭಾಷಣ ಮಾಡುತ್ತಿರಬಹುದು. ಕನ್ನಡಿಗರಿಗೆ ಅನ್ಯಾಯ ಆಯ್ತು ಅಂತಾರೆ. ನಿಮ್ಮ ಸದಸ್ಯರು ಯಾಕೆ ಬೆಂಬಲ ಕೊಡಲಿಲ್ಲ. ತಮಟೆ ಹೊಡೆದು ಪ್ರತಿಭಟನೆ ಮಾಡಿದ್ದರಲ್ಲ ಎಂದು ಟೀಕಿಸಿದರು.
ವಿಜಯೇಂದ್ರ ಹೇಳಿದ್ದೇನು?
ಬರದ ಸಂದರ್ಭದಲ್ಲಿ ನಮ್ಮ ರಾಜ್ಯದ ರೈತರಿಗೆ ಎರಡು ಸಾವಿರ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರಾಹುಲ್ ಗಾಂಧಿ ಆದೇಶದ ಮೇರೆಗೆ 15 ಲಕ್ಷ ರೂ. ನೀಡಿರುವುದು ಖಂಡಿನೀಯ. ಇದು ಅವರ ನಾಯಕರನ್ನು ಖುಷಿ ಪಡಿಸಲು ಮಾಡಿರುವ ಕಾರ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಂದು ಕಿಡಿ ಕಾರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















