ನವದೆಹಲಿ: ದೇಶದ ಯುವ ಪ್ರತಿಭೆಗಳಿಗೆ ರಾಷ್ಟ್ರೀಯ ವೇದಿಕೆಯೊಂದನ್ನು ಸೃಷ್ಠಿಸುವ ಸಲುವಾಗಿನ ಕೇಂದ್ರ ಯುವಜನ ಹಾಗೂ ಕ್ರೀಡಾಭಿವೃದ್ಧಿ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಲೇ ಇರುತ್ತದೆ.
ಇದೇ ನಿಟ್ಟಿನಲ್ಲಿ ಇಲಾಖೆ ಆಯೋಜನೆ ಮಾಡಿದ್ದ ರಾಷ್ಟ್ರೀಯ ಯುವ ಸಂಸತ್ ಹಬ್ಬ(National Youth Parliament Festival 2019)ನಲ್ಲಿ ದೇಶದ ಆಯ್ದ ಪ್ರತಿಭೆಗಳಿಗೆ ನಮ್ಮ ರಾಷ್ಟ್ರ, ಸಂಸ್ಕೃತಿ ಹಾಗೂ ಭವಿಷ್ಯದ ಕುರಿತಾಗಿ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು. 18ರಿಂದ 25 ವರ್ಷದ ಒಳಗಿನ ಯುವಕರಿಗಾಗಿ ಈ ವೇದಿಕೆಯನ್ನು ಸೃಜಿಸಲಾಗಿದ್ದು, ಈ ಬಾರಿ ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕ್ರೀಡಾ ಮತ್ತು ಯುವಜನ ಇಲಾಖೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಉಪಸ್ಥಿತರಿದ್ದರು.
ಈ ವೇದಿಕೆಯಲ್ಲಿ ತಮ್ಮ ಮನದಾಳದ ಅಭಿಪ್ರಾಯವನ್ನು ಹಂಚಿಕೊಳ್ಳಲು ಕರ್ನಾಟದ ಕು.ಅಂಜನಾಕ್ಷಿ ಅವರಿಗೂ ಸಹ ಅವಕಾಶ ದೊರೆತಿತ್ತು. ಈ ದೇಶದ ಪ್ರಧಾನಿಯವರ ಮುಂದೆ ಬಹುದೊಡ್ಡ ವೇದಿಕೆಯಲ್ಲಿ ಮಾತನಾಡಲು ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಈ ಕರುನಾಡ ಕುವರಿ ಇಡಿಯ ದೇಶದ ಮಾತ್ರವೇಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅಕ್ಷರಶಃ ದಂಗಾಗುವಂತೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಭೌಗೋಳಿಕವಾಗಿ, ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಂಪರ್ಕಿಸುವ ಭಾರತ (connecting India geographically, economically and culturally) ಎಂಬ ವಿಚಾರದ ಕುರಿತಾಗಿ ಅಭಿಪ್ರಾಯ ಮಂಡಿಸಿದರು.
ಭಾರತ ಭೌಗೋಳಿಕವಾಗಿ ವಿಶ್ವಕ್ಕೆ ಸಂಪರ್ಕ ಕಲ್ಪಿಸುವ ದೇಶ ಮಾತ್ರವಲ್ಲ ಹೃದಯದ ಭಾಗವಾಗಿದೆ. ಇಂತಹ ಹೃದಯವೇ ಆಗಿರುವ ಭಾರತ ವಿಶ್ವವನ್ನು ಹೇಗೆ ಸಂಪರ್ಕಿಸಿ, ಅನಿವಾರ್ಯವಾಗಿದೆ ಎಂಬುದನ್ನು ಹಾಗೂ ಹೃ-ದ-ಯ ಎಂಬುದನ್ನು ಪ್ರತಿ ಅಕ್ಷರಕ್ಕೆ ಅರ್ಥಗರ್ಭಿತವಾಗಿ ವಿವರಿಸಿದ ರೀತಿ ಮಾತ್ರ ಅತ್ಯದ್ಬುತವಾಗಿತ್ತು.
ಸುಮಾರು 5 ನಿಮಿಷಗಳ ಕಾಲ ತಮ್ಮ ಅಭಿಪ್ರಾಯ ಮಂಡಿಸಿದ ಅಂಜನಾಕ್ಷಿ ಅವರ ಮಾತಿನ ಛಾತಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ ಅಕ್ಷರಶಃ ದಂಗಾಗಿ ಹೋಗಿದ್ದರು. ಆಕೆ ಮಾತನಾಡುತ್ತಿದ್ದ ವೇಳೆ ಪ್ರಧಾನಿಯವರು ಅತ್ಯಂತ ಗಂಭೀರವಾಗಿ ಆಲಿಸುತ್ತಿದ್ದರು. ಪ್ರತಿ ವಿಚಾರವನ್ನು ಆಕೆ ಮಂಡಿಸುತ್ತಾ ಹೋದಂತೆ ಪ್ರಧಾನಿಯವರು ಹೇಗೆ ಆ ಭಾಷಣಕ್ಕೆ ಮನಸೋತಿದ್ದರು ಎಂಬುದನ್ನು ಅವರ ಮುಖಭಾವವೇ ಹೇಳುತ್ತಿತ್ತು.
ವೀಡಿಯೋ ನೋಡಿ:
ಈ ಭಾಷಣ ಸ್ಪರ್ಧೆಯಲ್ಲಿ ಅಂಜನಾಕ್ಷಿ ಅವರಿಗೆ ಎರಡನೆಯ ಬಹುಮಾನ ದೊರೆತಿದ್ದು, ಇದನ್ನು ಸ್ವತಃ ಪ್ರಧಾನಿಯವರೇ ವಿತರಿಸಿದರು. ಅಂಜನಾಕ್ಷಿಯವರ ಮಾತು ಹಾಗೂ ಚಿಂತನೆಗಳಿಗೆ ಮನಸೋತಿದ್ದ ಪ್ರಧಾನಿಯವರು ಪ್ರಶಸ್ತಿ ವಿತರಿಸಿ ಆಕೆಗೆ ಕೈಮುಗಿದು, ಶಿರ-ದೇಹ ಭಾಗಿಸಿ ನಮಿಸಿದ್ದು, ಪ್ರಧಾನಿಯವರ ಸಂಸ್ಕಾರ, ಸರಳ-ಸಜ್ಜನಿಕೆಗೆ ಸಾಕ್ಷಿಯಾಗಿದ್ದ ಜೊತೆಯಲ್ಲೇ ಅಂಜನಾಕ್ಷಿಯವರ ಅಗಾಧ ಪ್ರತಿಭೆಯನ್ನೂ ಸಹ ದೇಶಕ್ಕೆ ತೆರೆದಿಟ್ಟಿತ್ತು.
ಇನ್ನು, ಇಡಿಯ ದೇಶದಲ್ಲಿ ಅಂಜನಾಕ್ಷಿ ಅವರ ಅಮೋಘ ಭಾಷಣದ ವೀಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಮಂದಿಗೆ ಇದು ಸ್ಪೂರ್ತಿಯಾಗಿದೆ.
Discussion about this post