ನವದೆಹಲಿ: ಕಳೆದ ಗುರುವಾರ ಜಮ್ಮುವಿನ ಪುಲ್ವಾಮಾ ಜಿಲ್ಲೆಯ ಆರಂತಿಪುರದ ಹೆದ್ದಾರಿಯಲ್ಲಿ ಪಾಕಿಸ್ಥಾನದ ಜೈಷ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ್ದಾರೆ.
ಅಂದು ಸಿಆರ್’ಪಿಎಫ್ ಯೋಧರು ಸಾಗುತ್ತಿದ್ದ ಬಸ್ ಮೇಲೆ ದಾಳಿ ನಡೆಯುವ ಕೆಲವೇ ಕ್ಷಣಗಳ ಮುನ್ನ ಅದರಲ್ಲಿದ್ದ ಯೋಧರೊಬ್ಬರು ವೀಡಿಯೋ ಮಾಡಿ ತಮ್ಮ ಪತ್ನಿಗೆ ಕಳುಹಿಸಿದ್ದರು. ಆ ವೀಡಿಯೋ ಈಗ ಬಹಿರಂಗಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಸಿಆರ್ಪಿಎಫ್’ನ 76ನೇ ಬೆಟಾಲಿಯನ್ ನಲ್ಲಿ ಹೆಡ್ ಕಾನ್ಸ್’ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹುತಾತ್ಮ ಯೋಧ ಸುಖ್ಜಿಂದರ್ ಸಿಂಗ್ ಅವರೇ ಈ ವಿಡಿಯೋವನ್ನು ತನ್ನ ಪತ್ನಿಗೆ ಕಳುಹಿಸಿದವರು.
ಆದರೆ, ತಮ್ಮ ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಅವರ ಪತ್ನಿ ಮೊಬೈಲ್ ನೋಡಿರಲಿಲ್ಲ. ಶುಕ್ರವಾರವಷ್ಟೆ ತಮ್ಮ ಪತಿ ಕಳುಹಿಸಿದ್ದ ವೀಡಿಯೋವನ್ನು ಆಕೆ ನೋಡಿದ್ದು, ಈಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆಗಿದೆ.
ಯೋಧ ಸುಖ್ಜಿಂದರ್ ತಮ್ಮ ಪತ್ನಿಗೆ ಕಳುಹಿಸಿರುವ ವಿಡಿಯೋದಲ್ಲಿ ಅವರು ಪ್ರಯಾಣಿಸುತ್ತಿದ್ದ ಸೇನಾ ವಾಹನದ ಒಳಭಾಗ ಮತ್ತು ಹಿಮಾವೃತ ಹೆದ್ದಾರಿ ಬದಿಯ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಆದರೆ ದುರದೃಷ್ಟವೆಂದರೆ ಸಿಂಗ್ ಅವರ ಪತ್ನಿ ಈ ವಿಡೀಯೊವನ್ನು ನೋಡುವ ಮುಂಚೆಯೇ ತನ್ನ ಪತಿ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸುದ್ದಿ ಬರಸಿಡಿಲಿನಂತೆ ಎರಗಿದೆ.
Discussion about this post