ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಮತದಾರರ ಜಾಗೃತಿಗಾಗಿ ಶಿವಮೊಗ್ಗ ಜಿಲ್ಲೆಗಾಗಿ ಸಿದ್ಧಪಡಿಸಿರುವ ಥೀಮ್ ಸಾಂಗ್ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಗುರುವಾರ ಬಿಡುಗಡೆ ಮಾಡಿದರು.
ಕುವೆಂಪು ರಂಗಮಂದಿರದ ಆವರಣದಲ್ಲಿ ಥೀಮ್ ಸಾಂಗ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆ ಮತದಾನದಲ್ಲಿ ನಂಬರ್ ವನ್ ಆಗಬೇಕು ಎಂಬ ಉದ್ದೇಶದಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ವಿದ್ಯಾರ್ಥಿ ಯುವ ಸಮುದಾಯದ ಮೂಲಕ ಮತದಾರರನ್ನು ತಲುಪುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ತಾವು ಕಡ್ಡಾಯವಾಗಿ ಮತದಾನ ಮಾಡುವುದು ಮಾತ್ರವಲ್ಲದೆ, ತಮ್ಮ ನೆರೆಹೊರೆಯ ಇತರರೂ ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.
ಮತದಾನ ಮಾಡುವುದರಿಂದ ಏನು ಸಿಗುತ್ತದೆ ಎಂಬ ಉದಾಸೀನ ಮನೋಭಾವ ತೋರಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮೂಲಕ ಆಗುವ ಬದಲಾವಣೆ ಬಹುತೇಕ ಸಂದರ್ಭಗಳಲ್ಲಿ ಅಮೂರ್ತವಾಗಿರುತ್ತದೆ. ಪ್ರಜಾಪ್ರಭುತ್ವದ ಉಳಿಗೆ, ಅದರ ಯಶಸ್ವಿಗೆ ಪ್ರತಿಯೊಬ್ಬರೂ ಮತದಾನ ಮಾಡುವುದು ಅಗತ್ಯವಾಗಿದೆ ಎಂದರು.
Watch Video
ಜಿಲ್ಲಾಡಳಿತ ಸುಗಮ ಮತದಾನಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಈ ದೊಡ್ಡ ಹಬ್ಬದಲ್ಲಿ ಪ್ರತಿಯೊಬ್ಬರೂ ಭಾಗೀದಾರರಾಗಬೇಕು. ಮತದಾನ ಮಾಡದೆ ಆಡಳಿತ ವ್ಯವಸ್ಥೆಯನ್ನು ದೂರಿದರೆ ಯಾವುದೇ ಪ್ರಯೋಜನಲ್ಲ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಶಿವರಾಮೇಗೌಡ ಅವರು ಮಾತನಾಡಿ, ಸಾಕ್ಷರತೆ ಪ್ರಮಾಣ ಹೆಚ್ಚಾದರೂ ಮತದಾನದ ಪ್ರಮಾಣ ಹೆಚ್ಚಾಗದಿರುವುದು ಕಳವಳಕಾರಿ. ಈ ಬಾರಿ ಪ್ರತಿಯೊಬ್ಬರೂ ಮತ ಚಲಾಯಿಸುವ ಮೂಲಕ ರಾಜ್ಯಕ್ಕೆ ನಮ್ಮ ಜಿಲ್ಲೆ ಮಾದರಿಯನ್ನಾಗಿ ಮಾಡಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ಮಾತನಾಡಿ, ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು ಮಾತ್ರವಲ್ಲದೆ ಕರ್ತವ್ಯವೂ ಆಗಿದೆ. ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಹೇಳಿದರು.
ಅಮಿತ್ ಎಸ್. ಕುಮಾರ್ ಅವರು ಥೀಮ್ ಸಾಂಗ್ ನಿರ್ದೇಶನ ಮಾಡಿದ್ದು, ಸಮನ್ವಯ ಕಾಶಿ ಹಾಗೂ ನಿತಿನ್ ಅವರು ಹಾಡು ರಚಿಸಿದ್ದಾರೆ. ಸ್ಟೆಪ್ ಹೋಲ್ಡರ್ಸ್ ಟೀಮ್ ಶಿವಮೊಗ್ಗ ತಂಡದವರು ಥೀಮ್ ಸಾಂಗ್’ಗೆ ಆಕರ್ಷಕ ನೃತ್ಯ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಅವರು ಮತದಾರರ ಪ್ರತಿಜ್ಞಾ ವಿಧಿ ಭೋಧಿಸಿದರು.
(ವರದಿ: ಡಾ.ಸುಧೀಂದ್ರ)
Discussion about this post